ಅಧ್ಯಾಯ ೧೦ ಅಡುಗೆ ಭಟ್ಟರ ಅವಾಂತರ
“ವಾಸು, ಇದೇನು ಮಾಡ್ತಾ ಇದ್ದೀರಿ? ಸಾಮಾನು ಕಡಿಮೆ ಇದೆ ಅಂತ ಅಡುಗೆಯವರು ಹೇಳ್ತಾ ಇದ್ದಾರೆ. ನೀವು ಮಾತ್ರ ಬಿಲ್ ಸರಿಯಾಗಿ ಕೊಡ್ತಾ ಇದ್ದೀರಿ, ಯಾಕೆ ವಾಸು?” ಗಂಭೀರವಾಗಿ ಪ್ರಶ್ನಿಸಿದಳು ರಿತು.
“ಇಲ್ಲ ಮೇಡಮ್, ಅಡುಗೆಯವರು ಸರಿಯಾಗಿ ಸಾಮಾನನ್ನ ಲೆಕ್ಕ ಹಾಕಿಕೊಂಡಿಲ್ಲ. ಪ್ರತಿ ಸಾರಿನೂ ಇಷ್ಟೇ ತರುತ್ತಾ ಇದ್ದದ್ದು” ಅಲಕ್ಷ್ಯದಿಂದ ಉತ್ತರಿಸಿದ.
“ವಾಸು, ಅಡುಗೆಯವರು ಯಾಕೆ ಸುಳ್ಳು ಹೇಳುತ್ತಾರೆ? ಅವರಿಗೆ ಲೆಕ್ಕ ಹಾಕೋಕೆ ಬರಲ್ವಾ?”
“ಮೇಡಮ್, ಅವರ್‍ಯಾಕೆ ಸುಳ್ಳು ಹೇಳ್ತಾರೆ ಅಂತ ನಂಗೊತ್ತಿಲ್ಲ. ಆದ್ರೆ ನಾನಂತೂ ಸರಿಯಾಗಿ ಸಾಮಾನು ತಂದಿದ್ದೀನಿ” ಮತ್ತೆ ಪ್ರಶ್ನಿಸದಂತೆ ಅಲ್ಲಿಂದ ಹೊರಟೇಬಿಟ್ಟ.
“ವಾಸು, ಸ್ವಲ್ಪ ನಿಂತ್ಕೊಳ್ಳಿ” ರಿತು ಕೂಗುತ್ತಿದ್ದರೂ ಆತ ನಿಲ್ಲಲಿಲ್ಲ. ಅವಮಾನವಾದಂತಾಗಿ ರಿತು ಕೆಂಪಾದಳು.
“ಭಟ್ರೆ, ಬನ್ನಿ ಇಲ್ಲಿ, ನೀವು ಕೊಟ್ಟ ಲಿಸ್ಟ್‌ನಲ್ಲಿರೋ ಎಲ್ಲಾ ಸಾಮಾನುಗಳು ಇವೆಯಾ? ಸರಿಯಾಗಿ ಹೇಳಿ.”
“ಮೇಡಮ್, ಆದೂ ಅದೂ…” ಅನುಮಾನಿಸಿದರು.
