ತಿರುಪ್ಪಾವೈ – ಆಂಡಾಳ್ ದೇವಿಯ ದಿವ್ಯಚರಿತ್ರೆ

ತಿರುಪ್ಪಾವೈ – ಆಂಡಾಳ್ ದೇವಿಯ ದಿವ್ಯಚರಿತ್ರೆ

ಸಂಪದ್ಭರಿತವಾದ ಪಾಂಡ್ಯ ದೇಶದ ಶ್ರೀವಿಲ್ಲಿ ಪುತ್ತೂರಿನಲ್ಲಿ ಶ್ರೀಮಹಾವಿಷ್ಣುವು ವಟಪತ್ರಶಾಯಿ ಎಂಬ ಹೆಸರಿನಿಂದ ನೆಲೆಸಿ ಭಕ್ತಾದಿಗಳಿಗೆ ದರ್ಶನವೀಯುತ್ತಿದ್ದನು. ಆ ಊರಿನ ಭಕ್ತರಲ್ಲಿ ಮುಖ್ಯರಾದವರು ಶ್ರೀವಿಷ್ಣುಚಿತ್ತರು. ಇವರು ವಯೋವೃದ್ಧರೂ, ಜ್ಞಾನವೃದ್ಧರೂ, ಭಕ್ತಶ್ರೇಷ್ಠರೂ ಆದ್ದರಿಂದ ಇವರನ್ನು ಎಲ್ಲರೂ ಪೆರಿಯಾಳವಾರ್ ಎಂದು ಕರೆಯುತ್ತಿದ್ದರು. ಪೆರಿಯಾಳವಾರರು ಪರಮಭಕ್ತಿಯಿಂದ ಪ್ರತಿದಿನ ತುಳಸಿವನಕ್ಕೆ ಹೋಗಿ ಭಗವಂತನಿಗಾಗಿ ತುಳಸಿ ದಳಗಳನ್ನೂ ಪುಷ್ಪಗಳನ್ನೂ ಸಂಗ್ರಹಿಸಿ ಸುಂದರವಾದ ಮಾಲೆಗಳನ್ನು ಕಟ್ಟಿ ಪರಮಾತ್ಮನಾದ ವಟಪತ್ರಶಾಯಿಗೆ ಅರ್ಪಿಸಿ ತಮ್ಮ ಬಾಳನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದರು.

ಒಂದು ದಿನ, ಈ ರೀತಿ ಪುಷ್ಪಗಳನ್ನು ಸಂಗ್ರಹಿಸಲು ತುಳಸೀವನಕ್ಕೆ ಹೋದ ವಿಷ್ಣುಚಿತ್ತರಿಗೆ ಒಂದು ಆಶ್ಚರ್ಯವು ಕಾದಿತ್ತು. ಒಂದು ದೊಡ್ಡ ತುಳಸೀಗಿಡದ ಕೆಳಗೆ ವಿಶೇಷ ಕಾಂತಿಯಿಂದ ಹೊಳೆಯುತ್ತಿರುವ ಒಂದು ಸುಂದರವಾದ ಹೆಣ್ಣು ಮಗು ಗೋಚರಿಸಿತು! ಮಕ್ಕಳಿಲ್ಲದ ವಿಷ್ಣುಚಿತ್ತರಿಗೆ ಆ ಮಗುವನ್ನು ಕಂಡು ಅತ್ಯಾನಂದವಾಯಿತು. ತಮ್ಮ ಸೇವೆಗೆ ಮೆಚ್ಚಿ ಭಗವಂತನೇ ತಮಗೆ ಈ ಶಿಶುವನ್ನು ಕರುಣಿಸಿದನೆಂದು ಅತ್ಯಂತ ಸಂತೋಷದಿಂದ ಮಗುವನ್ನು ಮೃದುವಾಗಿ ಎತ್ತಿಕೊಂಡು ವಟಪತ್ರಶಾಯಿಯ ದೇವಾಲಯಕ್ಕೆ ಬಂದರು. ಕರುಣಾಮಯನಾದ ಭಗವಂತನು ತಮಗೆ ದಯಪಾಲಿಸಿದ ಈ ಅಪೂರ್ವ ವರಕ್ಕಾಗಿ ದೇವನನ್ನು ಪರಿಪರಿಯಾಗಿ ಸ್ತುತಿಸುತ್ತಿದ್ದರು. ಭೂಮಿಯಲ್ಲಿ ದೊರೆತದ್ದರಿಂದ ಮಗುವಿಗೆ ‘ಗೋದಾ’ ಎಂದು ಹೆಸರಿಟ್ಟು ಅತ್ಯಂತ ಪ್ರೀತ್ಯಾದರಗಳಿಂದ ಮಗುವನ್ನು ಸಾಕುತ್ತಿದ್ದರು.

ಗೋದೆಯು ದಿನದಿನಕ್ಕೆ ವೃದ್ಧಿಗೊಳ್ಳುವ ಚಂದ್ರನಂತೆ ಬೆಳೆಯುತ್ತಾ, ಸದಾ ಭಗವಂತನ ನಾಮಸ್ಮರಣೆ ಮಾಡುತ್ತಾ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತಿದ್ದಳು. ದೊಡ್ಡವಳಾಗುತ್ತಿದ್ದಂತೆ ಗೋದೆಗೆ ತಾನು ಭಗವಂತನ ಸೇವೆಗಾಗಿ ಹುಟ್ಟಿದವಳು, ತಾನು ಪರಮಾತ್ಮನನ್ನೇ ವರಿಸುವುದು. ತನ್ನ ಅನನ್ಯ ಭಕ್ತಿಯಿಂದ ಕರುಣಾಮಯನಾದ ದೇವನನ್ನು ಒಲಿಸಿ ತನ್ನ ಪತಿಯಾಗಿಸಿಕೊಳ್ಳಬೇಕೆಂಬ ಆಸೆ ಬಲವಾಯಿತು.

ಗೋದಾದೇವಿಗೆ ಭಗವಂತನ ಮೇಲಿನ ಭಕ್ತಿ ಅತಿಯಾಗಿ ಒಮ್ಮೆ ತಂದೆಯವರು ದೇವರಿಗಾಗಿ ಕಟ್ಟಿಟ್ಟ ಹೂಮಾಲೆಗಳನ್ನು ತಾನೇ ಧರಿಸಿ ನಿಲುವುಗನ್ನಡಿಯಲ್ಲಿ ತನ್ನ ಸುಂದರ ರೂಪವನ್ನು ತಾನೇ ನೋಡಿಕೊಂಡು ರೋಮಾಂಚನಗೊಂಡಳು. ತಾನು ಭಗವಂತನಿಗೆ ಅನುರೂಪಳೇ ಎಂದು ತಲ್ಲೀನಳಾಗಿ ಪ್ರತಿಬಿಂಬವನ್ನು ನೋಡತೊಡಗಿದಳು. ನಂತರ, ಯಾರಾದರೂ ತನ್ನನ್ನು ಈ ರೂಪದಲ್ಲಿ ನೋಡಿಬಿಟ್ಟಾರೆಂಬ ಗಾಬರಿಯಿಂದ ಆ ಹೂಮಾಲೆಗಳನ್ನು ತೆಗೆದು ಜೋಪಾನವಾಗಿ ಬುಟ್ಟಿಯಲ್ಲಿಟ್ಟುಬಿಟ್ಟಳು. ಸ್ವಲ್ಪ ಸಮಯದ ನಂತರ ವಿಷ್ಣುಚಿತ್ತರು ಬಂದು ಆ ಹೂಮಾಲೆಗಳನ್ನು ತೆಗೆದುಕೊಂಡು ಹೋಗಿ ದೇವರಿಗೆ ಅರ್ಪಿಸಿದರು. ಆ ದಿನ ಹೂಗಳು ಎಂದಿಲ್ಲದ ಸುವಾಸನೆಯುಳ್ಳವಾಗಿಯೂ, ಪೂರ್ಣ ವಿಕಸಿತವಾಗಿಯೂ, ಅತ್ಯಂತ ಸುಂದರವಾಗಿಯೂ ಇದ್ದವು. ಇದೇ ರೀತಿ ಗೋದೆಯು ಪ್ರತಿದಿನ ಹೂಗಳನ್ನು ಮೊದಲು ತಾನೇ ಧರಿಸಿಕೊಂಡು ಅನಂತರ ದೇವರಿಗೆ ಕಳುಹಿಸುತ್ತಿದ್ದಳು.

