ರಾಜಕುಮಾರಿಯೊಂದಿಗೆ ಹೊರಟುನಿಂತ ಮದನಿಕೆಯಲ್ಲಿ ವಿಚಿತ್ರ ಸಂಭ್ರಮವಿತ್ತು. ತನ್ನ ಸಖಿಯರಿಗೆ ‘ಯಾರೂ ಬರಬೇಡಿ’ ಎಂದು ಹೇಳಿದಳು. ರಾಜಕುಮಾರಿಯನ್ನೂ ಬರದಿರುವಂತೆ ಹೇಳುತ್ತಿದ್ದಳೇನೋ, ಆದರೆ ಮಗಳ ಮೇಲಿನ ಮಮತೆಯಿಂದ ರಾಜ ಸಿಟ್ಟಾಗದಿರಲಿ ಎಂದು ತಾನೇ ಕರೆದಿದ್ದಳು.
ಹೋಗುವಾಗ ಮಂತ್ರಿಗಳಿಗೆ ಹೇಳಿದಳು.
‘ನಾವು ರಾಜರ ಅಪ್ಪಣೆ ಇಲ್ಲದೆ ಹೊರಗೆ ಹೋದ ವಿಷಯವನ್ನು ಬೇಕಾದರೆ ಅವರಿಗೆ ಹೇಳಬೇಡಿ.’
‘ಅದು ಕಷ್ಟ ರಾಣಿಯವರೆ, ನಾವಾಗಿ ಮುಚ್ಚಿಡುವಂಥಾದ್ದು ಏನಾಗಿದೆ?’
‘ಏನೂ ಆಗಿಲ್ಲ ಮಂತ್ರಿಗಳೆ, ಆದರೆ ರಾಜರ ಮನಸ್ಸು ಹೀಗೇ ಎಂದು ಹೇಳಲಾಗದು.’
‘ರಾಜರೂ ಹೀಗೇ ಹೇಳಬಹುದು. ರಾಣಿಯ ಮನಸ್ಸು ಹೀಗೇ ಎಂದು ಹೇಳಲಾಗದು, ಅಂತ.’
‘ಅದಕ್ಕಾಗಿಯೇ ಏನೂ ಹೇಳುವುದು ಬೇಡ.’
‘ಆ ವಿಷಯ ನನಗೆ ಬಿಡಿ. ಆದರೆ ರಾಜರೇ ಕೇಳಿದರೆ ನೀವು ಮುಚ್ಚಿಡಬೇಡಿ. ಹೋಗಿಬನ್ನಿ.’
ಮಂತ್ರಿಗಳು ಕಳಿಸಿದ ಯೋಧರ ಬೆಂಗಾವಲಿನಲ್ಲಿ ಮದನಿಕೆ ಮತ್ತು ಮದಾಲಸೆ ಇಬ್ಬರೂ ಮಂಟಪಕ್ಕೆ ಬಂದರು. ಈ ಯೋಧರಿಗೆ ಹತ್ತಿರದಲ್ಲಿ ಕಾವಲಿರಬಾರದೆಂದೂ ದೂರದಲ್ಲಿರಬೇಕೆಂದೂ ಮದನಿಕೆ ಆಜ್ಞಾಪಿಸಿ ದೂರ ಕಳಿಸಿದಳು.
ಇದೇ ಮೊದಲ ಬಾರಿಗೆ ಬಂದಿದ್ದ ರಾಜಕುಮಾರಿ ಮದಾಲಸೆಗೆ ವಿಚಿತ್ರ ಆನಂದವಾಗತೊಡಗಿತು. ತಂಪಾಗಿ ಬೀಸುವ ಗಾಳಿ, ಸುತ್ತ ಹೂವಿನ ಆವರಣ, ಒಳಗೆ ಅವುಗಳದೇ ಅಲೆಯಲೆಯ ಅನುಭವ, ಹಗುರವಾದ ಭಾವ! ರಾಜಕುಮಾರಿ ಅತ್ತಿಂದಿತ್ತ ಕುಣಿಯುತ್ತ ಓಡ ತೊಡಗಿದಳು. ಮದನಿಕೆಯು ಮಂಟಪ ಮಧ್ಯದಲ್ಲಿ ನಿಂತು ಬಿಡುಗಡೆಯ ಭಾವದಲ್ಲಿ ತೇಲುತ್ತಿರುವಾಗ ಮದಾಲಸೆ ಮಂಟಪದ ಸುತ್ತ ಚಿಗರೆಯಂತೆ ಓಡುತ್ತಿದ್ದಳು. ಕಡೆಗೆ ನಿಧಾನಿಸುತ್ತ ಕೇಳಿದಳು.
‘ಚಿಕ್ಕಮ್ಮ, ಇಲ್ಲಿಗೆ ಬಂದ ಕೂಡಲೇ ಶ್ರೀಗಂಧದ ಗಾಳೀಲಿ ತೇಲಿದಂತೆ ಆಗ್ತಿದೆ, ಎಂದೂ ಆಗದ ಆನಂದ ಆವರಿಸ್ತಾ ಇದೆ. ಮೋಡದ ಮರೆಯ ಮಿಂಚಿನಂತೆ ಕನಸು ಕೆಣಕುತ್ತೆ. ಇದೆಲ್ಲ ಯಾಕೆ ಚಿಕ್ಕಮ್ಮ?’
‘ಯಾಕೆ ಅಂತ ಎಲ್ಲಾ ಬಿಚ್ಚಿಡೋಕ್ ಸಾಧ್ಯ ಇದ್ದಿದ್ದರೆ, ನಾನೂ ನಿನ್ನಂತೆಯೇ ಯಾಕ್ ಆಗ್ತಾ ಇದ್ದೆ ರಾಜಕುಮಾರಿ?’
‘ಅಂದ್ರೆ? ನಂಗೆ ಅರ್ಥ ಆಗಲಿಲ್ಲ ಚಿಕ್ಕಮ್ಮ?’
‘ಹೇಗೆ ಅರ್ಥ ಮಾಡುಸ್ಬೇಕು ಅಂತ ನನಗೂ ಗೊತ್ತಾಗ್ತಿಲ್ಲ ರಾಜಕುಮಾರಿ’
‘ಹಾಗಾದ್ರೆ ಅರ್ಥ ಆಗದೆ ಇರೋದೆ ಅರ್ಥಾನ?’
‘ಹಾಗೇನೂ ಇಲ್ಲ. ಆದರೆ ಎಲ್ಲವೂ ಎಲ್ಲಾ ಕಾಲಕ್ಕೂ ಎಲ್ಲ ಅರ್ಥಗಳನ್ನೂ ಬಿಟ್ಟುಕೊಡಲ್ಲ. ಈಗ ನೋಡು. ನಾನು ಮೊದಲು ಇಲ್ಲಿಗೆ ಬಂದಾಗ ನಿನ್ನಂತೇ ಆಡಿದ್ದೆ. ಮಂಟಪದ ಸುತ್ತ ಗೆಜ್ಜೆ ಕಟ್ಟಿದವಳಂತೆ ಕುಣಿದಿದ್ದೆ. ಈಗ ಮಂಟಪದ ಮಧ್ಯದಲ್ಲಿ ನಿಂತು ಕನಸು ಕಟ್ತಾ ಇದ್ದೀನಿ. ಆವತ್ತಿನ ನಾನು ಇವತ್ತಿನ ನಿನ್ನಲ್ಲಿ ಕಾಣಿಸ್ಕೊಳ್ತಾ ಇರೋದನ್ನ ನೋಡ್ತಾ ನಿಂತಿದ್ದೀನಿ.’
‘ಅರ್ಥ ಮಾಡುಸ್ತೀನಿ ಅಂತ ಇನ್ನಷ್ಟು ನಿಗೂಢವಾಗ್ತ ಇದ್ದೀಯಲ್ಲ ಚಿಕ್ಕಮ್ಮ?’
‘ಇದ್ರಲ್ಲಿ ನಿಗೂಢ ಏನ್ಬಂತು ಮದಾಲಸೆ? ಈ ಆವರಣದಲ್ಲಿ ನನಗೂ ನಿನಗೂ ವ್ಯತ್ಯಾಸ ಕಡಿಮೆ; ಯಾಕೆ ಅಂದ್ರೆ ನನಗೂ ನಿನಗೂ ವಯಸ್ಸಿನ ಅಂತರ ಕಡಿಮೆ; ಮನಸ್ಸಿನ ಅಂತರ ಕಡಿಮೆ.’
‘ಹಾಗಂತ ಒಂದೇ ಅಂತ ಹೇಳೋಕಾಗುತ್ತ?’
‘ಒಂದೇ ಅಂತ ಅಲ್ಲ; ಅಂತರ ಕಡಿಮೆ ಅಂತ ಹೇಳಿದೆ.’