“ಭಟ್ರೆ, ನೀವು ಹೆದರಿಕೊಳ್ಳೋದು ಬೇಡ. ಸತ್ಯ ಏನು ಅಂತ ಹೇಳಿ. ವಯಸ್ಸಾಗಿರೋ ಅವರೆಲ್ಲ ನಮ ಅಜ-ಅಜಿ ಇದ ಹಾಗೆ. ಅವರ ಹೊಟ್ಟೆಗೆ ಸರಿಯಾಗಿ ಕೊಡೋದು ನಮ್ಮ ಕರ್ತವ್ಯ ಅಲ್ಲವೇ ಭಟ್ಟರೇ? ಈ ವಯಸ್ಸಿನಲ್ಲಿ ಅವರೇನು ಕೇಳ್ತಾರೆ ಹೇಳಿ? ರುಚಿ-ಶುಚಿಯಾಗಿರೋ ಒಂದಿಷ್ಟು ಊಟ-ತಿಂಡಿ. ಅವರೇನು ಬಿಟ್ಟಿ ತಿನ್ತಾರೇನ್ರಿ? ದುಡ್ಡು ಕೊಟ್ಟು ಊಟ ಮಾಡ್ತಾರೆ ಭಟ್ರೆ, ಅವರಂಥವರಿಗೆ ಅನ್ಯಾಯ ಮಾಡಿದ್ರೆ ಆ ದೇವರು ಮೆಚ್ಚುತ್ತಾನಾ…? ಮನೆಯಲ್ಲಿ ಸರಿಯಾಗಿಲ್ಲ ಅಂತ ತಾನೇ ಅವರು ಇಲ್ಲಿಗೆ ಬಂದಿರೋದು. ಇಲ್ಲಿಯೂ ಸರಿಯಾಗದಿದ್ರೆ ಅವರೆಲ್ಲಿಗೆ ಹೋಗ್ತಾರೆ? ನಿಜ ಹೇಳಿ ಭಟ್ರೆ, ನೀವೀಗ ಹೇಳ್ದೆ ಇದ್ರೂ ನಿಜಾಂಶ ಏನು ಅನ್ನೋದು ಕಂಡುಹಿಡಿಯೋದೇನು ನಂಗೆ ಕಷ್ಟ ಇಲ್ಲ. ನಿಮ್ಮ ಬಾಯಿಂದಲೇ ಸತ್ಯ ಏನು ಅನ್ನೋದು ಹೊರಬರಲಿ” ಗಂಭೀರವಾಗಿ, ದೃಢವಾಗಿ ಕೇಳಿದಳು.
ಭಟ್ಟರ ಮುಖ ಕಪ್ಪಿಟ್ಟಿತು. ಮಾತಾಡುವ ಧೈರ್ಯ ಸಾಲದೆ ಮೌನದ ಮೊರೆ ಹೊಕ್ಕರು.
“ಭಟ್ರೆ, ನಂಗೆ ಹೋದ ತಿಂಗಳೇ ಅನುಮಾನ ಬಂತು, ಪ್ರತ್ಯಕ್ಷವಾಗಿ ನೋಡದೆ ಮಾತನಾಡಬಾರದೆಂದು ಸುಮ್ಮನಾಗಿದ್ದೆ. ಈ ಸಲ ಸಾಮಾನಿನ ಲಿಸ್ಟ್ ನಾನು ನೋಡಿಯೇ ವಾಸುಗೆ ಕೊಟ್ಟಿದೆ. ವಾಸು ತಂದಿದ್ದ ಸಾಮಾನನ್ನು ನೋಡಿದ ಮೇಲೆ ನನ್ನ ಅನುಮಾನ ನಿಜವಾಯ್ತು. ಈ ವಿಷಯನ ವೆಂಕಟೇಶ್ ಸರ್‌ಗೆ ತಿಳಿಸಿಬಿಡ್ತೀನಿ. ತೀರ್ಮಾನ ಅವರೇ ಮಾಡಲಿ.”