ಹೀಗಿರುವಾಗ ಒಂದು ದಿನ ಆಂಡಾಳ್ ಪುಷ್ಪಮಾಲಿಕೆಗಳನ್ನು ಧರಿಸಿ, ನಿಲುವುಗನ್ನಡಿಯ ಮುಂದೆ ನಿಂತು ಆನಂದಪರವಶಳಾಗಿದ್ದಾಗ ಆಕಸ್ಮಿಕವಾಗಿ ತಂದೆ ವಿಷ್ಣುಚಿತ್ತರು ಅಲ್ಲಿಗೆ ಬಂದರು. ತಾವು ಭಕ್ತಿಯಿಂದ ದೇವರಿಗಾಗಿ ತಯಾರಿಸಿದ ಮಾಲೆಗಳನ್ನು ಮಗಳು, ದೇವರಿಗೆ ಅರ್ಪಿಸುವ ಮೊದಲೇ ಧರಿಸಿದ್ದಾಳೆ! ಪರಮ ಭಕ್ತರೂ, ಆಚಾರವಂತರೂ, ಮುಗ್ಧರೂ ಆದ ವಿಷ್ಣುಚಿತ್ತರಿಗೆ ಮಗಳ ಈ ವರ್ತನೆ ನುಂಗಲಾಗದ ತುತ್ತಾಯ್ತು. ಆದರೆ ಬೈಯುವ, ಕೋಪಗೊಳ್ಳುವ ಸ್ವಭಾವ ಅವರದಲ್ಲ. ಮಗಳು ಅಯೋನಿಜೆ, ದೈವಾಂಶ ಸಂಭೂತಳು ಎಂಬುದನ್ನು ಬಲ್ಲವರು. ಆದ್ದರಿಂದ ಮೃದುವಾಗಿ ಹೇಳಿದರು. “ಮಗೂ, ದೇವರಿಗೆ ಹೂಗಳನ್ನು ಸಮರ್ಪಿಸಿ, ನಂತರ ಪ್ರಸಾದವೆಂದು ಅದನ್ನು ಮನುಷ್ಯರು ಧರಿಸುವುದು ಸನಾತನ ಧರ್ಮ. ಆದರೆ ದೇವರಿಗೆ ಅರ್ಪಿಸುವ ಮುಂಚೆಯೇ ಧರಿಸುವುದು ಸರಿಯೇ? ಎಲ್ಲವನ್ನೂ ತಿಳಿದ ನಿನಗೆ ನಾನೇನು ಹೇಳಬೇಕು” ಎಂದು ಹೇಳಿ ಸುಮ್ಮನೆ ಹೊರಟುಹೋದರು. ಆದರೆ ಗೋದಾದೇವಿಗೆ ತಾನು ಮಾಡುತ್ತಿರುವ ಕೆಲಸ ತಪ್ಪೆಂದು ಅನಿಸಿರಲೇ ಇಲ್ಲ. ಆದರೂ ಮೌನವಾಗಿ ಹೂಮಾಲೆಗಳನ್ನು ತೆಗೆದಿಟ್ಟುಬಿಟ್ಟಳು.

