ಭಾಗ-೧
ಡಬ್ಲ್ಯೂ ಬಿ. ಯೇಟ್ಸ ಅನುಪಮ ಪ್ರೇಮಕವಿ. ಅತ್ಯಂತ ರೂಪವತಿಯೂ ತೀಕ್ಷ್ಣಮತಿಯೂ ರಾಜಕೀಯ ನಾಯಕಿಯೂ ಆದ ಮಡಗಾನ್‌ಳನ್ನು ಅಂತಿಮ ದಿನದವರೆಗೂ ಅಪರಿಮಿತವಾಗಿ ಪ್ರೀತಿಸಿದ್ದ. ಆತ ಜನಿಸಿದ್ದು ಐರ್‍ಲೆಂಡಿನ ಸ್ಲಿಗೋ ಎಂಬ ಹಳ್ಳಿಯಲ್ಲಿ. ಅಲ್ಲಿಯೇ ತನ್ನ ಬಾಲ್ಯದ ದಿನಗಳ ಕಳೆದ. ಆ ಕಾರಣ ಐರಿಶ್ ದಂತಕಥೆಗಳು ಕಟ್ಟುಕಥೆಗಳು ಆತನ ಮೇಲೆ ಆತನ ಬರವಣಿಗೆಯ ಮೇಲೆ ಅಪಾರವಾಗಿ ಪರಿಣಾಮವನ್ನು ಬೀರಿದ್ದವು. ಅದರ ಮೂಲಕ ಆತ ಜ್ಞಾನವನ್ನು ಗಳಿಸಿದ. ವೃತ್ತಿಯಿಂದ ವಕೀಲನಾಗಿದ್ದ, ಪ್ರವೃತ್ತಿಯಿಂದ ಪೇಂಟರ್‌ನಾಗಿದ್ದ ತಂದೆ ಸಾಹಿತ್ಯ ಅಭಿಮಾನಿಯೂ ಆಗಿದ್ದರಿಂದ ಯೇಟ್ಸನಲ್ಲಿ ಬಾಲ್ಯದಿಂದಲೇ ಸಾಹಿತ್ಯ ಆಸಕ್ತಿ ಬೆಳೆಸಿದರು. ಯೇಟ್ಸನ ಕಾವ್ಯದ ಬದುಕು ರೋಮ್ಯಾಂಟಿಕ ಕಲ್ಪನೆಯ ಕನಸುಗಾರನಾಗಿ ಪ್ರಾರಂಭಿಸಿದ. ಆದಕ್ಕೆ ಮುಖ್ಯ ಕಾರಣ ಮಡಗಾನ್ ಆಕೆಯೇ ಆತನ ಪ್ರೇಮ ಕವನಗಳಿಗೆ ಮೊಟ್ಟ ಮೊದಲ ಸ್ಪೂರ್ತಿ. ಇಂಗ್ಲೀಷ ಸಾಹಿತ್ಯದಲ್ಲಿ ಪ್ರೇಮ ಕವಿಗಳಲ್ಲಿ ವಿಶಿಷ್ಟ ಸ್ಥಾನ ಪಡೆದ ಈತನಿಗೆ ಐರ್‍ಲೆಂಡಿನ ಡಬ್ಲಿನ್ ಮತ್ತು ಲಂಡನ್ ಆತನ ಕವಿತಾ ಜಗತ್ತಿನ ಪರಿಕಲ್ಪನೆಗಳ ವಿಸ್ತರಿಸಿದ ಎರಡು ನಗರಗಳು.