‘ಆದರೂ ನಿನಗೆ ಮದುವೆ ಆಗಿದೆ. ನನಗೆ ಮದುವೆ ಆಗಿಲ್ಲ.’
‘ಹೌದು. ಮದುವೆ ಆಗಿಲ್ದೆ ಇರೊ ನಿನಗೆ ನಿರೀಕ್ಷೆ ಇದೆ. ಮದುವೆ ಆಗಿರೋ ನನಗೆ ನಿರಾಶೆ ಇದೆ.’
‘ಚಿಕ್ಕಮ್ಮ!’- ರಾಜಕುಮಾರಿ ಆಶ್ಚರ್ಯಾತಂಕಗಳಿಂದ ಕರೆದಳು.’
‘ಹೌದು ರಾಜಕುಮಾರಿ’ – ಮದನಿಕೆ ಮುಂದುವರೆಸಿದಳು- ‘ನಾನು ರಾಣಿ. ರಾಜರ ಮುದ್ದಿನ ರಾಣಿ. ಆದರೆ ಗಂಡು ಹೆಣ್ಣಿನ ಸಂಬಂಧ ಅನ್ನೋದು ಮೈಗೆ ಮಾತ್ರ ಸಂಬಂಧಿಸಿದ್ದು ಅಂತ ನಾನು ಅಂದ್ಕೊಂಡಿಲ್ಲ. ಮನಸ್ಸು ಒಂದಾಗಿದ್ರೆ ಮೈ ಒಂದಾಗುವ ಆನಂದ ಅನುಭವಕ್ಕೆ ಬರುತ್ತೆ. ಇಲ್ದೆ ಇದ್ರೆ ಬರೀ ಅರಿವಿಗೆ ಬರುತ್ತೆ. ನನ್ನದು ಈಗ ಬರೀ ಅರಿವು; ಅನುಭವ ಅಲ್ಲ.’
ರಾಜಕುಮಾರಿಗೆ ಮಾತು ಹೊರಡಲಿಲ್ಲ. ದಿಗ್ಭ್ರಾಂತಳಾಗಿ ನಿಂತಿದ್ದಳು. ರಾಣಿಯೇ ಮಾತು ಮುಂದುವರಿಸಿದಳು.
‘ನಾವಿಬ್ಬರೂ ಈ ಮಂಟಪಕ್ಕೆ ಬಂದಾಗ ಯಾಕೆ ಸಂಭ್ರಮ ಆಯ್ತು ಅನ್ನೋದಕ್ಕೆ – ನನಗನ್ನಿಸಿದಂತೆ ಆ ಕೋಟೇನೇ ಕಾರಣ. ಕೋಟೆ – ರೂಪದಲ್ಲಿರೋ ಅರಮನೇನೇ ಕಾರಣ. ಈ ಮಂಟಪ ಮಾತ್ರ ಕಾರಣವಲ್ಲ. ಅಲ್ಲಿ ಒತ್ತಡದಲ್ಲಿರೊ ಒಲವು-ನಿಲುವು, ಇಲ್ಲಿ ವಿಮೋಚನೆಗೊಂಡ ಒಲವು-ನಿಲುವು ಆಗುತ್ತೆ. ಸಂತೋಷ-ಸಂಭ್ರಮ ತರುತ್ತೆ.’
ಅಷ್ಟರಲ್ಲಿ ಕುದುರೆ ಕೆನೆದ ಸದ್ದು ಕೇಳಿಸಿ ಆ ಕಡೆಗೆ ನೋಡಿದರು.
ಸ್ವಲ್ಪ ದೂರದಲ್ಲಿ ಯುವಕನೊಬ್ಬ ಕುದುರೆಯ ಮೇಲೆ ಬರುತ್ತಿದ್ದ. ರಾಜಕುಮಾರಿ ಚಂಗನೆ ಮಂಟಪಕ್ಕೆ ಬಂದಳು. ರಾಣಿಯ ಜೊತೆ ನಿಂತಳು. ಇಬ್ಬರೂ ಆತನ ಕಡೆ ನೋಡಿದರು. ಸುಂದರ ಯುವಕ! ಇಬ್ಬರಿಗೂ ಆತ ಅತ್ಯಂತ ಸುಂದರವಾಗಿ ಕಂಡ. ನಿಜ ಹೇಳಬೇಕೆಂದರೆ ಇದ್ದಂತೆಯೇ ಕಾಣಿಸಿದ್ದ.
ಆತನ ಕುದುರೆ ಈ ಕಡೆಯೇ ರಭಸವಾಗಿ ಬರುತ್ತಿತ್ತು. ಇಬ್ಬರಿಗೂ ತಂತಮ್ಮ ಮನಸ್ಸನ್ನೇರಿ ಬರುತ್ತಿರುವಂತೆ ಅನ್ನಿಸಿತು.
ಕುದುರೆ ಸವಾರ ಮಂಟಪದ ಬಳಿಯೇ ಬರುತ್ತಿರುವುದನ್ನು ಗಮನಿಸಿದ – ದೂರದ ಮರೆಯಲ್ಲಿದ್ದ – ಯೋಧರು ಓಡಿಬಂದರು. ಕುದುರೆ ಮಂಟಪದ ಸುತ್ತ ಓಡತೊಡಗಿತು. ಯೋಧರು ಗದ್ದಲ ಮಾಡಿದಂತೆಲ್ಲ ಅದರ ರಭಸವೂ ಹೆಚ್ಚಾಯಿತು. ಆದರೆ ಮಂಟಪವನ್ನು ಬಿಟ್ಟು ಹೋಗಲಿಲ್ಲ. ಅದನ್ನು ಸುತ್ತು ಹೊಡೆಯುತ್ತಿದ್ದ ಕುದುರೆ ಮತ್ತು ಸವಾರನನ್ನು ಮದನಿಕೆ ಮತ್ತು ಮದಾಲಸೆ ಬೆರಗುಕಂಗಳಿಂದ ನೋಡುತ್ತ ನಿಂತರು. ಎಷ್ಟು ಹಿಡಿದರೂ ಸಿಗದೆ ಓಡುವ ಕುದುರೆಯ ಹಿಂದಿದ್ದ ಯೋಧರಿಗೆ ಮದನಿಕೆ ಕೂಗಿ ಹೇಳಿದಳು.
‘ನೀವು ಸುಮ್ನೆ ಇರಿ. ಅದರ ಪಾಡಿಗೆ ಅದು ಓಡ್ತಾ ಇರ್‍ಲಿ, ಬೇಕು ಅಂದಾಗ ನಿಂತ್ಕೊಳುತ್ತೆ. ನೀವೆಲ್ಲ ಸುಮ್ನಿರಿ.’
ರಾಜಕುಮಾರಿಯೂ ಹಿಂದೆ ಬೀಳಲಿಲ್ಲ. ಆಕೆಯೂ ಹೇಳಿದಳು.
‘ಅದರ ಪಾಡಿಗೆ ಅದನ್ನ ಬಿಡಿ. ನೀವು ಹಿಡ್ಯೋಕ್ ಹೋಗಿ ತೊಂದ್ರೆ ಕೊಡ್ಬೇಡಿ. ಅವ್ರ್‌ಗೆ ಏನೂ ಮಾಡ್ಬೇಡಿ.’
ಮದನಿಕೆ ಮದಾಲಸೆಯ ಮುಖ ನೋಡಿದಳು.
ಅಷ್ಟರಲ್ಲಿ ಯೋಧರು ಸುಮ್ಮನಾಗಿದ್ದರು. ಕುದುರೆ ಎರಡು ಸುತ್ತು ಹೊಡೆದು ಇವರಿಬ್ಬರಿಗೆ ಎದುರಾಗಿ ನಿಂತಿತು. ಕುದುರೆ ಮೇಲೆ ಕೂತಿದ್ದ ಯುವಕ ಇವರಿಬ್ಬರನ್ನೂ ನೋಡಿದ. ಮದನಿಕೆ ಕೂಡಲೇ ಕೇಳಿದಳು.
‘ಯಾರು ನೀನು?’
‘ನಾನೊಬ್ಬ ಸಾಮಾನ್ಯ ಪ್ರಜೆ. ಅಂದಹಾಗೆ ನೀವು ಯಾರು?’ ಯುವಕ ಕೇಳಿದ.
