ಮುಸ್ಸಂಜೆಯ ಮಿಂಚು – ೨೧

ಮುಸ್ಸಂಜೆಯ ಮಿಂಚು – ೨೧

ಅಧ್ಯಾಯ ೨೧ ಸೂರಜ್ ಮದುವೆ ಸಂಚು

ವೆಂಕಟೇಶ್‌ರವರು ‘ನಮ್ಮ ಮನೆಯ’ ಎಲ್ಲಾ ಜವಾಬ್ದಾರಿಯನ್ನು ಮೊಮ್ಮಗನ ಮೇಲೆ ವಹಿಸಿಬಿಟ್ಟು ‘ರಾಮ-ಕೃಷ್ಣಾ’ ಎಂದಿದ್ದುಬಿಟ್ಟಿದ್ದರು. ಸೂರಜ್ ಇಲ್ಲಿ ಬಂದಿರುವುದು ಆನೆಬಲ ಬಂದಂತಾಗಿದ್ದರೆ, ಮಗ-ಸೊಸೆಯ ದಿವ್ಯ ಮೌನ ಅವರನ್ನು ಖಿನ್ನರನ್ನಾಗಿಸಿತ್ತು. ಇನ್ನೇನು ವಿಕ್ರಮ್ ನಿವೃತ್ತಿ ಹೊಂದುತ್ತಾನೆ. ಕಾಣದ ಊರಿನಲ್ಲಿರುವ ಮಗ-ಸೊಸೆ-ಮೊಮ್ಮಗ ತಮ್ಮ ಬೇರುಗಳನ್ನು ಅರಸಿ, ಇಲ್ಲಿಯೇ ಬರುತ್ತಾರೆ. ತಮ್ಮ ಕೊನೆಯ ದಿನಗಳಲ್ಲಾದರೂ ತನ್ನವರೊಂದಿಗೆ ಇರಬಹುದೆಂದು ಕಂಡಿದ್ದ ಕನಸುಗಳೊಂದೂ ನನಸಾಗಲೇ ಇಲ್ಲ. ವಿಕ್ರಮ್ ಖಡಾಖಂಡಿತವಾಗಿ ಅಲ್ಲಿಂದ ಬರಲಾರೆನೆಂದು ತಿಳಿಸಿಬಿಟ್ಟಿದ್ದ. ಆಶ್ರಮವನ್ನು ಯಾರಿಗಾದರೂ ವಹಿಸಿಕೊಟ್ಟು ಅಪ್ಪನೇ ತನ್ನಲ್ಲಿಗೆ ಬರಬೇಕೆಂದು ವಿಕ್ರಮ್ ಆಶಿಸಿದ್ದ. ಆದರೆ ಎಲ್ಲವೂ ತಲೆಕೆಳಗಾಗಿತ್ತು. ಸೂರಜ್ ಒಬ್ಬನೇ ಹೆತ್ತವರನ್ನು ಬಿಟ್ಟು ತಾತನಲ್ಲಿಗೆ ಹೊರಟುಬಿಡುವನೆಂದು ಕನಸು-ಮನಸ್ಸಿನಲ್ಲಿಯೂ ನೆನೆಸದ ಮಗನಿಗೆ ಮೊಮ್ಮಗನ ವರ್ತನೆ ಶಾಕ್ ನೀಡಿದೆ ಎಂದು ವೆಂಕಟೇಶ್‌ರವರು ಬಲ್ಲರು.

ವಿಕ್ರಮ್‌ಗೆ ಮೊದಲಿನಿಂದಲೂ ತನ್ನದೇ ನಡೆಯಬೇಕೆಂಬ ಕೆಟ್ಟ ಹಟ, ಒಬ್ಬನೇ ಮಗನೆಂದು ಮುದ್ದಾಗಿ ಬೆಳೆಸಿದ ಪರಿಣಾಮ, ತನ್ನದೇ ಮುದ್ದು ಅತಿಯಾಗಿತ್ತು. ವಸು ಎಷ್ಟೇ ಅವನ ಹಟವನ್ನು ನಿಯಂತ್ರಿಸಲು ಯತ್ನಿಸಿದಾಗಲೆಲ್ಲ ಅದಕ್ಕೆ ಅಡ್ಡ ಬರುತ್ತಿದ್ದವನು ತಾನೇ. ಬುದ್ದಿವಂತ ವಿಕ್ರಮ್ ಬಗ್ಗೆ ತನಗೇನೋ ಹೆಮ್ಮೆ ಅಭಿಮಾನ, ಅದಕ್ಕೆ ತಕ್ಕಂತೆ ರ್‍ಯಾಂಕ್ ಗಳಿಸುತ್ತಲೇ ಹೋದ ವಿಕ್ರಮ್, ಇಡೀ ನಾಡಿಗೆ ಮೊದಲನೆಯವನಾಗಿ ಇಂಜಿನಿಯರಿಂಗ್ ಪಾಸು ಮಾಡಿ ದೆಹಲಿಗೆ ಹಾರಿ ಹೋಗಿದ್ದ. ಉನ್ನತ ಶಿಕ್ಷಣ ಪೂರೈಸಿ, ಅಲ್ಲಿನವಳನ್ನೇ ಮದುವೆ ಕೂಡ ಮಾಡಿಕೊಂಡ. ಆಗಲೂ ಅವನ ಇಷ್ಟಕ್ಕೆ ವಿರೋಧಿಸದೆ ಅವನ ಆಯ್ಕೆಯನ್ನು ಒಪ್ಪಿಕೊಂಡಿದ್ದೆವು ಇಬ್ಬರೂ, ಸೊಸೆ ಅಂತ ಒಪ್ಪಿಕೊಂಡು ಆದರಿಸಿದ್ದೆವು. ಸೂರಜ್ ಹುಟ್ಟಿದ ಮೇಲಂತೂ ಅವನ ಸೆಳೆತ ಹೆಚ್ಚಾಗಿ ನಾನಂತೂ ಅಲ್ಲಿಯೇ ಹೋಗಿಬಿಡೋಣವೆಂದು ಅಂದುಕೊಂಡದ್ದು ಅದೆಷ್ಟು ಬಾರಿಯೋ? ಆದರೆ ಮಾವ ಬಂದ ಸಂದರ್ಭದಲ್ಲಿ ಅಲ್ಲಿಗೆ ಹೋಗಿದ್ದಾಗ ಮಗ-ಸೊಸೆ ಅನ್ನುವುದಕ್ಕಿಂತ ಪರಕೀಯತೆಯೇ ಹೆಚ್ಚಾಗಿ ಕಾಡಿ, ವಸುವಿನಿಂದ ದೂರ ಇರಲಾರದೆ ಮತ್ತೆ ಇಲ್ಲಿಗೆ ಬಂದುಬಿಟ್ಟಿದ್ದೆ. ಒಂಟಿಯಾಗಿಯೇ ಸಾಯಬೇಕಾಗುತ್ತದೊ ಏನೊ ಎಂಬ ಆತಂಕಗೊಂಡಿದ್ದವನ ಬಾಳಿನಲ್ಲಿ ತಂಗಾಳಿಯಂತೆ ಮೊಮ್ಮಗ ಬಂದಿದ್ದಾನೆ. ಇಲ್ಲಿಯೇ ನೆಲೆಸುವ ಯೋಚನೆಯನ್ನು ಮಾಡಿದ್ದಾನೆ. ನಾನಿರುವ್ ತನಕ್ ಏನೋ ಪರವಾಗಿಲ್ಲ. ಆದರೆ ನಾನೆಷ್ಟು ದಿನ ಶಾಶ್ವತ? ನನ್ನ ಅನಂತರ, ಅವನಿಗೆ ನನ್ನವರು ಅನ್ನೋರು ಯಾರಿರುತ್ತಾರೆ ಇಲ್ಲಿ? ಅಲ್ಲಾಗಲೇ ಅವನಮ್ಮ ಅಲ್ಲಿಯದೇ ಹೆಣ್ಣು ಹುಡುಕುತ್ತಿದ್ದಾಳೆ. ಆ ಹೆಣ್ಣು ಇಲ್ಲಿಯವರೆಗೆ ಬಂದು, ಇವನೊಂದಿಗೆ ಇಲ್ಲಿ ಸಂಸಾರ ಮಾಡಿಯಾಳೇ? ತಂದೆ-ಮಗ ದೂರವಾಗಿಯೇ ಇರುವುದು ನಮ್ಮ ವಂಶದ ಶಾಪವೇ. ನಾನೂ ವಸುವನ್ನು ಕೈಹಿಡಿದ ಮೇಲೆ ಹಳ್ಳಿ ತೊರೆದಿದ್ದೆ. ಅಪ್ಪ ಹಳ್ಳಿ ಬಿಟ್ಟು ಬರಲಾರದೆ, ಅಲ್ಲಿಯೇ ಕೊನೆ ಉಸಿರೆಳೆದಿದ್ದರು. ಅಪ್ಪನ ಕೊನೆಗಾಲದಲ್ಲಿ ನಾನೂ ಹತ್ತಿರವಿರಲಿಲ್ಲ. ಅದೇ ಚಿಂತೆಯಲ್ಲಿ ನರಳಿ ನರಳಿ ಸತ್ತಿದ್ದರು. ಈಗ ನನ್ನ ಸರದಿ, ಮುಂದೆ ವಿಕ್ರಮ್, ಇದೇನು ಹೀಗಾಗುತ್ತಿದೆ?