“When you are old” ಕವಿತೆಯಲ್ಲಿ ಆತ ತನ್ನ ನೈಜ ಪ್ರೇಮದ ಸ್ವರೂಪವನ್ನು ಸಾದ್ಯಂತವಾಗಿ ವಿವರಿಸುತ್ತಾನೆ. ತನ್ನ ಪ್ರೇಯಸಿಗೆ ಅಮರ ಪ್ರೇಮ ಮತ್ತು ಮೋಹದ ನಡುವಿನ ಭಿನ್ನತೆಯನ್ನು ವಿವರಿಸುತ್ತಾನೆ. ಪ್ರೀತಿ ಜೀವನದಲ್ಲಿ ವಿಶಿಷ್ಟ ಶಕ್ತಿ. ನೈಜ ಪ್ರೇಮಕ್ಕೆ ಎಂದಿಗೂ ಸಾವಿಲ್ಲ. ಸಾವಿನ ನಂತರ ಕೂಡ ಅದು ಅಜರಾಮರ. ಹಾಗೆಂದೆ ತನ್ನ ಪ್ರಿಯತಮೆ ಮಡಗಾನ್ ಳನ್ನು ಉದ್ದೇಶಿಸಿಯೇ ಈ ಕವಿತೆ ಬರೆಯುತ್ತಾನೆ ಯೇಟ್ಸ್. ಕವಿ ಆಕೆಯ ಭವಿಷ್ಯದ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾನೆ. ಮುಂದೊಂದು ದಿನ ಆಕೆಯ ಪ್ರಾಯ ಮಾಸುತ್ತಿದ್ದಂತೆ ದೇಹ ನಿಸ್ತೇಜವಾಗಿ ತಲೆಗೂದಲು ಬೆಳ್ಳಗಾಗಿ ನಡುಗುವ ದೇಹ ಹೊಂದಿದ ಆಕೆ ಬೆಂಕಿಯ ಮುಂದೆ ಬೆಚ್ಚಗೆ ಕೂತು ತೂಕಡಿಸುತ್ತಿರುವಾಗ ಕವಿ ತನ್ನ ಬಗ್ಗೆ ಬರೆದ ಕಾವ್ಯ ಸಂಪುಟವನ್ನು ಓದುತ್ತಾ ತನ್ನ ಗತಿಸಿಹೋದ ಕಾಲದ ಯೌವನದ ದಿನಗಳ ಮೆಲಕು ಹಾಕಬಹುದೆಂದು ಹೇಳುತ್ತಾನೆ. ಪ್ರಾಯದ ದಿನಗಳಲ್ಲಿ ಸೌಂದರ್ಯದಿಂದ ಕಳೆಕಳೆಯಾಗಿದ್ದ ಆಕೆಯನ್ನು ಪ್ರೀತಿಸಿದವರೆಷ್ಟೋ ಜನ. ಆಕೆ ಹಿಂಬಾಲಿಸಿದ್ದ, ಬಯಸಿದ್ದ, ಪ್ರೀತಿಸಿದ್ದ ಜನರನ್ನು ಆಕೆ ನೆನಪಿಸಿಕೊಳ್ಳಬಹುದು. ಆದರೆ ಆಕೆಯ ಪವಿತ್ರಾತ್ಮವನ್ನು ಪ್ರೀತಿಸಿದ್ದವ ಮಾತ್ರ ಅವನೊಬ್ಬನೆ. ಆಕೆಯ ಸಂತೋಷದೊಂದಿಗೆ , ನೋವನ್ನು ದುಃಖವನ್ನು ಆಕೆಯ ಜೀವನದ ಪ್ರತಿ ಹಂತದಲ್ಲಿಯೂ ಪ್ರೀತಿಸಿದ್ದವ ಅವನೊಬ್ಬನೆ. ಬದುಕಿನ ನೋವು ನಿರಾಶೆಗಳು, ಸಂಕಟಗಳು ಆಕೆಯ ಮುಖದ ಮೇಲೆ ನೆರಿಗೆಗಳ ಹೇರಿದಾಗಲೂ ಉಳಿದ ಪ್ರೇಮಿಗಳೆಲ್ಲ ಕಾಣೆಯಾದಾಗಲೂ ಆಕೆಯ ಪ್ರೀತಿಸಿದ್ದವ ಯೇಟ್ಸ್ ಮಾತ್ರ. ಆಕೆ ಜಗಮಗಿಸಿ ಹೊಳೆವ ಉರಿ ಸರಳುಗಳ ಹಿಂದೆ ಕುಳಿತು ಕಳೆಗುಂದಿದ ಮುಖ ಹೊತ್ತು ನೆನಪಿಸಿಕೊಳ್ಳಬಹುದು. ಅವಳ ಸೌಂದರ್ಯವನ್ನು ಮಾತ್ರ ಪ್ರೇಮಿಸಿದ್ದ ಜನರ ಪ್ರೀತಿ ಗಿರಿಶಿಖರವೇರಿ ನಕ್ಷತ್ರಗಳ ನಡುವೆ ತೂರಿ ಮರೆಯಾದ ರೀತಿಯನ್ನು ಹತಾಶೆಯಿಂದ ನೆನಪಿಸಿಕೊಳ್ಳಬಹುದು. ತನ್ನ ನಿಷ್ಕಲ್ಮಶವಾದ ಆತ್ಮವನ್ನು ಮಾತ್ರ ಪ್ರೀತಿಸಿದ್ದ ಅವನ ನೆನೆಪಿಸಿಕೊಳ್ಳಬಹುದು. ಶಾಶ್ವತ ಭಾವಗಳು ಪರಿವರ್ತನೆಗೆ ಒಳಗಾಗುವುದಿಲ್ಲ. ದೈಹಿಕ ಚೆಲುವು ಕ್ಷಣಿಕ. ಕಾಲ ಅದನ್ನು ಕ್ಷಣ ಮಾತ್ರದಲ್ಲಿ ನುಂಗಿ ಹಾಕಬಲ್ಲದು. ಆದರೆ ನಿಜವಾದ ಭಾವನೆಗಳು ಮಾತ್ರ ಸ್ಥಿರವಾಗಿರುತ್ತವೆ. ಯೇಟ್ಸ ಪ್ರೇಮ ಆಧ್ಯಾತ್ಮಿಕ. ಅದು ದೇಹ ಆಕರ್ಷಣೆಗೆ ಮೀರಿದ್ದು. ಆತ್ಮದ ಈ ಜಗತ್ತಿನ ಚಿಕ್ಕ ಪ್ರಯಾಣದಲ್ಲಿ ಪ್ರೀತಿಯ ಅಮರತ್ವವನ್ನು ಕವಿ ಸಾರುತ್ತಾನೆ. ಆದಾಗ್ಯೂ ಮಡಗಾನ್‌ಳಿಂದ ಎಂದಿಗೂ ಪ್ರೀತಿಸಲ್ಪಡದ ಕವಿಯ ಒಳ ಆಂತರ್ಯದ ನೋವು ನಿರಾಶೆಗಳು ಸಂಕಟಗಳು ಕೂಡ ಕವಿತೆಯಲ್ಲಿ ಸುಪ್ತವಾಗಿ ಗೋಚರಿಸಿದೆ.
“Two Trees” [ಎರಡು ವೃಕ್ಷಗಳು] ಕವಿತೆಯಲ್ಲೂ ಕೂಡಾ ವೃಕ್ಷಗಳ ಸಂಕೇತವಾಗಿಟ್ಟುಕೊಂಡು ಪ್ರೇಮದ ಸಾಕ್ಷಾತ್ಕಾರವನ್ನು ಸೃಷ್ಟಿಸುತ್ತಾನೆ. ಮಡಗಾನ್‌ಳ ಮೇಲಿನ ಪ್ರೇಮದ ತೀವ್ರತೆಯಲ್ಲೇ ಹುಟ್ಟಿದ ಕವಿತೆ ಭಾವಸ್ಪರ್ಶಿಯಾಗಿದೆ. ಕ್ರಾಂತಿಕಾರಿ ನಿಲುವಿನ ಮಡಗಾನ್ ರಾಜಕೀಯ ಪ್ರವೇಶಿಸಿದ್ದು ಆಕೆಯ ಪರಿಶುದ್ಧ ವ್ಯಕ್ತಿತ್ವ ಕಲುಷಿತಗೊಳ್ಳುವುದೆಂಬ ಆತಂಕ ಕವಿಯಲ್ಲಿದೆ. ಅನನ್ಯವಾಗಿ ಶ್ರೇಷ್ಟ ಮತ್ತು ದುಷ್ಟ ವ್ಯಕ್ತಿತ್ವದ ಸಂಗತಿಗಳನ್ನು ಎರಡು ವೃಕ್ಷಗಳ ಮುಖಾಂತರ ಒರೆಗಲ್ಲಿಗೆ ಹಚ್ಚುತ್ತಾನೆ ಯೇಟ್ಸ್. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎರಡು ವ್ಯಕ್ತಿತ್ವದ ಮುಖಗಳಿದ್ದು ಎರಡು ವೃಕ್ಷಗಳು ಸಂಕೇತಿಸುತ್ತವೆ. ಪವಿತ್ರ ವೃಕ್ಷ ಆನಂದ ಸೌಂದರ್ಯಕ್ಕೆ ಸಾಕ್ಷಿಯಾದರೆ, ಅಪವಿತ್ರ ವೃಕ್ಷ ಅಮಾನವೀಯತೆಗೆ, ಕಪಟತೆಗೆ ಸಂಕೇತ. ಪವಿತ್ರ ವೃಕ್ಷ ಆಳವಾದ ಆತ್ಮಜ್ಞಾನದಿಂದ, ಸ್ವಯಂ ಶಕ್ತಿಯಿಂದ ಸಧೃಡ. ಅದೇ ಅಮಾನವೀಯತೆ, ಅಪರಿಪೂರ್ಣತೆ, ನಾಟಕೀಯತೆ, ಅಮೂರ್ತವಾದ ಜಿಜ್ಞಾಸೆಗಳು ರಾಜಕೀಯ ನಿಲುವು ದೊಂಬರಾಟಗಳು ಪವಿತ್ರತೆಯ ನೆಲೆಯಲ್ಲಿ ಅಪವಿತ್ರತೆಯ ಬೇರುಗಳ ನೆಲೆಗೊಳಿಸುತ್ತವೆ. ಹಾಗಾಗೇ ಶುದ್ಧ ನಿಲುವಿನ ಮಡಗಾನ್‌ಳಿಗೆ ಆತ ಆಕೆಯ ಆತ್ಮ ಜ್ಞಾನದ ಮೂಲಕ ಅಂತಃ ಪ್ರಜ್ಞೆಯ ದರ್ಶನ ಪಡೆಯಲು ಹೇಳುತ್ತಾನೆ.
ಈ ವೃಕ್ಷದ ರೆಂಬೆ ಕೊಂಬೆಗಳು ತೃಪ್ತಿಯಿಂದ, ಆನಂದದಿಂದ ಸದಾ ಬಣ್ಣಬಣ್ಣದ ಹೂ ಹಣ್ಣುಗಳಿಂದ ಕಂಗೊಳಿಸುತ್ತವೆ. ನಕ್ಷತ್ರಗಳಂತೆ ಬೆಳಗುತ್ತವೆ. ಈ ಮರದ ಬೇರುಗಳು ಆಳವಾಗಿವೆ. ಮರದ ಎಲೆಗಳ ರವ ಕೂಡಾ ಕಾವ್ಯಮಯವಾಗಿದೆ. ಮಧುರವಾಗಿದೆ. ಈ ಪವಿತ್ರತೆ ನಮ್ಮ ನಿಮ್ಮೆಲ್ಲರ ಹೃದಯದಲ್ಲಿದೆ. ನಮ್ಮ ಬದುಕನ್ನು ಉನ್ನತಗೊಳಿಸುತ್ತದೆ. ಪರಿಶುಧ್ಧವಾಗಿಡುತ್ತದೆ. ಉದಾತ್ತ ಮೌಲ್ಯಗಳು ಈ ವೃಕ್ಷದ ಮಡಿಲಲ್ಲಿವೆ. ಆದರೆ ಅದೇ ಹೃದಯದಲ್ಲಿ ಇರುವ ಇನ್ನೊಂದು ವೃಕ್ಷ ಈ ವೃಕ್ಷಕ್ಕೆ ತದ್ವಿರುದ್ಧವಾಗಿದೆ. ಅದರ ಬೇರುಗಳು ಹಿಮಾವೃತ್ತವಾಗಿವೆ. ರೆಂಬೆಕೊಂಬೆಗಳು ಒಣಗಿ ಮುರುಟಿವೆ. ಎಲೆಗಳು ಹಸಿರಾಗಿಲ್ಲ. ಕಪ್ಪು ಬಣ್ಣಕ್ಕೆ ತಿರುಗಿವೆ. ಹೂ ಹಣ್ಣುಗಳು ಬಣ್ಣ ವಾಸನೆ ಕಳೆದುಕೊಂಡು ಆಹ್ಲಾದತೆಯನ್ನು ಮೂಡಿಸಲಾರವು. ದುಷ್ಟ ನಿಲುವಿಗೆ ಸಾಂಕೇತಿಕವಾದ ಈ ವೃಕ್ಷ ಕೆಟ್ಟದ್ದನ್ನು ಪ್ರಚೋದಿಸುತ್ತದೆ. ಹಾಗಾಗೇ ಆ ಕುರಿತು ಚಿಂತಿಸದಿರುವುದೇ ಮೇಲು ಎಂಬುದು ಕವಿಯ ಆಸೆ. ಯೇಟ್ಸ ಈ ಮೂಲಕ ಮಡಗಾನ್ ಳಿಗೆ ಈ ವೃಕ್ಷವನ್ನು ನೋಡದಿರುವಂತೆ ಹೇಳುತ್ತಾನೆ. ಒಳ್ಳೆಯ ವಿಚಾರಗಳ ಕುರಿತು ಮಾತ್ರ ನಾವು ಚಿಂತಿಸಬೇಕೆಂಬ ಸಂದೇಶ ಕೂಡಾ ಇಲ್ಲಿದೆ.
