ಅದೆಷ್ಟು ದಿನಗಳಾದವು ಕಸುವು
ಹದಗೊಳ್ಳಲು ಕಾದು,
ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು
ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ
ಕದಿರು ಕತ್ತರಿಸಿದ ಪೈರು ಆಕೆ
ಆ ನೀಲಾಂಗನನ ಸುತ್ತ ನೆರೆದ
ಗೋಪಿಕೆಯರ ಕಮಲದಳ ಕಣ್ಣುಗಳ
ದಂತ ಕದಳಿ ಮೈ ನುಣುಪು
ತೋಳುಗಳ ನಡುವೆಯೂ
ಅದೆಂಥಹ ಸೆಳೆತ ಶ್ಯಾಮಗೆ ರಾಧೆಯೆಡೆಗೆ.
ರುಕ್ಮಿಣಿಯ ಬಾಹುಬಂಧ, ಭಾವಬಂಧದಲ್ಲಿ
ತಲ್ಲೀನ ಚುಂಬನ ಸೆಳೆತ, ಬಳೆಗಳ ಕಿಣಿಕಿಣಿ,
ಮಥುರೆಯ ಹಾದಿ ಬೀದಿಗಳೆಲ್ಲ ಅವರದೇ
ಗೆಜ್ಜೆಯುಲಿತ, ಹೆಜ್ಜೆ ಕುಣಿತ.
ಬಿದಿರಕೋಲಿಗೆ ಲೋಕ ಮೆಚ್ಚಿತು.
ಹಾಡಿಹೊಗಳಿತು
ಕಾಲ ನಿಲ್ಲದು
ಓಡು ಕುದುರೆಯ ಗೊರಸು ಸದ್ದು
ಬಿದಿರಕೋಲಿನ ನಾದ
ನೆನಕೆಯ ಹೊತ್ತ ಹೆಣ್ಣು ಆಕೆ
ಬತ್ತಿದ ಎದೆಯೊಳಗೆ ನಿಷ್ಪಂದ ಉಸಿರಾಗಿ
ಎದೆಯೊಳಗೆ ಸುರಿದುಕೊಂಡದ್ದು
ಅದೇ ರೂಪು,
ಪುಷ್ಪಗಂಧಕ್ಕೆ ಸಡಿಲಾಗದ ಮನಕ್ಕೆ
ಕಡು ಪರಿತಾಪ,
ಕನ್ನಡಿಯಲ್ಲಿ ಮೂಡಿದ ಪಾತ್ರಗಳೆಲ್ಲ
ಕರಗಿಹೋದವು
ಕೃಷ್ಣ ಅವಳೆಡೆಗೇ ನಡೆದು ಬಂದ
ಬಾನ್ಸುರಿಯ ರಂಧ್ರಗಳೆಲ್ಲ
ತಾನೆ ತಾನೆ ರಿಂಗುಣಿಸಿದವು
ಅವನ ಕನಸಿನ ತುಂಬಾ ಮುತ್ತಾಗುವುದು
ಮಣಿ ಪೋಣಿಸುವುದು ಆಕೆ ಮಾತ್ರ.
*****