ಅಡ್ಡ ಬ್ರಾಹ್ಮಣರ ಬೀದಿನಡುವಿನ
ಉದ್ದನೆ ಗರುಡಗಂಬ
ಸುತ್ತಮುತ್ತ ಹತ್ತಾರು ಊರಲ್ಲಿ ಇಲ್ಲದ
ಏಕಶಿಲಾಸ್ತಂಭ.
ವಠ ವಠಾರದ ನಲ್ಲಿ ಬಚ್ಚಲು ಕಥೆ
ಒಲೆ ಉರಿಯದ ವ್ಯಥೆ
ಯಾರೋ ನಾರಿ ಕತ್ತಲು ಜಾರಿ
ಮಣ್ಣ ಸಂದಿಗಳಲ್ಲಿ ಬಣ್ಣವುರಿದ ಜೊತೆ-
ಇಂಥ ಗುಲ್ಲನ್ನೆಲ್ಲ ಇಷ್ಟೂ ಬಿಡದೆ ಹೀರಿ,
ಹೀರಿದ ಕೊಬ್ಬಿಗೆ ಮೆಲ್ಲಗೆ ಇಂಚಿಂಚೇ ಏರಿ
ತೂರಿ ಹೋಗಿದ ಕಂಬ ಮುಗಿಲಲ್ಲಿ;
ಅಗ್ರಹಾರಕ್ಕೇ ಜುಟ್ಟಾಗಿ
ಪ್ರತಿ ತಿಂಗಳೂ ಮುಟ್ಟಾಗಿ
ಮೈತೊಳೆಯುತ್ತದೆ ಮೂರು ತಿಂಗಳು
ಮಳೆಯಲ್ಲಿ.
ಮನುಷ್ಯರ ಕೆಲಸವಲ್ಲ, ಇದು
ಉದ್ಭವಸ್ತಂಭ
ಮನುವಿನಷ್ಟೆ ಹಳೆಯದು.
ಅವನ ಸ್ಮೃತಿಗೆ ಅವಳಿಯಾಗಿ ಹುಟ್ಟಿ
ಸ್ಮೃತಿಯ ಸತ್ವವನ್ನೂ ಮೆಟ್ಟಿ
ಕಾಣದಂತೆ ಕತ್ತಲಲ್ಲೇ, ನಿಧಾನ ಬೆಳೆದದ್ದು.
ಹಿಂದೆ
ಮನುವಿನ ಮುಂದೇ
ಇಪ್ಪತರ ವಿಧವೆ
ಒಪೊತ್ತು ಹೆಣ್ಣಾಗಿ
ಹಣ್ಣು ತಿಂದಾಗ ಸ್ಮೃತಿ ವಿಕಾರ ಕೂಗಿತ್ತು;
ಗುನ್ನೆ ನಡೆದ ಬೆಣ್ಣೆ ನೆಲದಲ್ಲಿ
ಅವತ್ತೇ ಇದಕ್ಕೆ
ಕಣ್ಣು ಮೂಡಿತ್ತು
ತಲೆ ತಲೆಮಾರಿಗು ಇದು
ಇಂಚಿಂಚೇ ಬೆಳೆಯಿತು.
ಯಾವುದೋ ಅಸತಿ ಕಲ್ಲು ಎಂದು
ಎಲ್ಲ ಹೆಂಗಳೆಯರೂ
ಅಪ್ರದಕ್ಷಿಣೆ ಬಂದು ಸೋಟೆ ತಿವಿದರು ಕೂಡ
ಇಂದ್ರ ಗೌತಮಕುಟಿಗೆ ಕದ್ದು ಬಂದಾಗ
ರೇಣುಕೆ ನದಿದಡದಲ್ಲಿ ಸೋತು ಕೆಡೆದಾಗ
ಇದು ಹಠಾತ್ತನೆ ಮಿಂಚಿತು.