ಹಾಗಂದ ತತ್‌ಕ್ಷಣವೇ ಗೊಳೋ ಎಂದು ಅಳುತ್ತ, “ಮೇಡಮ್, ನನ್ನ ಕ್ಷಮಿಸಿಬಿಡಿ, ಮಣ್ಣು ತಿನ್ನೋ ಕೆಲಸ ಮಾಡಿಬಿಟ್ಟೆ. ಎಂಜಲು ಕಾಸು ತಿನ್ನೋಕೆ ವಾಸು ಜತೆ ಸೇರ್ಕೊಂಡು ಬಿಟ್ಟೆ. ದಯವಿಟ್ಟು ರಾಯರಿಗೆ ತಿಳಿಸಿ ನನ್ನ ಹೊಟ್ಟೆ ಮೇಲೆ ಕಲ್ಲು ಹಾಕಬೇಡಿ. ಇಂಥ ಕೆಲ್ಸ ಮಾಡಲ್ಲ. ಬಡವನ ಮೇಲೆ ದಯ ತೋರ್ಸಿ ತಾಯಿ” ಕಾಲು ಹಿಡಿಯಲು ಹೋದ ಭಟ್ಟರನ್ನು ತಡೆಯುತ್ತ-
“ಭಟ್ಟರೇ, ಮೂರು ಕಾಸಿನ ಆಸೆಗೆ ವರ್ಷದ ಕೂಳು ಕಳ್ಕೊಳ್ಳೋದಕ್ಕೆ ಹೊರಟಿದೀರಲ್ಲ. ನಿಮ್ಮ ಕೆಲ್ಸಕ್ಕೆ ಸಂಬಳ ಕೊಡಲ್ಲವೇನ್ರೀ? ಉಳಿದ ಅನ್ನ, ಸಾರು ಎಲ್ಲಾ ಮನೆಗೆ ತಗೊಂಡು ಹೋಗ್ತಿರಾ? ಇನ್ನೇನಾಗಬೇಕು? ನಾಳೆ ನಿಮ್ಗೂ ವಯಸ್ಸಾಗುತ್ತೆ ಅನ್ನೋದು ನೆನಪಿರಲಿ. ಅಷ್ಟೊಂದು ಸಾಮಾನು ತರಿಸಿದ್ರೂ ಹೊಟ್ಟೆ ತುಂಬಾ ಊಟ ಕೊಡಲ್ಲ, ರುಚಿಯಾಗಿ ಅಡುಗೆ ಮಾಡಲ್ಲ. ರಾತ್ರಿ ಊಟ ಅಂತೂ ಬಾಯಿಗಿಡೋ ಹಾಗಿಲ್ಲ. ಮೊಸರು ಕೊಡಿ ಅಂದ್ರೆ ನೀರು ಮಜ್ಜಿಗೆ ಕೊಡ್ತೀರಿ. ಕಾಫಿ ಅನ್ನೋದು ಕಾವೇರಿ ನೀರಿನಂತಿರುತ್ತದೆ. ಯಾರಿಗೋ ಒಬ್ಬಿಬ್ಬರಿಗೆ ಜೀರ್ಣಶಕ್ತಿ ಕಡಿಮೆ ಇದ್ರೆ ನೀವು ಎಲ್ಲರಿಗೂ ಊಟ ಕಡಿಮೆ ಕೊಡ್ತೀರಿ. ಊಟದ ಜತೆ ಒಂದು ತರಕಾರಿ ಪಲ್ಯ ಇರಲೇಬೇಕು ಅಂತ ಹೇಳಿದ್ರೂ ಮಾಡಲ್ಲ. ಇಲ್ಲೇ ತರಕಾರಿ ಬೆಳೆದ್ರೂ ಅದು ಹೊರಗಡೆ ಹೋಗ್ತಾ ಇದೆ ಅನ್ನೋದು ನಂಗೆ ಗೊತ್ತಾಗಿದೆ. ಇದೆಲ್ಲ ನಂಗೆ ಹೇಗೆ ಗೊತ್ತಾಯ್ತು ಅಂತ ಆಶ್ಚರ್ಯವಾಗ್ತಾ ಇದೆ ಅಲ್ವಾ? ವಾಸುವಿಗೆ ಹೆದರಿ ಇಲ್ಯಾರೂ ದೂರು ಕೊಡಲ್ಲ ಅನ್ನೋ ನಂಬಿಕೆ ನಿಮ್ಗೆ. ಸರೂ ಅಜ್ಜಿ ನಂಗೆ ಮುಂಚೆನೇ ಎಲ್ಲಾ ತಿಳಿಸಿದ್ರು. ಒಂದು ದಿನ ರಾತ್ರಿ ನೀವು ಕೊಟ್ಟ ಊಟನಾ ಹಾಗೆ ಇಟ್ಟು ಬೆಳಗ್ಗೆ ನಾನು ಬಂದಾಗ ತೋರಿಸಿ, ನಿಮ್ಮ ಅಡುಗೆಯ ವೈಖರಿ ತಿಳಿಸಿದ್ರು, ಏನಾಗಿದೆ ನಿಮ್ಗೆ? ಯಾಕೆ ಹೀಗೆ ಮಾಡ್ತೀರಿ? ಆ ವಯಸ್ಸಾದವರ ಹೊಟ್ಟೆಗೆ ಹೊಡೆದು ನೀವು ಬದುಕಬೇಕಾ? ನಿಮ್ಮದೂ ಒಂದು ಜೀವನನಾ? ನೀವು ಮಾಡಿದ್ದನ್ನು ನೀವೇ ಅನುಭವಿಸಬೇಕು ಅನ್ನೋ ಸತ್ಯ ನಿಮ್ಮೆ ಗೊತ್ತಾ? ಮೋಸ, ವಂಚನೆ ಅನ್ನೋದು ನಿಮಗೆ ರಕ್ತಗತವಾಗಿಬಿಟ್ಟಿದೆ. ಇಷ್ಟೆಲ್ಲ ಕೊಳಕು ತುಂಬಿಕೊಂಡು ಆ ವೃದ್ದರ ಮೇಲೆ ರೇಗಾಡಿ, ಕೂಗಾಡ್ತೀರಾ, ಮಾಡಿದ ತಪ್ಪಿಗೆ ನೀವು ಶಿಕ್ಷೆ ಅನುಭವಿಸಲೇಬೇಕು. ಕೆಲಸದಿಂದ ನಿಮ್ಮನ್ನು ತೆಗೆಯಲ್ಲ. ಆದ್ರೆ ಮುಖ್ಯ ಅಡುಗೆಯ ಕೆಲ್ಸ ನೀವು ಮಾಡೋ ಹಾಗಿಲ್ಲ. ಆ ಕೆಲ್ಸಕ್ಕೆ ಬೇರೆಯವರು ಬರ್ತಾರೆ. ಅವರು ಹೇಳಿದ ಹಾಗೆ ನೀವು ಕೇಳ್ಕೊಂಡು ಕೆಲ್ಸ ಮಾಡಿ ಸಾಕು. ಮತ್ತೂ ಏನಾದ್ರೂ ಕಂಪ್ಲೇಂಟ್ ಬಂದ್ರೆ ಕೆಲ್ಸ ಕಳ್ಕೊತೀರಾ?” ಇಷ್ಟು ಎಚ್ಚರಿಕೆ ನೀಡಿ, ವಾಸುವನ್ನು ಬಗ್ಗುಬಡಿಯುವುದು ಹೇಗೆಂದು ಯೋಚಿಸತೊಡಗಿದಳು.
ವಾಸು ತುಂಬಾ ವರ್ಷದಿಂದ ಇಲ್ಲಿ ಕೆಲ್ಸ ಮಾಡ್ತಾ ಇದ್ದಾನೆ. ಪಳಗಿದ ಹುಲಿ ಅವನು. ಅವನನ್ನು ಕೆಣಕಬೇಕಾದರೆ ತನಗೆ ಸಾಕಷ್ಟು ಆಧಾರ ಬೇಕು. ವೆಂಕಟೇಶ್ ಸರ್ ಅಂತೂ ಅವನನ್ನ ತುಂಬಾ ನಂಬಿಬಿಟ್ಟಿದ್ದಾರೆ. ಆ ನಂಬಿಕೆನಾ ದುರುಪಯೋಗಪಡಿಸಿಕೊಳ್ತಾ ಇದ್ದಾನೆ. ಪಾಪ, ಇದರಿಂದ ಅನ್ಯಾಯ ಆಗ್ತಾ ಇರೋದು, ಅನನುಕೂಲ ಅನುಭವಿಸುತ್ತಾ ಇರುವುದು