ತಾಳದಾಗ. ತಾಳವ್ವ ಹರತಾಳ ಚೋಳವ್ವ
ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ||
ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ
ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ
ಕಾಲೇಜಿ ಜನರಾ ಸ್ಕೂಲೀನ ಜನರಾ
ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧||
ಡಾಕ್ಟರ ಗುಂಪಾ ಆಪೀಸು ಸಂಪಾ
ಪ್ಯಾಕ್ಟ್ರೀಯ ಜನರಾ ಕೂಗವ್ವಾ
ದುಡ್ನ್ಯಾಗೆ ದುಡ್ಡವ್ವ ಸಂಬ್ಳಕ್ಕ ಸೋಗವ್ವ
ಮ್ಯಾಲಕ್ಕ ಮ್ಯಾಲವ್ವ ಚಿಗವ್ವಾ ||೨||
ದಾರೀಯ ದುಗ್ಗಾಣಿ ದೀಡ್ಯಾಡ ಪೈನಾನು
ನನಗ್ಯಾರು ಮಾಡಿಲ್ಲ ಹರತಾಳ
ಇದ್ದೋರ ಕಿಸೆದಾಗ ಇದ್ದೋರು ಏಳ್ತಾರ
ನಮ್ಮೋರ ಹೊಟ್ಯಾಗ ಗೊರಬಾಳ ||೩||
ಅವ್ರವ್ರ ಅಂಗ್ಡ್ಯಾಗ ಅವ್ರವ್ರ ಯುನಿಯನ್ನು
ನಮಗೊಂದು ಕೂಣಿಯ ಕಮಾನ
ಆಪೀಸು ನಮಗಿಲ್ಲ ಯಾಪೀಸು ಪಾಸಿಲ್ಲ
ಹರತಾಳ ನಮಗ ಸಮಶಾನ ||೪||
ಇದ್ದೋರ ಮನಿಯಾಗ ಇದ್ದೋರು ಏಳ್ತಾರ
ಎದ್ದೋರು ಎದ್ದೋರ ಆಳ್ತಾರ
ಬಿದ್ದಾಕಿ ಬಿದ್ದಾಡಿ ಬಿಚಬಿಲ್ಲಿ ಹುಚಬಿಲ್ಲಿ
ನನ್ನಂಥ ಜನರಾ ಮರಿತಾರ ||೫||
*****