ಬೀದಿ ಬೀದಿಯಲ್ಲಿ ವಾಹನಗಳ ಸಂಚಾರದಿಂದಾಗಿ ಮಲಿನ ಹೊಗೆಯಿಂದಾಗಿ ಮೂಗು ಮುಚ್ಚಿಕೊಂಡು ತಿರುಗುವ ಸ್ಥಿತಿ ನಿರ್ಮಾಣವಾಗಿದೆ. ಪರಿಸರಮಾಲಿನ್ಯದಿಂದಾಗಿ ಜನ ನಿಧಾನವಿಷದಿಂದ ತತ್ತರಿಸುತ್ತಿರುವುದು ಸರ್‍ವಸಾಮಾನ್ಯ. ಅದರಲ್ಲೂ ಪೆಟ್ರೋಲ್ ಬಳಸುವುದೆಂದರೆ ದುಬಾರಿ ಬೆಲೆ ಬೇರೆ. ಇಂಥದನ್ನೆಲ್ಲ ಹೋಗಲಾಡಿಸಲೆಂದು ವಿದ್ಯುತ್ ಚಾಲಿತ ತಂತ್ರಗಳನ್ನು ತಯಾರಿಸಿದರೆ ವಿದ್ಯುತ್‌ಗೂ ಬರ. ಪದೆಪದೆ ಕೈಕೊಡುವ ವಿದ್ಯುತ್‌ನಿಂದಾಗಿ ಈ ವಿದ್ಯುತ್‌ಚಾಲಿತ ಯಂತ್ರಗಳು ಯಶಸ್ವಿಯಾಗುತ್ತಿಲ್ಲ. ಆದರೀಗ ವಿದ್ಯುತ್ ಇಲ್ಲದ ದುಬಾರಿ ಬೆಲೆಯೂ ಇಲ್ಲದ ಕೇವಲ ಸೂರ್ಯನ ಕಿರಣದಿಂದಲೇ ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುವ ಸೌರಶಕ್ತಿಯ ಸ್ಕೂಟರ್‌ಗಳು ಮುಂದೆ ಭಾರತೀಯರಿಗೆ ವರದಾನವಾಗಲಿವೆ.
ಲಂಡನ್ನಿನ ಸೌತ್‌ಬ್ಯಾಂಕ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿದ್ಯಾರ್ಥಿ ಪಾಲ್‌ಶಾಪಲ್ ಅವರು ಸೌರಶಕ್ತಿಯಿಂದ ಓಡುವ ಸ್ಕೂಟರನ್ನು ತಯಾರಿಸಿದ್ದಾರೆ. ಇಟಲಿಯ ‘ಪಿಯಾಜಿಯೊ’ ಕಂಪನಿಯ ಸಹಯೋಗದಿಂದ ಈ ಸ್ಕೂಟರ್ ತಯಾರಿಸಿರುವ ಶಾಪಲ್ ೧೯೯೬ ನೇ ಸಾಲಿನ “ಪ್ರುಡೆನ್ಸಿಯಲ್ ಬಿಸಿನೆಸ್ ಇನ್ ಪ್ರಾಕ್ಟೀಸ್” ಪ್ರಶಸ್ತಿಯನ್ನು ಸಹ ಗಳಿಸಿದ್ದಾರೆ. ಕೈಗಾರಿಕೆಗಳು ಹಾಗೂ ವಿನ್ಯಾಸಕಾರರ ಸಲಹಾ ಕೇಂದ್ರದಲ್ಲಿ ಉದ್ಯೋಗ ಬಯಸಿ ಬರುವ ಪಧವೀಧರರಾಗಿ ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಎಂಜನಿಯರಿಂಗ್ ಪ್ರಾಡಕ್ಟ್-ಡಿಜೈನ್ ಶೋ ನಲ್ಲಿ ಈ ಸೌರಶಕ್ತಿಯ ಸ್ಕೂಟರನ್ನು ಪ್ರದರ್ಶನಕ್ಕಿಡಲಾಗಿತ್ತು.
ಇದಕ್ಕೂ ಮೊದಲು ಶಾಪಲ್ ಸೌರಶಕ್ತಿಯ ಕುಕ್ಕರ್ ಅನ್ನು ವಿನ್ಯಾಸಗೊಳಿಸಿದ್ದರು. ಸ್ಪೇನ್ ಕಂಪನಿಯೊಂದರಲ್ಲಿ ಒಂದು ವರ್ಷಗಳ ಕಾಲ ಈ ಸ್ಕೂಟರ್ ನಿರ್ಮಾಣದ ಕುರಿತು (ಯೋಜನೆ) ಪೂರ್ವಸಿದ್ಧತೆ ಮತ್ತು ಪೂರ್ವ ಕೆಲಸಗಳನ್ನು ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ೧೨ ವೊಲ್ಟೇಜ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು ಸೂರ್ಯನ ಕಿರಣಗಳಿಂದ ಈ ಬ್ಯಾಟರಿಯ ಶಾಖವನ್ನು ಸಂಗ್ರಹಿಸಿ ಸ್ಕೂಟರ್ ಚಾಲು ಮಾಡಿದಾಗ ಬೇಕಿದ್ದಷ್ಟು ಬಿಡುಗಡೆ ಮಾಡುತ್ತ ಹೋಗುತ್ತದೆ ಮತ್ತು ಗಂಟೆಗೆ ೩೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ವಾಹನಗಳಿಂದ ಹೊರಬರುವ ಮಲೀನ ಹೊಗೆ ಪರಿಸರವನ್ನು ನಾಶಮಾಡುತ್ತಿರುವ ಈ ಸಂದರ್ಭದಲ್ಲಿ ಪರಿಸರವಾದಿಗಳಿಗೆ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿದ ಮಧ್ಯಮ ವರ್ಗದ ಜನಕ್ಕೆ ಇದೊಂದು ವಿಶೇಷವಾದ ಸಂತಸ ತರುವ ಸುದ್ದಿಯಾಗಿದೆ.
*****