ಮೇಷ್ಟ್ರು ವೆಂಕಟಸುಬ್ಬಯ್ಯ
ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು. ಕರಿಯಪ್ಪನವರ ಅಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ ಬರೆದು ಹಾಕಿದ್ದಕ್ಕೆ ಆ ಹುಡುಗನ ಸ್ಕಾಲರ್‍ಷಿಪ್ಪನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದೂ, ಇನ್ನೂ ಹೆಚ್ಚು ತನಿಖೆ ಮಾಡಿ ವಿವರಗಳನ್ನು ತಿಳಿಸಬೇಕೆಂದೂ ಅವರಿಂದ ಆಜ್ಞೆ ಬಂತು. ಹಿಂದಿನ ಸಾಹೇಬರಾಗಿದ್ದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಇತ್ತೀಚೆಗೆ ಬಂದವರು ರೂಲ್ಸು ಗೀಲ್ಸು ಎಂದು ಕೂಗಾಡಿ ಅವುಗಳಂತೆ ನಡೆಯುವವರಾಗಿದ್ದರು ; ಮತ್ತು ಉಪಾಧ್ಯಾಯರುಗಳನ್ನು ದಂಡಿಸುವುದರಲ್ಲಿಯೂ ಇನ್ಸ್‍ಪೆಕ್ಟರುಗಳನ್ನು ಬಯ್ಯುವುದರಲ್ಲಿಯೂ ಬಹಳ ಹೆಸರು ಪಡೆದಿದ್ದರು. ಸಾಲದುದಕ್ಕೆ ಆ ಕಾಲ ಅಧಿಕಾರಿಗಳು ಮಾಡುವ ದಂಡನೆಯ ಪ್ರಮಾಣವನ್ನು ಅನುಸರಿಸಿ ಅವರ ದಕ್ಷತೆಯನ್ನು ಅಳೆಯುವ ಕಾಲವಾಗಿತ್ತು. ಅದರ ಪರಿಣಾಮವಾಗಿ ಅಧಿಕಾರಿಗಳಲ್ಲಿ ಸ್ಪರ್ಧೆ ಏರ್‍ಪಟ್ಟು ಹೈ ಸ್ಕೂಲು ಮತ್ತು ಮಿಡಲ್ ಸ್ಕೂಲು ಉಪಾಧ್ಯಾಯರುಗಳಲ್ಲಿ ದಂಡನೆಯನ್ನು ತಪ್ಪಿಸಿಕೊಂಡವರು ಬಹಳ ಅಪೂರ್ವವಾಗುತ್ತ ಬಂದರು. ಇನ್ನು ಫೈಮರಿ ಸ್ಕೂಲು ಉಪಾಧ್ಯಾಯರುಗಳ ವಿಚಾರವನ್ನು ಏಕೆ ಹೇಳ ಬೇಕು! ಆ ಭಯಂಕರ ಕಾಲದಲ್ಲಿ ಇಲಾಖೆಗೆ ಬಹಳ ಹಣ ಉಳಿತಾಯವಾಯಿತೆಂದು ವೃತ್ತ ಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿದ್ದುವು. ಹೀಗೊಂದು ನವೀನ ವಾತಾವರಣ ತಲೆದೋರಿದ್ದುದರಿಂದ ರಂಗಣ್ಣನ ಹೊಸ ಸಾಹೇಬರು ಹುಡುಗನ ಸ್ಕಾಲರ್‍ಷಿಪ್ಪನ್ನು ನಿಲ್ಲಿಸಿ, ಹೆಚ್ಚಿನ ವಿವರಗಳನ್ನು ತಿಳಿಸಬೇಕೆಂದು ಅಪ್ಪಣೆ ಮಾಡಿದ್ದರು.
ರಂಗಣ್ಣನು ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ನಡೆಸುತ್ತ ಒಂದು ಕಡೆ ಉಪಾಧ್ಯಾಯರಿಗೆ ಬೋಧನಕ್ರಮ ಮತ್ತು ಸಂವಿಧಾನಗಳಲ್ಲಿ ತಿಳಿವಳಿಕೆಯನ್ನು ಕೊಡುತ್ತಲೂ, ಮತ್ತೊಂದು ಕಡೆ ಗ್ರಾಮಸ್ಥರಿಗೆ ಇಲಾಖೆಯ ನಿಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ತಿಳಿಸುತ್ತಲೂ ಬರುತ್ತಿದ್ದನು. ಜೊತೆಗೆ ಗ್ರಾಮಸ್ಥರಿಗೆ ಉಪಯುಕ್ತವಾದ ನವೀನ ವ್ಯವಸಾಯ ಕ್ರಮ, ಗ್ರಾಮಸ್ಥರ ಆರ್ಥಿಕಾಭಿವೃದ್ಧಿಗೆ ಸಲಹೆಗಳು ನಮ್ಮ ಸಾಹಿತ್ಯ, ನಾಡಿನ ಗತವೈಭವ, ರಾಮಾಯಣ ಮಹಾಭಾರತಗಳಲ್ಲಿರುವ ಕಥೆಗಳು – ಇವುಗಳನ್ನು ತಿಳಿಸುತ್ತಲೂ ಬಂದನು. ಇವುಗಳ ಪರಿಣಾಮವಾಗಿ ಪಾಠ ಶಾಲೆಗಳಲ್ಲಿ ಹೆಚ್ಚು ಶಿಸ್ತು, ಗ್ರಾಮಸ್ಥರ ಸಹಕಾರ ಮತ್ತು ಸಹಾಯ, ಉಪಾಧ್ಯಾಯರಲ್ಲಿ ಹೆಚ್ಚು ಚಟುವಟಿಕೆ, ನಿಯಮಗಳ ಪ್ರಕಾರ ನಡೆಯುವುದು, ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಇವೆಲ್ಲ ಹೆಚ್ಚುತ್ತ ಬಂದುವು. ಒಟ್ಟಿನಲ್ಲಿ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಇನ್‌ಸ್ಪೆಕ್ಟರವರು ಶಾಲೆಗೆ ಬಂದು ತಮ್ಮ ಕೆಲಸವನ್ನು ನೋಡಲಿ, ತಮ್ಮ ಶಾಲೆಗೆ ಬಂದು ನೋಡಲಿ ಎಂಬ ಸ್ಪರ್ಧೆ ಬೆಳೆಯಿತು. ಅಲ್ಲಲ್ಲಿ ಉಪಾಧ್ಯಾಯರ ಸಭೆಗಳು ನಡೆದಾಗ ಅವರು ಸಿದ್ದ ಗೊಳಿಸಿದ್ದ ಉಪಕರಣಗಳು, ಟಿಪ್ಪಣಿಗಳು, ಕೈಗೆಲಸದ ಮಾದರಿಗಳು ಇವುಗಳ ಸಣ್ಣದೊಂದು ಪ್ರದರ್ಶನವನ್ನು ರಂಗಣ್ಣನು ಏರ್ಪಾಟು ಮಾಡುತ್ತಿದ್ದನು. ಹೀಗೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿದ ಒಂದು ದೊಡ್ಡ ಸಂಸಾರದಂತೆ ರೇಂಜು ನಡೆದು ಕೊಂಡು ಹೋಗುತ್ತಿತ್ತು. ದಂಡನೆ ಮಾಡಬೇಕಾದ ಸಂದರ್ಭಗಳು ಬಹಳ ಕಡಮೆಯಾದುವು. ಇನ್ಸ್‍ಪೆಕ್ಟರವರ ವಿಶ್ವಾಸವನ್ನು ಕಳೆದುಕೊಳ್ಳುವುದೇ ಒಂದು ದಂಡನೆಯೆಂದು ಉಪಾಧ್ಯಾಯರು ಭಾವಿಸುತ್ತ ಬಂದರು.
ಹೀಗೆ ಎಲ್ಲವೂ ಸುಮುಖವಾಗಿ ವ್ಯವಸ್ಥೆಗೆ ಬಂತು. ರಂಗಣ್ಣನಿಗೂ ಮನಸ್ಸಿನಲ್ಲಿ ಸಂತೋಷ ಬೆಳೆಯುತ್ತ ಬಂತು. ಒಂದು ದಿನ ಬೈಸ್ಕಲ್ ಮೇಲೆ ಸುಮಾರು ಒಂಬತ್ತು ಮೈಲಿ ದೂರದ ಬೊಮ್ಮನಹಳ್ಳಿಗೆ ತನಿಖೆ ಬಗ್ಗೆ ಹೊರಟನು. ಪಾಠಶಾಲೆಯ ಕಟ್ಟಡದ ಹತ್ತಿರ ಇಳಿದಾಗ ಬೆಳಗ್ಗೆ ಏಳು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದುವು. ಬಾಗಿಲು ತೆರೆದಿತ್ತು ; ಹುಡುಗರು ಆರ್‍ಧಜನ ಬಂದಿದ್ದರು, ಇತರರು ಬರುತ್ತಲಿದ್ದರು. ಒಳಗೆ ಇಬ್ಬರು ಉಪಾಧ್ಯಾಯರಿದ್ದರು. ಆ ಹೊತ್ತಿಗೆ ಗಂಟೆಯನ್ನು ಬಾರಿಸಿದರು. ಪಕ್ಕದಿಂದ ಹೆಡ್ ಮಾಸ್ಟರ್ ಬಂದು ಕೈ ಮುಗಿದನು. ಆತನ ಹೆಸರು ವೆಂಕಟಸುಬ್ಬಯ್ಯ ; ಮುಳ್ಳು ಮುಖ, ಮೆಳ್ಳೆಗಣ್ಣು, ಸ್ವಲ್ಪ ಕಪ್ಪು ಮೈ ಬಣ್ಣ, ಸುಮಾರಾಗಿ ಒಳ್ಳೆಯ ಬಟ್ಟೆಗಳನ್ನೇ ಹಾಕಿಕೊಂಡಿದ್ದನು. ಹಣೆಗೆ ದಟ್ಟವಾಗಿ ವಿಭೂತಿ ಪಟ್ಟೆಗಳಿದ್ದುವು. ಸ್ವಲ್ಪ ನಿಷ್ಠಾವಂತನೆಂದು ಕಂಡಿತು. ಪಾಠ ಶಾಲೆಯ ಒಳಗಡೆ ದೇವರ ಪ್ರಾರ್ಥನೆಯಾದ ಮೇಲೆ ಪುನಃ ಗಂಟೆಯನ್ನು ಬಾರಿಸಿದರು.