ಆಗ ಯೋಧರಲ್ಲಿ ಒಬ್ಬ ‘ಅವರು ಯಾರು ಅಂತ ಗೊತ್ತಿಲ್ಲ? ಕುದುರೆಯಿಂದ ಇಳಿದು ಗೌರವ ಕೊಟ್ಟು ಮಾತಾಡು’ ಎಂದ. ಕೂಡಲೇ ಮದನಿಕೆಯು ಯೋಧನಿಗೆ ‘ನೀನು ಸುಮ್ಮನೆ ಇರು, ಏನೂ ಹೇಳ್ಬೇಡ, ನಾನೇ ಮಾತಾಡ್ತೇನೆ.’ ಎಂದು ಗದರಿಸಿ ಆ ಯುವಕನಿಗೆ ಹೇಳಿದಳು :
‘ನಾವು ಯಾರಾದ್ರು ಇರಲಿ. ನಿಮ್ಮ ಪರಿಚಯ ಸರಿಯಾಗಿ ಹೇಳಿ.’
‘ಇದೇನಿದು ಬಹುವಚನದ ಮಾತು! ನೀವು ನೋಡಿದ್ರೆ ಶ್ರೀಮಂತ ಯುವತಿಯರು. ಬಹುಶಃ ಈ ರಾಜ್ಯದ ಬಹು ದೊಡ್ಡ ಶ್ರೀಮಂತರ ಮಕ್ಕಳು. ಅಂಥಾದ್ರಲ್ಲಿ ನನ್ನನ್ನ ಗೌರವದಿಂದ ಮಾತಾಡ್ಸೋದು ವಿಶೇಷವೇ.’
‘ಹಾಗೇನಿಲ್ಲ. ಪರಸ್ಪರ ಗೌರವ ಕೊಡೋದು ಸೌಜನ್ಯದ ನಡವಳಿಕೆ ಅಂತ ನನ್ನ ಅಭಿಪ್ರಾಯ.’ ಎಂದು ಮದನಿಕೆ ಹೇಳಿದ ಕೂಡಲೆ ಮದಾಲಸೆ ಹಿಂದೆ ಬೀಳಲಿಲ್ಲ. ‘ನನ್ನ ಅಭಿಪ್ರಾಯವೂ ಅಷ್ಟೆ.’ ಎಂದಳು.
‘ಸಂತೋಷ’ ಯುವಕ ಹೇಳಿದ: ‘ನಾನು ಪಕ್ಕದೂರಿನ ಪ್ರಜೆ. ಕುದುರೆ ಸವಾರಿ ನನ್ನ ಹವ್ಯಾಸ. ವಿದ್ಯೆ ನನ್ನ ಅಭ್ಯಾಸ. ದಿನವೂ ಕೋಟೆ ಆ ಕಡೆ ಇರೋ ಊರಿಗೆ ಅಭ್ಯಾಸಕ್ಕೆ ಹೋಗ್ತೇನೆ-ಸಾಯಂಕಾಲದ ಹೊತ್ತು. ಎಲ್ಲೂ ಮಲಗೋ ಹೊತ್ನಲ್ಲಿ ವಾಪಸ್ ಹೋಗ್ತೇನೆ.’
‘ಹಗಲು ಹೊತ್ತು ಅಭ್ಯಾಸ ಮಾಡಬಹುದಲ್ಲ?’ – ಮದನಿಕೆ ಕೇಳಿದಳು.
‘ಹಗಲೆಲ್ಲ ದುಡೀತೇನೆ, ಯಾಕೇಂದ್ರೆ ಬೆವರೇ ನಮ್ಮ ಬದುಕು. ಬೆವರು-ಬುದ್ಧಿ ಬೇರೆ ಆಗಬಾರದು ಅಂತ ಕನಸು ಕಟ್ಟಾ ಸಂಜೆ ಹೊತ್ನಲ್ಲಿ ವಿದ್ಯಾಭ್ಯಾಸ ಮಾಡ್ತೇನೆ. ಆ ಕಡೆ ಊರಿನ ಗುರುಗಳ ಹತ್ತಿರ ಕಲೀತೇನೆ.’
‘ಯಾವಾಗ್ಲೂ ಈ ಮಂಟಪದ ಹತ್ರಾನೇ ಹೋಗ್ತಿರಾ?’ ರಾಜಕುಮಾರಿ ಕುತೂಹಲದಿಂದ ಕೇಳಿದಳು.
‘ಹೌದು. ಪ್ರತಿದಿನ ಸಾಯಂಕಾಲ ಇಲ್ಲೇ ಹೋಗ್ತಿನಿ. ಮಧ್ಯರಾತ್ರೀಲಿ ಇಲ್ಲೇ ಬರ್‍ತೀನಿ. ಹೋಗುವಾಗ ಬರುವಾಗ ಈ ಮಂಟಪಾನ ಸುತ್ತು ಹಾಕ್ದೆ ಇದ್ರೆ ನನ್ನ ಕುದುರೇಗೆ ಸಮಾಧಾನಾನೇ ಇಲ್ಲ.’
‘ಹೌದಾ? ಈ ಮಂಟಪಾನ ನಿಮ್ಮ ಕುದುರೆ ಸುತ್ತು ಹಾಕುತ್ತ?’ – ರಾಣಿ ಮದನಿಕೆ ಆಸಕ್ತಿಯಿಂದ ಕೇಳಿದಳು.
‘ಅನುಮಾನವೇ ಇಲ್ಲ. ಎರಡು ಹೊತ್ತು ಸುತ್ತು ಹಾಕಿ ಕೆನೆದ ಮೇಲೆ ಮುಂದಕ್ಕೆ ಹೋಗೋದು.’
ರಾಣಿ ಮತ್ತು ರಾಜಕುಮಾರಿ ಪರಸ್ಪರ ಮುಖ ನೋಡಿಕೊಂಡರು.
ರಾಣಿ ಮತ್ತೆ ಕೇಳಿದಳು.
‘ನಿಮ್ಮ ಹೆಸರೇನು?’
‘ಚಂದ್ರಕುಮಾರ ಅಂತ. ಅದ್ಸರಿ ಬರೀ ನನ್ನ ವಿಷಯ ಕೇಳ್ತಾ ಇದ್ದೀರಿ. ನಿಮ್ಮ ವಿಷಯ ಹೇಳಿ.’
‘ನಮ್ಮ ವಿಷಯ ನಿಮಗೇನು ಗೊತ್ತಾಯ್ತು. ನೀವೇ ಹೇಳಿ ಮತ್ತೆ.’ – ರಾಣಿ ತುಂಟತನದಿಂದ ಕೇಳಿದಳು.
ಚಂದ್ರಕುಮಾರ ಇಬ್ಬರನ್ನೂ ದಿಟ್ಟಿಸಿದ. ಆತನ ದೃಷ್ಟಿಗೆ ಇಬ್ಬರೂ ನಾಚಿದರು. ಈಗ ಅವರನ್ನು ಆಪಾದಮಸ್ತಕ ನೋಡಿದ.
‘ನೀವಿಬ್ಬರೂ ಅಕ್ಕ-ತಂಗಿ’ ಎಂದ.
ಇಬ್ಬರೂ ಬೆಚ್ಚಿನೋಡಿದರು. ರಾಜಕುಮಾರಿ ‘ಹಾಗಲ್ಲ….’ ಎಂದು ಹೇಳತೊಡಗಿದಾಗ ರಾಣಿ ‘ಶ್’ ಎಂದಳು. ರಾಜಕುಮಾರಿ ಸುಮ್ಮನಾದಳು. ಆತ ಮುಂದುವರೆಸಿದ. ಅಕ್ಕನಿಗೆ ಮದುವೆ ಆಗಿದೆ. ತಂಗಿಗೆ ಮದುವೆ ಆಗಿಲ್ಲ.’
ಮದನಿಕೆಗೆ ಮುಜುಗರವಾಯಿತು. ಕೂಡಲೇ ತನ್ನ ಮಾಂಗಲ್ಯವನ್ನು ಒಳಗೆ ಸೇರಿಸಿದಳು. ಮದಾಲಸೆ ಸಂಭ್ರಮಿಸುತ್ತ ನಿಂತಿದ್ದಳು.
‘ಅಕ್ಕ – ತಂಗಿ ಇಬ್ಬರೂ ತುಂಬಾ ಸುಂದರವಾಗಿದ್ದೀರಿ. ನಾನಿನ್ನು ಬರ್‍ತೀನಿ’ ಎಂದು ಹೇಳಿದವನೆ ಕುದುರೆ ಓಡಿಸಿಕೊಂಡು ಹೊರಟ.
ಆತ ಮರೆಯಾಗುವವರೆಗೆ ನೋಡುತ್ತಲೇ ಇದ್ದ ಇಬ್ಬರೂ ಕನಸು ಹೊತ್ತು ಅರಮನೆಗೆ ಹೊರಟರು.
ಹೋದ ಕೂಡಲೆ ಚಂಡೇರಾಯ ಬಂದಿದ್ದಾನೆಯೆ ಎಂದು ವಿಚಾರಿಸಿದರು. ಇನ್ನೂ ಬಂದಿರಲಿಲ್ಲ. ಸಮಾಧಾನವಾಯಿತು.