ತಂದೆ ವಿಷ್ಣುಚಿತ್ತರು ಹೂದೋಟಕ್ಕೆ ಹೋಗಿ ಹೊಸ ಹೂಗಳನ್ನು ಸಂಗ್ರಹಿಸಿ ಮಾಲೆಗಳನ್ನು ಕಟ್ಟಿ ದೇವಾಲಯಕ್ಕೆ ಕೊಂಡೊಯ್ದು ಸಮರ್ಪಿಸಿದರು. ತಡವಾಗಿ ತಂದುದಕ್ಕಾಗಿ ಪರಿಪರಿಯಾಗಿ ಕ್ಷಮೆಯಾಚಿಸಿದರು. ಆ ಮಾಲೆಗಳನ್ನು ಕಂಡ ಅರ್ಚಕರು ವಿಷ್ಣುಚಿತ್ತರನ್ನು ಕುರಿತು “ಸ್ವಾಮಿ, ತಾವು ಇತ್ತೀಚಿನ ದಿನಗಳಲ್ಲಿ ತರುತ್ತಿದ್ದ ಮಾಲೆಗಳು ವಿಶೇಷವಾದ ಸುವಾಸನೆಯಿಂದ ಕೂಡಿದ್ದವು, ಆದರೆ ಈ ದಿನ ಏಕೆ ಹಾಗಿಲ್ಲ?” ಎಂದರು. ವಿಷ್ಣುಚಿತ್ತರಿಗೆ ಏನೂ ಹೇಳಲು ತಿಳಿಯಲಿಲ್ಲ. ಮೌನವಾಗಿ ಹಿಂತಿರುಗಿದರು. ಆ ದಿನ ಅವರಿಗೆ ಸ್ವಪ್ನದಲ್ಲಿ ಪರಮಾತ್ಮ ವಟಪತ್ರಶಾಯಿಯು ಕಾಣಿಸಿಕೊಂಡು, “ಭಕ್ತಶ್ರೇಷ್ಠರೇ, ತಮ್ಮ ಮಗಳು ಧರಿಸಿ ಕೊಟ್ಟ ಹೂಗಳೇ ನಮಗೆ ಪ್ರಿಯವಾದುವು. ಇನ್ನು ಮೇಲೆ ಅವನ್ನೇ ತಂದುಕೊಡಿ” ಎಂದು ಹೇಳಿ ಅಂತರ್ಧಾನನಾದನು. ಎಚ್ಚರಗೊಂಡ ವಿಷ್ಣುಚಿತ್ತರಿಗೆ ಪರಮಾನಂದವಾಯಿತು. ಮರುದಿನ ತಮ್ಮ ಕನಸಿನ ವಿಷಯವನ್ನು ಮಗಳಿಗೆ ಹೇಳಿ, ಇನ್ನು ಮುಂದೆ ಹೊಸ ಹೂಮಾಲೆ ಮೊದಲು ತಾನೇ ಧರಿಸಿ ನಂತರ ದೇವರಿಗೆ ಕೊಡುವಂತೆ ಹೇಳಿದರು. ಇದರಿಂದ ಆಂಡಾಳದೇವಿಗೆ, ತನ್ನ ಭಕ್ತಿಗೆ ದೇವನು ಮೆಚ್ಚಿ ತನಗೆ ಒಲಿದನೆಂಬ ಸತ್ಯವು ಮನದಟ್ಟಾಗಿ ಅತ್ಯಾನಂದವಾಯಿತು. ಅದೇ ರಾತ್ರಿ ದೇವಾಲಯದ ಅರ್ಚಕರ ಕನಸಿನಲ್ಲಿಯೂ ವಟಪತ್ರಶಾಲಿಯು ಕಾಣಿಸಿಕೊಂಡು ಆಂಡಾಳ್ ಮೊದಲು ಧರಿಸಿ, ಅನಂತರ ಕೊಟ್ಟ ಹೂಮಾಲೆಗಳೇ ತನಗೆ ಇಷ್ಟವೆಂದು ಹೇಳಿದನು. ಈ ಘಟನೆಯಿಂದಾಗಿ ಆಂಡಾಳದೇವಿಯ ಮಹಿಮೆ ಎಲ್ಲೆಡೆಯೂ ಹರಡತೊಡಗಿತು.

