ನಿದ್ದೆ ಒಂದು ಪುಟ್ಟಸಾವು
ದಣಿದ ಜೀವಕದುವೆ ಚಿಕ್ಕ ಬಿಡುವು|
ದಿನದ ಎಲ್ಲಾ ಭಾರವ ಇಳಿಸಿ
ತನು ತೂಗುಯ್ಯಾಲೆಯದೆಯಲಿ ತೇಲಿ
ಮನಕೆ ನೀಡುತಿದೆ ನಲಿವು||
ಎಷ್ಟು ಕಠಿಣ ದಿನದ ಬದುಕು|
ತುಂಬಲು ತುತ್ತಿನ ಚೀಲವ
ದಿನಾ ಹೊಸತ ಹುಡುಕು|
ಸೂರ್ಯನುದಸಿದ ಕ್ಷಣದಿಂದ
ಚಂದ್ರತಾರೆ ಬೆಳಗುವರೆಗೂ
ಗಾಣದ ಎತ್ತಿನಂತೆ ದುಡಿದು
ಹಣ್ಣಾಗಿಹ ದೇಹಕೆ ಕೊಂಚ ವಿಶ್ರಾಂತಿ||
ಮಕ್ಕಳು ದಿನವೆಲ್ಲಾ ಪಾಠ ಆಟೋಟದಿ
ಕುಣಿದು ಕುಪ್ಪಳಿಸಿ ದಣಿದು,
ನಾಳೆ ಬಯಸದೆ ನಿನ್ನೆ ನೆನಸದೆ
ಮುದುಡಿ ಮಲಗಿ ನಿದ್ದೆಯಲಿ ವಿಶ್ರಾಂತ||
ಹಕ್ಕಿ ಪಕ್ಷಿಗಳು ಆಹಾರಕ್ಕಾಗಿ
ಗೂಡಿಂದ ಹೊರಹಾರಿ ದೂರ|
ಅಲೆದು ದಣಿದು ಆಯ್ದು ತಂದು ಮರಿಗಳಿಗುಣಿಸಿ
ಪ್ರೀತಿಯಿಂದ ಮಾತಕಲಿಸಿ ವಿಶ್ರಮಿಸಿ|
ಏನನೂ ನಾಳೆಗೆ ಕೂಡಿಡದೆ ಬಾಳಿಬದುಕಿ
ಎಲ್ಲವನು ಎಲ್ಲರಿಗುಳಿಸಿ ನಿದ್ರೆಗಿಳಿಯೆ ಶಾಂತ||
ಯಜಮಾನನಿಗಾಗಿ ದುಡಿದು
ಸೋತ ಸಾಕುಪ್ರಾಣಿಗಳು|
ಅರ್ಧ ಅಗಿದು ನುಂಗಿದ ಆಹಾರ
ಹೊರತೆಗೆದು ರಾತ್ರಿಯಲಿ
ಕಣ್ಮುಚ್ಚಿ ಮೆಲುಕುಹಾಕಿ ಜೀರ್ಣಿಸಿ
ಆಳ ಉಸಿರ ಬಿಟ್ಟು ಮಲಗದುವೇ ಸುಖಾಂತ||
*****