ಇಲ್ಲಿಯದನ್ನೆಲ್ಲ ಬಿಟ್ಟು ಮಗನ ಮನೆಗೆ ಹೋಗಿಬಿಡಲೇ? ಆಗ ಸೂರಜ್ ಕೂಡ ಇಲ್ಲಿ ಇರಲಾರದೆ ಅಲ್ಲಿಗೆ ಬರುತ್ತಾನೆ. ನಮ್ಮ ವಂಶದ ಶಾಪವನ್ನು ದೂರ ಮಾಡುವ ಶಕ್ತಿ ನನಗಿರುವಾಗ ಹಾಗೇಕೆ ಮಾಡಬಾರದು. ಆಗ ಮಗ-ಸೊಸೆಗೂ ನೆಮ್ಮದಿ, ಮಗನನ್ನು ನಮ್ಮಿಂದ ದೂರ ಮಾಡಿದ ಅನ್ನುವ ಅಪವಾದದಿಂದ ನನಗೆ ಬಿಡುಗಡೆ.

ಆದರೆ ಸೂರಜ್ ಇದಕ್ಕೆಲ್ಲ ಒಪ್ಪಬೇಕಲ್ಲ? ಮೊದಲೇ ಅಪ್ಪ-ಮಗ ಬದ್ದ ವೈರಿಗಳಂತೆ ಆಡುತ್ತಾರೆ. ಅಪ್ಪನ ಮೇಲಿನ ಸಿಟ್ಟಿನಿಂದಲೇ ಸೂರಜ್ ಇಲ್ಲಿಗೆ ಬಂದಿರುವುದು. ಸೂರಜ್ ಅಲ್ಲಿಯೇ ತನ್ನ ಆಫೀಸ್ ತೆರೆಯಬಹುದಿತ್ತು. ಇಲ್ಲಿಗಿಂತ ದುಡಿಮೆ ಅಲ್ಲಿಯೇ ಹೆಚ್ಚು, ಹಾಗಿದ್ರೂ ಸೂರಜ್ ಇಲ್ಲಿಗೆ ಬಂದಿದ್ದಾನೆ ಎಂದರೆ, ಅದು ಅವನಪ್ಪನನ್ನು ಹೊಂದಿಕೊಳ್ಳಲಾರದೆ ಚಿಕ್ಕ ವಯಸ್ಸಿನಿಂದಲೂ ಇಲ್ಲಿಯೇ ಆಸೆ ಅವನಿಗೆ, ಅದನ್ನು ತಪ್ಪಿಸಿದ್ದರೆಂಬ ಆಕ್ರೋಶದಿಂದ, ಈಗ ಅದೇ ಸೇಡಿನಿಂದ ಅಲ್ಲಿಂದ ಇಲ್ಲಿಗೆ ಬಂದಿದಾನೆ, ಹಿಂತಿರುಗುವ ಮಾತೇ ಇಲ್ಲ ಎನ್ನುತ್ತಾನೆ. ಅಲ್ಲಿಯದೆ ಹೆಣ್ಣನ್ನು ಮದುವೆಯಾಗುವುದಾದರೆ ಮದುವೆಯೇ ಬೇಡ, ಒಂಟಿಯಾಗಿ ಇದ್ದುಬಿಡುತ್ತೇನೆ ಎನ್ನುವ ಅವನನ್ನು ದಾರಿಗೆ ತರುವುದಾದರೂ ಹೇಗೆ? ಚಿಂತಿಸಿದರು.

ತಾನು ಸಾಯುವಷ್ಟರಲ್ಲಿ ಅವನಿಗೊಂದು ದಾರಿ ಮಾಡಬೇಕು. ಮಗ-ಸೊಸೆ ಮುನಿಸಿಕೊಂಡರೂ ಪರವಾಗಿಲ್ಲ. ಅವನು ಮೆಚ್ಚುವ, ಒಪ್ಪುವ ಹುಡುಗಿಯೊಂದಿಗೆ ಮದುವೆ ಮಾಡಿಬಿಡಬೇಕೆಂದು ನಿರ್ಧರಿಸಿದ ಮೇಲೆಯೇ ಅವರ ಮನ ಹಗುರಾಗಿದ್ದು, ಸಂಜೆಯೇ ಸೂರಜ್‌ನೊಂದಿಗೆ ಅದೇ ವಿಷಯ ಎತ್ತಿದರು.

“ಸೂರಜ್, ಆಫೀಸ್ ತೆರೆದಾಯಿತು. ಚೆನ್ನಾಗಿ ವರಮಾನವೂ ಬರ್ತಾ ಇದೆ. ಮುಂದೆ ಏನು ಮಾಡಬೇಕು ಅಂತ ಇದ್ದೀಯಾ?” ಪೀಠಿಕೆ ಹಾಕಿದರು.

“ಯಾಕೆ ತಾತ? ಇನ್ನೇನು ಯೋಚ್ನೆ ಮಾಡಬೇಕು? ಆಫೀಸ್ ಕೆಲಸ, ಆಶ್ರಮದ ಕೆಲಸ, ಜತೆಗೆ ನಿನ್ನ ನೋಡಿಕೊಳ್ಳುವ ಕೆಲಸನೇ ಸಾಕಷ್ಟಿದೆ. ಮತ್ತೆ ಇನ್ಯಾವ ಆಲೋಚನೆಗಳೂ ಇಲ್ಲ ತಾತ” ಎಂದ ಸೂರಜ್.

“ಅದೇ ಕಣೋ ನಾನು ಹೇಳ್ತಾ ಇರೋದು. ಅಷ್ಟೆಲ್ಲ ಒಬ್ಬನೇ ಹೇಗೆ ನಿಭಾಯಿಸುತ್ತೀಯಾ? ನಿಂಗೆ ಕಷ್ಟ ಆಗುತ್ತೆ ಅಂತ.”

“ಏನ್ ಮಾಡೋಕೆ ಆಗುತ್ತೆ ತಾತ? ಕಷ್ಟ ಅಂತ ಬಿಡೋಕೆ ಆಗಲ್ಲ. ಹೇಗೂ ಮ್ಯಾನೇಜ್ ಮಾಡೋದು. ಸರಿ, ಊಟ ಆಯ್ತಾ ನಿಂದು? ಅಲ್ಲೇ ಹೋಗೋಣ್ವ, ಇಲ್ಲೇ ತರಿಸೋಣ್ವ?”

“ನೋಡು, ಅಡ್ಡ ಮಾತು ತೆಗಿಬೇಡ, ನಾ ಹೇಳೊದನ್ನ ಸೀರಿಯಸ್ಸಾಗಿ ಕೇಳು. ನಿಮ್ಮಮ್ಮ ನಿಂಗೆ ಹೆಣ್ಣು ನೋಡಿದ್ದಾಳಂತೆ. ಮದ್ದೆ ಮಾಡಿಕೊ.”

ಒಂದೇ ಸಲಕ್ಕೆ ಹೌಹಾರಿದ ಸೂರಜ್, “ಏನ್ ತಾತ ನೀನು ಹೇಳ್ತಾ ಇರೋದು? ಅಲ್ಲಿಂದ ತಪ್ಪಿಸಿಕೊಳ್ಳೋಕೆ ಇಲ್ಲಿ ಬಂದ್ರೆ, ಇಲ್ಲೂ ಅದೇ ಕಥೆನಾ? ಅಮ್ಮ ತೋರಿಸಿದ ಹೆಣ್ಣನ್ನೇ ಮದ್ವೆ ಅಂದ್ರೆ ಮುಗಿದೇ ಹೋಯಿತು ನನ್ನ ಕಥೆ. ನಾಯಿಗೆ ಬೆಲ್ಟ್ ಹಾಕಿದಂತೆ ನಾನೂ ಒಂದು ಬೆಲ್ಟ್ ಹಾಕಿಕೊಂಡು ಇರಬೇಕಾಗುತ್ತದೆ ಅಷ್ಟೇ. ಅಮ್ಮನ ಟೇಸ್ಟ್ ನೋಡಿದೆಯಲ್ಲ, ಅಂಥ ಟೇಸ್ಟ್ ಇರೋ ಹೆಣ್ಣನ್ನೇ ಅವಳು ಹುಡುಕೋದು. ಅಂಥ ಹೆಂಡತಿಯನ್ನ ಕಟ್ಟಿಕೊಂಡು ಇಡೀ ಲೈಫ್ ಸಫರ್ ಮಾಡು ಅಂತಿಯಾ ತಾತ? ಸದ್ಯಕ್ಕೆ ಈ ಮದ್ವೆ ವಿಚಾರ ಬಿಟ್ಟುಬಿಡು, ಮದ್ವೆ ಆಗಬೇಕು ಅನ್ನಿಸಿದಾಗ ನಾನೇ ಹೇಳ್ತೀನಿ, ಆಗ ನೀನೇ ಹುಡುಗಿನಾ ಹುಡುಕುವೆಯಂತೆ.”

“ಅಲ್ಲಿವರೆಗೂ ಆ ದೇವರು ನನ್ನ ಬದುಕಿಸಿರಬೇಕಲ್ಲ ಸೂರಜ್? ನಾನು ಕಣ್ಣುಮುಚ್ಚುವಷ್ಟರಲ್ಲಿ ನಿನ್ನ ತಲೆ ಮೇಲೆ ನಾಲ್ಕು ಅಕ್ಕಿಕಾಳು ಹಾಕಿಬಿಟ್ಟರೆ ಸಾಕು.”

“ಅಯ್ಯೋ ತಾತ, ನನ್ನ ಮದ್ವೆನೂ ನೋಡ್ತೀಯಾ, ನನ್ನ ಮಕ್ಕಳನ್ನೂ ನೋಡ್ತೀಯಾ. ಸ್ವಲ್ಪ ಕಾಲಾವಕಾಶ ಕೊಡು. ನೀನೂ ಒಪ್ಪುವಂಥ ಹೆಣ್ಣನ್ನ ನಿನ್ನ ಮುಂದೆ ತಂದು ನಿಲ್ಲಿಸುತ್ತೇನೆ. ಆಗ ಸಂತೋಷವಾಗಿ ಅಕ್ಷತೆ ಹಾಕಿ ಹರಸುವಿಯಂತೆ. ಅವಸರಪಡಬೇಡ, ಅಲ್ಲಿರುವತನಕ ಅಪ್ಪ-ಅಮ್ಮ ನನ್ನ ‘ಮದ್ವೆ ಮದ್ವೆ’ ಅಂತ ತಲೆ ತಿಂದರು. ಇಲ್ಲಿ ನೀನೂ ಅದೇ ಕೆಲಸ ಮಾಡಬೇಡ. ಅಲ್ಲಿಂದಲೇನೋ ಓಡಿಬಂದೆ. ಈಗ ಇಲ್ಲಿಂದಲೂ ಎಲ್ಲಿಗೆ ಓಡಿಹೋಗಲಿ?”

“ಹಾಗೆಲ್ಲ ಮಾತನಾಡಬೇಡಪ್ಪ ಸೂರಜ್, ಬತ್ತಿ ಹೋಗಿರೋ ಬಾಳಿನಲ್ಲಿ ಚಿಗುರಿನಂತೆ ಬಂದಿದ್ದಿಯಾ. ಮತ್ತೆ ಹೋಗುವ ಮಾತಾಡಬೇಡ. ನಿನ್ನದಮ್ಮಯ್ಯ, ನಿನಗೆ ಯಾವಾಗ ಮನಸ್ಸು ಬರುತ್ತೋ ಆಗ್ಲೆ ಮದ್ದೆ ಆಗು, ಇನ್ನು ಮೇಲೆ ಆ ವಿಷಯ ಎತ್ತಲ್ಲ ನಾನು. ಸರಿನಾ” ನೊಂದುಕೊಳ್ಳುತ್ತಲೇ ಹೇಳಿದಾಗ ಸೂರಜ್‌ಗೆ ಮನಸ್ಸು ಚುರುಕ್ ಎಂದಿತು. ಥೂ ತಾನು ಹಾಗೆಲ್ಲ ಮಾತನಾಡಬಾರದಿತ್ತು ಎಂದುಕೊಂಡು.

“ತಾತ, ಯಾಕೆ ನೊಂದುಕೊಳ್ತೀಯಾ? ನೀನಾಗೆ ಹೋಗು ಅಂದ್ರೂ ಬಿಟ್ಟುಹೋಗಲ್ಲ. ಇಲ್ಲಿನ ವಾತಾವರಣ, ಈ ನೆಲ, ಈ ಗಾಳಿ, ಈ ಪರಿಸರ ಬೇಕು ಅಂತ ತಾನೇ ನಾನು ಅಪ್ಪ-ಅಮ್ಮನ ಮಾತನ್ನೂ ಮೀರಿ ಬಂದಿರುವುದು. ನಾನು ನಿನ್ನ ನಂಗೆ ನೀನು ಇಷ್ಟ, ಈ ಆಶ್ರಮ ಇಷ್ಟ, ಅಲ್ಲಿ ಇರೋವವರೆಲ್ಲ ಇಷ್ಟ” ಹಾಗೆ ಹೇಳುವಾಗಲೇ ರಿತು ಮನಸಿನ ತುಂಬ ತುಂಬಿಕೊಂಡಳು.