ಹೆಡ್ ಮಾಸ್ಟರೊಡನೆ ರಂಗಣ್ಣ ಒಳಕ್ಕೆ ಪ್ರವೇಶಿಸಿದನು. ಒಳಗೆ ಅಚ್ಚುಕಟ್ಟಾಗಿದ್ದಿತು ; ಕಶ್ಮಲಗಳೇನೂ ಇರಲಿಲ್ಲ, ವೇಳಾ ಪತ್ರಿಕೆ, ಪಾಠಗಳ ಹಂಚಿಕೆ ಪಟ್ಟಿ, ವಿದ್ಯಾಭಿವೃದ್ಧಿಯ ತಃಖ್ತೆ, ಮೊದಲಾದುವನ್ನೆಲ್ಲ ಆಯಾ ಸ್ಥಳಗಳಲ್ಲಿ ಗೋಡೆಗೆ ತಗಲು ಹಾಕಿದ್ದರು. ರಂಗಣ್ಣ ಹೆಡ್ ಮಾಸ್ಟರವರ ಕೊಟಡಿಯಲ್ಲಿ ಕುಳಿತು ಕೊಂಡು, ‘ಏನು ಹೆಡ್ ಮಾಸ್ಟರೇ ! ನಿಮ್ಮ ಪಾಠಶಾಲೆಯ ತನಿಖೆ ಮಾಡೋಣವೊ? ನಿಮಗೆ ಮುಂದಾಗಿ ವರ್ತಮಾನ ಕೊಡದೆ ಬಂದಿದ್ದೇನೆ. ಸಿದ್ದ ಪಡಿಸಿಕೊಳ್ಳುವುದಕ್ಕೆ ನಿಮಗೆ ವಿರಾಮ ದೊರೆತಿಲ್ಲ’ ಎಂದು ಮುಗಳುನಗೆಯಿಂದ ಹೇಳಿದನು.
‘ಇನ್‌ಸ್ಪೆಕ್ಷನ್ ಮಾಡಿ ಸ್ವಾಮಿ ! ನಾನೇನೂ ಹೆದರೋದಿಲ್ಲ! ನಿಮಗ್ಯಾಕೆ ಸ್ವಾಮಿ ನಾವು ಹೆದರಬೇಕು?’
‘ನಾನೇನು ಹುಲಿಯೆ ? ಕರಡಿಯೆ ? ನೀವೇತಕ್ಕೆ ಹೆದರಬೇಕು?’
‘ನಾನು ಸ್ವಲ್ಪ ಒರಟು ಮನುಷ್ಯ, ಖಂಡಿತವಾದಿ ಸ್ವಾಮಿ ! ತಾವೇನೂ ತಿಳಿದುಕೊಳ್ಳಬೇಡಿ. ಮುಚ್ಚು ಮರೆ ನನಗೆ ಸರಿಬೀಳೋದಿಲ್ಲ. ನನಗೆ ಹೆದರಿಕೆ ಏಕೆ ಸ್ವಾಮಿ ? ತಾವು ಬರುವಾಗ ನಾನು ಗದ್ದೆ ಹತ್ತಿರ ಇದ್ದೆ, ತಮ್ಮ ಆಗಮನ ದೂರದಿಂದಲೇ ನನ್ನ ಕಣ್ಣುಗಳಿಗೆ ಬಿತ್ತು, ನನ್ನ ಗಡಿಯಾರ ನೋಡಿದೆ. ಏಳೂ ಕಾಲು ಗಂಟೆ ಆಗಿತ್ತು. ತಾವು ಸ್ಕೂಲ್ ಹತ್ತಿರ ಬರೋ ಹೊತ್ತಿಗೆ ನಾನೂ ಬಂದು ಸೇರಬಹುದು; ಕರಾರು ವಾಕ್ ಏಳು ಗಂಟೆ ಇಪ್ಪತ್ತು ನಿಮಿಷಕ್ಕೆ ನಾನು ಸ್ಕೂಲ್ ಹತ್ತಿರ ಇದ್ದರೆ ಆಯಿತಲ್ಲ’- ಎಂದುಕೊಂಡು ಹೊರಟು ಬಂದೆ. ಇದರಲ್ಲಿ ತಪ್ಪೇನು ಸ್ವಾಮಿ? ನಿಮಗೆ ಏತಕ್ಕೆ ಹೆದರಬೇಕು ? ನಾನು ದಿನಾಗಲೂ ಹೊಲಗದ್ದೆಗಳ ಕಡೆ ಹೋಗೋದುಂಟು ಸ್ವಾಮಿ ! ಆದರೆ ಸ್ಕೂಲ್ ಹೊತ್ತಿಗೆ ಈ ಹೊಸ್ತಿಲೊಳಗಿರುತ್ತೇನೆ. ಅದನ್ನು ಮಾತ್ರ ತಪ್ಪೋದಿಲ್ಲ. ಇದನ್ನು ಈ ದಿನ ತಮ್ಮೆದುರಿಗೆ ಮಾತ್ರ ಕಲ್ಪಿಸಿಕೊಂಡು ನಾನು ಹೇಳುತ್ತಿಲ್ಲ. ಬೇಕಾದವರನ್ನು ತಾವು ಕೇಳಬಹುದು. ನಿಮಗೇಕೆ ಸ್ವಾಮಿ ಹೆದರಿ ಕೊಂಡು ಸುಳ್ಳು ಹೇಳಬೇಕು?’
ಆ ಮೇಷ್ಟ್ರು ಒಂದು ವಿಚಿತ್ರ ಪ್ರಾಣಿ ಎಂದು ರಂಗಣ್ಣನಿಗೆ ತೋರಿತು. ಕೆಳ ನೌಕರ ಖಂಡಿತವಾದಿಯಾಗಿ ಒರಟು ಮಾತಾಡಿದರೆ ಮೇಲಿನವರು ಸೈರಿಸುವುದು ಅಪರೂಪ. ಮೇಲಿನವರಿಗೆಲ್ಲ ಬೇಕಾಗಿರುವುದು : ‘ಅಪ್ಪಣೆ ಮಹಾಸ್ವಾಮಿ’ತನದ ಗುಲಾಮಗಿರಿ. ಎರಡನೆಯದಾಗಿ, ತಾನು ಕೆಲಸದಲ್ಲಿ ಕಟ್ಟುನಿಟ್ಟಾಗಿ ಪ್ರಾಮಾಣಿಕನಾಗಿದ್ದ ಮಾತ್ರಕ್ಕೇನೆ ತನ್ನ ಒರಟು ಮಾತಿನಿಂದ ಮೇಲಿನವರನ್ನು ಕೆರಳಿಸುವುದು ವಿವೇಕವೇನೂ ಇಲ್ಲ. ಆದರೆ ರಂಗಣ್ಣನಿಗೆ ಕೋಪವಾಗಲಿ ಅಸಮಾಧಾನವಾಗಲಿ ಉಂಟಾಗಲಿಲ್ಲ. ಮೇಷ್ಟರುಗಳಲ್ಲಿ ಎಷ್ಟೋ ಬಗೆ; ಈ ಮೇಷ್ಟರನ್ನು ಮನಶ್ಯಾಸ್ತ್ರದ ಚಿಕಿತ್ಸಕ ದೃಷ್ಟಿಯಿಂದ ನೋಡೋಣ ಎಂದು ನಿರ್ಧರಿಸಿಕೊಂಡು ಸ್ವಲ್ಪ ಮುಗುಳು ನಗೆಯನ್ನು ಮಾತ್ರ ಸೂಸಿದನು.
ಕ್ರಮವಾಗಿ ಮೊದಲನೆಯ ತರಗತಿಯಿಂದ ತನಿಖೆ ಪ್ರಾರಂಭವಾಯಿತು. ಆ ಪಾಠ ಶಾಲೆಯಲ್ಲಿ ಮೊದಲನೆಯ ತರಗತಿಯಲ್ಲಿ ಎರಡೇ ತಂಡಗಳಿದ್ದುವು. ನಲವತ್ತು ಹುಡುಗರಲ್ಲಿ ಮುವ್ವತ್ತು ಹುಡುಗರು ಒತ್ತಕ್ಷರದ ಪಾಠಗಳನ್ನೆಲ್ಲ ಮುಗಿಸಿದ್ದರು ; ಉಳಿದ ಹತ್ತು ಮಂದಿ ಒತ್ತಕ್ಷರದ ಪಾಠಗಳನ್ನು ಪ್ರಾರಂಭಿಸಿದ್ದರು. ಇತರ ಪಾಠ ಶಾಲೆಗಳಲ್ಲಿ ಸಾಮಾನ್ಯವಾಗಿ ಮೊದಲನೆಯ ದರ್ಜೆಯಲ್ಲಿ ಆರು-ಏಳು ತಂಡಗಳಿರುವುದು ರಂಗಣ್ಣನ ಅನುಭವಕ್ಕೆ ಬಂದಿದ್ದಿತು. ಈ ತರಗತಿಯ ತನಿಖೆ ಮುಗಿದಮೇಲೆ ಎರಡನೆಯ ತರಗತಿಯದು ಪ್ರಾರಂಭವಾಯಿತು. ಅದರಲ್ಲಿ ಇಪ್ಪತ್ತೈದು ಹುಡುಗರಿದ್ದರು. ಗದ್ಯ ಪಾಠವನ್ನು ಮಾಡಬೇಕೆಂದು ರಂಗಣ್ಣ ಆ ತರಗತಿಯ ಉಪಾಧ್ಯಾಯರಿಗೆ ಹೇಳಿದನು. ಆತನು, ದೊರೆ ಮತ್ತು ಬಂದಿವಾನರು’ ಎಂಬ ಪಾಠವನ್ನು ತೆಗೆದು ಕೊಂಡು ಅದಕ್ಕೆ ಪೀಠಿಕೆ ಹಾಕಿದಮೇಲೆ ಹುಡುಗರನ್ನು ಓದುವಂತೆ ಹೇಳಿದನು. ಆ ಹುಡುಗರು ಒಬ್ಬೊಬ್ಬರು ಒಂದೊಂದು ವಾಕ್ಯವನ್ನು ಮಾತ್ರ ಓದುತ್ತ ಪಾಠವನ್ನು ಮುಂದುವರಿಸಿದರು. ಹೀಗೆ ಇಬ್ಬರು ಹುಡುಗರು ಓದಿ ಮುಗಿಸಿದರೋ ಇಲ್ಲವೋ ಹೆಡ್ ಮಾಸ್ಟರು ಕೆರಳಿ, ‘ನನ್ನ ಮಾನವನ್ನು ಇನ್‌ಸ್ಪೆಕ್ಟರ ಮುಂದೆ ತೆಗೆದೆಯಲ್ಲಾ ನೀನು ! ಶುದ್ದ ಮುಟ್ಠಾಳ ಕೆಲಸ ಮಾಡಿದೆ ! ಒಂದು ವಾಕ್ಯ ಬೃಂದವನ್ನು ಒಬ್ಬ ಹುಡುಗ ಓದಬೇಕು ; ಒಂದೊಂದೇ ವಾಕ್ಯ ಓದಕೂಡದು ಎಂದು ತಿಳಿಸಿರಲಿಲ್ಲವೇ ? ನಾನು ಮೆಮೋ ಪುಸ್ತಕದಲ್ಲಿ ಬರೆದಿಲ್ಲವೇ ? ಕ್ರಮ ಹಿಡಿದು ಪಾಠಮಾಡು’- ಎಂದು ಝಂಕಿಸಿದನು. ಇನ್‍ಸ್ಪೆಕ್ಟರ್ ಸಾಹೇಬರು ಏನು ಮಾಡಬೇಕು? ‘ಹೆಡ್ಮಾಸ್ಟರೇ! ಕೋಪ ಮಾಡಬೇಡಿ, ಕ್ರಮ ತಪ್ಪಿದ್ದರೆ ನಾನು ತಿಳಿಸುತ್ತೇನೆ. ಪಾಠದ ಮಧ್ಯದಲ್ಲಿ ಉಪಾಧ್ಯಾಯರನ್ನು ಗದರಿಸಬಾರದು’ ಎಂದು ರಂಗಣ್ಣ ಹೇಳಿದನು.
