ಹಣ
ವಸ್ತು ವಿನಿಮಯದ ಮಾಧ್ಯಮ-
ಆಗಿದೆ ಜೀವನದ ಗುರಿ.
ಗಳಿಸಲುಂಟು ನೂರಾರು ದಾರಿ
ಭಿಕ್ಷೆಯಿಂದ ಹಾದರದವರೆಗೆ
ಲಂಚ, ಕಳವು, ಜೂಜೂ ಸೇರಿ,
ದುಡಿಮೆಯದಕೆ ತುಚ್ಛ ದಾರಿ!
ಬಾಳಲೆಂದು ಗಳಿಸ ಹೋಗಿ,
ಗಳಿಸಲೆಂದೇ ಬಾಳುತಿಹರು.
ಸೇರಿದವರಿಗೇ ಹೆಚ್ಚೆಚ್ಚು ಸೇರುವುದು
ಬಡವನ ಹತ್ತಿರವೂ ಸುಳಿಯದು.
ಕೆಲವರ ತಿಜೋರಿಯಲ್ಲಿ ಕೊಳೆತು
ಕಪ್ಪು ಹಣವೆನಿಸಿಕೊಳ್ಳುವುದು
ಮತ್ತೆ ಕೆಲವರಿಗದು ಗಗನ ಕುಸುಮ.
ಹಿಪ್ ಪಾಕೆಟಿನಲ್ಲಿ ಬೆರಳು ತೂರಿಸಿ
ಕೆದಕಿದಾಗ, ಕೈಗೆ ತಗಲದ ಹಣ,
ಊಟಕ್ಕಿಲ್ಲದ ಉಪ್ಪಿನಕಾಯಿ.
ಹಣವಿದ್ದರುಂಟು ಸರ್ವ ಸುಖ.
‘ಸರ್ವೇ ಗುಣಾಃ ಕಾಂಚನ ಮಾಶ್ರಯಂತಿ’
ಹಣರಹಿತ ಬಾಳು ಸಾದ್ಯವಿದ್ದಿದ್ದರೆ?
ದೊರಕೀತು ಮನಕೆ ನೆಮ್ಮದಿ,
ಧುಮುಕದೆ ಹರಿದೀತು ಬಾಳ ನದಿ.
*****
೧೭-೦೫-೧೯೭೫