ಭೂಗೋಳದ ತುಂಬ
ಕಣ್ಣಾಡಿಸಿ ನೋಡಿದೆ-
ನನ್ನ ಸುಂದರ ಕಾಶ್ಮೀರ
ಕಾಣುತ್ತಲೇ ಇಲ್ಲ,
ಎಲ್ಲಿದೆ ಅ ನಿಸರ್ಗದ ಬೀಡು-
ಪ್ರವಾಸಿಗರ ಸ್ವರ್ಗದ ನೆಲೆವೀಡು,
ಸುಂದರವಾದ ‘ದಲೆ’ ಸರೋವರದ
ತಿಳಿ ನೀರನು ಕೆಂಪಾಗಿಸಿದ
ವ್ಯವಸ್ಥೆಯ ವಕ್ತಾರರೇ
ತೋರಿಸಿ ಕೊಡಿ ನನ್ನ
ಹೂವಿನ ಕಾಶ್ಮೀರ
ಗುಂಡಿನ ಸದ್ದಿಗೆ
ಆಟವನೇ ಮರೆತು
ಶಾಲೆಯ ಮುಖ ಕಾಣದೇ
ತಾಯ ಮಡಿಲ ಸೇರಿದ
ಪುಟಾಣಿಗಳ ಕಿಲಕಿಲ
ಎಲ್ಲಿ ಮಾಯವಾದವು ಹೇಳಿ?
ಶಾಂತ ಸರೋವರಗಳಿಂದು
ಹಿಂಸೆಯ ರೂಪ ತಾಳಿ,
ರಕ್ತದೋಕುಳಿಯಿಂದ ಕೆಂಪಾಗಿವೆ
ಎಲ್ಲಿದೆ ತೋರಿಸಿ,
ತಾವರೆಗಳಿಂದ ತುಂಬಿದ
ನನ್ನ ಕನಸಿನ ಕಾಶ್ಮೀರ
ನಾನು ಮತ್ತೆ ಹುಟ್ಟುವದಾದರೆ
ಸ್ವರ್ಗದ ಕಾಶ್ಮೀರದಲ್ಲೇ
ಹುಟ್ಟಬೇಕೆನ್ನುತ್ತಿದ್ದೆ,
ಆ ನನ್ನ ಕಾಶ್ಮೀರದಲಿ
ರಾಶಿರಾಶಿಯಾಗಿ ಬಿದ್ದ ಹೆಣಗಳು
ಕಾದು ಕುಳಿತಿರುವ
ರಣಹದ್ದುಗಳು
ಅರಳಲೊಲ್ಲದೇ ಬಾಡಿ
ಬಿದ್ದಿರುವ ತಾವರೆಗಳು
ಜನಗಳಿಲ್ಲದೇ ಭಣಗುಟ್ಟುವ
ಬೋಟೆ ಹೌಸುಗಳು
ಭಯ ಹುಟ್ಟಿಸುತ್ತಿವೆ
ನನ್ನ ಪುಟ್ಟ ಕಾಶ್ಮೀರಕೆ
ಕೊಳ್ಳಿಯಿಟ್ಟು –
ಕುರೂಪಗೊಳಿಸಿದ ರಾಕ್ಷಸರೇ
ನಿಮಗೆ ನಾನೆಂದಿಗೂ
ಕ್ಷಮಿಸಲಾರೆ,
ನಾನೆಂದಿಗೂ ಕ್ಷಮಿಸಲಾರೆ.
*****