‘ನನಗೆ ಮುಟ್ಠಾಳ ಪಟ್ಟಿ ಬಂತಲ್ಲ ಸ್ವಾಮಿ ! ನಾನೇ ಕ್ರಮ ಹೇಳಿ ಕೊಟ್ಟಿದ್ದೇನೆ ; ಪಾಠಮಾಡಿ ತೋರಿಸಿದ್ದೇನೆ. ನನ್ನ ಕೈ ಕೆಳಗಿನ ಮೇಷ್ಟರನ್ನು ತಾವು ತಿದ್ದುವುದಾದರೆ ನಾನೇತಕ್ಕೆ ಹೆಡ್ ಮಾಸ್ಟರ್ ಕೆಲಸ ಮಾಡಬೇಕು ಸ್ವಾಮಿ?’
‘ಇರಲಿ, ನಡೆಯುವವರು ಎಡವುತ್ತಾರಲ್ಲದೆ, ಕುಳಿತವರು ಎಡಹುತ್ತಾರೆಯೆ? ನೀವೂ ಮೇಷ್ಟರನ್ನು ತಿದ್ದಬೇಕು. ನಾನೂ ಸಹ ತಿದ್ದಬೇಕು’ ಎಂದು ರಂಗಣ್ಣನು ಸಮಾಧಾನ ಹೇಳಿ ತರಗತಿಯ ಉಪಾಧ್ಯಾಯರಿಗೆ, “ಪ್ರಶ್ನೆಗಳನ್ನು ಕೇಳಿ ಮೇಷ್ಟ್ರೆ” ಎಂದು ಸೂಚನೆ ಕೊಟ್ಟನು. ಪ್ರಶ್ನೆಗಳೂ, ಅವುಗಳನ್ನು ಹಾಕಿದ ಕ್ರಮವೂ, ಉತ್ತರ ಹೇಳದೆ ತಪ್ಪಿದಾಗ ಮಕ್ಕಳಿಂದಲೇ ಸರಿಯಾದ ಉತ್ತರಗಳನ್ನು ಹೇಳಿಸಿದ್ದೂ, ಕಡೆಗೆ ಕಪ್ಪು ಹಲಗೆಯ ಸಾರಾಂಶ-ಇವುಗಳೆಲ್ಲ ಚೆನ್ನಾಗಿದ್ದುವು. ಹೆಡ್ಮಾಸ್ಟರು, ‘ಭೇಷ್! ಹಾಗೆ ಮಾಡಬೇಕು ಲಿಂಗಪ್ಪ! ನನ್ನ ಶಿಷ್ಯ ಆದ್ದಕ್ಕೆ ಈಗ ಸಾರ್ಥಕವಾಯಿತು. ಈಗ ನನ್ನ ಮಾನ ಉಳಿಯಿತು’ ಎಂದು ಹೇಳುತ್ತಾ ಇನ್ಸ್‍ಪೆಕ್ಟರವರ ಕಡೆಗೆ ತಿರುಗಿ, ‘ಪರಾಂಬರಿಸಬೇಕು ಸ್ವಾಮಿ ! ಆತನಿಗೆ ಪ್ರೈವೇಟಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಆಗಿದೆ. ನಾನೇ ಪಾಠ ಹೇಳಿ ಕೊಟ್ಟು ಫಸ್ಟ್ ಕ್ಲಾಸಿನಲ್ಲಿ ತೇರ್ಗಡೆಯಾಗುವಂತೆ ಮಾಡಿದ್ದೇನೆ. ಟ್ರೈನಿಂಗ್ ಸಹಾ ಆಗಿದೆ ’ ಎಂದು ಶಿಫಾರಸು ಮಾಡಿದನು. ಇನ್ನು ಇತರ ಕೆಲವು ಪಠ್ಯ ವಿಷಯಗಳಲ್ಲಿ ತನಿಖೆಮಾಡಿದನಂತರ ಹೆಡ್ ಮಾಸ್ಟರು ಖುದ್ದು ಪಾಠ ಹೇಳುತ್ತಿದ್ದ ಮೂರು ಮತ್ತು ನಾಲ್ಕನೆಯ ತರಗತಿಗಳ ತನಿಖೆಗೆ ಪ್ರಾರಂಭವಾಯಿತು.
‘ಸ್ವಾಮಿ ! ಮೂರನೆಯ ತರಗತಿಯಲ್ಲಿ ಇಪ್ಪತ್ತೈದು, ನಾಲ್ಕನೆಯ ತರಗತಿಯಲ್ಲಿ ಹದಿನೈದು ಮಕ್ಕಳಿದ್ದಾರೆ. ಹೆಚ್ಚಿಗೆ ಒಬ್ಬರು ಮೇಷ್ಟರನ್ನು ಕೊಡಬೇಕೆಂದು ತಮಗೆ ಹಿಂದೆಯೇ ಅರಿಕೆ ಮಾಡಿಕೊಂಡಿದ್ದೆ. ಸ್ವಾಮಿ ಯವರ ಮನಸ್ಸಿಗೆ ಬರಲಿಲ್ಲ. ಇಲ್ಲಿ ಅರ್ಧ ಮೈಲಿ ದೂರದಲ್ಲಿ ಸರಕಾರಿ ಸ್ಕೂಲಿದೆ. ಏಳೆಂಟು ಹುಡುಗರು ಸಹ ಅಲ್ಲಿ ಓದುತ್ತಾ ಇಲ್ಲ. ಎಲ್ಲರೂ ಈ ಪಾಠ ಶಾಲೆಗೆ ಬರುತ್ತಾರೆ. ಆ ಪಾಠ ಶಾಲೆಯನ್ನು ರದ್ದು ಮಾಡಿ ಆ ಮೇಷ್ಟರನ್ನು ಇಲ್ಲಿಗೆ ಕಳಿಸಿಕೊಟ್ಟರೆ ಸಾಕು. ಈಗ ಆ ಮೇಷ್ಟರಿಗೆ ದಂಡದ ಸಂಬಳ- ಪುಕಸಟ್ಟೆ ಹದಿನೈದು ರೂಪಾಯಿ ಕೊಡುತ್ತಾ ಇದ್ದಿರಿ. ಅದೇಕೆ ಸ್ವಾಮಿ ಮೇಷ್ಟರಿಗೆ ದಂಡದ ಸಂಬಳ ಕೊಡ ಬೇಕು ?’ ಎಂದು ಹೆಡ್ ಮಾಸ್ಟರ್ ಹೇಳಿದನು.
‘ಆಗಲಿ ವೆಂಕಟಸುಬ್ಬಯ್ಯ, ದಾಖಲೆಗಳನ್ನು ನೋಡಿ ಇತ್ಯರ್‍ಥ
ಮಾಡುತ್ತೇನೆ.’
‘ಇನ್‍ಸ್ಪೆಕ್ಟರ್ ಸಾಹೇಬರು ಮಕ್ಕಳನ್ನು ಪರೀಕ್ಷಿಸಿದರು. ಅವರು ಬಹಳ ಚೆನ್ನಾಗಿ ಉತ್ತರಗಳನ್ನು ಹೇಳಿದರು. ಉಕ್ತಲೇಖನದಲ್ಲಿ ಅನೇಕರು ತಪ್ಪುಗಳಿಲ್ಲದೆ ಬರೆದರು; ಅಕ್ಷರಗಳು ದುಂಡಾಗಿ ಚೆನ್ನಾಗಿದ್ದುವು. ರೇಂಜಿನಲ್ಲೆಲ್ಲ ಶಿಸ್ತಿನಲ್ಲಿ ಬೋಧನಕ್ರಮಗಳ ಅನುಸರಣೆಯಲ್ಲೂ, ವಿದ್ಯಾಭಿವೃದ್ಧಿಯಲ್ಲಿಯೂ ಆ ಪಾಠ ಶಾಲೆ ಮೊದಲನೆಯದಾಗಿ ಕಂಡುಬಂತು. ಗೋಡೆಯ ಮೇಲೆ ನೇತು ಹಾಕಿದ್ದ ಪಟ್ಟಿಗಳಲ್ಲಿ ಒಂದರ ಕಡೆಗೆ ರಂಗಣ್ಣನ ದೃಷ್ಟಿ ಹೋಯಿತು. ಅದನ್ನು ನೋಡಿದಾಗ ಪಾಠಶಾಲೆಯ ನೈರ್‍ಮಲ್ಯ ಪಾಲನೆಯ ವಿಚಾರದಲ್ಲಿ ಹೆಡ್ ಮಾಸ್ಟರು ಏರ್ಪಡಿಸಿದ್ದ ಒಂದು ನಿಬಂಧನೆಯು ಕಂಡುಬಂತು. ಮೂರನೆಯ ಮತ್ತು ನಾಲ್ಕನೆಯ ತರಗತಿಗಳ ಒಟ್ಟು ಮಕ್ಕಳಲ್ಲಿ ಹತ್ತು ಮಂದಿ ಹುಡುಗಿಯರಿದ್ದರು. ಉಳಿದ ಮುವ್ವತ್ತು ಹುಡುಗರನ್ನು ಐದು ಐದರಂತೆ ಆರು ತಂಡಗಳಾಗಿ ಮಾಡಿ ಒಂದೊಂದು ತಂಡದವರು ಒಂದೊಂದು ವಾರ ಪಾಠಶಾಲೆಯನ್ನು ಚೊಕ್ಕಟವಾಗಿಡಬೇಕೆಂದೂ, ಇಬ್ಬರು ಸಹಾಯೋಪಾಧ್ಯಾಯರಲ್ಲಿ ಒಬ್ಬೊಬ್ಬರು ಒಂದೊಂದು ವಾರ ಬದಲಾಯಿಸಿಕೊಂಡು ಮೇಲ್ವಿಚಾರಣೆ ನೋಡಿ ಕೊಳ್ಳಬೇಕೆಂದೂ ಆ ಪಟ್ಟಿಯಲ್ಲಿ ಬರೆದಿತ್ತು; ಮತ್ತು ಒಂದೊಂದು ತಂಡದವರ ಕೆಲಸವನ್ನು ನೋಡಿ ಆಯಾ ತಂಡಕ್ಕೆ ನಂಬರುಗಳನ್ನು ದಾಖಲ್ಮಾಡಿತ್ತು. ಆ ಪಟ್ಟಿಯನ್ನು ನೋಡುತ್ತಲೂ ರಂಗಣ್ಣನಿಗೆ ಬಹಳ ಸಂತೋಷವಾಯಿತು. ಏರ್ಪಾಡು ಚೆನ್ನಾಗಿದೆ ; ರೇಂಜಿನ ಎಲ್ಲಾ ಪಾಠ ಶಾಲೆಗಳಲ್ಲೂ ಅದನ್ನು ಆಚರಣೆಗೆ ತರಬೇಕು ಎನ್ನಿಸಿತು. ಹೆಡ್ ಮಾಸ್ಟರು, ‘ಸ್ವಾಮೀ! ಈ ಸ್ಕೂಲಿನಲ್ಲಿ ನೂರಕ್ಕೆ ಮೇಲ್ಪಟ್ಟು, ಹುಡುಗರಿದ್ದಾರೆ. ಒಬ್ಬ ಜವಾನನ್ನು ಕೊಡಬೇಕೆಂದು ಈಗ ಎರಡು ವರ್ಷಗಳಿಂದ ಕೇಳುತ್ತಿದ್ದೇನೆ. ತಾವು ಕೊಟ್ಟಿಲ್ಲ’ ಎಂದು ಹೇಳಿದನು.