ಇಲ್ಲಿರುವ ವೃದ್ದರು. ನಾನಿದ್ದು, ಇದನ್ನೆಲ್ಲ ನೋಡುತ್ತಾ ಸುಮ್ಮನಿದ್ದುಬಿಡುವುದು ಸಾಧ್ಯವಿಲ್ಲ. ವಾಸುವನ್ನು ಭಟ್ಟರನ್ನು ಹೆದರಿಸಿದಂತೆ ಹೆದರಿಸಲು ಅಸಾಧ್ಯ. ಉಪಾಯವಾಗಿ ಆಗುತ್ತ ಇರುವ ಅನ್ಯಾಯವನ್ನು ಸರಿಪಡಿಸಬೇಕು. ಈಗಾಗಲೇ ಭಟ್ಟರೇ ದೂರುಕೊಟ್ಟರೆಂದು ವಾಸುವನ್ನು ನಂಬಿಸಿಯಾಗಿದೆ. ವಾಸುವಿಗೆ ನಿಜವಾಗಿಯೂ ಭಟ್ಟರ ಮೇಲೆ ಕೋಪ ಬಂದಿರುತ್ತದೆ. ನಾಳೆ-ನಾಡಿದ್ದರಲ್ಲಿ ಹೊಸ ಅಡುಗೆಯವರು ಬಂದು ಮೇಲ್ವಿಚಾರಣೆ ವಹಿಸಿಕೊಳ್ಳುತ್ತಾರೆ. ಅವರು ತುಂಬಾ ಪ್ರಾಮಾಣಿಕ ವ್ಯಕ್ತಿ. ಅವರನ್ನು ಸುಲಭವಾಗಿ ವಂಚಿಸಲಾಗಲೀ ಆಸೆಗೆ ಒಳಪಡಿಸುವುದಾಗಲೀ ಸಾಧ್ಯವಿಲ್ಲ. ಅಲ್ಲಿಗೆ ವಾಸು ಹಲ್ಲು ಕಿತ್ತ ಹಾವಾಗುತ್ತಾನೆ. ಸದ್ಯಕ್ಕೆ ಇಷ್ಟಾಗಲಿ, ಮುಂದೆ ನೋಡೋಣ, ಪ್ರತಿನಿತ್ಯ ತರಕಾರಿಯನ್ನು ನಾನು ಸಂಜೆ ಹೋಗುವಷ್ಟರಲ್ಲಿಯೇ ಕತ್ತರಿಸಿಡುವಂತೆ ನೋಡಿಕೊಂಡರೆ, ಹೊರಹೋಗುವ ತರಕಾರಿಯನ್ನು ಈ ರೀತಿ ತಡೆಯಬಹುದು. ಪ್ರತಿ ಬಾರಿ ಸಾಮಾನು ತರಿಸುವಾಗಲೂ ನಾನೇ ಹೆಚ್ಚಿನ ಗಮನ ಕೊಡಬೇಕು. ವಾಸುವಿಗೆ ಎಲ್ಲವನ್ನೂ ಬಿಡಬಾರದೆಂದು ತೀರ್ಮಾನಿಸಿಕೊಂಡಳು.
ಪ್ರತಿದಿನದ ಊಟ-ತಿಂಡಿಯನ್ನು ಎಲ್ಲರ ಜತೆ ತಾನೂ ಕುಳಿತು ತಿನ್ನತೊಡಗಿದಳು. ತನ್ನ ಊಟ-ತಿಂಡಿಗಾಗಿ ಸಂಬಳದಲ್ಲಿಯೇ ಹಣ ಮುರಿದುಕೊಳ್ಳಲು ತಿಳಿಸಿಬಿಟ್ಟಿದ್ದಳು. ರಾತ್ರಿ ಊಟವೊಂದೇ ಮನೆಯಲ್ಲಿ ಮಾಡುತ್ತಿದ್ದದ್ದು. ಇಷ್ಟಾದರೂ ಎಲ್ಲವೂ ಸರಿಯಾಗಲಿಲ್ಲವೆಂಬ ಭಾವ ಕಾಡತೊಡಗಿತು. ಕ್ರಮೇಣ ಸರಿಪಡಿಸುವ ವಿಶ್ವಾಸ ಅವಳಲ್ಲಿತ್ತು.
