ಅ ಆ ಇ ಈ ಉ ಊ….
ಸ್ವರಗಳು ಇನ್ನೂ ಕೊರಳಲ್ಲೇ ಇವೆ
ಕ ಖ ಗ ಘ ಚ ಛ ಜ ಝ
ವ್ಯಂಜನಗಳು ಇನ್ನೂ ಬಾಯಲ್ಲೇ ಇವೆ
ಆಟ ಊಟ ಓಟ ಪಾಠ
ಬಣ್ಣ ಬಣ್ಣದ ಚಿತ್ರಗಳು
ಕಣ್ಣಲ್ಲಿ ಅಚ್ಚೊತ್ತಿ ನಿಂತಿವೆ
ಹಿಗ್ಗಿ ಹಿಗ್ಗಿ ನುಡಿಯುತ್ತಿದ್ದೆವು ಹತ್ತರ ಮಗ್ಗಿ
ಜಗ್ಗಿ ಜಗ್ಗಿ ನಿಲ್ಲಿಸುತ್ತಿದ್ದೆವು ಹದಿನೇಳರ ಮಗ್ಗಿ
ಕೂಡಿ ಕಳೆದು ಗುಣಿಸಿ ಭಾಗಿಸಿ
ತಾಳೆ ನೋಡಿ ನಿಸೂರಾಗಿ
ಎದೆಯುಬ್ಬಿಸಿ ನಡೆಯುತ್ತಿದ್ದೆವು ಗುಂಪಾಗಿ
ನಾಯಿ ಮರಿಗೆ ತಿಂಡಿ ಬೇಕೆ ಎಂದು
ಕೇಳಿ ಪುಟ್ಟಪೂರಾ ನಾವೇ ತಿಂದು
ಬಾರೆಲೆ ಹಕ್ಕಿ ಎಂದು ಗೋಗರೆದು ಕರೆದು
ಗೋವಿನ ಹಾಡಲ್ಲಿ ಕರಗಿ
ಪುಟ್ಟ ಕರುವಿನಂತೆ ಕಣ್ಣೀರಗರೆದು
ಪೆದ್ದಗುಂಡನ ಕತೆಯನ್ನು ಪವಿತ್ರ ಗ್ರಂಥದಂತೆ ಪಠಿಸಿ
ನಿದ್ದೆಗೆ ಜಾರುತ್ತಿದೆವು… ಹಾಯಾಗಿ…
ತಲೆ-ತಲೆಮಾರುಗಳಿಂದ ಅನ್ನ ನೀರು ಸೂರು-
ಉಸಿರೂಡಿದ ಕನ್ನಡ ಕಲ್ಪವೃಕ್ಷಕ್ಕೆ
ಕೊಡಲಿ ಬೀಸುತ್ತಿರುವ ಕಂದಮ್ಮಗಳೇ….
ನಿಮಗುಣಿಸಿದ್ದು ಎದೆಹಾಲೆ ? ಹಾಲಾಹಲವೇ?
*****