‘ಜವಾನನನ್ನು ಕೊಟ್ಟರೆ ಇಷ್ಟು ಚೆನ್ನಾಗಿ ಪಾಠಶಾಲೆಯ ಕಟ್ಟಡವನ್ನು ಚೊಕ್ಕಟವಾಗಿಟ್ಟು ಕೊಳ್ಳುತ್ತಾನೆಯೆ! ಕೊಡ ಬೇಕಾದ್ದು ನ್ಯಾಯ. ಆಲೋಚನೆ ಮಾಡುತ್ತೇನೆ. ಆದರೆ ನಿಮ್ಮ ಏರ್ನಾಟು ಬಹಳ ಚೆನ್ನಾಗಿದೆ ವೆಂಕಟಸುಬ್ಬಯ್ಯ!’
‘ನಾನು ಬಹಳ ಕಟ್ಟು ನಿಟ್ಟಿನ ಮನುಷ್ಯ ಸ್ವಾಮಿ! ಜವಾನ ಇರಲಿ ಇಲ್ಲದೇ ಇರಲಿ, ಸ್ಕೂಲನ್ನು ಚೊಕ್ಕಟವಾಗಿಟ್ಟಿರುತ್ತೇನೆ. ಇನ್ಸ್‍ಪೆಕ್ಟರವರು ತನಿಖೆಗೆ ಬರಲಿ ಬರದೇ ಇರಲಿ, ಕೆಲಸದಲ್ಲಿ ಪಾಲು ಮಾರುವುದಿಲ್ಲ, ಸರಿಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇನೆ.’
‘ಹಾಗೆಯೇ ಇರಬೇಕು ವೆಂಕಟಸುಬ್ಬಯ್ಯ! ಮನೆಗಳಲ್ಲಿ ನಮ್ಮ ನಮ್ಮ ಗೃಹಿಣಿಯರ ಮೇಲೆ ಯಾವಾಗಲೂ ಕಾವಲಿರುವುದಕ್ಕಾಗುತ್ತದೆಯೇ? ಅವರು ಪತಿವ್ರತೆಯರು. ಹಾಗೆಯೇ ಮೇಷ್ಟರುಗಳೂ ಇರಬೇಕು.’
‘ಒಳ್ಳೆಯ ಮಾತು ಹೇಳಿದಿರಿ ಸ್ವಾಮಿ!’
ಇದಾದಮೇಲೆ ಪಾಠಶಾಲೆಯ ರಿಜಿಸ್ಟರುಗಳನ್ನೂ ಇತರ ದಾಖಲೆಗಳನ್ನೂ ನೋಡಿದ್ದಾಯಿತು. ದೊಡ್ಡ ತಪ್ಪುಗಳೇನೂ ಇರಲಿಲ್ಲ. ತರುವಾಯ ರಂಗಣ್ಣ ಹೊರಡುವುದಕ್ಕಾಗಿ ಎದ್ದು ನಿಂತು,
‘ಹೆಡ್‌ಮಾಸ್ಟರೇ, ವಿಸಿಟರ್‍ಸ್ ಬುಕ್ ಕೊಡಿ, ಅದರಲ್ಲಿ ತನಿಖೆಯ ರಿಪೋರ್ಟನ್ನು ಬರೆದು ಕೊಟ್ಟು ಕಳುಹಿಸುತ್ತೇನೆ’ ಎಂದು ಹೇಳಿದನು.
‘ಹಾಗೆ ಆಗೋದಿಲ್ಲ ಸ್ವಾಮಿ! ಬಿಸಿಬಿಸಿಯಲ್ಲೇ ಕೆಲಸ ಆಗಿ ಹೋಗಬೇಕು! ತಾವು ಇಲ್ಲೇ ರಿಪೋರ್ಟನ್ನು ಬರೆದು ಮುಗಿಸಿಬಿಡ ಬೇಕು!’
ಇನ್ಸ್‍ಪೆಕ್ಟರ್ ಸಾಹೇಬರಿಗೆ-ಇದೇನು? ಈ ಹೆಡ್ ಮಾಸ್ಟರು ತನಗೇನೇ ಆಜ್ಞೆ ಮಾಡುತ್ತಾನಲ್ಲ ಕೇಳಿದಂತೆ ಪುಸ್ತಕ ಕೊಡದೆ ತನಗೆ ಬುದ್ಧಿ ಹೇಳುವುದಕ್ಕೆ ಹೊರಟನಲ್ಲ ಎಂದು ಸ್ವಲ್ಪ ಕೆರಳಿತು. ಆದರೆ ಹುಡುಗರೆದುರಿಗೆ ಹೆಡ್ ಮಾಸ್ಟರನ್ನು ಏನೂ ಅನ್ನಬಾರದು ಎಂದು ಸೈರಿಸಿ ಕೊಂಡು, ‘ಹೆಡ್‌ಮೇಷ್ಟರೇ! ಈಗ ಹತ್ತೂವರೆ ಗಂಟೆ ಆಯಿತು ; ಹುಡುಗರನ್ನೆಲ್ಲ ಬಿಟ್ಟು ಬಿಡಿ. ಬೆಲ್ ಹೊಡಿಸಿ’ ಎಂದು ಹೇಳಿದನು. ಅದರಂತೆಯೇ ಹುಡುಗರನ್ನು ಬಿಟ್ಟಿದ್ದಾಯಿತು.
‘ಕುಳಿತುಕೊಳ್ಳಿ ಸ್ವಾಮಿ! ಎಷ್ಟು ಹೊತ್ತಿನ ಕೆಲಸ! ಕಾಲುಗಂಟೆಯಲ್ಲಿ ತಾವು ಬರೆದು ಬಿಡಬಹುದು. ಕೋಪ ಮಾಡಿಕೊಳ್ಳಬೇಡಿ!’ ಎಂದು ಹೆಡ್ ಮಾಸ್ಟರು ಹೇಳಿದನು.
ರಂಗಣ್ಣನಿಗೆ ತನ್ನ ಅಧಿಕಾರದ ದರ್ಪ ತೋರಿಸೋಣವೇ? ಅಥವಾ ಆ ಮನುಷ್ಯ ಹೇಳಿದ ಹಾಗೆ ವರದಿಯನ್ನು ಬರೆದು ಕೈ ತೊಳೆದು ಕೊಂಡು ಹೊರಟುಹೋಗೋಣವೇ ? ಎಂದು ಮನಸ್ಸು ಇಬ್ಬಗೆಯಾಯಿತು. ಒಂದು ನಿಮಿಷ ಹಾಗೆಯೇ ಆಲೋಚಿಸಿ,- ಒಳ್ಳೆಯದು; ಬರೆದುಬಿಟ್ಟೇ ಹೊರಡೋಣ ಎಂದು ಕುಳಿತು ಕೊಂಡು ತನಿಖೆಯ ವಿಚಾರವನ್ನೆಲ್ಲ ಬರೆದು ರೇಂಜಿನಲ್ಲೆಲ್ಲ ಈ ಪಾಠ ಶಾಲೆ ಎಲ್ಲಾ ವಿಚಾರಗಳಲ್ಲಿ ಮೊದಲನೆಯದಾಗಿ ನನಗೆ ತೋರುತ್ತದೆ; ಹೆಡ್‌ಮಾಸ್ಟರು ಬಹಳ ಶಿಸ್ತಿನ ಮನುಷ್ಯರು, ಕರ್ತವ್ಯಪರಾಯಣರು, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಪ್ರಶಂಸೆಮಾಡಿ ಬರೆದನು. ವರದಿಯನ್ನು ಬರೆಯುತ್ತಿದ್ದಾಗ ಆ ಕೊಟಡಿಯಲ್ಲಿ ಹೆಡ್ ಮಾಸ್ಟರಾಗಲಿ, ಇತರರಾಗಲಿ ಇರಲಿಲ್ಲ. ವರದಿ ಮುಗಿದಮೇಲೆ, ‘ಹೆಡ್ಮಾಸ್ಟರೇ! ಬನ್ನಿ, ನಿಮ್ಮ ವಿಸಿಟರ್‍ಸ್ ಪುಸ್ತಕ ತೆಗೆದುಕೊಳ್ಳಿ’ ಎಂದು ರಂಗಣ್ಣ ಕರೆದನು, ಹೆಡ್ ಮಾಸ್ಟರು ಆ ಪುಸ್ತಕವನ್ನು ತೆರೆದು ನೋಡಲೇ ಇಲ್ಲ! ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಬಿಟ್ಟನು!
‘ಸ್ವಾಮಿ! ನಾನು ಅದನ್ನು ಇನ್ನೊಂದು ವಾರ ನೋಡುವುದಿಲ್ಲ, ತಮ್ಮ ಇನ್‍ಸ್ಪೆಕ್ಟರ್ ಕೆಲಸ ತಾವು ಮಾಡಿ ಮುಗಿಸಿಬಿಟ್ಟಿರಿ. ಈಗ ನನಗೂ ತಮಗೂ ನಿಶ್ಚಿಂತೆಯಾಯಿತು. ಎರಡು ನಿಮಿಷ ಕುಳಿತುಕೊಳ್ಳಿ’ ಎಂದು ಹೇಳಿದನು. ಆ ಹೊತ್ತಿಗೆ ಹೆಡ್‍ಮಾಸ್ಟರ ಹುಡುಗ ಬೆಳ್ಳಿಯ ತಟ್ಟೆಯಲ್ಲಿ ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು ಮತ್ತು ದೊಡ್ಡ ಬೆಳ್ಳಿಯ ಲೋಟದಲ್ಲಿ ಕಾಫಿ- ಇಷ್ಟನ್ನು ತಂದು ಒಳಗಿಟ್ಟನು.
‘ತೆಗೆದುಕೊಳ್ಳಬೇಕು ಸ್ವಾಮಿ ! ತಾವು ವರದಿಯನ್ನು ಬರೆದು ಆಗಿ ಹೋಗಿದೆ. ಏನಾದರೂ ಬರೆದಿರಿ. ನನಗೆ ಅದರ ಆಲೋಚನೆಯೇನೂ ಇಲ್ಲ, ಒಳ್ಳೆಯ ವರದಿ ಬರೆಯಬೇಕೆಂದು ನಾನೇನೂ ತಮಗೆ ಈ ಲಂಚವನ್ನು ಕೊಡುವುದಿಲ್ಲ.’
‘ಈ ಸಣ್ಣಪುಟ್ಟ ಲಂಚಕ್ಕೆಲ್ಲ ಒಳ್ಳೆಯ ವರದಿ ಬರೆಯುತ್ತಾರೆಯೇ? ಪ್ರಮೋಷನ್ ಕೊಡಿಸುತ್ತಾರೆಯೇ? ಅವಕ್ಕೆಲ್ಲ ಬೇರೆ ವಿಧವಾದ ಲಂಚ ಕೊಡ ಬೇಕು ಹಡ್‍ಮೇಷ್ಟ್ರೆ!’ ಎಂದು ನಗುನಗುತ್ತ ಉಪಾಹಾರ ಸ್ವೀಕಾರಕ್ಕೆ ಇನ್‍ಸ್ಪೆಕ್ಟರು ಕುಳಿತರು.
‘ಆ ಲಂಚಗಿಂಚಗಳ ಮಾತು ಸ್ವಾಮಿಯವರ ಹತ್ತಿರ ಸಾಗೋದಿಲ್ಲ! ಆ ಜನ ಬೇರೆ ಸ್ವಾಮಿ! ನಾನೂ ಹಿಂದೆ ನೋಡಿದ್ದೇನೆ. ನನಗೂ ಇಪ್ಪತ್ತು ವರ್ಷ ಸರ್ವಿಸ್ ಆಯಿತು. ಹತ್ತಾರು ಹಳ್ಳಿಗಳ ನೀರು ಕುಡಿದದ್ದಾಯಿತು.’
‘ನನಗೊಬ್ಬನಿಗೇನೆ ಈ ವಿನಿಯೋಗ ಆಗುತ್ತಿದೆಯಲ್ಲ! ನೀವೂ ತೆಗೆದುಕೊಳ್ಳಿ.’
‘ನಾನು ದೇವರ ಪೂಜೆ ಮಾಡಬೇಕು ಸ್ವಾಮಿ! ಆದ್ದರಿಂದ ತೆಗೆದು ಕೊಳ್ಳುವುದಿಲ್ಲ. ನಮ್ಮ ಹುಡುಗ ತೆಗೆದು ಕೊಳ್ಳುತ್ತಾನೆ. ಅವನಿಗೆ ಅಲ್ಲಿ
ಬೇರೆ ಇಟ್ಟಿದೆ’
ರಂಗಣ್ಣ ಬೋಂಡವನ್ನು ರುಚಿ ನೋಡಿದರೆ ಬಹಳ ಸೊಗಸಾಗಿತ್ತು; ತುಪ್ಪದಲ್ಲಿ ಕರದದ್ದು; ಉಪ್ಪಿಟ್ಟು ಬಹಳ ರುಚಿಯಾಗಿತ್ತು; ಕಾಫಿ ತರತೀಪಾಗಿತ್ತು. ಹಿಂದೆ ಎಲ್ಲಿಯೂ ಇಂಥ ರುಚಿಕರವಾದ ಉಪ್ಪಿಟ್ಟು ಬೋಂಡಗಳು ಅವನಿಗೆ ದೊರೆತಿರಲಿಲ್ಲ. ಉಪಾಹಾರವೆಲ್ಲ ಮುಗಿದಮೇಲೆ ಎಳನೀರುಗಳೆರಡು ಬಂದುವು. ಅವುಗಳಲ್ಲಿ ಒಂದನ್ನು ರಂಗಣ್ಣ ತೆಗೆದು ಕೊಂಡು, ‘ಹೆಡ್‌ಮೇಷ್ಟರೇ, ನೋಡಿ! ನಮ್ಮ ರೇಂಜಿನಲ್ಲಿ ಕೆಲವರು ಉಪಾಧ್ಯಾಯರು ನನ್ನ ಅಪ್ಪಣೆಯಂತೆ ನಡೆಯುವುದಿಲ್ಲ. ಸಂಸಾರದಲ್ಲಿ ಒಂದೋ ಗಂಡನ ಮಾತಿನಂತೆ ಹೆಂಡತಿ ನಡೆಯಬೇಕು; ಇಲ್ಲ ಹೆಂಡತಿಯ ಮಾತಿನಂತೆ ಗಂಡ ನಡೆಯಬೇಕು. ಆಗ ಸಂಸಾರದಲ್ಲಿ ವಿರಸ ಕಾಣುವುದಿಲ್ಲ. ಮೇಷ್ಟರ ಮಾತಿನಂತೆಯೇ ನಾನು ನಡೆದರೆ ವಿರಸ ತಪ್ಪುತ್ತದೆ. ಅಲ್ಲವೇ? ನೀವು ಹೇಳಿದ ಹಾಗೆ ನಾನು ನಡೆದುಕೊಂಡಿದ್ದೇನೆ ; ಉಪಾಹಾರವನ್ನೆಲ್ಲ ಮುಗಿಸಿದ್ದೇನೆ. ಇನ್ನು ನಾನು ಹೊರಡುತ್ತೇನೆ, ಎಂದು ಹೇಳಿ ಎದ್ದನು.
‘ಖಂಡಿತ ತಾವು ಹೋಗಕೂಡದು ಸ್ವಾಮಿ! ಒಳ್ಳೆಯ ಮಧ್ಯಾಹ್ನದ ಹೊತ್ತು! ಬೈಸ್ಕಲ್ ತುಳಿದುಕೊಂಡು ಹತ್ತು ಮೈಲಿ ಹಿಂದಿರುಗುವುದೆಂದರೇನು! ಖಂಡಿತ ಕೂಡದು. ನಾನು ಬ್ರಾಹ್ಮಣ, ಮಧ್ಯಾಹ್ನದ ಹೊತ್ತು ಅಭ್ಯಾಗತರಾಗಿ ಬಂದ ದೊಡ್ಡ ಮನುಷ್ಯರನ್ನು ಹಾಗೆಯೇ ಕಳುಹಿಸುವುದುಂಟೆ?’
‘ಹಾಗೆಲ್ಲ ನಾನು ಮೇಷ್ಟರ ಮನೆಯಲ್ಲಿ ಊಟ ಮಾಡುವುದಿಲ್ಲ.’
‘ಅದೇಕೆ ಸ್ವಾಮಿ? ತಮ್ಮ ಇನ್‍ಸ್ಪೆಕ್ಟರ್ ಕೆಲಸ ಆಗಿ ಹೋಯ್ತು. ನನ್ನ ಮೇಷ್ಟರ ಕೆಲಸ ಪೂರೈಸಿ ಹೋಯಿತು. ಇನ್ನೆಂಥ ಮೇಷ್ಟ್ರು ನಾನು! ಇನ್ನೆಂಥ ಇನ್‌ಸ್ಪೆಕ್ಟರ್ ನೀವು! ವರದಿ ಆಯಿತು, ಪೆಟ್ಟಿಗೆಯಲ್ಲಿ ಸೇರಿ ಹೋಯಿತು. ಅದಕ್ಕೋಸ್ಕರವೇ ಸ್ವಾಮಿ! ನಾನು ಖಂಡಿತವಾಗಿ ಆಡಿ ಬಿಟ್ಟೆ. ತಮ್ಮ ಇನ್ಸ್‍ಪೆಕ್ಟರ್ ಗಿರಿಯೆಲ್ಲ ಮುಗಿದುಹೋಗಲಿ ; ಬರಿಯ ಮನುಷ್ಯರಾಗಿ ಮಾತ್ರ ಉಳಿಯಲಿ ಎಂದು ಆಡಿಬಿಟ್ಟೆ. ಈಗ ನನಗೂ ತಮಗೂ ಇರುವ ಸಂಬಂಧ ಮನುಷ್ಯ ಮನುಷ್ಯರ ಸಂಬಂಧ! ಊಟದ ಹೊತ್ತು, ತಾವು ಬಿಸಿಲಿನಲ್ಲಿ ಹೋಗಕೂಡದು.’
‘ನೀವು ಹೇಳುವುದೆಲ್ಲ ಸರಿ ಮೇಷ್ಟ್ರೇ. ಆದರೂ ಬಡ ಉಪಾಧ್ಯಾಯರ ಅನ್ನ, ಅವರ ಮಕ್ಕಳ ಅನ್ನ ನಾನು ಕಿತ್ತುಕೊಂಡು ತಿನ್ನಲೇ? ಬೇಡ. ನನಗೆ ದೇವರು ಏನೂ ಕಡಮೆ ಮಾಡಿಲ್ಲ.’