* * *
ಮಾಲಿನಿ ಆಫೀಸಿಗೆ ಬಾರದೆ ವಾರವಾಗಿತ್ತು. ಯಾವತ್ತೂ ಹೀಗೆಲ್ಲ ರಜೆ ಹಾಕದೆ ಇದ್ದವಳು ಈಗ ದಿಢೀರನೆ ರಜೆ ಹಾಕಿದ್ದು ತನುಜಾಳಿಗೆ ಆತಂಕ ತಂದಿತ್ತು. ಏನಾಯ್ತು ಮಾಲಿನಿಗೆ? ಸಾಮಾನ್ಯವಾಗಿ ಹಾಗೇನಾದರೂ ರಜೆ ಹಾಕಬೇಕಾಗಿದ್ದಲ್ಲಿ ತನ್ನೊಂದಿಗೆ ಹೇಳೇ ಇರುತ್ತಿದ್ದಳು. ತನಗೆ ಒಂದೂ ಮಾತು ತಿಳಿಸದೆ ಯಾಕೆ ರಜೆ ಹಾಕಿದ್ದಾಳೆ? ಮಾಲಿನಿಗೇನಾದರೂ ಅನಾರೋಗ್ಯವೇ? ಇವತ್ತು ಮನೆಗೆ ಹೋಗಿ ಬರಬೇಕೆಂದುಕೊಂಡವಳೇ ಸಂಜೆ ಅರ್ಧ ಗಂಟೆ ಪರ್ಮಿಶನ್ ಪಡೆದು ಮಾಲಿನಿಯ ಮನೆಗೆ ಹೊರಟಳು.
ಮಾಲಿನಿಯ ಮನೆಯ ಬಾಗಿಲು ಹಾಕಿತ್ತು. ಕರೆಘಂಟೆ ಬಾರಿಸುತ್ತಿದ್ದರೂ ಬಾಗಿಲು ತೆರೆಯುವ ಸೂಚನೆಯೇ ಕಾಣಲಿಲ್ಲ. ಒಂದೇ ಸಮನೆ ಬೆಲ್ ಮಾಡಿ ಬೇಸತ್ತು, ಯಾರೂ ಇಲ್ಲವೇನೋ ಎಂದುಕೊಂಡು ವಾಪಸ್ಸು ಹೋಗಲು ಹಿಂತಿರುಗಿದಳು. ಅಷ್ಟರಲ್ಲಿ ಬಾಗಿಲು ತೆರೆದ ಸದ್ದಾಗಿ ತಿರುಗಿ ನೋಡಿದರೆ, ಮಾಲಿನಿ ಬಾಗಿಲಲ್ಲಿಯೇ ನಿಂತಿದ್ದಾಳೆ.
“ಬನ್ನಿ ತನುಜಾ” ಕರೆದಳು. ಆ ಕರೆಯಲ್ಲಿ ಯಾವ ಉತ್ಸಾಹವೂ ತೋರದೆ ಕ್ಷಣ ತನುಜಾ ಪೆಚ್ಚಾದಳು. ತತ್ ಕ್ಷಣವೇ ಸಾವರಿಸಿಕೊಂಡು ಮಾಲಿನಿಯ ಹಿಂದೆಯೇ ನಡೆದಳು.
“ಕೂತ್ಕೊಳ್ಳಿ ತನುಜಾ” ಬಲವಂತದ ಆತ್ಮೀಯತೆ ತೋರುತ್ತ ಹೇಳಿದಳು. ಯಾಕೋ ತಾನು ಬಂದ ಸಮಯ ಸರಿಯಾಗಲಿಲ್ಲವೆಂದು ಅಂದುಕೊಂಡ ತನುಜಾ ಮಾಲಿನಿ ಯಾವತ್ತೂ ಹೀಗೆ ನಡೆದುಕೊಂಡವವಳಲ್ಲ. ತಾನು ಬಂದರೆ ಅದೆಷ್ಟು ಸಡಗರದಿಂದ ಬರಮಾಡಿಕೊಳ್ಳುತ್ತಿದ್ದಳು, ಅದೆಷ್ಟು ಉಪಚರಿಸುತ್ತಿದ್ದಳು. ಆದರೆ ಇಂದೇಕೆ ಹೀಗಿದ್ದಾಳೆ? ತನ್ನ ಬರುವಿಕೆಯನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಿಲ್ಲ ಎಂಬುದು ಮನವರಿಕೆಯಾಗುವಂತಿದೆ ಅವಳ ನಡೆವಳಿಕೆ, ತಾನು ಬರಬಾರದಿತ್ತೇ? ತಾನು ಬಂದದ್ದು ಮಾಲಿನಿಗೆ ಸಹ್ಯವಾಗಲಿಲ್ಲವೇ? ಏನೋ ತೊಂದರೆಯಲ್ಲಿದ್ದಾಳೆ ಹಾಗಾದರೆ, ಈಗ ಬಂದದ್ದಾಗಿದೆ. ಏನು ಎಂದು ತಿಳಿದುಕೊಂಡೇಬಿಡೋಣ ಎಂದು ನಿರ್ಧರಿಸಿದಳು.
