ಹುಟ್ಟೂರು
ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ
ಹೊಟ್ಟೆ ತುಂಬಿದಂತಾಗುತ್ತೆ
ಹಿಟ್ಟು ಕಾರವನ್ನೇ ತಿಂದರೂ
ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ
ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು
ಬಿಟ್ಟ ಮೇಲೆ
ದಿಣ್ಣೆ, ದೀಪಾಂತರ ತುಂಬಾ
ಆಸೆಯೆ ಆಕಾರ ತಳೆದಂತೆ ಬೆಳೆದ
ಹೂಪೀಸು, ವಡೆತಲೆಯ ಫಲ ಪೈರು
ಗಾಳಿಗೆ ತೊನೆದಾಡುತ್ತಿರುವಾಗ
ಬಯಲಾದ ಬಯಲೆಲ್ಲಾ ಸಂಗೀತ ನೃತ್ಯದಲ್ಲಿ ತೇಲುವುದು,
ದೊಡ್ಡವಳು ತಾಯಿ ಗಂಗಮ್ಮ ಕೃಪೆಮಾಡಿ ಬಂದು
ನೆರೆ ತೊರೆ ಹಳ್ಳ ಕೊಳ್ಳಗಳಲ್ಲಿ ಅತ್ತಿತ್ತ ಆಡ್ಡಾಡುವ
ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುವ
ಬೆಟ್ಟ ಗುಡ್ಡಗಳ ನೆತ್ತಿಯನ್ನು ಜಾರುಬಂಡಿ ಮಾಡಿಕೊಂಡು
ಆಟವಾಡುವ ದೃಶ್ಯ
ಕಣ್ಣಿಗೆ ಬೀಳಲು ಪುಣ್ಯ ಮಾಡಿರಬೇಕು.
ಸರ್ತಿ ಸರ್ತಿಗೆ ಬರುವ ಈ ಹಿರಿಯರ ಹಬ್ಬಕ್ಕೆ ಕರೆಯದಿದ್ದರೂ
ನಿಲ್ಲಲಾರೆ
ಗಂಡ ಮಕ್ಕಳ ಕೂಡಿಕೊಂಡು
ಪುಟ್ಟ ಮೆರವಣಿಗೆಯಲ್ಲಿ ಸಾಗಿ ಬರುವೆ
ಜೀವನಾ ದ್ರವ್ಯವನು ಕೂಡಿಸಿ ಕೊಳ್ಳುವೆನು
ದೂರದಲ್ಲಿರುವಾಗಲೇ ಕೂನು ಹಿಡಿದ ಚಿಕ್ಕವರು
ಓಡೋಡಿ ಬಂದು
ಅತ್ತೆ, ಮಾವ ಬಂದರೆಂದು ಡಂಗುರ ಸಾರುವುದು
ಹಿರಿಯರು, ಎಲ್ಲರೂ ಬಾಗಿಲಿಗೆ ಬಂದು
ಉಲ್ಲಾಸದ ನಗೆಯಲ್ಲಿ ಸ್ವಾಗತದ ಸೆಳೇವು ನೀಡುವುದು
ಜೀವನದಿ ಮರೆಯಲಾಗದ ಸುಖಾನುಭವವ ತರುವುದು.
ಊಟ ಉಪಚಾರ ಮುಗಿದು
ಎರಡೂ ಕಡೆಯ ಮಕ್ಕಳ ಪ್ರತಿಭಾ ಪಾಠಗಳ ವರದಿಯ ಜೊತೆಜೊತೆಗೆ
ಪರಸ್ಪರ ಸುಖ ಸಂಕಥಾ, ಆಮೋದ ಪ್ರಮೋದದ ನೆರಿಕೆಯಲ್ಲಿ
ಇಣುಕುವಾಗ
ಮಾತಿಗೆ ನೂರು ಮುಖವಾಗಿ
ಸರಿಹೊತ್ತಾದರೂ ಕೊಡುಹ ಮುಗಿಯುವುದಿಲ್ಲ
ಒಬ್ಬೊಬ್ಬರೆ ನೆಂಟರು ಬಂದು ಸೇರಿದ ಹಾಗೆ ಉದ್ದುದ್ದ ಬೆಳೆವುದು
ಹಬ್ಬವೇ ಮುಗಿದು ಊರಿಗೆ ಹೊರಟು ಅರ್ಧ ದಾರಿಗೆ ಬಂದರೂ
ಮುಗಿಯುವ ಲಕ್ಷಣ ಕಣುವುದಿಲ್ಲ.
ಬಿಡುವಾಗಿ ಊರು, ಹೊಲಗಳ ಸುತ್ತ
ಒಂದು ಸುತ್ತು ಹಾಕಿ ಬರುವಾಗ
ಬಾಲ್ಯವು ಮರುಕಳಿಸುವುದು
ಎಲ್ಲಾ ಮುಗಿದು ಹೊರಟು ನಿಂತಾಗ
ಕ್ಷಣ ಕಾಲ
ಎಂದಿನಂತೆ ಕಣ್ಣು ಮಂಜಾಗುವವು.
*****