ಯಾಕೆ ರಿತು ಮನಸ್ಸಿನಲ್ಲಿ ತುಂಬಿಕೊಂಡು ಬಿಟ್ಟಳಲ್ಲ? ಯಾವಾಗಲೂ ಹೀಗೆ ಆಗಿರಲಿಲ್ಲ. ನಾನು ರಿತುವನ್ನು ತುಂಬಾ ಮಿಸ್ ಮಾಡ್ಕತಿದೀನಾ? ಇತ್ತೀಚಿಗೆ ಅವಳ ಜತೆ ಇರುವುದು ತುಂಬ ಹಿತ ಎನಿಸಿರುತ್ತದೆ. ಅವಳು ಸದಾ ನನ್ನ ಕಣ್ಣಮುಂದೆ ಇರಬೇಕು. ನಾನು ಸದಾ ಅವಳನ್ನ ನೋಡ್ತಾ ಇರಬೇಕು, ಅವಳ ಮಾತನ್ನ ಕೇಳ್ತಾ ಇರಬೇಕು ಅಂತ ಯಾಕೆ ಅನ್ನಿಸುತ್ತಾ ಇದೆ? ನಾನು, ಅವಳು ಫ್ರೆಂಡ್ಸ್ ಅಷ್ಟೇ. ಹೌದು, ರಿತು ಒಬ್ಬಳು ಒಳ್ಳೆ ಫ್ರೆಂಡ್. ನನ್ನ ಅಭಿರುಚಿಗೆ, ಆಸಕ್ತಿಗೆ ಹತ್ತಿರವಾಗಿರೋ ಸಮಾನಮನಸ್ಕಳು. ಒಳ್ಳೆಯ ಸ್ನೇಹಿತರು ಸದಾ ನಮ್ಮ ಜತೆ ಇರಬೇಕು ಅನ್ನೋದು ಸಹಜ ಅಲ್ಲವೇ ಅಂದುಕೊಂಡು ತಲೆ ಕೊಡವಿ ಡ್ರೆಸ್ ಬದಲಿಸಲು ಮೇಲೆದ್ದ.

ಕಾಕತಾಳೀಯ ಎಂಬಂತೆ ಬೆಳಗ್ಗೆಯೇ ವಿಕ್ರಮ್ ಮತ್ತು ಸರಿತಾ ಬಂದಿಳಿದಾಗ ಅಚ್ಚರಿಯಾಯಿತು ವೆಂಕಟೇಶ್‌ಗೆ. ಆದರೂ ತೋರಿಸಿಕೊಳ್ಳದಂತೆ ಸಡಗರದಿಂದಲೇ ಸ್ವಾಗತಿಸಿದರು. ಸೂರಜ್ ಕೂಡ ಏನೂ ನಡೆದೇ ಇಲ್ಲವೆಂಬಂತೆ ಅಪ್ಪ-ಅಮ್ಮನನ್ನು ಪ್ರೀತಿಯಿಂದಲೇ ಮಾತನಾಡಿಸಿದ. ಮಗ-ಸೊಸೆಗೆ ಆಶ್ರಮದ ಊಟ, ತಿಂಡಿ ಸರಿಬೀಳುವುದಿಲ್ಲವೆಂದು ಗೊತ್ತಿದ್ದ ವೆಂಕಟೇಶ್ ಮನೆಯಲ್ಲಿಯೇ ತಿಂಡಿ ಮಾಡುವ ಸಿದ್ಧತೆ ನಡೆಸಿದರು.

ಒಳಗೆ ಬಂದ ಸೂರಜ್, “ಏನ್ ತಾತ, ಅಪರೂಪಕ್ಕೆ ಅಡುಗೆ ಮನೆ ಹೊಕ್ಕಿಬಿಟ್ಟಿದ್ದೀಯಾ? ಮಗ-ಸೊಸೆಗೆ ಔತಣ ಮಾಡ್ತಾ ಇದ್ದೀಯಾ?” ರೇಗಿಸಿದ.

“ಅಯ್ಯೋ ಪೆದ್ದುಮುಂಡೇದೆ, ಔತಣ ಕೊಡೋದು ಅವರು ವಾಪಸ್ಸು ಹೋಗುವಾಗ, ನಿಮ್ಮ ಅಪ್ಪ-ಅಮ್ಮ ಈಗ ತಾನೇ ಬಂದಿದ್ದಾರೆ. ಅವರನ್ನ ಆಗಲೇ ಕಳಿಸೋ ಯೋಚನೆನಾ?” ಗದರಿದರು.

“ತಾತ, ಧಾರಾಳವಾಗಿ ಅವರನ್ನ ಇಲ್ಲೇ ಇಟ್ಕೋ, ನಾನೇನು ಬೇಡ ಅಂತೀನಾ? ಆದ್ರೆ ಅವರು ಈಗ ಬಂದಿರೋ ಸಂದರ್ಭ ನೋಡಿದ್ರೆ ಮಹಾಯುದ್ದಕ್ಕೆ ಸಿದ್ದವಾಗಿ ಬಂದಿರೋ ಹಾಗಿದೆ. ನಂಗೆ ಭಯ ಆಗ್ತಾ ಇದೆ ತಾತ. ನೀನೇ ನನ್ನ ಕಾಪಾಡಬೇಕು” ಹೆದರಿದವನಂತೆ ನಟಿಸಿದ.

“ಏನ್ ಮಹಾ ಹೆದರಿ ನಡುಗುವವನಂತೆ ಮಾತಾಡ್ತಾ ಇದ್ದೀಯಲ್ಲ, ನಾಟಕ ಆಡ್ತೀಯಾ ಕಳ್ಳ” ಕಿವಿ ಹಿಂಡಿದರು.

ವೆಂಕಟೇಶ್ ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ವಸುಧಾಳೂ ಕೆಲ್ಸಕ್ಕೆ ಹೋಗ್ತಾ ಇದ್ದುದರಿಂದ ಅವಳ ಮೇಲೆ ಎಲ್ಲವನ್ನೂ ಹೇರದೆ ತಾವು ಕೂಡ ಕೆಲಸದ ಹೊರೆಯನ್ನು ಹಂಚಿಕೊಳ್ಳುತ್ತಿದ್ದರು. ಕಾಲೇಜಿನ ದಿನಗಳಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದುದರಿಂದ ಅಡುಗೆಗಳನ್ನೆಲ್ಲ ಕಲಿತಿದ್ದರು. ವಸುಧಾ ಸತ್ತ ಮೇಲೆ ಅದು ಸಂಪೂರ್ಣ ಉಪಯೋಗಕ್ಕೆ ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಪ್ರಭಾವ, ಜತೆಗೆ ಒಂಟಿತನ, ಅಡುಗೆಯಲ್ಲಿನ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿತ್ತು. ಸೂರಜ್ ಬಂದ ಮೇಲೆ ಅವನಿಗಾಗಿ ಮಾಡೋಣವೆಂದರೆ, ತಾತನಿಗೆ ಕಷ್ಟವಾಗಬಾರದೆಂದು ಕಷ್ಟವಾಗಬಾರದೆಂದು ಮನೆಯಲ್ಲಿ ಅಡುಗೆ ಮಾಡುವುದನ್ನೇ ಬೇಡವೆನ್ನುತ್ತಿದ್ದ. ಆಶ್ರಮದಲ್ಲಿ ಎಲ್ಲರೊಂದಿಗೆ ಕುಳಿತು ಊಟ ಮಾಡಲು ಅವನಿಗೆ ಯಾವ ಮುಜುಗರವೂ ಕಾಡುತ್ತಿರಲಿಲ್ಲ. ಆದರೆ ವಿಕ್ರಮ್ ಹಾಗಲ್ಲ. ಆಶ್ರಮದೊಳಗೆ ಕಾಲಿಡಲೇ ಬೇಸರಿಸುತ್ತಿದ್ದ. ಅವನಿಗೆ ತಕ್ಕವಳು ಅವನ ಹೆಂಡತಿ.