ಏನೊಂದೂ ಮಾತನಾಡದೆ ಮುಜುಗರಪಟ್ಟುಕೊಳ್ಳುತ, ಕುಳಿತಲ್ಲಿಯೇ ಚಡಪಡಿಸುತ್ತ ಕುಳಿತಿದ್ದ ಮಾಲಿನಿಗೆ ಒಳಗಿನಿಂದ ಸದ್ದಾದೊಡನೆ,
“ಒಂದು ನಿಮಿಷ ಬಂದೆ ತನುಜಾ” ಎಂದವಳೇ ಒಳಗೆ ಓಡಿದಳು. ತನುಜಾಳೂ ಅವಳನ್ನು ಹಿಂಬಾಲಿಸಿದಳು.
ಗಪ್ಪನೆ ವಾಸನೆ ಬಡಿಯಿತು. ಮೂಗು ಮುಚಿಕೊಳ್ಳುವಷ್ಟು ಅಸಹ್ಯವೆನಿಸಿತು. ಮಾಲಿನಿ ಹೋದ ರೂಮಿನೊಳಗೆ ಹೋಗದಾದಳು. ಉಚ್ಚೆ, ಕಕ್ಕಸಿನ ವಾಸನೆಗೆ ವಾಕರಿಕೆ ಬಂದಂತಾಗಿ ಕ್ಷಣ ಹಿಮ್ಮೆಟ್ಟಿದಳು.
“ನಿಂಗೆ ಏನಾಗಿದೆ? ಮಧ್ಯಾಹ್ನ ಅಷ್ಟೊಂದು ತಿನ್ನಬೇಡಿ ಅಂದ್ರೂ ಕೇಳಲಿಲ್ಲ. ಮಗ ಅಯ್ಯೋ ಅಂತ ಹಾಕಿಬಿಟ್ಟರು. ಈಗ ನೋಡಿ ನನ್ನ ಕರ್ಮ, ಇದೆಲ್ಲ ಬಳೀಬೇಕಾಗಿದೆ. ಮುಂಚೆನೇ ಕರೆಯೋಕೆ ಏನಾಗಿತ್ತು? ಬೆಡ್‌ಪ್ಯಾನ್ ಕೊಡ್ತಾ ಇದ್ದೆನಲ್ಲ. ಯಾರು ಇದನ್ನೆಲ್ಲ ತೊಳೆಯೋರು? ನಂಗೆ ಸಾಕಾಗಿಹೋಗಿದೆ” ಮೆಲುದನಿಯಲ್ಲಿ ಮಾಲಿನಿ ಯಾರ ಮೇಲೋ ರೇಗಾಡುತ್ತಿದ್ದಾಳೆ.
