ಈಚಲ ಮರದಡಿ
ಈಶ್ವರ ಭಟ್ಟರು
ಧೋತರ ಹರಡಿ
ಕುಳಿತೇ ಬಿಟ್ಟರು
ಆಕಡೆ ನೋಡಿ
ಈಕಡೆ ನೋಡಿ
ಮೊಗೆದೇ ಬಿಟ್ಟರು
ಕುಡಿದೇ ಬಿಟ್ಟರು
ಏನದು ಗಡಿಗೆ
ಏನದರೊಳಗೆ
ಓಹೋ ಹುಳ್ಳಗೆ
ತಿಳಿಯಿತು ಮಜ್ಜಿಗೆ
ನೋಡಿದರುಂಟು
ಕೇಳಿದರುಂಟು
ಇಷ್ಟಕ್ಕೂ ಇದು
ಯಾರಪ್ಪನ ಗಂಟು
ಈಚಲ ನಂಟು
ನಮಗೂ ಉಂಟು
ಗಡ ಗಡ ಗಡಿಗೆ
ಗುಡು ಗುಡು ಗುಡುಗೆ
ಏರಿತು ಮೇಲೆ
ಇಳಿಯಿತು ಕೆಳಗೆ
ಮೆಲ್ಲನೆ ಎದ್ದರು
ಕಲ್ಲನು ಒದ್ದರು
ಬಿದ್ದರು ಎದ್ದರು
ಎಲ್ಲರ ಬಯ್ದರು
ಅಹ ತೂರಾಡಿ
ಅಹ ಹಾರಾಡಿ
ನಿಂತು ನಗಾಡಿ
ಪದಗಳ ಹಾಡಿ
ನಡೆದರು ನಿಂತರು
ಹಾಗೇ ಕುಂತರು
ತಲೆ ತಿರುಗಾಡಿ
ನೆಲ ಅದುರಾಡಿ
ಮೈ ಹೊರಳಾಡಿ
ಮಂಗ್ಳೂರ್ ಗಾಡಿ
ಬೆಂಗ್ಳೂರ್ ಗಾಡಿ
ಮುಂಬಯಿ ಗಾಡಿ
ಎಲ್ಲ ಲಗಾಡಿ
ತಿಕ ಮುಕ ರಾಡಿ
ತೈ ತಕ ತೈ ತಕ
ನೋಡಿತು ಲೋಕ
ತಿರುಗಿಸಿ ಮುಕ
ನಕ್ಕಿತು ಪಕ ಪಕ
ಇವರೊ! ದಿಗಂಬರ
ಕುಣಿದರು ಬಂಬರ
ಆ ಮರ ಈ ಮರ
ಈಚಲ ಮರ ಮರ
ತೈ ತಕ ತೈ ತಕ
ತದಿಗಿಣ ತೋಂ ತಕ
ತಾರಕ ತೋರಕ
ಬೆಳಗಿನ ತನಕ
ಈಚಲ ಮರವೇ
ಈಚಲ ಮರವೇ
ಈ ಛಲ ಸರಿಯೇ
ಇಂಥಾ ಮರವೇ!
*****