ದೇವರ ಕೈಂಕರ್ಯದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದ ವಿಷ್ಣುಚಿತ್ತರಿಗೆ ಹೊಸದೊಂದು ಚಿಂತೆ ಆರಂಭವಾಯಿತು. ಆಂಡಾಳ್ ಪ್ರಾಪ್ತ ವಯಸ್ಕಳಾಗಿದ್ದಾಳೆ. ಆಕೆಗೊಬ್ಬ ಅನುರೂಪನಾದ ವರನನ್ನು ಹುಡುಕಿ ವಿವಾಹ ಮಾಡಬೇಕು. ಆದರೆ ದೇವಾಂಶ ಸಂಭೂತಳಾದ ಈ ಕುವರಿಗೆ ಈ ವಿಷಯದಲ್ಲಿ ಏನು ಅಭಿಪ್ರಾಯವಿದೆಯೋ ತಿಳಿಯಬೇಕೆಂದು ಸಮಯ ನೋಡಿ ಆಕೆಯನ್ನೇ ಕೇಳಿದರು. ಆಂಡಾಳ್, “ಮಾನವನೊಬ್ಬನ ಸತಿ ನಾನಾಗಲಾರೆ, ನಾನು ವರಿಸುವುದು ಶ್ರೀರಂಗದ ರಂಗನಾಥನನ್ನೇ” ಎಂದು ಸ್ಪಷ್ಟವಾಗಿ ತಿಳಿಸಿಬಿಟ್ಟಳು! ಇದನ್ನು ಕೇಳಿದ ವಿಷ್ಣುಚಿತ್ತರು ತೀವ್ರವಾದ ಚಿಂತೆಗೊಳಗಾದರು. ಮಾನವ ಮಾತ್ರರಾದ ತಾವು ಸರ್ವತಂತ್ರ ಸ್ವತಂತ್ರನಾದ ಭಗವಂತನನ್ನು ಅಳಿಯನನ್ನಾಗಿ ಮಾಡಿಕೊಳ್ಳುವುದು ಸಾಧ್ಯವೇ? ಇದೇ ವಿಷಯವನ್ನು ಯೋಚಿಸುತ್ತಾ ನಿದ್ರೆ ಮಾಡಿದ ವಿಷ್ಣುಚಿತ್ತರ ಕನಸಿನಲ್ಲಿ ಶ್ರೀರಂಗನಾಥನು ಕಾಣಿಸಿಕೊಂಡು, ತಾನು ಗೋದಾದೇವಿಯನ್ನು ವಿವಾಹವಾಗಲು ಸಿದ್ಧನೆಂದೂ, ಪಾಂಡ್ಯ ದೇಶದ ರಾಜ ವಲ್ಲಭದೇವನ ಸಹಾಯದಿಂದ ತಾವು ಮಗಳನ್ನು ಕರೆದುಕೊಂಡು ಶ್ರೀರಂಗಕ್ಕೆ ಬರಬೇಕೆಂದು ತಿಳಿಸಿದನು. ಕನಸಿನಿಂದ ಎಚ್ಚೆತ್ತ ವಿಷ್ಣುಚಿತ್ತರು ಅತ್ಯಂತ ಹರ್ಷಚಿತ್ತರಾಗಿ, ಈ ಶುಭಸಮಾಚಾರವನ್ನು ಮಗಳಿಗೆ ತಿಳಿಸಿ, ಮುಂದಿನ ಏರ್ಪಾಟುಗಳನ್ನು ಮಾಡಲು ಪಾಂಡ್ಯರಾಜ ವಲ್ಲಭದೇವನನ್ನು ಕಾಣಲು ಹೊರಟರು. ವಿಷಯ ತಿಳಿದ ರಾಜನು, ತಾನು ಈ ದೈವೀ ವಿವಾಹದಲ್ಲಿ ಪಾಲ್ಗೊಳ್ಳುವುದು ತನ್ನ ಪೂರ್ವಜನ್ಮಗಳ ಪುಣ್ಯವೆಂದು ತಿಳಿದು ಶ್ರೀವಿಲ್ಲಿ ಪುತ್ತೂರಿನಿಂದ ಶ್ರೀರಂಗದವರೆಗೆ ಚಪ್ಪರವನ್ನು ಹಾಕಿಸಿ, ತಳಿರು ತೋರಣಗಳಿಂದ ಅಲಂಕರಿಸಿದನು.