“ನಿಮ್ಮ ದೊಡ್ಡ ಮಗನಷ್ಟು ಸಾವುಕಾರಾನಾ ನನ್ನ ಗಂಡ, ಬೇಕಾದಷ್ಟು ದುಡ್ಡು ಸುರಿದು ಆಳು ಇಟ್ಕೊಳ್ಳೋದಿಕ್ಕೆ? ನಾನೇ ಇದ್ದೀನಲ್ಲ, ತಾಳಿ ಕಟ್ಟಿಸಿಕೊಂಡ ಕರ್ಮಕ್ಕೆ, ಆಳಿಗಿಂತ ಕಡೆಯಾಗಿ ಎಲ್ಲಾ ಮಾಡಬೇಕಾಗಿದೆ. ಈಗ ತಾನೇ ತಲೆಬಾಚಿ, ಮೈತೊಳೆದು, ಸೀರೆ ಉಡಿಸಿದ್ದೆ, ಈಗ ಮತ್ತೆ ಸೀರೆನಲ್ಲೇ ಎಲ್ಲಾ ಮಾಡ್ಕೊಂಡಿದ್ದೀರಲ್ಲ? ಬೆಳಗ್ಗೆಯಿಂದ ನಾಲ್ಕು ಸಲ ತೊಳೆದು, ನಾಲ್ಕು ಸೀರೆ ಒಗೆದು ಹಾಕಿದ್ದೇನೆ. ಈ ವಾಸನೆ ಹೇಗೆ ಸಹಿಸೋದು? ಯಾರಾದ್ರೂ ಮನೆಗೆ ಬಂದ್ರೆ ನಾಚಿಕೆ ಆಗುತ್ತೆ” ಜೋರಾಗಿಯೇ ಗೊಣಗುತ್ತಿದ್ದಾಳೆ.
ಅರ್ಥವಾಯಿತು ತನುಜಾಳಿಗೆ. ಅವತ್ತೇ ಮಾಲಿನಿ ಹೇಳಿದ್ದಳಲ್ಲ, ಅತ್ತೇನಾ ಕರ್ಕೊಂಡು ಬರಬೇಕಾಗಿದೆ. ಭಾವ ವಿದೇಶಕ್ಕೆ ಹೋಗ್ತಾ ಇದ್ದಾರೆ. ನಾವಿಷ್ಟು ದಿನ ನೋಡ್ಕೊಂಡಾಗಿದೆ. ಇನ್ನು ಮೇಲೆ ನೀವು ನೋಡ್ಕೊಳ್ಳಿ ಅಂತ ಹೇಳ್ತಾ ಇದ್ದಾರೆ ಅಂದದ್ದು ನನಗೆ ಮರೆತೇಹೋಗಿತ್ತು. ವಯಸ್ಸಾಗಿರೋ ಅತ್ತೇನಾ ನೋಡ್ಕೊಳ್ಳೋಕೆ ಮಾಲಿನಿ ರಜೆ ಹಾಕಿರುವುದು.
ಮನೆಯ ಪರಿಸ್ಥಿತಿ ಮೊದಲಿನಂತೆ ಇಲ್ಲದಿರುವುದೇ ಮಾಲಿನಿಗೆ ನನ್ನ ಬರುವಿಕೆ ಇಷ್ಟವಾಗಿಲ್ಲ. ಅತ್ತೆಯ ಸೇವೆಯಿಂದ ಬಳಲಿ ಹೋಗಿದ್ದಾಳೆ. ಹಾಗಾಗಿಯೇ ಸಹನೆ ಇರದ ಮಾಲಿನಿ ರೇಗಾಡುತ್ತಿದ್ದಾಳೆ ಎಂದು ಎಲ್ಲವನ್ನೂ ಗ್ರಹಿಸಿದ ತನುಜಾ ಹಿಂದಕ್ಕೆ ಬಂದು ಮುಂಚೆ ಕುಳಿತಿದ್ದ ಜಾಗದಲ್ಲಿಯೇ ಕುಳಿತುಕೊಂಡಳು.
ಕಾಲುಗಂಟೆಯ ಅನಂತರವೇ ಮಾಲಿನಿ ಹೊರಬಂದದ್ದು. ಸೋತು ಸೊಪ್ಪಾಗಿದ್ದಳು. ಮೊದಲೇ ಮಾಲಿನಿಯದು ಸೂಕ್ಷ್ಮ ಶರೀರ, ಕೊಂಚ ದಪ್ಪವೇ ಇದ್ದ ಮಾಲಿನಿ, ಮನೆ ಕೆಲಸ ಮಾಡುವಷ್ಟರಲ್ಲಿಯೇ ಸುಸ್ತಾಗಿಬಿಡುತ್ತಿದ್ದಳು. ಮನೆಗೆಲಸ, ಆಫೀಸಿನ ಕೆಲಸ ