ಸೀರೆ ಸೆರಗ ತಾಗಿದ ಗಾಳಿ
ಪ್ರೇಮದ ನವಿರು ಹೊತ್ತುತಂತು
ಆಡಿದ ಆಡದೇ ಉಳಿದ ಮಾತು
ಮೌನಗಳ ಸಂಕಲನ ಮೋಡಗಳಲ್ಲಿ
ಚಿತ್ರ ಬಿಡಿಸಿತು
ನೀನಿಡುವ ಪ್ರತಿ ಹೆಜ್ಜೆಯಲಿ
ಕನಸು ಇಣುಕುತ್ತಿದೆ ಗೆಳತಿ
ಮನಸುಗಳ ಅಗಣಿತ ತರಂಗಗಳು
ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?
***
ನಿನ್ನ ದನಿ ಕೇಳದ ಭೂಮಿಗೆ
ಆಕಳಿಕೆ ಸಮಯ
ಅದಕ್ಕೆ ಮಗ್ಗಲು ಬದಲಿಸುತ್ತಿದೆ
ಮುಗಿಲಿಗೆ ದಿಗಿಲು ಬಡಿದಿದೆ
ಎಲ್ಲಿ ಹೋದೆ ?
ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ
***
ನಾನು ಸುಳಿದಾಡುವೆ
ಒಬ್ಬಳೇ ಇರುವೆ ಎಂದು ಭಾವಿಸಬೇಡ
ಸುಳಿಯುವ ಗಾಳಿಯಲ್ಲಿ
ಎರಡು ನಿಟ್ಟುಸಿರುಗಳಿವೆ
ಅವು ಪ್ರೇಮದ ಪಲ್ಲವಿಗಳಾಗಿ
ಬದಲಾಗಿ ಬಿಡಲಿ
ಕಣ್ಣಲ್ಲಿ ನಕ್ಷತ್ರಗಳು ಹಾಡಲಿ
ಕಾಲ್ಗೆಜ್ಜೆಗಳಲ್ಲಿ
ಏಳು ಸುತ್ತಿನ ಮಲ್ಲಿಗೆ ಅರಳಲಿ
****
ರುತುಗಳಿಗೆ ತಕ್ಕಂತೆ
ಬಣ್ಣ ರೂಪ ಪಡೆಯುವ ಭೂಮಿ
ಮನಸ್ಸಿನ ಏರಿಳಿತಕ್ಕೆ ತಕ್ಕಂತೆ
ಬಣ್ಣಗಳ ಸೀರೆ ತೊಡುವ ಆಕೆ
ಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆ
ನಿಬ್ಬೆರಗಾಗುವುದು ಮಾತ್ರ ………
****
ನೀನು ನಡೆದರೆ
ಭೂಮಿ ಪಿಸುಗುಡುತ್ತದೆ
ಮಣ್ಣ ಕಣ ಕಣವೂ
ಜೀವಸೆಲೆಯಿಂದ ಪುಟಿದೇಳುತ್ತದೆ
ದಾರಿ ಪಕ್ಕದ ಗಿಡ ಮರಗಳು
ಕಣ್ಣು ಮಿಟುಕಿಸುತ್ತವೆ
ಮುಂಗುರುಳ ಲಾಸ್ಯಕ್ಕೆ
ಗಾಳಿ ರೋಮಾಂಚನಗೊಳ್ಳುತ್ತದೆ
*****