ಸಾಮಾನ್ಯವಾಗಿ ಹೊರಗಡೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ತಿರುಗಾಡುವಾಗ ಪುಂಡಪೋಕರಿಗಳ ಭಯ, ಕಳ್ಳಕಾಕರಭಯ ಇದ್ದೇ ಇರುತ್ತದೆ. ಸ್ವತಂತ್ರ ದೇಶದಲ್ಲಿ ಅತಂತ್ರವಾದ ಈ ಅಬಲೆಯರ ಸ್ಥಿತಿಯನ್ನು ಕಂಡೇ ಅನೇಕ ಕಡೆ ಕರಾಟೆ, ಕುಂಗಫೂಗಳನ್ನು ಕಲಿಸಿ ಇವರಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಳ್ಳಲಾಯಿತು. ಒಂದಕ್ಕಿಂತಲೂ ಹೆಚ್ಚು ಅಪಾಯಕಾರಿ ಜನ ಒಂಟಿ ಮಹಿಳೆಯ ಮೇಲೆ ಆಕ್ರಮಣ ಮಾಡಿದಾಗ ತನ್ನನ್ನು ರಕ್ಷಿಸಿಕೊಳ್ಳಲು ಒಂದು ಹೊಸ ಅಸ್ತ್ರವನ್ನು ನಮ್ಮ ಬೆಂಗಳೂರಿನವರೇ ಆದ ರಾಣಾಸಿಂಗ್ ಎಂಬುವವರು ಕಂಡು ಹಿಡಿದರು. ತಮ್ಮ ‘ಆಕ್ಸ್‌ಗ್ಲೋಮ್ ’, ಸಂಸ್ಥೆಯಿಂದ ಇಂಥಹ ಅಸ್ತ್ರಗಳು ಈಗಾಗಲೇ ಅಸಂಖ್ಯವಾಗಿ ಸೃಷ್ಟಿಯಾಗುತ್ತವೆ. ಈಗಾಗಲೇ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಪ್ರತಿ ಪೋಲಿಸರ ಕೈಯಲ್ಲಿ ಕಳ್ಳರನ್ನು, ವಂಚಕರನ್ನು ಏಕಾಂಗಿಯಾಗಿ ಸದೆಬಡಿಯಲು ಇಂಥಹ ಅಸ್ತ್ರಗಳಿರುತ್ತವೆ. ಇದು ಸೊಂಟಕ್ಕೆ ಸಿಕ್ಕಿಸಿಕೊಳ್ಳಬಹುದಾದಷ್ಟು ಸಣ್ಣದಾದ ಡಬ್ಬಿ, ಕೈಯಲ್ಲಿ ಸುಲಭವಾಗಿ ಹಿಡಿದುಕೊಳ್ಳಬಹುದಾದ ಅಸ್ತ್ರ ಇದಾಗಿದೆ. ಇದನ್ನು ಬಳೆಸಲು ಕಾನೂನು ಸಮ್ಮತಿಯನ್ನು ಕೂಡ ಪಡೆಯಲಾಗಿದೆ. ಹೆಚ್ಚಾಗಿ ಒಂಟಿ ಮಹಿಳೆಯರು, ಕಾಲೇಜು ಹುಡುಗಿಯರಿಗಾಗಿ ಇದನ್ನು ರೂಪಿಸಲಾಗಿದೆ. ಇಂಥಹ ವೈಶಿಷ್ಟ್ಯ ಪೂರ್ಣವಾದ ಅಸ್ತ್ರದ ಹೆಸರು ‘ಕೊಬ್ರಾ’ ಹಾಗಾದರೆ ಈ ಕೊಬ್ರಾದಲ್ಲಿ ಏನಿದೆ? ಇದೊಂದು ಸಣ್ಣಡಬ್ಬಿಯಾಗಿದ್ದು ಖಾರದಪುಡಿಯನ್ನು ಎರಚುವ (ಸ್ಪ್ರೇ ಮಾಡುವ) ಅಸ್ತ್ರ.
ಖಾರದ ಮೆಣಸಿನ ಕಾಯಿಗಾಗಿ ಪ್ರಸಿದ್ಧಿಯಾದ ಆಂಧ್ರಪ್ರದೇಶದಿಂದ ತರಿಸಿದ ಖಾರದಪುಡಿಯನ್ನು ಈ ಉಪಕರಣದಲ್ಲಿ ತುಂಬಲಾಗುತ್ತದೆ. ಅತಿ ಖಾರಕ್ಕೆ ಕಾರಣವಾಗಿರುವ ‘ಓಲಿಯಾರೆಸಿನ್ ಕ್ಯಾಪ್ಲಿಯನಿನ್’, ಎಂಬ ಸಾರವನ್ನು ಇದರಲ್ಲಿ ಸೇರಿಸಲಾಗಿದೆ. ಇಂಥಹ ಸಣ್ಣ ಹಿಡಿದುಕೊಳ್ಳಲು ಅನುವು ಇರುವ ಈ ಸಣ್ಣ ಡಬ್ಬಿಯನ್ನು ಸೊಂಟಕ್ಕೆ ಕಾಣದಂತೆ ಕಟ್ಟಿಕೊಳ್ಳಬಹುದು. ದುಷ್ಟರು ದಾಳಿ ನಡೆಸಿದಾಗ ಅವರ ಮೇಲೆ ಒಂದೇ ಒಂದು ಸಲ ಸ್ಪ್ರೇ ಮಾಡಿದರೆ ಸಾಕು ಆ ದುಷ್ಟರ ಕಣ್ಣುಗಳಲ್ಲಿ ವಿಪರೀತ ಉರಿವುಂಟಾಗುತ್ತದೆ. ಮೂಗು ಮುಖ ಕೂಡ ನೋವಿಗೊಳಗಾಗುತ್ತದೆ. ಆತ ತಕ್ಷಣ ಕುರುಡನಾಗುತ್ತಾನೆ. (ತಾತ್ಕಾಲಿಕವಾಗಿ) ಈ ಉರಿತ ಕನಿಷ್ಟ ಎರಡು ಗಂಟೆಗಳ ಕಾಲ ಈ ಪರಿಣಾಮ ಇರುತ್ತದೆ. ಆಗ ಆ ವ್ಯಕ್ತಿ ನಿಂತನೆಲದಲ್ಲಿಯೆ ಕುಸಿದು ಬೀಳುತ್ತಾನೆ. ಹೇಗಿದೆ ನೋಡಿದಿರಾ ಒಂಟಿ ಮಹಿಳೆಯರ ರಕ್ಷಣೆಯ ಅಸ್ತ್ರ.
*****