ಕಾರ್ತಿಕ ಋಷಿಯ ಅಜ್ಜ ಮಗಳ ಮೈನೆರೆಯಲ್ಲಿ
ಮಿಂದ ದಿನವಂತೂ
ಒಂದು ಮೊಳ ಬೆಳೆಯಿತು.
ನೋಡ ನೋಡುತ್ತಲೇ
ಹೆಂಡತಿ ಕಣ್ಣಿಂದ ಹಾಯುವ ಮೈಲಿಗೆ ಮಿಂಚಲ್ಲಿ
ನಾದಿನಿ ಜೊತೆ ಸಲಿಗೆಯ ಗರಿಕೆ ಸಂಚಲ್ಲಿ
ಒಳಗೇ ಹೊಂಚುತ್ತಿರುವ
ಪಂಚಾಗ್ನಿಯ ಧಗೆಯಲ್ಲಿ
ಭಗಧಗ ಉರಿವ ಇದರ
ಮೂತಿ ಚಿಗುರಿತು.
ಪುಳಕ ಭಯ ಕೆದರಿ
ಮಡಿಗಡಿಗಳು ಅದುರಿ
ಮುದ್ರೆ ವಿಭೂತಿ ಇಟ್ಟೇ
ಜನ ಅಡ್ಡಬಿದ್ದರು.
ಆರತಿ ಎತ್ತಿ ಪೂಜೆ ಸಲ್ಲಿಸಿ
ಹಗಲೂ ರಾತ್ರಿ ಕಣ್ಣು ಹಾಯಿಸಿ
ರೂಪ ಚಹರೆ ಹುಡುಕಿದರೆ
ಕಲ್ಲಲ್ಲಿ ಕಂಡದ್ದು ಗರುಡ ಮೂರುತಿ.
‘ಪಕ್ಷಿರಾಜ ಪಥಾತೀತ, ಸರ್ಪಪ್ರಿಯ ಸಲಹೋ’ ಎಂದು
ಜನಿವಾರ ಕಿವಿಗೆ ಹಾಕಿ
ಕಾಲಿಗೆ ಬಿದ್ದೆದ್ದರೆ
ಆಕಾರ ದುರುಗುಟ್ಟಿತ್ತು.
ದೇವರನ್ನು ಗುರುತಿಸಿದ
ವೃದ್ಧ ರಾಮಾಭಟ್ಟರ ಎಳೆ ಹೆಂಡತಿಗೆ
ಮನೆ ಮನೆ ಹೆಂಗಸರೂ ಕರೆದು
ಬಾಗಿನ ಕುಂಕುಮ ಎರೆದು
“ಹೇಗಾದರೂ ನಿರ್ವಹಿಸುತ್ತೀ ತಾಯಿ” ಎಂದು ಕನಿಕರಿಸಿದರೆ
ಆಕೆ ವಿಷಾದ ನಕ್ಕು
“ಮಾತಾಡಿದರೆ ಚೆನ್ನವೇ? ಮುಖ್ಯ ಧೈರ್ಯ
ಕಂಬದ ಕೈಂಕರ್ಯ ತಪ್ಪಿಸಬಾರದಲ್ಲ” ಎಂದು
ನಡೆದು ಹೋದ ಜಾಗ
ರಾಜಪಥವಾಯಿತು ನೋಡಿ.
ಆ ದಾರಿ ಸಮೆದಷ್ಟು ಧರ್ಮ ಸಮೆದಿಲ್ಲ
ಭ್ರಮೆ ದೃಶ್ಯಕ್ಕಿತ್ತ ಬಣ್ಣ ಕಣ್ಣಿಗೆ ಅರಿವಿಲ್ಲ. ಅಲ್ಲದೆ
ಹೊರ ಮೋರಿಯಿದೆಯೆಂದೇ ಮನೆ ಗಟಾರವಲ್ಲ
ಎಂದೆಲ್ಲ ತರ್ಕ ಹೆಣೆದೂ ಓಣಿಯೇ ರಾಜಪಥವಾಗುತ್ತ
ಸಹಜ ಮಾರ್ಗಕ್ಕೆ ತಡೆ ಸುಲಭವಲ್ಲ.
