ಮೇಷ್ಟ್ರು ವೆಂಕಟಸುಬ್ಬಯ್ಯ ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿ ಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು. ಕರಿಯಪ್ಪನವರ ಅಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ...