ಪ್ರಿಯ ಸಖಿ,
ಇಂದು
ನಮ್ಮ ದೇಶದ
ಬಹು ಮುಖ್ಯ ಅರಕೆ
ಒಂದು
ಒಳ್ಳೆಯ ಪೊರಕೆ !
ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು. ಈ ಪುಟ್ಟ ಪದ್ಯದಲ್ಲಿ ಎಷ್ಟೊಂದು ಅರ್ಥ ತುಂಬಿದೆಯೆಲ್ಲವೇ ಸಖೀ?
ಇಂದು ದೇಶದ ತುಂಬೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ, ಜಾತೀಯತೆ, ಸ್ವಾರ್ಥ ರಾಜಕಾರಣ, ಅನಕ್ಷರತೆ, ಮೌಢ್ಯ, ಪರಸ್ಪರ ಕಚ್ಚಾಟ…. ಇತ್ಯಾದಿ ಏನೆಲ್ಲಾ ಕಸಗಳು ತುಂಬಿ ಹೋಗಿವೆ. ಇವಗಳ ಜೊತೆಗಿದ್ದು ನಾವೂ ಇದರಲ್ಲಿ ಒಂದಾಗಿ ಹೋಗಿದ್ದೇವೆ. ದೇಶದ ಪರಿಸ್ಥಿತಿಯ ಬಗೆಗೆ ಆಗೀಗ ಗೊಣಗುಟ್ಟಿಕೊಂಡರೂ ‘ನಮ್ಮೊಬ್ಬರಿಂದ ಏನು ಸಾಧ್ಯ’ ಎಂದು ಸಮಜಾಯಿಷಿ ಮಾಡಿಕೊಂಡು ಬಿಡುತ್ತೇವೆ. ‘ದೇಶದ ಕುರಿತು ನನಗೇನು’ ಎಂದು ಜನ ನಿರ್ಲಕ್ಷ ತೋರಲಾರಂಭಿಸಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುತ್ತಾನೆ ರೂಸೋ.
ಈ ಕಸವನ್ನು ಗುಡಿಸಲು ಎಲ್ಲಿಂದಲಾದರೂ ಯಾರಾದರೂ ಪ್ರಾರಂಭಿಸಲೇ ಬೇಕಲ್ಲವೇ? ಅದಕ್ಕೆ ಬೇಕಿರುವುದು ಒಂದು ಒಳ್ಳೆಯ ಪೊರಕೆ ಎಂದಿದ್ದಾರೆ ಕವಿ. ಹಾಗಾದರೆ ಆ ಪೊರಕೆ ಯಾವುದು? ನನಗನ್ನಿಸುವುದು ಬಹುಶಃ ‘ಜಾಗೃತಿ’ ಎಂಬ ಪೊರಕೆಯೇ ಇದಕ್ಕೆ ಉತ್ತರ. ಜಾಗೃತಿ ಎಂಬ ಪೊರಕೆಗೆ ಶಿಕ್ಷಣ, ದೇಶಪ್ರೇಮ, ವೈಚಾರಿಕ ಪ್ರಜ್ಞೆ ನಿಸ್ವಾರ್ಥತೆ, ವಿವೇಚನೆ, ನಂಬಿಕೆ, ಶ್ರದ್ಧೆ, ಆತ್ಮಸ್ಥೈರ್ಯ….. ಇತ್ಯಾದಿ ಪೊರಕೆ ಕಡ್ಡಿಗಳೇ ಬಲ! ಇಂತಹ ನೂರಾರು ಕಡ್ಡಿಗಳು ಸೇರಿ ತಾನೆ ‘ಜಾಗೃತಿ’ ಎಂಬ ಒಂದು ಪೊರಕೆಯಾಗುವುದು?
ನಿಜಕ್ಕೂ ನಾವು ಈಗ ಮಾಡಬೇಕಿರುವುದು ಇಂತಹ ಪೊರಕೆ ಕಡ್ಡಿಗಳ ಸೃಷ್ಟಿ. ಇದು ಸುಲಭವೂ ಅಲ್ಲ. ಅಸಾಧ್ಯವೂ ಅಲ್ಲ! ಮಾನವ ಮನಸ್ಸು ಮಾಡಿದರೆ ಯಾವುದು ತಾನೇ ಸಾಧ್ಯವಿಲ್ಲ? ಎಲ್ಲಕ್ಕೂ ಮುಖ್ಯವಾಗಿ ಮನಸ್ಸು ಮಾಡಬೇಕಷ್ಟೇ! ದಿಟ್ಟ ಮನಸ್ಸಿನಿಂದ ಪುಟ್ಟ ಹೆಜ್ಜೆ ಇಡುತ್ತಲೇ ಇಂತಹ ಪೊರಕೆ ಕಡ್ಡಿಗಳನ್ನು ಸೃಷ್ಟಿಸಿದರೆ ಪೊರಕೆ ತಾನಾಗಿ ಎಲ್ಲ ಕಡೆಯಿಂದಲೂ ಏಳುತ್ತದೆ. ತಾನೇ ಕಸಗುಡಿಸುತ್ತದೆ. ಸ್ವಚ್ಚ ಮಾಡುತ್ತದೆ. ಇಂತಹ ಒಂದು ಒಳ್ಳೆಯ ಪೊರಕೆಗಾಗಿ ಒಂದು ಪೊರಕೆ ಕಡ್ಡಿಯನ್ನಾದರೂ ಸೃಷ್ಟಿಸುವುವಕ್ಕೆ ನಾವು ಪ್ರಯತ್ನಿಸಿದರೆ ಅದಕ್ಕಿಂತಾ ಒಳ್ಳೆಯ ಕೆಲಸ ಇನ್ನಾವುದಿದೆ? ಅಲ್ಲವೇ ಸಖಿ?
*****