ಕಂಬನಿಯೆ ಏಕಿಂತು ಒತ್ತರಿಸಿ ಬರುವೆ?
ಕಂಪಿಸುವ ಚಿತ್ರದ ಇರವನ್ನೆ ಮರೆವೆ?
ಮಿಥ್ಯಕ್ಕೆ ಗೆಲುವಾಯ್ತು
ಸತ್ಯಕ್ಕೆ ಸೋಲಾಯ್ತು
ದುಃಖವು ಮಿಗಿಲಾಯ್ತು
ಸುಖದ ಮನೆ ಹೋಯ್ತು
ಎಂದಿದಕೆ ಏಕೆ ಕಣ್ಣೀರು
ಬದುಕಿಗಂಜಿ ಹೇಡಿ, ಹಿಂಜರಿವೆ?
ವಂಚಿಸಿತು ಜಗಜನವು
ಸಂಚಿನಲಿ ಬದುಕನ್ನು
ಇಂಚರದಿ ಸುಳಿಗಾಳಿ
ವಂಚಿಸಿತು ಹೂವನ್ನು…..!
ಚಿಂತನೆಯ ಬೆಂಕಿಯಲ್ಲಿ ಬೆಂದು
ಸಾಂತ್ವನವ ಕಾಣದೆ ಸುರಿಯುವೆಯ ಇಂದು?
ಇಂದಿನಿತು ಸುರಿಸಿದರೆ
ಮುಂದೇನು ಬದುಕಿದರೆ?
ಬದುಕು ಮೂರುದಿನವಲ್ಲ
ಸದುಪಯೋಗಿಸು ಮೆಲ್ಲ….
ಎಡೆಬಿಡದೆ ಸುರಿಸಿದರೆ ಮುಗಿಯುವದು ಬೇಗ
ತಡೆತಡೆದೆ ಸುರಿಯುವುದು ನಿನಗುಚಿತ ಈಗ
ಬಡವನಾಧಾರ ಇಹ-ಪರದಿ ನೀನೆ
ತಡೆಹಿಡಿಯು, ಸುರಿಯದಿರು…..
ಮುಂದೆ ಬರಲಿಹುದು ಬಹುಪರಿಯಬೇನೆ;
ಅಂದು ಸಂತೈಸೆ ಬೇರಿಲ್ಲ. ಗತಿ ನೀನೆ…
ಕಂಬನಿಯೆ ಸುರಿಯದಿರು ಇಂದೆ;
ಮುಂಬನಿಯೆ ಇದುವೆಂದು ತಿಳಿ ಪದಪಿಂದೆ….
*****