ತನ್ನ ತಂದೆ-ತಾಯಿಯನ್ನು ತನ್ನಿಂದ್ ಶಾಶ್ವತವಾಗಿ ದೂರ ಇಡಲು ಈ ಆಶ್ರಮವೇ ಕಾರಣ ಎಂಬ ಅಸಹನೆ ಅವನಿಗೆ. ಹಾಗಾಗಿ ಮನೆಗೆ ಬಂದರೂ ಅತ್ತ ತಲೆ ಹಾಕುತ್ತಿರಲಿಲ್ಲ.

“ತಾತ-ಮೊಮ್ಮಗ ಸೇರಿ ಭಾರೀ ಅಡುಗೆಯ ಸಿದ್ಧತೆ ನಡೆಸುತ್ತಿರುವಂತಿದೆ” ಹೆಗಲ ಮೇಲೆ ಟವೆಲ್ ಹಾಕಿಕೊಳ್ಳುತ್ತ ವಿಕ್ರಮ್ ಒಳಬಂದ.

“ಬಾ ವಿಕ್ರಮ್, ನಿಂಗೆ ರೊಟ್ಟಿ ಅಂದ್ರೆ ಇಷ್ಟ ಅಲ್ಲವಾ. ಅದಕ್ಕೆ ಮಾಡ್ತಾ ಇದ್ದೆ. ನಿನ್ನ ಮಗ ಚಟ್ನಿ ಮಾಡ್ತಾ ಇದ್ದಾನೆ. ಸ್ನಾನ ಆಯಿತಾ? ಬಿಸಿ ಬಿಸಿ ತಿಂದುಬಿಡು” ಎಂದವರೇ ತಟ್ಟಗೆ ರೊಟ್ಟಿ ಹಾಕಿಟ್ಟು, “ಆಯ್ತಾ ಸೂರಜ್? ಚಟ್ನಿ ಹಾಕು” ಎಂದರು.

ಅಕ್ಕಿರೊಟ್ಟಿಯನ್ನು ನೋಡಿದೊಡನೆ ಬಾಯಲ್ಲಿ ನೀರೂರಿತು. “ಅಬ್ಬಾ! ಅದೆಷ್ಟು ವರ್ಷವಾಗಿತ್ತಪ್ಪ ರೊಟ್ಟಿನಾ ನೋಡಿ, ಬೇಗ ಚಟ್ನಿ ತಗೊಂಡು ಬಾರೋ” ಅವಸರಿಸಿದ.

ಮಗ ಬಾಯಿ ಚಪ್ಪರಿಸುತ್ತ ರೊಟ್ಟಿ ತಿನ್ನುವುದನ್ನೇ ನೋಡುತ್ತ ವೆಂಕಟೇಶ್ ವಸುವನ್ನು ನೆನಪಿಸಿಕೊಂಡು ಕಣ್ಣೊರೆಸಿಕೊಂಡರು. ಅವಳಿದ್ದಿದ್ದರೆ ಮಗನನ್ನು ಆದಷ್ಟು ಮೆರೆಸುತ್ತಿದ್ದಳೋ? ಮನದಲ್ಲಿಯೇ ಅಂದುಕೊಳ್ಳುತ್ತ, “ಇನ್ನೊಂದು ತಿನ್ನು” ಎಂದು ಬಲವಂತವಾಗಿ ಮೂರು ರೊಟ್ಟಿ ತಿನ್ನಿಸಿದರು.

“ಅಪ್ಪಾ, ನೀನು ಹೀಗೆ ತಿನ್ತಾ ಇದ್ದರೆ, ನಾಲ್ಕು ದಿನಗಳಲ್ಲಿಯೇ ಬೆಲೂನ್ ಥರ ಊದಿಕೊಳ್ತೀಯ. ಅಮ್ಮ ನಿಂಗೆ ಡಯಟ್ ಅಂತ ಕಂಟ್ರೋಲ್‌ನಲ್ಲಿ ಊಟ-ತಿಂಡಿ ಕೊಡ್ತಾಳೆ. ಅಮ್ಮಂಗೆ ಹೇಳ್ತೀನಿ ಇರು. ಅಪ್ಪ ಬಕಾಸುರನ ಥರ ತಿನ್ತಾ ಇದ್ದಾನೆ ಅಂತ ಸೂರಜ್ ಅಪ್ಪನನ್ನು ರೇಗಿಸಿದ.

“ಹೋಗೋ, ಹೇಳ್ಕೋ ಹೋಗೋ. ಇದು ನಮ್ಮೂರು, ದೆಹಲಿ ಅಲ್ಲ ಅವಳು ಹೇಳಿದಂತೆ ಕೇಳಲು. ಇಲ್ಲಿರುವವರೆಗೆ ಅವಳು ನಾನು ಹೇಳಿದ ಹಾಗೆ ಕೇಳಬೇಕು. ಅಪ್ಪಾ, ಇನ್ನೊಂದು ರೊಟ್ಟಿ ಕೊಡಪ್ಪ. ಆದು ಏನಾಗುತ್ತೋ ನೋಡೋಣ” ಧೈರ್ಯ ಬಂದುಬಿಟ್ಟಿತ್ತು ವಿಕ್ರಮ್‌ಗೆ.

“ಸೂರಜ್ ಯಾಕೆ ಹಾಗೆ ಮಾತಾಡ್ತೀಯಾ? ಅವನ ವಯಸ್ಸಿನಲ್ಲಿ ನಾನು ಎಷ್ಟು ರೊಟ್ಟಿ ತಿನ್ತಾ ಇದೆ ಗೊತ್ತಾ? ನಿಮಜ್ಜಿ ಲೆಕ್ಕ ಹಿಡಿದೇ ಬೇಯಿಸಿ ಕೊಡ್ತಾ ಇದ್ಲು. ನಾನು ಎಣಿಸದೆ ತಿಂದು ಹಾಕ್ತಾ ಇದ್ದೆ. ನಿಂಗಾಗುತ್ತಾ ಹಾಗೆ ತಿನ್ನೋಕೆ ? ನೀವೆಲ್ಲ ಈ ಕಾಲದವರು. ಒಂದು ರೊಟ್ಟಿ ತಿನ್ನೋ ಅಷ್ಟರಲ್ಲಿ ಸುಸ್ತು. ವಿಕ್ಕಿ ತಿನ್ನೋದನ್ನೇ ನೀನು ನೋಡಬೇಡ, ಸರಿತಾ ಎದ್ದಿದ್ರೆ ಬೇಗ ಬರೋಕೆ ಹೇಳು, ಅವಳು ಬಿಸಿ ಬಿಸಿ ತಿನ್ನಲಿ?” ಗದರಿಸಿದರು.

“ಓಹೋ! ಪ್ರೀತಿಯ ಮಗನಿಗೆ ದೃಷ್ಟಿ ಆಗುತ್ತಾ ತಾತ ನಾನು ನೋಡಿದ್ರೆ? ನಾನು ಹೋಗ್ತೀನಿ, ಚೆನ್ನಾಗಿ ತಿನ್ನಿಸು” ಎಂದು ಹೊರನಡೆದ ಸೂರಜ್ ಇಂಥ ಸನ್ನಿವೇಶ ನಡೆದು ಈ ಮನೆಯಲ್ಲಿ ಅದೆಷ್ಟು ವರ್ಷಗಳಾಗಿ ಹೋಗಿದ್ದವೋ? ಮನಕ್ಕೆ ಮುದ ನೀಡಿತ್ತು. ವೆಂಕಟೇಶ್ ಮತ್ತಷ್ಟು ಹುರುಪಿನಿಂದ ರೊಟ್ಟಿ ಬೇಯಿಸತೊಡಗಿದರು.