ತನ್ನ ಅಂತಃಪುರ ಸೇರಿದ ಕಿರಿಯ ರಾಣಿ ಮದನಿಕೆಗೆ ಅಲ್ಲೋಲ ಕಲ್ಲೋಲವುಂಟು ಮಾಡುವ ಸೆಳೆತ. ಇತ್ತ ರಾಜಕುಮಾರಿ ಮದಾಲಸೆಗೆ ಕನಸಿನ ಸೂಜಿಗಲ್ಲು. ಆಕಾಶದಗಲ ನಿರೀಕ್ಷೆ.
ರಾಜಕುಮಾರಿಯ ತಾಯಿ ಹಿರಿಯ ರಾಣಿ ನಾಗಲದೇವಿ ಮಗಳ ಬಳಿಗೆ ಬಂದಾಗ, ರಾಜಕುಮಾರಿಯ ಕನಸಿನ ತೆರೆ ಹಾಗೇ ಇತ್ತು. ಎರಡು ಮೂರು ಸಾರಿ ಕೂಗಿದ ಮೇಲೆ ಅರಿವಿಗೆ ಬಂದ ರಾಜಕುಮಾರಿ ತಾಯಿಯನ್ನು ನೋಡಿ ಸ್ವಲ್ಪ ಕಕ್ಕಾಬಿಕ್ಕಿಯಾದಳು. ಅನಂತರ, ಅನಗತ್ಯವಾಗಿ ಅಳುಕಿಗೆ ಒಳಗಾಗುತ್ತಿದ್ದೇನೆಂದು ಭಾವಿಸಿ, ಚೇತರಿಸಿಕೊಂಡು ಬಾ ಅಮ್ಮ’ ಎಂದಳು.
‘ನನಗೂ ಹೇಳದೆ, ಆಕೆ ಜೊತೆ ಯಾಕ್ ಹೋಗಿದ್ದೆ?’ – ನಾಗಲದೇವಿ ಕೇಳಿದಳು.
ರಾಜಕುಮಾರಿ ತಲೆ ತಗ್ಗಿಸಿದಳು.
‘ಇದೆಲ್ಲ ನನಗೆ ಸರಿ ಬರೊಲ್ಲ.’ ನಾಗಲದೇವಿ ಗಡುಸಿನಿಂದ ಹೇಳಿದಳು.
ಈಗ ರಾಜಕುಮಾರಿಗೆ ಸುಮ್ಮನಿರಲಾಗಲಿಲ್ಲ.
‘ನಾನೇನೂ ತಪ್ಪು ಮಾಡಿಲ್ಲ.’ – ಚುಟುಕಾಗಿ ಉತ್ತರಿಸಿದಳು.
‘ತಾಯಿ ಕೇಳದೆ ಇರೋದು ತಪ್ಪಲ್ಲವೆ?’ – ನಾಗಲದೇವಿಯ ಪ್ರಶ್ನೆ.
‘ಚಿಕ್ಕಮ್ಮ ಕರೆದಾಗ ಇಲ್ಲ ಅನ್ನೋದೂ ತಪ್ಪಲ್ಲವೆ?’ – ರಾಜಕುಮಾರಿಯ ಮರುಪ್ರಶ್ನೆ.
‘ಹೆತ್ತ ತಾಯಿ ಮುಖ್ಯಾನೋ, ಯಾವಾಗಲೋ ಬಂದ ಮಲತಾಯಿ ಮುಖ್ಯಾನೊ?’ – ಮತ್ತೆ ನಾಗಲದೇವಿಯ ಕೆಣಕು ಪ್ರಶ್ನೆ.
‘ಮಲತಾಯಿ ಅಂತ ಕರೆಯೋದೇ ತಪ್ಪು.’
ರಾಜಕುಮಾರಿ ಮಾತನ್ನು ಬೇರೆ ಕಡೆಗೆ ಎಳೆದಳು. ಆದರೆ ಈ ಮಾತಿನಲ್ಲಿ ಬದ್ಧತೆಯ ಬಿಗಿ ಇತ್ತು.
‘ಯಾಕ್ ತಪ್ಪು? ಅವಳೇನೂ ನಿನ್ನನ್ನ ಹೆತ್ತಿಲ್ಲವಲ್ಲ?’
‘ಹೆತ್ತಿಲ್ಲ ಅನ್ನೋ ಕಾರಣಕ್ಕೆ ಹಗುರವಾಗಿ ಮಾತಾಡಿ ಅವಮಾನ ಆಗೊ ಪದ ಬಳಸಬಾರದು.’
‘ಓ ಬಹಳ ಬೆಳೆದಿದ್ದೀಯ!’
‘ಬೆಳೆದಿದ್ದೀನೊ ಇಲ್ಲವೊ ಅದು ಬೇರೆ ಅಮ್ಮ, ನಾನು ನಿನ್ನನ್ನ ವಿರೋಧ ಮಾಡ್ತಾ ಇಲ್ಲ. ಒಟ್ಟಾರೆ ಮಾತಾಡ್ತಾ ಇದ್ದೀನಿ. ಮಲತಾಯಿ ಅನ್ನೋದನ್ನ ಹಂಗಿಸೋದಿಕ್ಕೆ ಬಳಸೋದೇ ರೂಢಿ ಅಲ್ಲವೆ? ಇಂಥ ರೂಢೀಲಿರೊ ಕ್ರೌರ್ಯನೂ ಗಮನಿಸಬೇಕು ಅಂತ ನಾನು ಹಾಗ್ ಹೇಳಿದೆ. ಚಿಕ್ಕಮ್ಮನ ಜೊತೆ ಚನ್ನಾಗಿದ್ರೆ ನಿನಗೆ ಅವಮಾನ ಮಾಡ್ದಂತೆ ಖಂಡಿತ ಅಲ್ಲ. ನಿನ್ನ ಮೇಲಿನ ಗೌರವಕ್ಕೆ ಖಂಡಿತ ಚ್ಯುತಿ ಇಲ್ಲ.’
‘ಅದೆಲ್ಲಾ ಇರಲಿ, ಆಕೆ ಜೊತೆ ಹೆಚ್ಚು ಸಲಿಗೆ ಬೇಡ.’
‘ಯಾಕ್ ಬೇಡ?’
‘ಸಲಿಗೆಯಿಂದ ಇರೋದು ನನಗಿಷ್ಟವಾಗೊಲ್ಲ.’
‘ಸಲಿಗೆ ಅನ್ನೋದು ಸುಲಿಗೆ ಸಾಧನವಲ್ಲ ಅಮ್ಮ.’
‘ಆದ್ರೆ ಆಕೆ ವಿಷಯದಲ್ಲಿ ಹಾಗಿಲ್ಲ.’
‘ನಿಮ್ಮ ಸವತಿ ಮತ್ಸರಕ್ಕೆ, ನಮ್ಮ ಸಂಬಂಧ ಸುಟ್ಟು ಹೋಗ್ಬೇಕ? ಸಣ್ಣತನಕ್ಕೆ ಸಲಿಗೆ-ಸ್ನೇಹ-ಸಜ್ಜನಿಕೆ ಎಲ್ಲಾ ಆಹುತಿ ಆಗ್ಬೇಕ? ಹೆತ್ತ ತಾಯಿ ತನ್ನ ಕರುಳು ಕಿತ್ತು ಎಸೆಯೊ ಸ್ಥಿತಿ ಬರ್‍ಬೇಕ?’
ರಾಜಕುಮಾರಿಯ ಪ್ರಶ್ನೆಗಳಿಂದ ಕೆರಳಿದ ಹಿರಿಯರಾಣಿ ಫಟಾರನೆ ಕೆನ್ನೆಗೆ ಹೊಡೆದಳು. ರಾಜಕುಮಾರಿ ತಬ್ಬಿಬ್ಬಾಗಿ, ಕಣ್ಣೀರು ಚಿಮ್ಮಿದಾಗ, ರಾಣಿಯೇ ಮಾತಿಗೆ ತೊಡಗಿದಳು.
‘ಕೊಳ್ಳಿ ಇರೋದು ನನ್ನ ಎದೆ ಒಳಗಡೆ ಕಣೇ ನನ್ನ ಎದೆ ಒಳಗಡೆ. ನಿಮ್ಮಪ್ಪ ಆಕೆಗಾಗಿ ಯುದ್ಧ ಮಾಡಿ ಗೆದ್ದು ಬಂದ ದಿನದಿಂದ ಹತ್ತಿ ಉರೀತಿರೊ ಕೊಳ್ಳಿ ಇನ್ನೂ ಆರಿಲ್ಲ. ಆರೋ ಸಂಭವಾನೂ ಇಲ್ಲ.’ ಹೀಗೆ ವೇದನೆಯಿಂದ ಹೇಳಿದವಳೇ ಹಿರಿಯರಾಣಿ ಹೊರಟು ಹೋದಳು. ರಾಜಕುಮಾರಿ ದುಃಖಿಸುತ್ತ ಕೂತಳು.
