ಪ್ರಿಯ ಸಖಿ,
ಇದು ಮಾತಿನ ಪ್ರಪಂಚ. ಇಡೀ ವಿಶ್ವವೇ ಶಬ್ದಮಯ. ಪದಗಳನ್ನು ಸೃಷ್ಟಿಸಿ, ಭಾಷೆಯನ್ನು ರೂಢಿಸಿ, ಮಾತನಾಡಲು ಕಲಿತ ಕ್ಷಣದಿಂದ ಮನುಷ್ಯನ ಜೀವನ ಶೈಲಿಯೇ ಬದಲಾಗಿ ಹೋಯಿತೆನ್ನುತ್ತದೆ ಇತಿಹಾಸ. ಅವನ ಎಲ್ಲ ಕ್ರಿಯೆಗಳಿಗೂ ಮಾತೇ ಮೂಲಮಂತ್ರವಾಗಿ ಹೋಯಿತು. ಇಂದು ಮಾತಿಲ್ಲದ ಪ್ರಪಂಚವನ್ನೊಮ್ಮೆ ಕಲ್ಪಿಸಿಕೊಂಡರೇ ಭಯವಾಗುತ್ತದೆ. ಮಾತು ಸಂವಹನದ ಅತ್ಯುತ್ತಮ ಮಾಧ್ಯಮವೂ ಹೌದು. ಆದರೆ ಮಾತು ಸೃಷ್ಟಿಸಿರುವ ಅನರ್ಥಗಳು ಆದ ಅಪಾರ್ಥಗಳನ್ನು ಲೆಕ್ಕಿಸುತ್ತಾ ಕುಳಿತರೇ ಅದೇ ಒಂದು ದೊಡ್ಡ ಪುರಾಣವಾಗಬಹುದು.
ಮಹಾಮಾತಿನ ಮನೆಯಾಗಿರುವ ಈ ಪ್ರಪಂಚದಲ್ಲಿ ಮೌನಕ್ಕೆ ಎಲ್ಲಿ ಬೆಲೆ ? ಎಲ್ಲಿ ನೆಲೆ ? ಎಂದು ಕ್ಷಣ ಹೊತ್ತು ಯೋಚಿಸಿದರೆ, ಮಾತಿಗಿಂತ ಮೌನದಿಂದಲೇ ಈ ಜಗತ್ತಿಗೆ ಆಗಿರುವ ಅನುಕೂಲಗಳು ಅಪರಿಮಿತ ಎಂದು ಗೋಚರಿಸುತ್ತಾ ಹೋಗುತ್ತದೆ. ಯೋಚಿಸಲು ಸಾಧ್ಯವಿರುವುದು, ವಿವೇಚಿಸಲು ಸಾಧ್ಯವಿರುವುದು, ಹೊಸತನ್ನ ಸೃಷ್ಟಿಸಲು ಸಾಧ್ಯವಿರುವುದು, ಉಪಕರಣಗಳು ಸೃಷ್ಟಿಯಾಗಿರುವುದು, ಕಥೆ, ಕಾವ್ಯ ಹುಟ್ಟುವುದು, ನಮನ್ನು ನಾವು ಅರಿತುಕೊಳ್ಳುವುದು, ಸಂಬಂಧಗಳನ್ನು ವಿಶ್ಲೇಷಿಸುವುದು ತನ್ನ ಹಾಗೂ ಇತರರ ಮುಖವಾಡಗಳನ್ನು ಅರ್ಥೈಸಲು ಸಾಧ್ಯವಿರುವುದು, ತಪ್ಪುಗಳಿಗೆ ಪಶ್ಚಾತ್ತಾಪ ಪಡುವುದು, ಆಂತರಿಕವಾಗಿ ಬೆಳೆಯುವುದು, ಭಾವನೆಗಳು ಮಥಿಸಿ ಮಥಿಸಿ ಗಟ್ಟಿ ಮಾತಾಗಲು ಸಿದ್ಧತೆ ನಡೆವುದು… ಇನ್ನೂ ಎಷ್ಟೆಷ್ಟೋ ಪಟ್ಟಿ ಮುಗಿಯುವುದೇ ಇಲ್ಲ. ಎಲ್ಲಾ ಸಾಧ್ಯವಾಗಿರುವುದು ಮೌನದಿಂದಲೇ ಮನುಷ್ಯನಿಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಮಾತಿನಿಂದ ಸಾಧಿಸಲಾಗದ ಎಷ್ಟೊಂದನ್ನು ಮೌನದಿಂದ ಸಾಧಿಸಲು ಸಾಧ್ಯವಿರುವುದೇ ಮೌನದ ಮಹತ್ತಿಗೆ ಕಾರಣವಾಗಿದೆ. ಮೌನವೆಂಬುದು ಒಂದು ರೀತಿಯ ತಪಸ್ಸು. ಸದಾ ಚಂಚಲವಾಗಿರುವ ಮನಸ್ಸನ್ನು ಹಿಡಿದಿರಿಸಿ ನಮಗೆ ಬೇಕೆನಿಸುವ ಒಂದು ವಿಷಯದ ಕುರಿತು ಕೇಂದ್ರೀಕರಿಸಿ, ಹೊರಗೆ ಮೌನವಾಗಿದ್ದರೂ ಒಳಗೇ ಚಿಂತನ ಮಂಥನ ನಡೆಸುವ ಕ್ರಿಯೆಯಿಂದ ಅನೇಕ ಸೃಜನಶೀಲ ಸೃಷ್ಟಿಗಳು ಮೂಡಬಹುದು. ಆದರೆ ಇದಕ್ಕೂ ಮಿಗಿಲಾದುದು ಒಳಗಣ ಮೌನ ಆ ಹೊರಗೂ ಮೌನವಾಗುಳಿದು, ತನ್ನ ಮನಸ್ಸಿನೊಂದಿಗೂ ಮೌನವಾಗುಳಿದ ಮೌನದ ಆ ಅಲೌಕಿಕ ಹಂತವನ್ನು ಕೆಲ ಕ್ಷಣಗಳಾದರೂ ಕಂಡುಕೊಂಡವ ನಿಜವಾದ ಋಷಿ ಎನ್ನುತ್ತಾರೆ ನಮ್ಮ ದಾರ್ಶನಿಕರು. ಈ ಹಂತವನ್ನು ತಲುಪುವುದು ಎಲ್ಲರಿಗೂ ಸುಲಭ ಸಾಧ್ಯವಲ್ಲ. ಮೌನದ ಬೆಲೆಯನ್ನು ಅರಿತವನು ಮಾತಿಗಿಂತ ಹೆಚ್ಚು ಮೌನವನ್ನು ಪ್ರೀತಿಸಲಾರಂಭಿಸುತ್ತಾನೆ. ಮೌನದಲ್ಲಿಯೇ ಹೊಸತನ್ನು ಹುಡುಕಲಾರಂಭಿಸುತ್ತಾನೆ. ಮೌನದಲ್ಲಿಯೇ ಇತರರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಾನೆ. ಮಾತಿಗಿರುವ ಶಕ್ತಿಗಿಂತ ನೂರು ಪಟ್ಟು ಶಕ್ತಿ ಮೌನಕ್ಕಿರುವುದನ್ನು ಕಂಡುಕೊಳ್ಳುವವನೇ ನಿಜವಾದ ಸುಖಿ ಎಂದು ನಮ್ಮ ಹಿರಿಯರು ಹೇಳಿದ ಮಾತು ಅರ್ಥಹೀನವಾದುದೆಂದು ನಂಬುವವರಿಗೆ ತಿಳುವಳಿಕೆ ನೀಡಲು ಹೋಗುವುದಕ್ಕಿಂತ ಮೌನವಾಗಿರುವುದೇ ಜಾಣತನವಲ್ಲವೇ ಸಖಿ?
*****