ಈ ವಯಸ್ಸಿನಲ್ಲಿ ತಾತನಿಗೆ ಅಡುಗೆ ಭಾರವಾಗಬಾರದೆಂದು ಅಡುಗೆಯವರೊಬ್ಬರನ್ನು ಮನೆಗೆ ಕರೆತಂದ ಸೂರಜ್.

ಬೆಳಗ್ಗೆ ಬಂದು ತಿಂಡಿ, ಅಡುಗೆ, ರಾತ್ರಿ ಅಡುಗೆ ಮಾಡಿಟ್ಟು, ರಾತ್ರಿ ವಾಪಸ್ಸಾಗುವಂತೆ ಅಡುಗೆಯವರಿಗೆ ಹೇಳಿದ್ದ. ಚೆನ್ನಾಗಿ ಮಾಡಿದರೆ ಕೆಲಸ ಖಾಯಂ ಮಾಡುವುದಾಗಿ ಭರವಸೆ ನೀಡಿದ್ದ. ಉತ್ತರ ಭಾರತದ ಹಾಗೂ ದಕ್ಷಿಣ ಭಾರತದ ಅಡುಗೆ ಎರಡರಲ್ಲೂ ತಿಳಿದಿದ್ದಂಥವರನ್ನೇ ಹುಡುಕಿ ಕರೆತಂದಿದ್ದ.

ಸರಿತಾಳಿಗೆ ಉತ್ತರ ಭಾರತದ ಅಡುಗೆಯೇ ಆಗಬೇಕಿತ್ತು. ಕೆಲವೊಂದು ದಕ್ಷಿಣ ಭಾರತದ ತಿಂಡಿಗಳನ್ನು ಮೆಚ್ಚಿದ್ದಳು. ವಯಸ್ಸಿನ ಪ್ರಭಾವ ಅವಳ ಮೇಲೂ ಬೀರಿದ್ದರಿಂದ, ಆದಷ್ಟು ಡ್ರೈ ಚಪಾತಿ, ದಾಲ್ ಉಪಯೋಗಿಸುತ್ತಿದ್ದಳು. ಶರೀರ ದಪ್ಪವಾಗಿದ್ದರಿಂದ ಮೈ ಬಗ್ಗಿಸಿ ಅಡುಗೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದಳು. ಅಲ್ಲಿಯೂ ಆಡುಗೆಯವರಿದ್ದರು. ಹಾಗಾಗಿ ಕಷ್ಟಪಡುವಂತೆಯೇ ಇರಲಿಲ್ಲ, ಹಾಗಾಗಿಯೇ ತಾಯಿಗೂ ಇರಿಸುಮುರಿಸು ಆಗಬಾರದು, ಅಪ್ಪನಿಗೂ ರುಚಿಯಾಗಿ ತಿನ್ನುವ ಚಪಲವನ್ನು ಹಿಂಗಿಸಬೇಕು, ತಾತನಿಗೂ ಕಷ್ಟವಾಗಬಾರದೆಂದು ಆಲೋಚನೆ ಮಾಡಿಯೇ ತಾತ ಬೇಡವೆಂದರೂ ಕೇಳದೆ ಅಡುಗೆಯವರನ್ನು ಗೊತ್ತುಪಡಿಸಿದ.

ಬಂದ ದಿನ ಪ್ರಯಾಣದ ಆಯಾಸವೆಂದು ಮಲಗಿಯೇ ಕಾಲ ಕಳೆದರು.

ಮಾರನೆಯ ದಿನ ತನ್ನ ಆಫೀಸಿಗೆ ಹೊರಟು ನಿಂತ ಸೂರಜ್, “ಅಪ್ಪಾ, ಬನ್ನಿ ನಮ್ಮ ಆಫೀಸ್ ನೋಡುವಿರಂತೆ. ಒಳ್ಳೆಯ ಅರ್ನಿಂಗ್ಸ್ ಇದೆ ಅಪ್ಪ, ನಾಲ್ಕೈದು ಫ್ಯಾಕ್ಟರಿಯವರು ನನ್ನನ್ನೇ ಟ್ಯಾಕ್ಸ್ ಕನ್ಸಲ್ಟಿಂಗ್‌ಗೆ ಅಪಾಯಿಂಟ್ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಆಫರ್ ಬಂದಿವೆ. ನಾನೇ ಇನ್ನೂ ಒಪ್ಪಿಕೊಂಡಿಲ್ಲ” ತಂದೆಗೆ ತನ್ನ ಆಫೀಸನ್ನು ತೋರಿಸುವ ಆಸೆಯಿಂದ ಕರೆದ.

“ಸೂರಜ್, ನಾವು ಈಗ ಬಂದಿರೋದು ನಿನ್ನ ಆಫಿಸ್ ನೋಡೋಕ್ಕಾಗಲೀ ನಿನ್ನ ತಾತನ ಆಶ್ರಮ ನೋಡೋಕ್ಕೂ ಅಲ್ಲ. ನಿನ್ನ ಭವಿಷ್ಯದ ಬಗ್ಗೆ ಸೀರಿಯಸ್ಸಾಗಿ ಮಾತಾಡೋಕೆ ಬಂದಿದ್ದೀವಿ. ಇವತ್ತು ಆಫೀಸಿಗೆ ಹೋಗುವುದು ಬೇಡ. ಅಪ್ಪ, ನೀನು, ಸರೂ ಎಲ್ಲಾ ಕೂತೊಂಡು ಮಾತನಾಡೋಣ ಗಂಭೀರವಾಗಿ ನುಡಿದ ಅಪ್ಪನ ಅಂತರಾತ್ಮದ ಅರಿವಾಗಿ ಅದಕ್ಕೆ ಸಿದ್ದವಾಗಿಯೇ ಇದ್ದ ಸೂರಜ್, “ಸರಿಯಪ್ಪ” ಎಂದು ಕುಳಿತುಕೊಂಡ. ಇಂದಲ್ಲ ನಾಳೆ ಇದು ನಡೆಯಲೇಬೇಕು, ಇವತ್ತೇ ನಡೆದುಬಿಡಲಿ ಎಂದು ನಿರ್ಧರಿಸಿಕೊಂಡ. ಒಳಗಿನಿಂದಲೇ ಮಗನ ಮಾತನ್ನು ಕೇಳಿಸಿಕೊಂಡ ವೆಂಕಟೇಶ್ ಹೇಳಿಸಿಕೊಳ್ಳದೆ ಹಾಲ್‌ಗೆ ಬಂದು ಕುಳಿತುಕೊಂಡರು. ಸರಿತಾಳೂ ಬಂದು ಸೇರಿಕೊಂಡಳು.

ಎಲ್ಲರೂ ಬಂದ ಮೇಲೆ ವಿಕ್ರಮ್, “ಅಪ್ಪಾ, ಇನ್ನು ಎಷ್ಟು ದಿನ ನಮ್ಮನ್ನೆಲ್ಲ ಬಿಟ್ಟು, ಈ ವಯಸ್ಸಿನಲ್ಲಿಯೂ ಈ ಆಶ್ರಮದ ಜವಾಬ್ದಾರಿ ತಗೊಂಡು ಕಷ್ಟಪಡ್ತಾ ಇರ್ತಿಯಾ?” ನಿಧಾನವಾಗಿ ಕೇಳಿದ.