ಎಂಥ ವಿಪರ್ಯಾಸ ಎನ್ನಿಸಿತು ರಾಜಕುಮಾರಿಗೆ. ಯಾರಿಗೂ ಸಮಾಧಾನವಿಲ್ಲದ ಈ ಅರಮನೆಯ ಬದುಕು ಏನನ್ನು ಕೊಡುತ್ತಿದೆ? ವೈಭವದ ಒಳಗಿರುವ ವೇದನೆ ಏನನ್ನು ಹೇಳುತ್ತಿದೆ?
ಇತ್ತ ರಾಜಕುಮಾರಿ ಹೀಗೆ ಚಿಂತಿಸುತ್ತಾ ಯಾತನೆ ಅನುಭವಿಸುತ್ತಾ ಇರುವಾಗ, ಅತ್ತ ಕಿರಿಯ ರಾಣಿ ಮದನಿಕೆ ಚಂಡೇರಾಯನನ್ನು ಕೇಳುತ್ತಿದ್ದಳು.
‘ಇವತ್ತು ಯಾವ ಬೇಟೆ ಸಿಕ್ಕಿತು ಮಹಾರಾಜ?’
‘ಯಾವ ಬೇಟೆಯೂ ಸಿಗದೆ ಬೇಸರವಾಗಿದೆ. ಈಗ ನಿನ್ನ ಬೇಟೆ ಆಡಬೇಕಾಗಿದೆ.’ – ಎನ್ನುತ್ತ ಚಂಡೇರಾಯ ಮದನಿಕೆಯನ್ನು ಅಪ್ಪಿ ಕೊಳ್ಳಲು ಪ್ರಯತ್ನಿಸಿದ. ಆಕೆ ಬಿಡಿಸಿಕೊಂಡು ದೂರ ಹೋಗಿ ನಿಂತಳು.
‘ರಾಜರಿಗೆ ಬೇಟೆ ಆಡುವುದೇ ಆಡಳಿತ ವಿಧಾನವೆ?’ – ಎಂದಳು.
‘ಯಾಕೆ? ಬೇಟೆಯಲ್ಲಿ ನಿನಗೆ ಆಸಕ್ತಿಯಿಲ್ಲವೆ?’
‘ಅರಮನೆಯಲ್ಲಿ ಅರಮನೆಯೊಂದೇ ಆಸಕ್ತಿಯಲ್ಲವೆ?’
‘ಅರಮನೆ ಹಲವರಿಗಲ್ಲ. ಕೆಲವೇ ಕೆಲವರಿಗೆ ಅಲ್ಲವೆ?’
‘ಹೌದು ಮಹಾರಾಜ. ಆದರೆ ಅರಮನೆಯ ಅಂತಃಪುರವೆಂದರೆ ಪರಕೀಯತೆಯ ಪ್ರತ್ಯೇಕ ಪುರ ಅಂತ ನನ್ನ ಭಾವನೆ. ಅದಕ್ಕೇ ಅರಮನೆಯ ಬಗ್ಗೆ ಹಾಗೆ ಹೇಳಿದೆ.’
‘ರಾಜನಿಗೆ ಸೇರಿದ ಆಸ್ತಿ ಅನ್ಯರ ಆಸೆಗಣ್ಣಿಗೆ ಬೀಳಬಾರದಲ್ಲ. ಆದ್ದರಿಂದ ಅಂತಃಪುರ ಹೀಗೆ ಇರುವುದು ಅಗತ್ಯ.’
‘ಆಸ್ತಿಯಾದರೆ ಮಾರಾಟವೂ ಆಗಬಹುದಲ್ಲ?’
‘ಇದು ಅಂತ ಆಸ್ತಿಯಲ್ಲ. ಅತ್ಯಂತ ಖಾಸಗಿಯಾದುದು. ಅದಕ್ಕೆ ಅಂತಃಪುರ ಇರುವುದು.’
‘ಅಂತೂ ನಿಮ್ಮ ಯುದ್ಧ ಬೇಟೆ ಎಲ್ಲಾ ಮುಗಿದಾಗ ಬಿಡುವಿನ ಭೋಗವಸ್ತುವಾಗುವವರು ಅಂತಃಪುರದ ನಾವುಗಳು, ನಿಜತಾನೆ?’
‘ಭೋಗ ಏಕಮುಖವಲ್ಲ. ನಿಜತಾನೆ?’
‘ಭೋಗ ಬೇಟೆಯಾದಾಗ ಏಕಮುಖವೇ ತಾನೆ?’
ಚಂಡೇರಾಯನಿಗೆ ಮಾತು ಜಾಸ್ತಿಯಾಗುತ್ತಿದೆಯೆನ್ನಿಸಿತು. ‘ಇವತ್ತು ನಿನಗೇನೋ ಆಗಿದೆ’ ಎಂದ.
‘ಏನೂ ಆಗಿಲ್ಲ ಅಂತ ಸುಳ್ಳು ಹೇಳಲಾರೆ’ ಎಂದಳು ಮದನಿಕೆ.
‘ಹೋಗಲಿ, ಬಾ ಇಲ್ಲಿ.’
‘ನೀವು ಮಲಗಿ, ಕಾಡಿನ ಬೇಟೆಯಲ್ಲಿ ವಿಫಲವಾಗಿ ಆಯಾಸ ಆಗಿರಬಹುದು.’
‘ನಿನ್ನ ಬೇಟೆಯಲ್ಲಂತೂ ನಾನು ವಿಫಲ ಅಲ್ಲ.’
ಮದನಿಕೆ ಮುಂದೆ ಮಾತನಾಡಲಿಲ್ಲ. ತಿರುಗಿ ನೋಡಿ ಮತ್ತೆ ಹೊರಗಡೆ ನೋಡತೊಡಗಿದಳು. ಚಂಡೇರಾಯನಿಗೆ ಬೇಸರವಾಯಿತು. ಒತ್ತಾಯಿಸದೆ ಮಲಗಿದ. ಆದರೆ ನಿದ್ದೆ ಹತ್ತಲಿಲ್ಲ.
ಮದನಿಕೆಗೂ ನಿದ್ರೆ ಬರಲಿಲ್ಲ. ಒಳಗೆ ಓಡಾಡಿದಳು. ಕೂತಳು. ಎದ್ದಳು. ಅದೇ ಮಂಟಪದ ನೆನಪು, ಸುತ್ತುವ ಕುದುರೆ ಸವಾರ. ಸೆಳೆಯುವ ಸರದಾರ. ಗರಿಗೆದರಿದ ಹಕ್ಕಿ ಹಾರಲಾಗದೆ ಪಡುವ ಸಂಕಟದ ಸನ್ನಿವೇಶ. ಉರಿಯುವ ಯಾತನೆಯಲ್ಲಿ ಅನುಭವಕ್ಕೆ ಬರುವ ವಿಚಿತ್ರ ಸುಖ.
ಎಷ್ಟೋ ಹೊತ್ತಾದ ಮೇಲೆ ಮದನಿಕೆ ಮಲಗಿದಳು.
ಮಾರನೆಯ ದಿನ ಮತ್ತೆ ಬೇಟೆಗೆ ಹೊರಟ ಚಂಡೇರಾಯ. ಆತ ಬೇಟೆಗೆ ಹೊರಟಿದ್ದನ್ನು ಕಂಡು ಮದನಿಕೆ ಸಂತೋಷಪಟ್ಟಳು. ‘ಈ ದಿನ ಕಾಡಿನ ಬೇಟೆ ಸಫಲವಾಗಲಿ’ ಎಂದು ಹಾರೈಸಿ ಕಳಿಸಿದಳು. ಸಾಯಂಕಾಲವಾಗುವುದನ್ನೇ ಕಾದಳು.
ಮಂತ್ರಿಗೆ ಹೇಳಿಕಳಿಸಿ ತಾನು ಮಂಟಪಕ್ಕೆ ಹೋಗುವ ವಿಚಾರ ತಿಳಿಸಿದಳು. ಮಂತ್ರಿಗೆ ಮನಸ್ಸಿರಲಿಲ್ಲ. ‘ನೆನ್ನೆ ತಾನೆ ರಾಣಿಯವರು ಹೋಗಿ ಬಂದಿದ್ದೀರಿ.’ ಎಂದು ರಾಗ ಎಳೆದಾಗ, ಮದನಿಕೆ ‘ನಾನು ಮಹಾರಾಜರಿಗೆ ಹೇಳಿದ್ದೇನೆ’ ಎಂದಳು. ಮಂತ್ರಿ ಮರುಮಾತಾಡುವಂತಿರಲಿಲ್ಲ. ಮದನಿಕೆಯೇ ಮುಂದೆ ಮಾತಾಡಿದಳು.
‘ನನಗೆ ರಕ್ಷಣೆಯ ಅಗತ್ಯವೂ ಕಾಣುವುದಿಲ್ಲ. ನನ್ನನ್ನು ನಾನು ರಕ್ಷಿಸಿಕೊಳ್ಳುವಷ್ಟು ಸಮರ್ಥಳು.’
‘ಈ ವಿಷಯದಲ್ಲಿ ಹೊಂದಾಣಿಕೆಯ ಪ್ರಶ್ನೆಯಿಲ್ಲ ರಾಣಿಯವರೆ. ನಮಗೆ ಗೊತ್ತಿಲ್ಲದಂತೆ ಅರಮನೆಯ ಸುರಂಗದ ಮೂಲಕ ಅಲ್ಲಿಗೆ ಹೋದರೆ ನಾವೇನೂ ಮಾಡುವಂತಿಲ್ಲ. ಮಹಾರಾಜರು ಕೆಲವೊಮ್ಮೆ ಹಾಗೆ ಮಾಡುವುದು ನಿಮಗೂ ಗೊತ್ತಿದೆ. ಅದನ್ನು ಬಿಟ್ಟು ಬೇರೆ ಸಂದರ್ಭದಲ್ಲಿ ರಕ್ಷಣೆ ಏರ್ಪಡಿಸಲು ನಮಗೆ ರಾಜಾಜ್ಞೆಯಿದೆ.’
ಮದನಿಕೆ ಯೋಚಿಸಿದಳು. ‘ಹಾಗೇ ಆಗಲಿ ಮಂತ್ರಿಗಳೇ.’ ಎಂದಳು; ಅಲಂಕರಿಸಿಕೊಂಡು ಹೊರಟಳು.
ಮಂಟಪದ ಬಳಿ ಬಂದು ಸುತ್ತೆಲ್ಲ ದಿಟ್ಟಿಸಿದಳು. ಹಿಂದಿನ ದಿನ ಬಂದ ವೇಳೆಗೆ ಸರಿಯಾಗಿ ಚಂದ್ರಕುಮಾರ ಕುದುರೆ ಮೇಲೆ ಬರುತ್ತಿದ್ದ. ಕಂಪಿಸುವ ಮೈ ಮನಸ್ಸುಗಳನ್ನು ಹಿಡಿತಕ್ಕೆ ತಂದುಕೊಳ್ಳುತ್ತ ಆತನಿಗಾಗಿ ಕಾಯುತ್ತ ನಿಂತಳು. ಆತನ ಕುದುರೆ ಇಲ್ಲಿಗೆ ಕರೆತಂದಿತು. ಹಿಂದಿನಂತೆ ಮಂಟಪವನ್ನು ಸುತ್ತುಹಾಕಿತು. ಆದರೆ ಹಿಂದಿನ ದಿನದಂತೆ ಯೋಧರು ಬಂದು ತಡೆಯಲಿಲ್ಲ.
ಮದನಿಕೆ ಮುಗುಳ್ನಗುತ್ತ ಆತನನ್ನು ನೋಡುತ್ತ ನಿಂತಳು. ಆತ ಕುದುರೆಯ ಓಟವನ್ನು ನಿಯಂತ್ರಿಸುತ್ತ ಇನ್ನೊಬ್ಬ ಸುಂದರಿ ಎಲ್ಲಿ?’ ಎಂದು ಕೇಳಿದ. ಈಕೆ ಮಾತನಾಡಲಿಲ್ಲ. ಸೊಂಟಕ್ಕೆ ಸಿಕ್ಕಿಸಿಕೊಂಡು ಬಂದಿದ್ದ ಓಲೆಯನ್ನು ತೆಗೆದು ಅತ್ತಿತ್ತ ನೋಡಿ ಎಸೆದಳು. ಆತ ಅದನ್ನು ಹಿಡಿದುಕೊಂಡ. ರಭಸವಾಗಿ ಹೊರಟುಹೋದ.
ಸ್ವಲ್ಪ ದೂರ ಹೋದಮೇಲೆ ಓಲೆಯನ್ನು ಓದಿದ. ‘ಇಂದು ಮಧ್ಯರಾತ್ರಿ ಮಂಟಪದಲ್ಲಿ ಕಾಯುತ್ತಿರಿ’ ಎಂದಷ್ಟೇ ಬರೆದಿತ್ತು. ಯಾರ ಹೆಸರೂ ಇರಲಿಲ್ಲ. ಯಾರಿಗಾದರೂ ಸಿಕ್ಕಿದರೆ ಏನೂ ಪತ್ತೆಯಾಗದಿರಲೆಂದು ಮದನಿಕೆ ಈ ಎಚ್ಚರಿಕೆ ವಹಿಸಿದ್ದಳು.
ಮದನಿಕೆ ಅರಮನೆಗೆ ಬರುವ ವೇಳೆಗೆ ಚಂಡೇರಾಯ ಬಂದಿದ್ದ. ಮದನಿಕೆಯನ್ನು ನೋಡಿದವನೇ ‘ಮಂಟಪಕ್ಕೆ ಹೋಗು ಅಂತ ನಾನು ನಿನಗೆ ಯಾವಾಗ ಒಪ್ಪಿಗೆ ಕೊಟ್ಟಿದ್ದೆ?’ ಎಂದು ಸಿಟ್ಟಿನಿಂದ ಕೇಳಿದ. ಮದನಿಕೆ ಮೌನದಲ್ಲೇ ದಿಟ್ಟಿಸಿದಳು.
ರಾಜ ಮತ್ತೆ ಕೇಳಿದ.
‘ಹೇಳು. ಯಾಕೆ ಸುಳ್ಳು ಹೇಳಿದೆ?’
ಆಕೆ ಮಾತಾಡಲಿಲ್ಲ.
‘ಮಂತ್ರಿಗಳ ಬಳಿ ಸುಳ್ಳು ಹೇಳಿ ಹೊರಗಡೆ ಹೋಗುವಂಥ ಕಾರ್ಯ ಏನಿತ್ತು?’
‘ಬೇಟೆಯಿಂದ ತಪ್ಪಿಸ್ಕೊಳ್ಳಬೇಕಾಗಿತ್ತು.’- ಎಂದು ಥಟ್ಟನೆ ಉತ್ತರಿಸಿ ಒಳಹೋದಳು.
ಚಂಡೇರಾಯ ನಿಂತಲ್ಲೇ ಚಡಪಡಿಸಿದ.
ಮದನಿಕೆ ಏನೂ ಮಾತನಾಡದೆ ಮಧ್ಯರಾತ್ರಿ ಸಮೀಪಿಸುವುದನ್ನು ಕಾದಳು. ಈಕೆಯ ವರ್ತನೆಯಲ್ಲಿ ವೈಚಿತ್ರವನ್ನು ಕಂಡ ಚಂಡೇರಾಯನಿಗೂ ನಿದ್ದೆ ಹತ್ತಲಿಲ್ಲ. ಈಕೆಗಂತೂ ನಿದ್ದೆ ಸುಳಿಯುವಂತಿರಲಿಲ್ಲ. ಇನ್ನೇನು ಮಧ್ಯರಾತ್ರಿ ಸಮೀಪಿಸಿತೆನ್ನುವಾಗ ಎದ್ದು ಕೂತಳು. ಚಂಡೇರಾಯನ ಕಡೆ ನೋಡಿದಳು. ಆತ ನಿದ್ದೆ ಮಾಡುತ್ತಿರುವಂತೆ ಕಂಡ. ಮೆಲ್ಲನೆ ಮಂಚದಿಂದ ಇಳಿದಳು. ಸದ್ದಿಲ್ಲದೆ ಹೆಜ್ಜೆ ಹಾಕಿದಳು.
ಆಕೆ ಆ ಕಡೆ ಹೋದಕೂಡಲೆ ಚಂಡೇರಾಯನೂ ಮೇಲೆದ್ದ. ಆಕೆಗೆ ಗೊತ್ತಾಗದಂತೆ ಹಿಂಬಾಲಿಸಿದ; ಹುಲ್ಲೆಯ ಹಿಂದೆ ಹುಲಿ ಬಂದಂತೆ ಹೆಜ್ಜೆಯಿಟ್ಟ.
ಮದನಿಕೆ ರಹಸ್ಯದಾರಿಯನ್ನು ಹಿಡಿದಳು. ಸುರಂಗದ ಒಳಗೆ ಆತುರದ ಹೆಜ್ಜೆಯಿಡತೊಡಗಿದಳು. ಚಂಡೇರಾಯನಿಗೆ ಎಲ್ಲವೂ ಒಗಟಾಗಿ ತೋರಿತು. ಆಕೆ ಏನೋ ವಂಚನೆ ಮಾಡುತ್ತಿದ್ದಾಳೆಂಬ ಭಾವನೆ ಮಾತ್ರ ಬಲವಾಯಿತು. ವಿಚಿತ್ರ ವೇದನೆ ಮತ್ತು ಸಿಟ್ಟುಗಳು ಒಗ್ಗೂಡಿ ಕಾಡತೊಡಗಿದವು.
ಸುರಂಗ ಮಾರ್ಗ ಮಂಟಪದ ಬಳಿ ತೇಲಿದಾಗ ಮದನಿಕೆ ಹೊರಬಂದಳು. ಅಳುಕಿನಿಂದ ಅತ್ತಿತ್ತ ನೋಡಿದಳು. ಯಾರೂ ಕಾಣಲಿಲ್ಲ. ಸ್ವಲ್ಪ ದೂರದಲ್ಲಿದ್ದ ಮಂಟಪದಲ್ಲಿ ಚಂದ್ರಕುಮಾರ ನಿಂತಿರುವುದು ಮಾತ್ರ ಕಾಣಿಸಿತು. ಕೂಡಲೇ ದೊಡ್ಡ ಹೆಜ್ಜೆ ಹಾಕಿದಳು. ಚಂಡೇರಾಯ ಹಿಂದೆಯೇ ಬಂದ. ಮದನಿಕೆಯು ಮಂಟಪದ ಆವರಣದ ಹತ್ತಿರ ಬಂದು ನಿಂತಳು. ಅಲ್ಲಿ ಮಂಟಪದ ಮಧ್ಯಭಾಗದಲ್ಲಿ ನಿಂತಿರುವವನು ಚಂದ್ರಕುಮಾರನೇ ಎಂದು ಖಚಿತವಾಯಿತು. ಆವರಣದ ಪ್ರದೇಶದ ಬಳಿ ಬಂದಳು. ಒಳಗೆ ಕಾಲಿಡುವ ಮುಂಚೆ ಮತ್ತೊಮ್ಮೆ ನೋಡಿದಳು. ಆತ ನಸುನಕ್ಕ. ತನ್ನ ಸ್ವಪ್ನ ಸ್ವರ್ಗವೇ ಭೂಮಿಗಿಳಿದಂತೆ ಭಾವುಕಳಾದಳು. ಓಡುತ್ತ ಮಂಟಪದ ಮೆಟ್ಟಲುಗಳನ್ನು ಹತ್ತಿದಳು.
‘ಇನ್ನೊಬ್ಬ ಸುಂದರಿ ಎಲ್ಲಿ?’
ಮದನಿಕೆ ಥಟ್ಟನೆ ನಿಂತಳು.
‘ನಾನು ಆಕೆ ಬರ್‍ತಾಳೆ ಅಂದುಕೊಂಡಿದ್ದೆ.’
ಮದನಿಕೆ ಒಂದು ಮೆಟ್ಟಲು ಹಿಂದಕ್ಕೆ ಹೆಜ್ಜೆಯಿಟ್ಟಳು.
‘ನಾನು ಓಲೆ ಓದಿ, ಆಕೇನೆ ನಿಮ್ಮ ಮೂಲಕ ಕಳಿಸಿರಬಹುದು ಅಂಡ್ಕೊಂಡು ಕಾದಿದ್ದೆ.’ ಮದನಿಕೆ ಮತ್ತೊಂದು ಮೆಟ್ಟಲು ಕೆಳಗಿಳಿದಳು.
‘ಇನ್ನೊಬ್ಬ ಸುಂದರಿ ಎಲ್ಲಿ ಅಂತ ನಾನು ಸಾಯಂಕಾಲ ಕೇಳ್ದಾಗ ನೀವು ಏನೂ ಹೇಳದೆ ಈ ಓಲೆ ಎಸೆದದ್ದರಿಂದ ಆಕೇನೇ ಕಳಿಸಿರಬಹುದು ಅಂಡ್ಕೊಂಡಿದ್ದೆ. ನಾನಿನ್ನು ಬರ್‍ತೀನಿ.’
ಹೀಗೆ ಹೇಳಿದವನು ಮೆಟ್ಟಿಲ ಬಳಿ ಬಂದು ಇಳಿಯತೊಡಗಿದ. ಅಲ್ಲೀವರೆಗೆ ಸುಮ್ಮನಿದ್ದ ಮದನಿಕೆ ಆತನನ್ನು ಹಿಡಿದುಕೊಂಡಳು. ಆತ ಕೂಡಲೆ ಪ್ರತಿಕ್ರಿಯಿಸಿದ.
‘ಬಿಡಿ, ನನ್ ಬಿಟ್‌ಬಿಡಿ. ಇದೆಲ್ಲಾ ನಿಮಗೆ ತರವಲ್ಲ.’
‘ನಿನಗಿದು ತರವಲ್ಲ’ – ಮದನಿಕೆ, ಸಂಕಟದ ಸ್ಫೋಟವಾದಳು – ‘ನನ್ನಂಥ ಹೆಣ್ಣಿನ ಬಂಧನಕ್ಕೆ ಬಿಡುಗಡೆ ಒದಗಿಸದೆ ಓಡಿಹೋಗೋದು ನಿನ್ನಂಥ ವೀರನಿಗೆ ತರವಲ್ಲ. ನಾನು ಮುದಿರಾಜನ ಅರಮನೇಲಿ ಅರ್ಧ ಸತ್ತು ಹೋಗಿದೀನಿ. ಪೂರ್ತಿ ಸಾಯೋಬದಲು ಪ್ರೇಮಭಿಕ್ಷೆ ಬೇಡ್ತಾ ಇದ್ದೀನಿ. ನಿನ್ನ ನೋಡಿದ ದಿನವೇ ನಿನ್ನಲ್ಲಿ ನನ್ನ ನಿಜವಾದ ಪತಿಯನ್ನು ಕಂಡಿದ್ದೀನಿ.’
ಚಂಡೇರಾಯ ಚಡಪಡಿಸಿದ. ಕೆರಳಿ ಖಡ್ಗ ಇರಿದ. ಆದರೆ ನಿಯಂತ್ರಣ ಮಾಡಿಕೊಂಡ. ಇಲ್ಲಿ ಮದನಿಕೆಯನ್ನು ಚಂದ್ರಕುಮಾರ ಕೇಳಿದ.
‘ಅವತ್ತು ನಿಮ್ಮ ಜೊತೆ ಇದ್ದ ಸುಂದರಿ ಯಾರು?’
‘ಆಕೆ ರಾಜಕುಮಾರಿ, ನನಗಿಂತ ಮೂರಾಲ್ಕು ವರ್ಷ ಚಿಕ್ಕವಳು.’
‘ಮುದಿರಾಜ ನಿಮ್ಮನ್ನು ಮದುವೆ ಆಗಿದ್ದು ಸರಿಯಲ್ಲ’ ಎಂದು ಚಂದ್ರಕುಮಾರ ಮತ್ತೆ ಮಾತು ಶುರುಮಾಡಿದಾಗ ಚಂಡೇರಾಯ ಹಲ್ಲು ಕಡಿದ. ಆತ ಮಾತು ಮುಂದುವರೆಸಿದ. ‘ಮುದಿರಾಜನ ತಪ್ಪಿಗೆ ನಾನು ಪರಿಹಾರ ನೀಡಲಾರೆ. ಬರ್‍ತೀನಿ.’ ಎಂದವನೇ ಹೊರಟುಬಿಟ್ಟ.
ಮದನಿಕೆ ಸಂಕಟ ತಡೆಯಲಾರದೆ ಕುಸಿದು ಬಿದ್ದಳು. ದೂರ ಸರಿಯುತ್ತ ಬಂದ ಕುದುರೆ ಸದ್ದನ್ನು ಕೇಳಿಸಿಕೊಳ್ಳುತ್ತ ಮತ್ತೆ ಮೇಲೆದ್ದಳು.
ಎದುರಿಗೆ ಚಂಡೇರಾಯ ಕೆಂಡವಾಗಿ ನಿಂತಿದ್ದ.
ಮದನಿಕೆಯ ಮುಖವನ್ನು ನೋಡಿದ ಕೂಡಲೆ ಹಿಂದೆ ಮುಂದೆ ನೋಡದೆ ಕತ್ತಿಯಿಂದ ತಿವಿದ. ಆಕೆ ‘ಅಯ್ಯೋ’ ಎಂದು ಕಿರಚುತ್ತ ಕುಸಿದು ಬಿದ್ದಳು.