ರತ್ನ ಖಚಿತವಾದ ಬಂಗಾರದ ಪಲ್ಲಕ್ಕಿಯಲ್ಲಿ ಗೋದಾದೇವಿಯನ್ನು ಕೂರಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಶ್ರೀರಂಗಕ್ಕೆ ಕರೆತರಲಾಯಿತು. ಆ ಸಮಯದಲ್ಲೊಂದು ಘಟನೆ ನಡೆಯಿತು. ಶ್ರೀರಂಗವನ್ನು ಪ್ರವೇಶಿಸುತ್ತಿದ್ದಂತೆಯೇ ಪಲ್ಲಕ್ಕಿಯು ಭಾರವಿಲ್ಲದಂತಾಯಿತು! ಗಾಬರಿಗೊಂಡ ಭಟರು ಈ ವಿಷಯವನ್ನು ರಾಜನಿಗೆ ತಿಳಿಸಿದರು. ಗೋದಾದೇವಿಯು ಪಲ್ಲಕ್ಕಿಯಿಂದ ಮಾಯವಾಗಿದ್ದಳು!

ರಾಜನ ಜತೆಗೂಡಿ ವಿಷ್ಣುಚಿತ್ತರು ಶ್ರೀರಂಗನಾಥನ ದೇವಾಲಯವನ್ನು ತಲುಪಿ, ಭಗವಂತನಲ್ಲಿ ಪರಿಪರಿಯಾಗಿ ಬೇಡತೊಡಗಿದರು. ತಾವು ಕಣ್ಣಲ್ಲಿ ಕಣ್ಣಿಟ್ಟು ಸಾಕಿಸಲಹಿದ ಮಗು ಗೋದೆಯ ವಿವಾಹ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಬೇಕೆಂದಿರುವಾಗ ಈ ರೀತಿ ದೇವಿಯು ಅಂತರ್ಧಾನಳಾದಳೆಂದು ದುಃಖಿಸತೊಡಗಿದರು. ಇವರ ಈ ದೀನ ಸ್ಥಿತಿಯನ್ನು ಕಂಡು ಕರುಣೆ ಬಂದು, ದೇವನು ಅರ್ಚಕ ಮುಖೇನ ಮಾತನಾಡಿ, ತಾವು ಮಗಳನ್ನು ಕರೆದುಕೊಂಡು ಶ್ರೀವಿಲ್ಲಿಪುತ್ತೂರಿಗೆ ಹಿಂತಿರುಗಬೇಕೆಂದೂ, ತಾನು ಅಲ್ಲಿಗೆ ಬಂದು ಗೋದೆಯನ್ನು ಮದುವೆಯಾಗುವೆನೆಂದು ತಿಳಿಸಿದನು. ಕೂಡಲೇ ಆಂಡಾಳ ತಂದೆಯ ಮುಂದೆ ಪ್ರತ್ಯಕ್ಷಳಾದಳು! ರಾಜನೊಡಗೂಡಿ ಎಲ್ಲರೂ ಈ ಚಮತ್ಕಾರವನ್ನು ನೋಡಿ ಮೂಕವಿಸ್ಮಿತರಾದರು.

ತಮ್ಮ ಅನನ್ಯ ಭಕ್ತಿಯಿಂದ ಭಗವಂತನನ್ನು ಗೆದ್ದ ಶ್ರೀಪೆರಿಯಾಳ್ವಾರರನ್ನು ರಾಜನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿ ಸನ್ಮಾನಿಸಿದನು. ಅದೇ ಸಮಯದಲ್ಲಿ ಶ್ರೀರಂಗನಾಥನು ಗರುಡಾರೂಢನಾಗಿ ಅಂತರಿಕ್ಷದಲ್ಲಿ ಕಾಣಿಸಿಕೊಂಡನು. ಆ ಅಪೂರ್ವ ದೃಶ್ಯವನ್ನು ಕಂಡ ಅಯ್ಯವಾರರು ಆನೆಗೆ ಕಟ್ಟಿದ ಗಂಟೆಯಿಂದ ತಾಳಹಾಕುತ್ತಾ “ಪಲ್ಲಾಂಡು ಪಲ್ಲಾಂಡು” ಎಂದು ಭಗವಂತನನ್ನು ಹರಸಿದರು.

