ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು
ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ
ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ;
ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ.
ಮನದ ಮೂಲದಲ್ಲಿ ಬೇರಿಳಿದ ಮರ
ಗೀರಿದರೆ ಚಿಲ್ಲೆನ್ನುವ ರಸ; ಬೆಳವ ರಭಸ.
ಬೆಚ್ಚನೆಯ ಬಿಸಿಲಿಗೆ ಮಡುಗಟ್ಟಿದ್ದ ಮಂಜು
ಹತ್ತು ಕಡೆ ಹರಿಯುವುತ್ಸಾಹ.
ಗಿಡಗೆಂಟೆ ಮುಳ್ಳುಪೊದೆ ಉಬ್ಬುತಗ್ಗುಗಳ
ಸಮತಟ್ಟುಗೊಳಿಸಬೇಕೆಂಬ ಬುಲ್ಡೋಜರ್ ಬುದ್ದಿ.
ಹೀಗೆ ಬೆಳೆಯುತ್ತ ಬಂದದ್ದೇ ಒಂದು ಸುದ್ದಿ-
ಯಾಗಿ ಮರದ ಮೇಲೆಲ್ಲ ಟಕಟಕ ಸದ್ದು
ನೀಲಿ ಹಾಳೆಯ ಮೇಲೆ ಅಚ್ಚೊತ್ತಿದ ಹದ್ದು
ಮರಕುಟಿಗಗಳ ಸದ್ದು ನಿಲ್ಲಲಿಲ್ಲ;
ಚುಚ್ಚುವೆಚ್ಚರ ಹಕ್ಕಿ ಹಾರಲಿಲ್ಲ.
ಮೈನೆರೆದ ಮರದಲ್ಲಿ ಮೋಹಕುಟಿಗ
ಕಿತ್ತು ತಿನ್ನುವ ಕತ್ತುಬಳಸುವ ಹತ್ತಾರು ಸಲಗ
ಹಂಟರನು ಹಿಡಿದಾಗ ಹಲಗೆ ಬಡಿತ
ಕಾಲಕುಣಿಸುವ ಕುದುರೆ ಕೆನೆತ
ಹಂಟರಿನ ಮೈಯಲ್ಲಿ ಸಂಗೀತ ಸ್ವಿಚ್ಚೊತ್ತಿ
ಮೆಲ್ಲಗೆ ಮತ್ತೇರಿದ ಹೆಡೆಯ ನಾಗ.
ಅಚ್ಚೊತ್ತಿದ್ದ ಹದ್ದು ಎಚ್ಚೆತ್ತು ಬಡಿದಾಗ
ಸುತ್ತಮುತ್ತಲ ಮೋಡ ಕಿರುಚಿ ಕಣ್ಣೀರು.
ಅತ್ತಲಿಂದಿತ್ತ ಇತ್ತಲಿಂದಿತ್ತ ರಪರಪನೆ ಬಡಿವ
ಪುಕ್ಕಗಳಿಗೆ ಸಿಕ್ಕಿ ಮರದ ಮೈಯಲ್ಲಿ ದಿಗಿಲು!
ಹದ್ದಿನಾರ್ಭಟದಲ್ಲಿ ಅತ್ತು ಕರೆಯುವ ಮಹಲು
ಬೇರಿಗೆ ಭೈರಿಗೆ ಹಿಡಿವ ಭೋರ್ಗರೆವ ಹೊನಲು.
ದಿಕ್ಕು ಕಾಣದ ಹಕ್ಕಿಗಳು ಮರದಲ್ಲೆ ಮುಲುಗುಟ್ಟಿ
ಮತ್ತದೇ ಕೆಲಸ ಟಕ ಟಕ ಸದ್ದು
ಮೋಹದಲ್ಲೆ ಮೈದಳೆದ ಎಚ್ಚರದ ಗುದ್ದು.
ಮಣ್ಣ ಮೈಥುನದಲ್ಲಿ ಫಲ ಕಾಣುವ ಛಲ ಮರಕ್ಕೆ
ತಲೆಯಲ್ಲಿ ಒಂದೇ ಸಮ ಕುಕ್ಕುವ ಬಯಕೆ.
ಹಾಳು ಬಾವಿಯ ಹೂಣು ಆಳುದ್ದ ತುಂಬಿ
ಸಲಿಕೆ ಗುದ್ದಲಿಗೆ ಎಡೆಬಿಡದ ಕೆಲಸ
ಹೊಸ ಮಂಕರಿಗಳಲ್ಲಿ ಮಣ್ಣು ತುಂಬುವ ರಭಸ.
ಬೆವರು ಬಸಿದು ಹೊಸ ವರಸೆಯಲ್ಲಿ ಹತ್ತುವಾಗ
ದಡದಲ್ಲಿ ಬಾವಿಯೊಡೆಯರ ಪಹರೆ; ಕತ್ತಿಝಳಪು.
ನೆಚ್ಚಿ ನಡೆದವನು ಬೆಚ್ಚಿ ತಲೆತುಂಬ ಕುಟಿಗ-
ಎಚ್ಚರದ ಸಲಗ; ದಾರಿ ಹೊಳಪು.
ಜಗ್ಗದೆ ಕುಗ್ಗದೆ ನುಗ್ಗುತ್ತ ನಡೆದಾಗ
ಬಾವಿಯೊಡಯರಲೆಷ್ಟೋ ಬಂಧು ಬಳಗ!
ನಿಂತು ನೋಡನೋಡುತ್ತ ಸಾವರಿಸಿಕೊಂಡು
ಧ್ಯೇಯ ಧುಮ್ಮಿಕ್ಕಿ ಕರೆಂಟು ದೃಷ್ಟಿ
ಕತ್ತಿಗಳಿಗೆ ಕತ್ತು ಕೊಡದ ಮಲೆತ ಮುಷ್ಟಿ
ಮರದಲ್ಲಿ ಚೈತನ್ಯ ಸೂರ್‍ಯ ಚುರುಕು-
ಹಕ್ಕಿಯಚ್ಚರ ಚಬುಕು.
ಅದುರಿದೊಡೆಯರಿಂದ ದಡಕಡಿವ ಕಾರ್ಯ
ಮೇಲೆ ಮುಸುಕು ಮುಚ್ಚಿದ ಸೂರ್ಯ
ಬಿದ್ದರೂ ಬಿಡದೆ ಬೆನ್ನು ತಿರುಗಿಸದೆ ದಡದೆಡೆಗೆ ಬಂದಾಗ ಬೆದರುಗೊಂಬೆಗಳಿಗೆಲ್ಲ ಬೆರಗು.
ಹಾಳುಬಾವಿಯ ಆಳ ನೋಡಿ ನಕ್ಕಾಗ
ನಾಚಿಕೆಯೆ ನೀರಾಗಿ ತಳ ತೋಯುತಿತ್ತು.
*****