* * *
ಇಲ್ಲಿ ಕೇಳುತ್ತಿದ್ದ ಮಂಜುಳ ಮೇಡಂ ಬೆಚ್ಚಿ ಬಿದ್ದಳು. ‘ಹೀಗಾಗ್ ಬಾರ್‍ದಿತ್ತು, ಹೀಗಾಗ್ ಬಾರ್‍ದಿತ್ತು’ ಎಂದು ಉದ್ಗರಿಸಿದಳು.
ಎಲ್ಲರೂ ಮೂಕವಾಗಿದ್ದರು. ಆಗ ಕುಮಾರ ಹೇಳಿದ. ‘ಅವಳ ಅಂತ್ಯ ಹಾಗೇ ಆಗಬೇಕು ಅಂತ ಇತ್ತು; ಹಾಗಾಯ್ತು. ಕನಸು ಕಟ್ಟಿ ಕತ್ತಿ ತಿವಿತಕ್ಕೆ ಬಲಿ ಆದ ಅವಳಿಗೆ ಅಲ್ಲೇ ಸಮಾಧಿ ಆಯ್ತು.’
‘ರಾಜನೇ ಕೊಂದ ಅಂತ ಎಲ್ಲರಿಗೂ ಗೊತ್ತಾಯ್ತ ಕುಮಾರ್?’ – ಮಂಜುಳ ಕೇಳಿದಳು.
‘ಈಕೇನ ತಿವಿದ ಮೇಲೆ ರಾಜ ಅರಮನೆಗೆ ಹೋದ. ಯಾರಿಗೂ ವಿಷಯ ತಿಳಿಸಲಿಲ್ಲ. ಬೆಳಗ್ಗೆ ಜನರು ಈಕೆ ಹೆಣಾನ ಗುರುತಿಸಿದ್ರು. ದೊರೆತನಕ ಸುದ್ದಿ ಹೋಯ್ತು, ಮಂತ್ರಿಗಳೇ ಸುದ್ದಿ ಮುಟ್ಟಿಸಿದರು. ಆಗ ರಾಜ ಮಂಟಪದ ಆವರಣದಲ್ಲೇ ಸಮಾಧಿ ಮಾಡೋದಕ್ಕೆ ಆಜ್ಞೆ ಮಾಡಿದ. ಆಮೇಲೆ ಎಲ್ಲ ವಿಷ್ಯ ತಿಳಿಸ್ತೇನೆ ಅಂತಲೂ ಹೇಳಿದ. ಸಮಾಧಿ ಮಾಡುವಾಗ ರಾಜನೂ ಬಂದಿದ್ದನಾದರೂ ಅತ್ತವಳು ಒಬ್ಬಳೇ – ರಾಜಕುಮಾರಿ.’
‘ಪಾಪ! ಅವಳ ಮನಸ್ಸು ಏನೆಲ್ಲ ಹೇಳಿರಬಹುದು!’ – ಮಂಜುಳ ಕನಿಕರದಿಂದ ಹೇಳಿದಳು.
‘ಅವಳ ವಿಷ್ಯ ಇರಲಿ. ಇವಳ ವಿಷ್ಯ ಕೇಳಿ’ – ಶಿವಕುಮಾರ್ ಒತ್ತಾಯಪೂರ್ವಕವಾಗಿ ಗಮನ ಸೆಳೆದು ಹೇಳತೊಡಗಿದ – ಸ್ವಲ್ಪ ದಿನಗಳ ಕಾಲ ಮದನಿಕೆಯ ಮರಣದ ಬಗ್ಗೆ ಗುಲ್ಲೋಗುಲ್ಲು. ಎಲ್ಲರಲ್ಲೂ ಒಂದು ವಿಷಯದಲ್ಲಿ ಸಮಾನ ಅಭಿಪ್ರಾಯವಿತ್ತು. ಇದು ಅನೈತಿಕ ಸಂಬಂಧದ ಫಲ ಅನ್ನೋದೆ ಆ ಸಮಾನ ಅಂಶ.’
‘ಇಂಥ ವಿಷಯದಲ್ಲಿ ನಮ್ಮ ಜನ ಬಹಳ ಕಲ್ಪನಾಮಯಿಗಳು. ಎಲ್ಲಿಂದೆಲ್ಲಿಗೆ ಬೇಕಾದ್ರೂ ಕತೆ ಹೆಣೀತಾರೆ.’ – ಮಂಜುಳ ಪ್ರತಿಕ್ರಿಯಿಸಿದಳು.
‘ನೀವು ಹೇಳೋದು ಖಂಡಿತ ನಿಜ’ ಎಂದ ಶಿವಕುಮಾರ್.
ತಕ್ಷಣ ಸಿದ್ದಣ್ಣ ‘ಇದೊಂದು ವಿಷಯಾನ ನೀವಿಬ್ರೂ ಒಂದೇ ಸಾರಿ ಒಪ್ಕಂಡ್ರಿ. ನೋಡ್ರಿ ಮತ್ತೆ’ ಎಂದು ಚಟಾಕಿ ಹಾರಿಸಿದ.
‘ಬುದ್ದಿವಂತ್ರು ಯಾವಾಗ್ಲು ಹಂಗೇ ಬಿಡು’ ಎಂದ ಕಂಡಕ್ಟರ್ ಕೆಂಚಪ್ಪ.
‘ಇದ್ರಲ್ಲಿ ಬುದ್ಧಿವಂತಿಕೆ ಪ್ರಶ್ನೆ ಏನಿಲ್ಲ ಕೆಂಚಪ್ಪ. ಇರೋ ವಿಷಯ ಅಷ್ಟೆ’ ಎಂದ ಶಿವಕುಮಾರ್ ಮಂಜುಳಾಗೆ ‘ನೋಡಿ ಮಂಜುಳ, ಅದೂ ಇದೂ ವದಂತಿ ಹಬ್ಬಿ ಕಡೆಗೆ ನಿಜ ವಿಷಯ ಬಯಲಾಯ್ತು. ರಾಜ ಮಂತ್ರಿಗಳಿಗೆ ಎಲ್ಲ ವಿವರಿಸಿದ್ದರಿಂದ ಆಮೇಲೆ ಅದು ಕೋಟೆ ಕಿವಿ ದಾಟಿ ಊರಿನ ಬಯಲಿಗೆ ಬಂತು. ಅಷ್ಟರಲ್ಲೇ ರಾಜ ಒಂದು ಆಜ್ಞೆ ಹೊರಡಿಸಿದ – ಯಾವ ವಿವಾಹಿತ ಹೆಂಗಸರೂ ಈ ಮಂಟಪದ ಆವರಣಕ್ಕೆ ಹೋಗಬಾರದು. ಹೋದರೆ ದುಃಸ್ವಪ್ನ ಬೀಳುತ್ತೆ. ರಾಜಾಜ್ಞೆ ಉಲ್ಲಂಘಿಸಿದರೆ ಶಿಕ್ಷೆ ಆಗುತ್ತೆ – ಅಂತ ಹೊರಟ ಆಜ್ಞೆ ಅನೇಕ ವರ್ಷ ಅನುಷ್ಠಾನದಲ್ಲಿತ್ತು.’ ಎಂದು ವಿವರ ನೀಡಿದ.
‘ಆದ್ರೆ ನನಗೆ ಹೇಳಿದ್ದು – ಅವಿವಾಹಿತ ಹೆಣ್ಣು – ಗಂಡು ಒಟ್ಟಿಗೇ ಮಂಟಪದ ಆವರಣದಲ್ಲಿರಬಾರದು – ಅಂತ ಅಲ್ಲವೆ ಕುಮಾರ್?’ – ಮಂಜುಳ ಪ್ರಶ್ನಿಸಿದಳು.
‘ಹೌದು. ಅದೇ ಈಗ ಚಾಲ್ತಿಲಿರೋದು. ಈ ನಿಷೇಧಕ್ಕೆ ರಾಜಕುಮಾರಿ ಪ್ರಕರಣ ಕಾರಣವಾಯ್ತು.’
‘ಅದನ್ನೇ ಕೇಳೋದ್ ಮರ್‍ತೆ. ಆನಂತರ ರಾಜಕುಮಾರಿ ಗತಿ ಏನಾಯ್ತು? ಆ ಚಂದ್ರಕುಮಾರ ಏನಾದ? ಎಲ್ಲಾ ಬೇಗ ಹೇಳಿ ಕುಮಾರ್.’
‘ರಾಜಕುಮಾರೀದು ದೊಡ್ಡ ದುರಂತ ಅಂತಲೇ ಹೇಳ್ಬೇಕು. ಆದರೆ ಮದನಿಕೆಗೆ ಬಂದ ಮೃತ್ಯು ಅವಳಿಗೆ ಬರಲಿಲ್ಲ. ಎಲ್ಲ ಹೇಳ್ತೀನಿ ಕೇಳಿ’ ಎಂದು ಕುಮಾರ್ ಮತ್ತೆ ಶುರು ಮಾಡಿದ.
*****