‘ಸ್ವಾಮಿ! ನಾನು ಉಪಾಧ್ಯಾಯ ನಿಜ. ಬಡವರಾದರೂ ಸಹ ಒಪ್ಪೊತ್ತು ತಮಗೆ ಅನ್ನ ಹಾಕುವುದರಿಂದ ಅವರು ಪಾಪರ್ ಎದ್ದು ಹೋಗುವುದಿಲ್ಲ. ತಾವು ಒಪ್ಪೊತ್ತು ಉಣ್ಣಲಿಲ್ಲ ಅನ್ನಿ, ಅವರೇನೂ ಅಷ್ಟರಿಂದಲೇ ಕುಬೇರರಾಗುವುದಿಲ್ಲ. ಬಡತನವಿದ್ದರೂ ಜೊತೆಗೆ ಪ್ರೀತಿ ವಿಶ್ವಾಸಗಳಿರುತ್ತವೆ ಸ್ವಾಮಿ! ನನ್ನ ಮಟ್ಟಿಗೆ ನಾನು ಹೇಳುತ್ತೇನೆ. ಆತ್ಮಸ್ತುತಿ ಎಂದು ತಿಳಿಯಬೇಡಿ, ನಾನು ಮೂನ್ನೂರು ರೂಪಾಯಿ ಕಂದಾಯ ಕಟ್ಟುತ್ತೇನೆ! ಹೊಲ, ಗದ್ದೆ, ತೆಂಗಿನ ತೋಪು, ಬಾಳೆಯ ತೋಟ ಮೊದಲಾದುವೆಲ್ಲ ನನಗಿದೆ. ಮನೆಯಲ್ಲಿ ಎರಡು ಹಸು, ಎರಡೆಮ್ಮೆ ಕರೆಯುತ್ತವೆ. ನಾಲ್ಕು ಏರು ನನ್ನ ಜಮೀನಿನಲ್ಲಿ ಸಾಗುವಳಿ ಮಾಡುತ್ತದೆ. ನನಗೆ ತಾವೇನೂ ಪ್ರಮೋಷನ್ ಕೊಡಬೇಡಿ, ನಾನು ತಮ್ಮಲ್ಲಿ ನೌಕರಿ ಸಂಬಂಧವಾಗಿ ಏನನ್ನೂ ಬೇಡುವುದಿಲ್ಲ. ಈ ಹಳ್ಳಿ ನನ್ನದು. ಚಿಕ್ಕಂದಿನಿಂದ ಬೆಳೆದ ಸ್ಥಳ; ಹಲವು ಕಡೆ ಸರ್‍ವೀಸ್ ಮಾಡಿ ಇಲ್ಲಿಗೆ ಬಂದಿದ್ದೇನೆ. ನಾನು ಬಂದಾಗ ಪಾಠಶಾಲೆಯಲ್ಲಿ ಮುವ್ವತ್ತು ಹುಡುಗರು ಮಾತ್ರ ಇದ್ದರು; ನಾನೊಬ್ಬನೇ ಉಪಾಧ್ಯಾಯ. ಈಗ ನೋಡಿ! ನೂರಕ್ಕೆ ಮೇಲ್ಪಟ್ಟು ಮಕ್ಕಳಿದ್ದಾರೆ. ನನ್ನ ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಶ್ರದ್ದೆಯಿಂದ ಕೆಲಸ ಮಾಡುತ್ತೇನೆ. ನನ್ನನ್ನು ಬೇರೆ ಕಡೆಗೆ ವರ್ಗ ಮಾಡಿದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಜಮೀನನ್ನು ನೋಡಿ ಕೊಳ್ಳುತ್ತೇನೆ. ಬೇಕಾದರೆ ಸ್ವಂತವಾಗಿ ಒಂದು ವಾಠ ಶಾಲೆ ಇಟ್ಟು ಕೊಳ್ಳುತ್ತೇನೆ. ಆದ್ದರಿಂದ ತಾವೇನೂ ಆಲೋಚನೆ ಮಾಡ ಬೇಕಾಗಿಲ್ಲ. ಮನೆಯಲ್ಲಿ ಅಡಿಗೆ ಆಗಿದೆ. ಅಲ್ಲಿಗೆ ದಯಮಾಡಿಸಿ, ಸ್ನಾನಮಾಡಿ, ಮಡಿ ಕೊಡುತ್ತೇನೆ. ಅರ್ಧಗಂಟೆಯಲ್ಲಿ ದೇವರ ಪೂಜೆಯನ್ನು ಮುಗಿಸುತ್ತೇನೆ. ಊಟಮಾಡಿಕೊಂಡು, ವಿಶ್ರಾಂತಿ ತೆಗೆದುಕೊಂಡು, ಸಾಯಂಕಾಲ ಐದು ಗಂಟೆಗೆ ಹೊರಟರೆ ದೊಡ್ಡ ರಸ್ತೆಯಲ್ಲಿ ಬಸ್ಸು ಬರುತ್ತದೆ. ಅದರಲ್ಲಿ ಕುಳಿತು ಕೊಂಡು ಜನಾರ್ದನಪುರವನ್ನು ಸೇರಬಹುದು. ಆದ್ದರಿಂದ ಬೈಸ್ಕಲ್ ಇಲ್ಲಿರಲಿ. ತಾವು ನನ್ನ ಮನೆಗೆ ದಯಮಾಡಿಸಿ’ -ಎಂದು ದೊಡ್ಡ ಭಾಷಣವನ್ನೇ ಹೆಡ್ಮಾಸ್ಟರು ಮಾಡಿದನು.
‘ಇನ್ನು ಹಟ ಮಾಡಬಾರದು’ ಎಂದು ವಿವೇಕವನ್ನು ತಂದು ಕೊಂಡು ರಂಗಣ್ಣ ವೆಂಕಟಸುಬ್ಬಯ್ಯನ ಮನೆಗೆ ಹೊರಟನು.
ಬಡತನ ಇತ್ಯಾದಿ ಕಷ್ಟಗಳಿಲ್ಲದೆ ಸುಖವಾಗಿಯೂ ಸಂತೋಷವಾಗಿಯೂ ಇರುವ ಉಪಾಧ್ಯಾಯರು ಒಬ್ಬರಾದರೂ ಇದ್ದಾರಲ್ಲ ಎಂದು ಮೆಚ್ಚಿಕೊಳ್ಳುತ್ತ, ಗ್ರಾಮದ ಮುಖಂಡರು ಮೊದಲಾದವರ ವಿಷಯಗಳನ್ನೆಲ್ಲ ಪ್ರಸ್ತಾಪಿಸುತ್ತ, ವೆಂಕಟಸುಬ್ಬಯ್ಯನ ಮನೆಗೆ ರಂಗಣ್ಣ ಬಂದನು. ಮುಂದಿನ ಬಾಗಿಲನ್ನು ದಾಟುತ್ತಲೂ ವಿಶಾಲವಾದ ಅಂಗಳ ; ಅದರ ಎಡಗಡೆಯಲ್ಲಿ ದನಗಳ ಕೊಟ್ಟಿಗೆ ; ಬಲಗಡೆ ನೀರಮನೆ ಮತ್ತು ಚಿಲ್ಲರೆ ಸಾಮಾನುಗಳನ್ನು ಅಡಕಿದ್ದ ಒವ್ಪಾರ, ನಡುವೆಯನ್ನು ದಾಟಿದಮೇಲೆ ಹಜಾರ. ಅದರ ಎದುರುಬದುರು ಪಕ್ಕಗಳಲ್ಲಿ ಎರಡೆರಡು ಕೊಟಡಿಗಳು ; ಅಲ್ಲಿಂದ ಮುಂದೆ ಊಟದ ಮನೆ ; ಅದರ ಬಲಗಡೆ ಅಡಿಗೆಯ ಮತ್ತು ದೇವರಪೂಜೆಯ ಕೋಣೆಗಳು, ಅಡಿಗೆಯ ಮನೆಯಿಂದಲೂ ಇತ್ತ ನೀರಮನೆಯಿಂದಲೂ ಹಿಂಬದಿಗೆ ಹೋಗಲು ಬಾಗಿಲುಗಳಿದ್ದವು. ಹಿಂಭಾಗದಲ್ಲಿ ಗೊಬ್ಬರದ ಗುಂಡಿಯ ಇತ್ತು. ಒಟ್ಟಿನಲ್ಲಿ ವೆಂಕಟಸುಬ್ಬಯ್ಯ ಸ್ಥಿತಿವಂತನೆಂಬುದು ಆ ಮನೆಯ ಅಚ್ಚು ಕಟ್ಟಿ ನಿಂದ ತಿಳಿಯಬಹುದಾಗಿತ್ತು. ಹಜಾರದ ಬಲಗಡೆಯ ಕೊಟಡಿಯೊಂದರಲ್ಲಿ ಕುರ್ಚಿಯೊಂದನ್ನು ಹಾಕಿತ್ತು ; ನೆಲಕ್ಕೆ ಚಾಪೆಯನ್ನು ಹಾಸಿತ್ತು. ರಂಗಣ್ಣ ತನ್ನ ಉಡುಪುಗಳನ್ನು ತೆಗೆಯುತ್ತಿದ್ದಾಗ ಒಂದು ಸರಿಗೆಯ ಪಂಚೆಯನ್ನು ವೆಂಕಟಸುಬ್ಬಯ್ಯ ತಂದು ಕೊಟ್ಟನು. ಆ ಸಂದರ್ಭದಲ್ಲಿ ಎದುರುಗಡೆಯ ಕೊಟಡಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ರಂಗಣ್ಣನ ಕಣ್ಣಿಗೆ ಬಿತ್ತು. ‘ಏನು ವೆಂಕಟಸುಬ್ಬಯ್ಯ! ಕಬ್ಬಿಣದ ಪೆಟ್ಟಿಗೆ ಬೇರೇ ಇಟ್ಟಿದ್ದೀರಿ. ಲೇವಾದೇವಿ ಏನಾದರೂ ಮಾಡುತ್ತಿದ್ದೀರಾ? ಒಳಗೆ ಹಣ ಭರ್ತಿ ಇದೆಯೋ?’ ಎಂದು ನಗುತ್ತಾ ಕೇಳಿದನು. ಒಡನೆಯೇ ವೆಂಕಟಸುಬ್ಬಯ್ಯನ ಮುಖ ಸಪ್ಪೆಗಾಯಿತು; ಕಣ್ಣಲ್ಲಿ ನೀರು ಉಕ್ಕಿತು; ಗಂಟಲು ಕಟ್ಟಿತು ; ಮಾತು ಹೊರಡಲಿಲ್ಲ. ಏನು ಸಂಕಟದ ವಿಚಾರವೊ! ತಾನೇಕೆ ಕೇಳಿದೆನೋ ಎಂದು ರಂಗಣ್ಣ ಪೇಚಾಡಿಹೋದನು. ಸ್ವಾಮಿ! ಆ ಕಬ್ಬಿಣದ ಪೆಟ್ಟಿಗೆಯ ವಿಚಾರವನ್ನು ಏನೆಂದು ಹೇಳಲಿ! ಹೊಟ್ಟೆಯುರಿಯುತ್ತದೆ! ಹೆತ್ತ ಹೊಟ್ಟೆ ಕೆಟ್ಟದ್ದು ಸ್ವಾಮಿ! ಹೆಣ್ಣು ಮಕ್ಕಳನ್ನು ಹೆರಬಾರದು! ಹೆರಬಾರದು!’- ಎಂದು ವೆಂಕಟಸುಬ್ಬಯ್ಯ ಹೇಳಿ ಕಣ್ಣೀರು ಮಿಡಿಯುತ್ತ, ‘ಅಮ್ಮ, ತಾಯೀ! ಇನ್‌ಸ್ಪೆಕ್ಟರವರು ಬಂದಿದ್ದಾರೆ. ಬಂದು ನಮಸ್ಕಾರ ಮಾಡಮ್ಮ! ಅವರ ಆಶೀರ್ವಾದದ ಫಲದಿಂದ ಏನಾದರೂ ಒಳ್ಳೆಯದಾಗಲಿ’ ಎಂದು ಮಗಳನ್ನು ಕರೆದನು.