ಆದರೆ ಯೇಟ್ಸ್ ಅಪರಿಮಿತವಾಗಿ ಪ್ರೇಮಿಸಿದ್ದ ಮಡಗಾನ್ Major MacBride ನನ್ನು ಮದುವೆಯಾಗಿ ಪ್ರಾನ್ಸಗೆ ಹೊರಟುಹೋದಳು. ಇದರಿಂದ ಆತನ ರೋಮ್ಯಾಂಟಿಕ್ ಕನಸು ನುಚ್ಚುನೂರಾಯಿತು, ಬದಲಾವಣೆ ಅನಿವಾರ್ಯವಾಗಿತ್ತು. ಅದಕ್ಕೆಂದೆ “A Coat” ಕವಿತೆಯಲ್ಲಿ ಆ ಬ್ರೇಕ್‌ನ್ನು ಆತ ಉಲ್ಲೇಖಿಸುತ್ತಾನೆ. ಕೆಲವು ವರ್ಷಗಳವರೆಗೆ ಆತ ಯೌವನ ಮತ್ತು ಚೆಲುವಿನ ಕುರಿತು ರಾಜಕೀಯ ವಿಡಂಬನೆಯ ಕುರಿತು ಬರೆದ. ಮಡಗಾನ್ ಳಿಂದ ತಿರಸ್ಕೃತನಾದ ಯೇಟ್ಸ ಮುಂದೆ ಆಕೆಯ ದತ್ತು ಪುತ್ರಿ ಇಸುಲೆಟ್‌ಳಿಗೂ ಪ್ರೇಮ ನಿವೇದಿಸಿದ್ದು ಮಾತ್ರ ವಿಪರ್ಯಾಸ. ಆದರೆ ಆ ಕುರಿತು ಆತ ನೀಡುವ ಸಮರ್ಥನೆ ಎಂದರೆ ಆಕೆಯ ಬಗ್ಗೆ ಆತನಿಗಿರುವುದು ಕಾಮಪೂರಿತ ಪ್ರೇಮವಲ್ಲ ಬದಲಿಗೆ ಅದು ಎಸ್ಥೆಟಿಕ್. ಎಂದರೂ ಕೂಡಾ ಪ್ರಾಯದಲ್ಲಿ ತೀರಾ ಕಿರಿಯಳಾದ ಆಕೆಯ ಮದುವೆಯಾಗಲು ಸಾಧ್ಯವಿಲ್ಲ. ಮೇಲಾಗಿ ಆಕೆ ಆತನ ಅಂಕಲ್ ಎಂದು ಕರೆದು ಆತನ ಪ್ರಸ್ತಾಪವನ್ನು ತಿರಸ್ಕರಿಸುತ್ತಾಳೆ. ಆನಂತರ ೫೨ನೇ ವಯಸ್ಸಿಗೆ ಆತನ ಬದುಕಿಗೆ ಬಂದವಳು ಹೈಡಲೀಸ್. ಬದುಕಿಗೆ ತೃಪ್ತಿಯನ್ನು ಸಾಹಿತ್ಯದ ಕೃಷಿಗೆ ಹೊಸ ಚೇತನವನ್ನು ನೀಡಿ ಬದುಕನ್ನು ಹಸನಾಗಿಸಿದಳು. ಹಾಗಾಗೇ ದೂರದೃಷ್ಟಿಯುಳ್ಳ ಅನೇಕ ಕಾವ್ಯಗಳು ಆನಂತರವೇ ಮೂಡಿಬಂದವು.
*****