ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ
ವಡಪೇಳ ಈರಣ್ಣ ವಡಪೇಳ ||ಪಲ್ಲ||
ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ
ಗರತೇರ ಮನಿಮನಿಗೆ ಕರಿತೇನ
ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ
ನಿನಗುಡಿಗೆ ಬಜಂತ್ರಿ ತರತೇನ ||೧||
ಜರತಾರಿ ನಾರ್‍ಯಾರ ಮುರತಾಪ ಮಾಡ್ತೇನ
ತುರುಬೀಗಿ ತುಂಬೀಯ ಹೆಣಿತೇನ
ಬೀಗ್ತೇರ ಕೊಡಪಾನ ಎದೆತುಂಬಿ ಹೊರತೇನ
ದಾರ್‍ಯಾಗ ಡಾಳಿಂಬ್ರ ಬೆಳಿತೇನ ||೨||
ಸುತ್ತೂರು ಸರದಾರ ಹತ್ತೂರು ಗಮ್ಮಾರ
ತಲವಾರ ತಾನೆಂದ ತರತಾನ
ಸುರಪೂರು ಭರಪೂರು ಪುರಿಹೆಣ್ಣು ಪುರುಪೂರು
ಪಲ್ಲಂಗ ಪಂಚಮಿ ಮೆರಿತಾನ ||೩||
ನಡದಾಗ ಗುಡಿಗ್ಯಾನ ಹುಲ್ಲುಲಿಗೊ ಹುಲಿಕಾಮ
ತೊಡಿಯಾಗ ತಂಬೂರಿ ಮಿಡಿದೈತೆ
ಉಟಸೀರಿ ಗಂಟಾಗ ಕ್ಯಾಕೀಯ ಹಾಕ್ಯಾನ
ತುರುಬೀನ ಗಿಣಿಯೂ ಹಾಡೈತೆ ||೪||
ತಡದರ ಸಾಯ್ತೇನಿ ತಡಿಯಾಕ ಹೊತ್ತಿಲ್ಲ
ನೆಲ್ಲಡಕಿ ನಿಂಬೀಯ ತಾತಾತಾ
ಗೊಲ್ಲಡಕಿ ಗೊಂಬಿನಾ ನಾಚೀಗಿ ಬಿಟ್ಟೇನಿ
ಬಾಬಾರ ಬರದಿದ್ರ ಹಾಹಾಹಾ ||೫||
*****