ಶ್ರೀವಿಲ್ಲಿಪುತ್ತೂರಿನಲ್ಲಿ ಬಂದಿಳಿದ ಶ್ರೀರಂಗನಾಥನನ್ನು ಸಕಲ ರಾಜಮರ್ಯಾದೆಗಳಿಂದ ಬರಮಾಡಿಕೊಳ್ಳಲಾಯಿತು. ಶಾಸ್ರೋಕ್ತವಾಗಿ ಗೋದಾದೇವಿಯನ್ನು ಅಯ್ಯವಾರರು ಶ್ರೀರಂಗನಾಥನಿಗೆ ಧಾರೆ ಎರೆದುಕೊಟ್ಟರು. ಈ ಅಪೂರ್ವ ವಿವಾಹವನ್ನು ನೋಡಲು ಸಹಸ್ರಗಟ್ಟಲೆ ಜನ ಸೇರಿದ್ದರು. ತಮ್ಮೊಂದಿಗೆ ಆಡುತ್ತಾ ಬೆಳೆದ ಗೋದೆ ಈಗ ದೇವತೆಯಾಗಿದ್ದಳು. ದೇವಾಧಿದೇವತೆಗಳೆಲ್ಲರೂ ಹೂಮಳೆಗರೆದರು. ಈ ವಿವಾಹದಲ್ಲಿ ಪಾಲ್ಗೊಂಡ ಸಕಲರೂ ಧನ್ಯರಾದರು. ಶ್ರೀರಂಗನಾಥನು ಆಂಡಾಳ್ ದೇವಿಯನ್ನು ಕರೆದುಕೊಂಡು ಶ್ರೀರಂಗಕ್ಕೆ ಹೊರಟನು. ಮಗಳನ್ನು ಅಗಲಬೇಕೆಂದು ದುಃಖಿಸುತ್ತಾ ನಿಂತ ಆಳ್ವಾರರನ್ನು ಕಂಡು ರಂಗನಾಥನು “ಮಾವಂದಿರೇ, ಭಕ್ತಶ್ರೇಷ್ಠರಾದ ನೀವು ಈ ರೀತಿ ದುಃಖಿಸುವುದು ತರವಲ್ಲ. ಇದೇ ಶ್ರೀವಿಲ್ಲಿಸುತ್ತೂರಿನಲ್ಲಿ ನೀವು ಒಂದು ದೇವಾಲಯವನ್ನು ನಿರ್ಮಿಸಿ ನಮ್ಮನ್ನೂ, ಗೋದೆಯನ್ನೂ ಗರುಡನನ್ನೂ ಒಂದೇ ಪೀಠದಲ್ಲಿ ಸ್ಥಾಪಿಸಿ ಆರಾಧಿಸುತ್ತಿರಿ” ಎಂದು ಹೇಳಿ ಶ್ರೀರಂಗಕ್ಕೆ ಹೊರಟನು.

ದೈವಾಜ್ಞೆಯಂತೆ ಅದೇ ರೀತಿ ದೇವಾಲಯವನ್ನು ಕಟ್ಟಿ ಬಹುಕಾಲ ಕೈಂಕರ್ಯ ಮಾಡುತ್ತಿದ್ದು ಕೊನೆಗೊಂದು ದಿನ ಭಗವಂತನ ನಾಮವನ್ನು ಸ್ಮರಿಸುತ್ತಾ ಪರಮಪದವನ್ನು ಸೇರಿದರು. ಈ ಕಥೆಯನ್ನು ಓದಿದ ತಮ್ಮೆಲ್ಲರಿಗೂ ಭಗವಂತನು ಸಮಸ್ತ ಸನ್ಮಂಗಳವನ್ನುಂಟುಮಾಡಲಿ.
*****

One thought on “0

  1. ಅನಂತ ಧನ್ಯವಾದಗಳು 🙏🙏. ಗೋದಾ ದೇವಿಯ ದಿವ್ಯ ಭಕ್ತಿಯು ನಮ್ಮಲ್ಲೂ ಕೂಡ ಉಂಟಾಗಲಿ ಎಂದು ಬೇಡಿಕೊಳ್ಳುತ್ತೇವೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋಗ್ತೀರಾ?
Next post ಕೀರ್ತನೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…