ಒಳಬನ್ನಿ ಗೆಳೆಯರೆ
ಇದು ಒಬ್ಬ ಕವೀಂದ್ರನ ಗೋರಿ
ಹುಸಿದಿದ್ದರೆ
ಕಸಿದಿದ್ದರೆ
ಮಾತಿಗೆ ತಪ್ಪಿ ತಪಿಸಿದ್ದರೆ
ಕಣ್ಣದೀಪ ಕಂಡವರ ಕಷ್ಟಕ್ಕೆ ಉರಿದು
ಎಂದಾದರೂ ಎರಡು ಹನಿ ಬೆಳಕ ಬಸಿದಿದ್ದರೆ
ರಾತ್ರಿ ರಾಮಾಯಣ
ಹಗಲು ಭಾರತ
ಬಾಳೆಲ್ಲ ರಗಳೆ ಹೂಡಿದ ಒಂದು ಬೃಹತ್ಕಥಾ
ರಸಕೃತಿ ಎನಿಸಿದ್ದರೆ
ಅಳುಕಿಲ್ಲದೆ ಬಂದು
ಸಮಾಧಿ ಮುಂದೆ ಮೊಳಕಾಲೂರಿ.
ಹುಟ್ಟಿ ಅಂತಃಕರಣ
ಕಟ್ಟಿ ಬಂದರೆ ಗಂಟಲು
ಇಕ್ಕಟ್ಟಿನಲ್ಲಿ ನಿಮ್ಮನ್ನೇ ಮೀರಿ
ಕವಿಗೆ ನಿಜಗೌರವ ತೋರಿ.
ಮಹನೀಯರೆ, ನೀವು ಅಲ್ಲೆ
ಹೊರಗೇಟಿನಲ್ಲೇ ನಿಲ್ಲಿ
ಮುರುಕಿಲ್ಲದೆ
ಬಿರುಕಿಲ್ಲದೆ
‘ಬಾಳಬಟ್ಟೆ’ ಎಳ್ಳಷ್ಟೂ
ಹರುಕಿಲ್ಲದೆ ‘ಪರಮಾಗಮ’
ಪಟ್ಟೆಯಾಗಿ ತೆರೆದಿದ್ದರೆ,
ಕಂಡಷ್ಟಕ್ಕೇ ಕಾಂಡ ಕೊಂಬೆ ನಿಜವಾಗಿ
ಕಾಣದಷ್ಟಕ್ಕೇ ಕತ್ತಲಬೇರು ಸುಳ್ಳಾಗಿದ್ದರೆ
ಬಾಡದೆ
ಕೋಡದೆ
ಬಾಳಿನ ಉದಯಾಸ್ತಕ್ಕೆ ಎದೆ
ಹಾಡದೆ ಇದ್ದರೆ, ನಿಲ್ಲಿ,
ನಿಮಗೆ ಮೈಲಿಗೆ ಇಲ್ಲಿ.
ಇಟ್ಟು ಹೋಗಿ ತಂದ ಹೂವು ಹಣ್ಣನ್ನು
ಗೇಟು ತಳ್ಳಿ ಅಲ್ಲೇ ಬದಿಯಲ್ಲಿ.
*****