ರಂಗಣ್ಣನ ಉತ್ಸಾಹವೆಲ್ಲ ಇಳಿದು ಹೋಯಿತು. ‘ಈ ಮನುಷ್ಯ ಸುಖವಾಗಿ ಮತ್ತು ಸಂತೋಷವಾಗಿ ಇದ್ದಾನೆ ಎಂದು ನಾನು ಅಂದು ಕೊಂಡಿದ್ದೇ ಪಾಪವಾಯಿತಲ್ಲ! ಇಂಥ ಖಂಡಿತವಾದಿ, ಒರಟು ಮನುಷ್ಯ, ಒಂದೇ ನಿಮಿಷದಲ್ಲಿ ಬಸಿರ ಬೇಗೆಗೆ ಸಿಕ್ಕಿ ಬೆಣ್ಣೆಯಂತೆ ಕರಗಿ ಕಣ್ಣೀರು ಮಿಡಿಯುತ್ತಿದಾನೆ! ಇದೇನು ಲೋಕದ ವಿಚಿತ್ರ!’ ಎಂದು ಹೇಳಿ ಕೊಳ್ಳುತ್ತಿದ್ದ ಹಾಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿ ಬಹಳ ಸಂಕೋಚದಿಂದ ಬಂದು ರಂಗಣ್ಣನಿಗೆ ನಮಸ್ಕಾರ ಮಾಡಿದಳು. ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು. ‘ದೇವರು ಒಳ್ಳೆಯದನ್ನು ಮಾಡಲಮ್ಮ! ಇನ್ನು ಒಳಕ್ಕೆ ಹೋಗು ತಾಯಿ – ಎಂದು ರಂಗಣ್ಣನು ಹೇಳಿದನು. ಆಕೆ ಹೊರಟು ಹೋದಳು. ‘ನೋಡಿದಿರಾ ಸ್ವಾಮಿ ! ಆ ಹುಡುಗಿ ನನ್ನ ಹಿರಿಯ ಮಗಳು. ಈ ಪಾಪಿಷ್ಠನ ಹೊಟ್ಟೆಯಲ್ಲಿ ಏಕೆ ಹುಟ್ಟಿದಳೋ ಕಾಣೆ! ಆ ಹುಡುಗಿಯನ್ನು ನನ್ನ ಅಳಿಯ ಬಿಟ್ಟು ಬಿಟ್ಟು ನಾಲ್ಕು ವರ್ಷಗಳಾದುವು! ಹೆತ್ತವರ ಸಂಕಟ ನೋಡಿ ಸ್ವಾಮಿ! ನಾವು ತಿನ್ನೊ ಅನ್ನವೆಲ್ಲ ಆ ಹುಡುಗಿಯನ್ನ ನೋಡಿದರೆ ಭಸ್ಮವಾಗಿ ಹೋಗುತ್ತೆ!’
‘ಏಕೆ ಬಿಟ್ಟು ಹೋದ? ಅಳಿಯನ ತಕರಾರೇನು?’
‘ಅಳಿಯ ನನ್ನ ಸಮೀಪ ಬಂಧು. ಹುಡುಗ ಯೋಗ್ಯನಾಗಿದ್ದ; ಜಮೀನು ಸ್ವಲ್ಪ ಇದೆ, ಎಸ್.ಎಸ್.ಎಲ್.ಸಿ. ಪ್ಯಾಸ್ ಮಾಡಿದ್ದಾನೆ. ಯಾರೋ ದುರ್ಬೋಧನೆ ಮಾಡಿದರು ಅಂತ ಕಾಣುತ್ತೆ. ಎರಡು ಎಕರೆ ಗದ್ದೆ, ಎರಡು ಸಾವಿರ ರೂಪಾಯಿ ನಗದು ಕೊಟ್ಟರೆ ನಿನ್ನ ಮಗಳೊಡನೆ ಸಂಸಾರ ನಡೆಸುತ್ತೇನೆ ; ಇಲ್ಲವಾದರೆ ನಿನ್ನ ಮನೆಯಲ್ಲಿ ತಂದು ಬಿಡುತ್ತೇನೆ ಎಂದು ನನಗೆ ಕಾಗದ ಬರೆದ. ನಾನೇನು ಮಾಡಲಿ? ನನಗೆ ಒಟ್ಟು ಮೂರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು. ಎರಡನೆಯ ಹುಡುಗಿ ಏನೊಂದೂ ಗಲಭೆಯಿಲ್ಲದೆ ಗಂಡನೊಡನೆ ಸಂಸಾರ ಮಾಡಿ ಕೊಂಡಿದ್ದಾಳೆ. ಮೂರನೆಯ ಹುಡುಗಿ ಲಂಗ ಕಟ್ಟಿ ಕೊಂಡು ಓಡಾಡುತ್ತಿದ್ದಾಳೆ ; ಇನ್ನೂ ಅವಳಿಗೆ ಮದುವೆಯಿಲ್ಲ. ಹಿರಿಯ ಅಳಿಯನಿಗೆ ಅವನು ಕೇಳಿದ್ದನ್ನು ಕೊಟ್ಟರೆ, ಉಳಿದ ಅಳಿಯಂದರಿಗೂ ಹಾಗೆಯೇ ಕೊಡ ಬೇಕು. ಅರ್ಧ ಗದ್ದೆಯೆಲ್ಲ ಅವರಿಗೆ ಹೋದರೆ ನನ್ನ ಗಂಡು ಮಕ್ಕಳ ಗತಿ? ನಾನೂ ಬಹಳ ಆಲೋಚನೆ ಮಾಡುತ್ತಿದ್ದೆ ಸ್ವಾಮಿ! ಅವನಿಗೆ ಉತ್ತರ ಬರೆಯುವುದು ತಡವಾಯಿತು. ಹುಡುಗಿಯನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ದೊಡ್ಡ ರಸ್ತೆಯಲ್ಲಿ ಬಿಟ್ಟು ಬಿಟ್ಟು, ‘ಹೋಗು ನಿಮ್ಮಪ್ಪನ ಮನೆಗೆ!’ ಎಂದು ಹೇಳಿ ಬಸ್ಸಿಳಿಯದೆ ಹಾಗೆಯೇ ಹೊರಟು ಹೋದ. ಈ ನನ್ನ ಮಗಳು ಅಳುತ್ತಾ ಸಾಯಂಕಾಲ ಮನೆಗೆ ಬಂದು ಸೇರಿದಳು!’
‘ನನ್ನ ಹೆಂಡತಿ ಕೊರಗಿ ಕೊರಗಿ, ಜಮೀನು ಹೋದರೆ ಹೋಗಲಿ; ಗಂಡು ಮಕ್ಕಳಾದರೇನು, ಹೆಣ್ಣು ಮಕ್ಕಳಾದರೇನು; ಎಲ್ಲರೂ ಹೊಟ್ಟೆಯಲ್ಲಿ ಹುಟ್ಟಿದವರೇ! ಎಲ್ಲರಿಗೂ ನಾನು ಬೇನೆ ಪಡಲಿಲ್ಲವೇ? ಕೊಟ್ಟು ಬಿಡೋಣ – ಎಂದು ಹೇಳಿದಳು. ನಾನೂ ಅದೇ ನಿರ್ಧಾರಕ್ಕೆ ಬಂದೆ. ಆದರೆ ಆ ಹುಡುಗನ ನಡತೆ ಚೆನ್ನಾಗಿಲ್ಲ ಸ್ವಾಮಿ! ನಾಟಕದ ಕಂಪೆನಿಯಲ್ಲಿ ಸೇರಿ ಕೊಂಡಿದ್ದಾನೆ. ಸರಿಯಾದ ಸಹವಾಸ ಗಂಟು ಬಿದ್ದಿಲ್ಲ. ಅಲ್ಲಿಯ ನಟಿಯರಲ್ಲಿ ಲೋಲನಾಗಿದ್ದಾನೆ. ಈ ದಿನ ಗದ್ದೆ ಮತ್ತು ರೂಪಾಯಿಗಳನ್ನು ಕೊಟ್ಟೆನೋ, ನಾಳೆಯೇ ಪರಭಾರೆ ಮಾಡಿ ಬಿಡುತ್ತಾನೆ. ಆಮೇಲೆ ನನ್ನ ಮಗಳನ್ನು ತಂದು ಇಟ್ಟುಕೋ ನಿನ್ನ ಮಗಳನ್ನ ನಿನ್ನ ಮನೆಯಲ್ಲಿ ಎಂದು ಬಿಟ್ಟು ಹೋಗುತ್ತಾನೆ. ಏನು ಮಾಡುವುದಕ್ಕೂ ತೋಚುವುದಿಲ್ಲ.’
‘ದೇವರು ಅವನಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ರಂಗಣ್ಣ ಹೇಳಿದನು.
‘ವೆಟ್ಟಗೆ ವಿಚಾರ ಕೇಳಿದಿರಿ. ನೋಡಿ ಸ್ವಾಮಿ! ಯಥಾಶಕ್ತಿ ಆ ಹುಡುಗಿಗೆ ಒಡವೆ ವಸ್ತು ಕೊಟ್ಟಿದ್ದೇನೆ. ಸುಮಾರು ಎರಡು ಸಾವಿರ ರೂಪಾಯಿಗಳ ಬೆಲೆ ಆಗಬಹುದು. ಆ ಅಳಿಯನಿಗೆ ಒಳ್ಳೆಯ ಬುದ್ಧಿ ಹುಟ್ಟಿ, ಏನಾದರೂ ಮನೆಗೆ ಬಂದರೆ ಅವನಿಗೆ ಕೊಡುವುದಕ್ಕೆ ಎರಡು ಸಾವಿರ ರೂಪಾಯಿಗಳನ್ನು ನಗದು ಇಟ್ಟಿದ್ದೇನೆ. ಆ ಅಳಿಯನಿಗೆ ಕೊಡುತ್ತಲೂ ಎರಡನೆಯವನು ತಕರಾರು ಎಬ್ಬಿಸಬಹುದೆಂದು ಹೆದರಿ ಆವನ ಪಾಲಿನದು ಎರಡು ಸಾವಿರ ರೂಪಾಯಿಗಳನ್ನು ಇಟ್ಟಿದ್ದೇನೆ. ಈ ಹಾಳು ಕೊಂಪೆಯಲ್ಲಿ ಆ ಹಣ, ಆ ಒಡವೆ ವಸ್ತುಗಳನ್ನು ಜೋಪಾನ ವಾಗಿಡಬೇಕಲ್ಲ ಎಂದು ಎರಡು ವರ್ಷಗಳ ಹಿಂದೆ ಕಬ್ಬಿಣದ ಪೆಟ್ಟಿಗೆಯನ್ನು ಕೊಂಡುಕೊಂಡು ಬಂದೆ. ಪೆಟ್ಟಿಗೆಯಲ್ಲಿ ಅವುಗಳನ್ನಿಟ್ಟಿದ್ದರೂ ಸಹ ರಾತ್ರಿ ಸರಿಯಾಗಿ ನಿದ್ರೆ ಹತ್ತುವುದಿಲ್ಲ. ಆ ಹುಡುಗಿ ತನ್ನ ಗಂಡನ ಮನೆ ಸೇರಿ, ಅವನೂ ಒಂದು ಕಡೆ ನೆಲೆಯಾಗಿ ನಿಂತು, ನನ್ನ ಮೇಲಿನ ಭಾರ ಯಾವಾಗ ಇಳಿದೀತೋ ಭಗವಂತ- ಎಂದು ದಿನವೂ ಪ್ರಾರ್ಥಿಸುತ್ತಾ ಇದ್ದೇನೆ’
‘ವೆಂಕಟಸುಬ್ಬಯ್ಯ! ನಿಮ್ಮ ಅಳಿಯನೇನೋ ಕೆಟ್ಟವನು. ಅವನಿಗೆ ಯಾರಾದರೂ ಬುದ್ಧಿ ಹೇಳಬೇಕು.’
‘ಈಗ ನನ್ನ ಎರಡನೆಯ ಮಗಳು ತನ್ನ ಪಾಡಿಗೆ ತಾನು ಸಂಸಾರ ನಡೆಸುತ್ತಿದ್ದಾಳೆ. ನನಗೆ ಎಷ್ಟೋ ಸಂತೋಷ. ಹಾಗೆಯೇ ನನ್ನ ಹಿರಿಯ ಮಗಳೂ ಸಂಸಾರ ನಡೆಸಿಕೊಂಡಿದ್ದಿದ್ದರೆ ಸಂತೋಷ ಇಮ್ಮಡಿಯಾಗುತ್ತಿತ್ತು. ಈಗಲೂ ನನಗೆ ಹಿರಿಯ ಅಳಿಯನ ವಿಚಾರದಲ್ಲಿ ಪ್ರೀತಿ ಇದೆ. ಅವನು ನಾಳೆ ನಾಟಕದ ಕಂಪೆನಿ ಬಿಟ್ಟು ಇಲ್ಲಿ ಬಂದು ನೆಲಸಲಿ, ಬಾಚಿ ತಬ್ಬಿ ಕೊಳ್ಳುತ್ತೇನೆ ಬೇಕಾದ ಅನುಕೂಲ ಮಾಡಿ ಕೊಡುತ್ತೇನೆ.’
‘ಒಳ್ಳೆಯದು ವೆಂಕಟಸುಬ್ಬಯ್ಯ! ಆ ಕಾಲವೂ ಬರುತ್ತದೆ. ಅಲ್ಲಿಯವರೆಗೂ ನಿಮ್ಮ ಕಷ್ಟ ದುಃಖ ಸೈರಿಸಿ ಕೊಳ್ಳಬೇಕು ; ಹುಡುಗಿಯ ಮನಸ್ಸು ನೋಯದಂತೆ ನೋಡಿಕೊಳ್ಳಬೇಕು; ಆಕೆಯನ್ನು ಏನೂ ಆಡದೆ ಆದರಿಸಬೇಕು.
ಸ್ನಾನಾದಿಗಳು ಮುಗಿದಮೇಲೆ ವೆಂಕಟಸುಬ್ಬಯ್ಯ ದೇವತಾರ್ಚನೆ ಮಾಡಿದನು. ಬಳಿಕ ಊಟಕ್ಕೆ ಕುಳಿತಾಯಿತು. ಸೊಗಸಾದ ಅಡುಗೆ! ಅದರಲ್ಲಿ ಪಾಯಸ ಬಹಳ ಸೊಗಸಾಗಿತ್ತು. ಮನೆಯಲ್ಲೇ ಯಥೇಷ್ಟವಾಗಿ ಹಾಲು ದೊರೆಯುತ್ತಿದುದರಿಂದ ವೆಂಕಟಸುಬ್ಬಯ್ಯನಿಗೆ ಯೋಚನೆ ಇರಲಿಲ್ಲ. ಒಳ್ಳೆಯ ಹೆಪ್ಪು ಹಾಕಿದ ಧೈಂಡಿ ಮೊಸರು. ಎಲ್ಲವನ್ನೂ ಮನೆಯಾಕೆ ಧಾರಾಳವಾಗಿ ಬಡಿಸಿದಳು. ರಂಗಣ್ಣನೂ ಧಾರಾಳವಾಗಿಯೇ ಹೊಟ್ಟೆಗೆ ಸೇರಿಸಿದನು. ತಾನು ಸ್ವಲ್ಪ ಕಾಲದ ಹಿಂದೆ ಅಷ್ಟೊಂದು ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು, ಕಾಫಿ ಮತ್ತು ಎಳ ನೀರುಗಳನ್ನು ತುಂಬಿಕೊಂಡು ತೇಗಿದ್ದವನು, ಎರಡು ದಿವಸಗಳ ಉಪವಾಸವಿದ್ದ ಗೋದಾವರಿಯ ಬ್ರಾಹ್ಮಣನಂತೆ ಆ ಕೂಟು, ಮಜ್ಜಿಗೆಹುಳಿ, ಚಿತ್ರಾನ್ನ, ಆಂಬೊಡೆ, ಹೋಳಿಗೆ ಮತ್ತು ಪಾಯಸಗಳನ್ನು ಮಹೇಂದ್ರ ಜಾಲ ಮಾಡಿದಂತೆ ಮಾಯಮಾಡಿಸಿದ್ದು ಅವನಿಗೇನೆ ಆಶ್ಚರ್ಯವಾಯಿತು. ಎಂತಹ ವಿಚಿತ್ರ!
ಆ ಭಾರಿ ಭೋಜನದ ಪರಿಣಾಮವಾಗಿ ಮಧ್ಯಾಹ್ನ ಶಯನೋತ್ಸವವಾಯಿತು. ಎದ್ದಾಗ ಸಾಯಂಕಾಲ ನಾಲ್ಕು ಗಂಟೆ. ಆ ಹೊತ್ತಿಗೆ ಹಜಾರದಲ್ಲಿ ಪಂಚಾಯತಿಯ ಮೆಂಬರುಗಳು ಸೇರಿದ್ದರು. ಪಾಠಶಾಲೆಯ ಸಹಾಯೋಪಾಧ್ಯಾಯರು ಬಂದು ಕುಳಿತಿದ್ದರು. ಇನ್ಸ್‍ಪೆಕ್ಟರ್ ಸಾಹೇಬರು ಎದ್ದು ಕೈ ಕಾಲು ಮುಖಗಳನ್ನು ತೊಳೆದು ಕೊಂಡು ಬಂದು ಕುಳಿತರು. ಪಂಚಾಯತಿ ಮೆಂಬರುಗಳ ಪರಿಚಯವನ್ನು ಹೆಡ್ಮಾಸ್ಟರ್ ಮಾಡಿಸಿಕೊಟ್ಟನು. ಅವರಿಗೆಲ್ಲ ಹೋಳಿಗೆ, ಆಂಬೊಡೆ ಮತ್ತು ಪಾಯಸಗಳ ವಿತರಣೆಯಾಯಿತು. ಇನ್‍ಸ್ಪೆಕ್ಟರು ಬರಿ ಕಾಫಿಯನ್ನು ಮಾತ್ರ ತೆಗೆದುಕೊಂಡರು. ಮಾತುಕತೆಗಳಾಗುತ್ತಿದ್ದಾಗ ಉಪಾಧ್ಯಾಯರ ಸಂಘದ ಸಭೆಯನ್ನು ಬೊಮ್ಮನಹಳ್ಳಿಯಲ್ಲಿ ಸೇರಿಸಬೇಕೆಂದು ಪಂಚಾಯತಿಯವರು ವಿಜ್ಞಾಪನೆ ಮಾಡಿಕೊಂಡು ಪಂಚಾಯತಿಯ ನಿರ್ಣಯದ ನಕಲನ್ನು ಕೈಗೆ ಕೊಟ್ಟರು. ಅವರಿಗೆ ಉಚಿತವಾದ ಭರವಸೆಯನ್ನು ಕೊಟ್ಟು, ವಿದ್ಯಾಭಿವೃದ್ಧಿಯ ವಿಚಾರವಾಗಿ ಒಂದು ಸಣ್ಣ ಭಾಷಣ ಮಾಡಿ ರಂಗಣ್ಣ ಅಲ್ಲಿಂದ ಹೊರಟನು. ಜೊತೆಯಲ್ಲಿ ಒಂದು ದೊಡ್ಡ ಪರಿವಾರವೇ ಹೊರಟಿತು. ಪಾಠಶಾಲೆಯನ್ನು ಹೊಕ್ಕು ಅಲ್ಲಿಂದ ದೊಡ್ಡ ರಸ್ತೆಗೆ ಬರುವ ಹೊತ್ತಿಗೆ ಸಾಯಂಕಾಲ ಐದು ಗಂಟೆಯಾಯಿತು. ಬಸ್ಸು ಬಂತು. ಅಷ್ಟೊಂದು ಜನ ಸೇರಿರುವುದನ್ನು ನೋಡಿ ಬಸ್ಸು ನಿಂತಿತು. ಆದರೆ ಜನಾರ್ದನಪುರಕ್ಕೆ ಹೊರಟವರು ಇನ್‍ಸ್ಪೆಕ್ಟರೊಬ್ಬರೇ. ಬಸ್ ಹೊರಟಾಗ ಜಯಕಾರಗಳಾದುವು. ಆ ದಿನದ ಕಾರ್ಯಕಲಾಪಗಳನೆಲ್ಲ ಮನಸ್ಸಿನಲ್ಲಿ ಪುನರಾವರ್ತನೆ ಮಾಡುತ್ತ ರಂಗಣ್ಣ ಜನಾರ್ದನಪುರವನ್ನು ಸಾಯಂಕಾಲ ಐದೂಮುಕ್ಕಾಲು ಗಂಟೆಗೆ ಕ್ಷೇಮವಾಗಿ ಸೇರಿದನು.
*****