“ಎಷ್ಟು ದಿನ ಅಂದ್ರೆ, ಈ ಉಸಿರು ನಿಲ್ಲೋತನಕ” ವೆಂಕಟೇಶ್ ಗಂಭೀರವಾಗಿಯೇ ಉತ್ತರಿಸಿದರು.

“ಸರಿ, ಇದು ನಿಮ್ಮ ಮೊದಲಿನ ನಿರ್ಧಾರವೇ. ಆ ನಿರ್ಧಾರವನ್ನ ಬದಲಾಯಿಸಿಕೊಳ್ಳಲು ಸಾಧ್ಯವೇ ಇಲ್ಲವೇ?”

“ವಿಕ್ಕಿ, ಗೊತ್ತಿರೋ ವಿಷಯವನ್ನು ಚರ್ಚಿಸಿ ಪ್ರಯೋಜನವೇನು? ನೀನು ಅಲ್ಲಿಂದ ಇಲ್ಲಿಗೆ ಬಂದು ಇರಲಾರೆ. ನಾನು ಇಲ್ಲಿಂದ ಅಲ್ಲಿಗೆ ಬಂದು ಇರಲಾರೆ. ಇದು ಗೊತ್ತಿದ್ದು ಗೊತ್ತಿದ್ದೂ ಅದೇ ವಿಷಯ ಯಾಕೆ ? ಬೇರೆ ಏನಾದರೂ ಇದ್ರೆ ಮಾತಾಡು” ನೀರಸವಾಗಿ ಹೇಳಿದರು.

“ಅದು ಸರಿ ಅಪ್ಪ, ಆದ್ರೆ ಈ ಸೂರಜ್ ಕಥೆ ಏನು? ಅಲ್ಲಿ ಅವನಿಗಾಗಿ ಹೆಣ್ಣು ಹುಡುಕಿ ಮದ್ವೆ ಮಾಡೋ ಪ್ರಯತ್ನದಲ್ಲಿ ನಾವಿದ್ರೆ, ಇವನು ಇಲ್ಲಿಗೆ ಓಡಿಬಂದಿದ್ದಾನೆ. ಅವನು ಮಾಡ್ತಾ ಇರೋದು ಸರೀನಾ ಅಪ್ಪಾ? ದೊಡ್ಡ ಶ್ರೀಮಂತರ ಸಂಬಂಧ ಬಂದಿದೆ. ಹುಡುಗಿನೂ ಸೂರಜ್‌ನನ್ನು ಮೆಚ್ಚಿಕೊಂಡಿದ್ದಾಳೆ. ಅವರು ಒಪ್ಪಿರುವುದೇ ನಮ್ಮ ಪುಣ್ಯ. ತುಂಬಾ ಬಲವಂತ ಮಾಡ್ತಾ ಇದ್ದಾರೆ. ಮಗಳಿಗಾಗಿ ನಮ್ಮಂಥ ಮನೆಗೆ ಹೆಣ್ಣು ಕೊಡೋಕೆ ಮುಂದೆ ಬಂದಿದ್ದಾರೆ. ಒಬ್ಬಳೇ ಮಗಳು. ಕೊಳೆತು ಹೋಗುವಷ್ಟು ಹಣವಿದೆ. ಇವನ್ಯಾಕೆ ಇಲ್ಲಿ ಕಷ್ಟಪಡಬೇಕು?”

“ಅಪ್ಪಾ, ನಾನಿಲ್ಲಿ ಕಷ್ಟಪಡ್ತಾ ಇದ್ದೀನಿ ಅಂತ ನಿಂಗೆ ಯಾರು ಹೇಳಿದ್ರು? ಅವಳು ನನ್ನ ಮೆಚ್ಚಿಕೊಂಡರೆ ಸಾಕಾ? ನನಗೆ ಅವಳು ಇಷ್ಟವಾಗುವುದು ಬೇಡವೆ? ನೀನು ಸಂಪಾದಿಸಿರುವುದೇ ಬೇಡ ಅಂತ ಇಲ್ಲಿಗೆ ಬಂದಿದ್ದೀನಿ. ಇನ್ನು ಆ ಕೊಳೆತು ಹೋಗುವ ಆಸ್ತಿ ನನಗ್ಯಾಕೆ? ಹಣ, ಆಸ್ತಿಗೆ ಆಸೆಪಡುವವನು ನಾನಲ್ಲ ಅನ್ನೋದು ನಿಮ್ಮ ಗೊತ್ತಿಲ್ವಾ? ನಾನೇ ಸಂಪಾದಿಸುತ್ತೇನೆ, ಆ ಶಕ್ತಿ ನನಗಿದೆ. ಕಂಡವರ ಒಂದು ಪೈಸೆಯೂ ನನಗೆ ಬೇಡ” ಬಿಗಿದುಕೊಂಡು ಹೇಳಿದ.

“ಇದೇ ಬೇಡ ಅನ್ನುವುದು. ಈ ಒಣ ಸ್ವಾಭಿಮಾನಕ್ಕೇನು ಕಡಿಮೆ ಇಲ್ಲ. ನಿಮಪ್ಪನೂ ನಿನ್ನ ಹಾಗೆ ಇದ್ದಿದ್ರೆ ನಾವು ಇಷ್ಟೊಂದು ಚೆನ್ನಾಗಿ ಇರೋಕೆ ಆಗ್ತಾ ಇತ್ತಾ ಸೂರಜ್? ನಮಪ್ಪ ಕೊಟ್ಟ ಆಸ್ತಿನೆಲ್ಲ ನಿಮ್ಮಪ್ಪ ತಗೊಂಡು ಒಂದಕ್ಕೆ ಎರಡರಷ್ಟು ದುಡಿದಿಲ್ವಾ?” ಸರಿತಾ ಕೋಪಿಸಿಕೊಂಡಳು.

“ಅಪ್ಪಾ, ನೀನಾದ್ರೂ ಹೇಳು ನಿನ್ನ ಮೊಮ್ಮಗನಿಗೆ ಒಳ್ಳೆ ಅವಕಾಶನ ಕಳ್ಕೊಬೇಡ ಅಂತ. ಮದ್ವೆ ಆಗಿ, ಅಲ್ಲೇ ಸೆಟ್ಲ್ ಆಗ್ಲಿ, ಇಲ್ಲೇನಿದೆ, ಈ ಆಶ್ರಮ ಬಿಟ್ಟರೆ.”

“ನಾನು ಯಾರಿಗೂ ಏನೂ ಹೇಳಲಾರೆ ವಿಕ್ರಮ್, ಅವನು ಒಪ್ಪಿದರೆ ಮದ್ವೆ ಮಾಡು” ತಣ್ಣಗೆ ಹೇಳಿದರು.

“ನೀವು ಅವನ್ನ ಒದ್ದು ಕಳಿಸಿ, ಅವನೇ ದಾರಿಗೆ ಬರ್ತಾನೆ. ನಿಮ್ಮ ಬೆಂಬಲ ಇದೆ ಅಂತಾನೇ ತನಗಿಷ್ಟ ಬಂದ ಹಾಗೆ ಕುಣಿಯುತ್ತಾ ಇದ್ದಾನೆ.” ರೋಷದಿಂದ ನುಡಿದ.

“ವಿಕ್ಕಿ, ಅವನು ನನ್ನ ಮೊಮ್ಮಗ ಕಣೋ, ಪ್ರೀತಿಯಿಂದ ಇಲ್ಲಿ ಇರ್ತಿನಿ ಅಂತ ಬಂದ್ರೆ ಒದ್ದು ಕಳಿಸೋಕೆ ಆಗುತ್ತೇನೋ? ಇದು ಅವನ ಮನೆ, ಅವನ ಮನೆಗೆ ಬರಬೇಡ ಅಂತ ನಾನು ಹೇಗೆ ಹೇಳಲಿ? ಅವನು ಬಂದ್ರೆ ಕರ್ಕೊಂಡು ಹೋಗು, ನಂಗೆ ಹಿಂಸೆ ಕೊಡಬೇಡ” ಥಟ್ಟನೆ ಎದ್ದವರೇ ದಡದಡನೇ ಹೊರಗೆದ್ದು ಹೋಗಿಯೇಬಿಟ್ಟರು.

“ಅಮ್ಮಾ ನನ್ನ ಮೇಲಿನ ಕೋಪವನ್ನು ನೀವು ತಾತನ ಮೇಲೆ ತೀರಿಸಬೇಡಿ. ನೀವು ಎಷ್ಟೇ ಹೇಳಿದ್ರೂ ನಾನು ಅಲ್ಲಿಗೆ ಬರಲ್ಲ. ಮಗ ಬೇಕು ಅನ್ನೋ ಆಸೆ ಇದ್ರೆ ನೀವೇ ಇಲ್ಲಿಗೆ ಬನ್ನಿ. ತಾತ ಇಷ್ಟು ವರ್ಷ ಒಂಟಿಯಾಗಿ ಇದ್ದದ್ದು ಸಾಕು. ನೀವು ನಿಮ್ಮ ನಿರ್ಧಾರನಾ ಬದಲಾಯಿಸಿಕೊಳ್ಳೋಕೆ ಆಗಲ್ಲ ಅಂದ ಮೇಲೆ ನಾನು ಹೇಗೆ ಬದಲಾಯಿಸಿಕೊಳ್ಳಲಿ? ನನ್ನ ಅರ್ಥಮಾಡಿಕೊಳ್ಳಿ” ವೇದನೆಯಿಂದ ಮುಖ ಹಿಂಡಿದ.

“ಸೂರಜ್, ನಮಗಿರೋದು ನೀನೊಬ್ಬನೇ ಮಗ ಕಣೋ. ನಿನ್ನ ಬಿಟ್ಟು ಬದುಕೋ ಶಕ್ತಿ ನಂಗಿಲ್ಲ ಕಣೋ, ದಯವಿಟ್ಟು ಬಂದು ಬಿಡೋ, ನನ್ನ ನೋಯಿಸಬೇಡ, ಹೆತ್ತ ಹೊಟ್ಟೆನಾ ಉಸಿರಬೇಡ” ಕಣ್ಣೀರಿಟ್ಟಳು ಸರಿತಾ.

ತಿರಸ್ಕಾರವಾಗಿ ನಕ್ಕ ಸೂರಜ್, “ತಾತನಿಗೂ ಅಪ್ಪ ಒಬ್ನೇ ಮಗ ಅಲ್ವೇನಮ್ಮ? ಅಜ್ಜಿ ಕೂಡ ನಿನ್ನಂತೆ ಸಂಕಟಪಟ್ಟಿರಬೇಕು ಅಲ್ವಾ ಅಮ್ಮಾ? ನಮಗೆ ನೋವಾದಾಗಲೇ ಆ ನೋವು ಎಂಥದ್ದು ಅಂತ ಗೊತ್ತಾಗುವುದು, ದಯವಿಟ್ಟು ನನ್ನ ಬಲವಂತಪಡಿಸಬೇಡಿ. ನಾನು ಈ ಊರನ್ನು ಬಿಟ್ಟು ಎಲ್ಲಿಗೂ ಬರಲಾರೆ. ಮದ್ವೆ ಆದ್ರೆ ಇಲ್ಲಿನ ಹೆಣ್ಣನ್ನೇ ಮದ್ವೆ ಮಾಡ್ಕೊತೀನಿ, ಇಲ್ಲೇ ಸೆಟ್ಲ್ ಆಗ್ತಿನಿ.”

“ಓಹೋ, ಹುಡುಗಿನೂ ನೋಡಿಕೊಂಡು ಬಿಟ್ಟಿದ್ದಿಯಾ? ನಮಗೂ ಹೇಳದೆ ಮದ್ವೆನೂ ಮಾಡಿಕೊಂಡು ಬಿಡು, ನಿನ್ನ ಹೆತ್ತದ್ದಕ್ಕೆ ಸಾರ್ಥಕ” ಗೊಳೋ ಎಂದು ಅತ್ತೇಬಿಟ್ಟಳು ಸರಿತಾ.

“ನಂಗೆ ಗೊತ್ತು ಕಣೆ ಇವನ ಬುದ್ದಿ ಎಂಥದ್ದು ಅಂತ. ಇವನ ಥರನೇ ಆದರ್ಶ, ಆಶ್ರಮ ಅಂತ ತಲೆಕೆಡಿಸಿಕೊಂಡಿರೋ ಹುಡ್ಗಿನ್ನೇ ಮೆಚ್ಚಿಕೊಂಡಿರುತ್ತಾನೆ. ಇಬ್ರೂ ಸೇರಿ ನನ್ನ ಆಸ್ತಿನಾ ಕರಗಿಸಿಬಿಡುತ್ತಾರೆ. ಇವನು ಉದ್ದಾರವಾದಾಗ ನೋಡೋಣ. ಈ ಜನ್ಮದಲ್ಲಿ ಇವನಿಗೆ ಬುದ್ದಿ ಬರುವುದಿಲ್ಲ. ನನ್ನ ಮುಂದೆ ಎಲ್ಲನೂ ದಾನ ಮಾಡಿ ಹಾಳಾಗಿ ಹೋಗ್ತಾನೆ, ಬೀದಿಗೆ ಬೀಳ್ತಾನೆ. ಅಜ್ಜಿ ರಕ್ತ ಎಲ್ಲಿ ಹೋಗುತ್ತೆ? ನಮ್ಮಮ್ಮ ಎಲ್ಲರನ್ನೂ ಉದ್ದಾರ ಮಾಡಿ ಕೈಲಾಸ ಸೇರಿಕೊಂಡಳು. ಈಗ ಇವನು ಶುರು ಮಾಡಿಕೊಂಡಿದ್ದಾನೆ. ನಮ್ಮ ಕರ್ಮ, ಇಂಥ ಮಗನ್ನ ಹೆತ್ತೇ ಇಲ್ಲ ಅಂತ ತಿಳ್ಕೊ. ನಮಗೆ ಬುದ್ದಿ ಇಲ್ಲ. ನಡಿ, ನಮ್ಮ ದಾರಿ ನಾವು ಹಿಡಿಯೋಣ. ಇನ್ನು ಇಲ್ಲಿದ್ದು ಪ್ರಯೋಜನ ಇಲ್ಲ” ಎಂದು ಹತಾಶೆಯಿಂದ ವಿಕ್ರಮ್ ನುಡಿದಾಗ ಅಪ್ಪನ ಬಗ್ಗೆ ಸೂರಜ್‌ಗೆ ಅಯ್ಯೋ ಮತ್ತಷ್ಟು ಹಿಂಸೆ ಕೊಡದೆ ಇಷ್ಟು ಬೇಗ ಅವರು ತೀರ್ಮಾನಕ್ಕೆ ಬಂದದ್ದು ಸಮಾಧಾನ ತರಿಸಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾನ್ಸುರಿಯ ನಾದ
Next post ಮಾಯಾವಿ ಹೂವು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…