ಆಸೆ ಗೂಡಿನ ಹಕ್ಕಿ
ಆಗಸದಿ ಬೆಳಕ ನೋಡಿ
ಸಂತಸದಿ ತೇಲುತ್ತಾ ಮನದಿ
ಚಿಂವ್… ಎಂದು ಹಾರಿತು
ಆಗಸಕೆ ರೆಕ್ಕೆ ಪುಕ್ಕ ಬಿಚ್ಚಿ
ದಿನದ ಆಹಾರ ಅರಸುತ
ಕಾಡು ಮೇಡಲಿ ಅಲೆಯುತ
ದೂರದಿ ಹಾರಿ ಹೊಟ್ಟೆ ಹೊರೆದು
ಬೆಳಕು ಮಂಕಾಗುವ ಹೊತ್ತು
ಮರಳಿ ಸೇರಿತು ಗೂಡಿಗೆ
ಸಂಗಾತಿಯು ಜೊತೆಯಾಗಿರೆ
ಸಂಸಾರದ ಹೊನಲು
ಮರಿಗಳ ಮಾಡಿ ಬೆಳೆಸುವ ಒಲವು
ಒಂದೊಂದೇ ಹುಲ್ಲು ಹೆಕ್ಕಿ ತಂದು
ವಿಸ್ಮಯ ಗೂಡು ಕಟ್ಟುವ ಮೋಡಿಯು..
ಮೊಟ್ಟೆ ಇಟ್ಟು ಮರಿಯ ಮಾಡಿ
ಬೆಳೆಸುವವು ಜೊತೆಗೂಡಿ
ಅಲ್ಲಿ ಇಲ್ಲಿ ಅಲೆದು ಕೊಕ್ಕಿನಲಿ
ಮರಿಗಳಾಗಿ ಆಹಾರ ತಂದು
ಗುಟುಕು ನೀಡುವ ಆನಂದವು
ಆಗಸದಿ ಹಾರುವ ಹಕ್ಕಿಗೆ
ಬಣ್ಣವ ಬಳಿದು ರಸ್ತೆಯ
ನಿರ್ಮಿಸಿದವರಾರು
ಅದೆಷ್ಟೋ ದೂರ ಹಾರಿದರೂ
ಮನೆಯ ದಾರಿ ಮರೆಯದೆಂದೂ
ಬುದ್ಧಿ ಇರದ ಜೀವಿ ಅದೆಂದು
ಜಂಭ ಪಡುವ ನಾವುಗಳೆ
ಅರಿಯ ಬೇಕಿದೆ ಹಕ್ಕಿಗಳ ಬಾಳನ್ನು ನೋಡಿ
ನಾವು ಎಷ್ಟು ಬುದ್ಧಿವಂತರೆಂದು
*****