ಗರುಡಸ್ವಾತಂತ್ರ್ಯಕ್ಕೆ ಚಕ್ರದ ಗಡಿಯಿರಲೆಂದು
ಸ್ತಂಭದ ಎದುರೇ ಕೇರಿ
ಕಟ್ಟಿದ ಹೊಸಗುಡಿಯಲ್ಲಿ
ಚಕ್ರಧಾರಿ ದೇವರು;
ಅಂದಿನಿಂದ ಗರುಡ ಕೇಶವರು
ದೃಷ್ಟಿಯುದ್ಧದಲ್ಲಿ ಎದುರು ಬದುರು.
ಅತ್ತ ಗುಡಿಯಲ್ಲಿ
ರಾತ್ರಿ ಒಂಬತ್ತಕ್ಕೆ ರಾಮಭಜನೆ
ಗರುಡಗಂಬದ ಸುತ್ತ ಮೂರಡಿ ಕಟ್ಟೆ ಮೇಲೆ ಇತ್ತ
ಅರ್ಚಕ ಶಾಸ್ತ್ರಿಗಳಿಂದ
ಹಳೆಯ ಗಡಿದಾಟುಗಳ
ರಂಜಕ ನಿರೂಪಣೆ.
ಚಿತ್ತ ಕತ್ತಲಾದ ಪಟಾಲಮ್ಮಿನ ಕಿವಿಗೆ
ಹುತ್ತದಲ್ಲಿ ದೀಪ ಹಚ್ಚುತ್ತ
ಕದ್ದು ನೆಲ ಉತ್ತಿದ್ದ ಸಾಹಸ ;
ಫಲ ಪರರ ಪಾಲಾದ ಮೋಸ!
ಸಪ್ತವರ್ಣಗಳಲ್ಲಿ
ಸುಪ್ತಾನುಭವ ಕೂಗಿ
ಹಾವು ಹರಿಯುವುವು ಸುತ್ತ ಭಜನೆ ಮುಗಿಯುತ್ತಲೇ
ಗುಡಿಗೋಡಿ ಮಂಗಳಾರತಿ ಎತ್ತಿ ಕೈಮುಗಿದು
ನೆರೆದ ಭಕ್ತರಿಗೆಲ್ಲ ನೈವೇದ್ಯ ನೀಡುತ್ತ
ಶಾಸ್ತ್ರಿ ಬಹಳ ‘ಸಾಭ್ಯಸ್ತ’
ಇದು ಕಥೆಯಲ್ಲ
ಹೀಗಾಯಿತೆಂಬ ವ್ಯಥೆಯೂ ಅಲ್ಲ
ಅಮಾವಾಸ್ಯೆ ಮಡಿಲಲ್ಲಿ
ಅಗ್ರಹಾರ ಮೆಲ್ಲುವ ಜೇನು
ಯುಗ ಸರಿದೂ ತೀರಿಲ್ಲ.
ಪಾಪದ ಪ್ರಾಚೀನ ಸ್ತಂಭದ
ಕೊಳೆ ತೊಳೆಯುವ ಜಂಬ
ಫಲಿಸದೆ ಉಳಿದಿದೆ ಈಗಲೂ ಚಕ್ರಧಾರಿಗೆ ;
ಕಂಬ ಮಾತ್ರ
ಕೃತಿ ಸಾಗದ ಕಡೆಯಲ್ಲೂ
ಜನಗಳ ಮತಿಯನ್ನಾಳಿದೆ,
ಕತ್ತಲಲ್ಲೇ ವಿಜೃಂಭಿಸುತ್ತ
ಸ್ಮೃತಿಗೆ ಸವಾಲಾಗಿದೆ.
*****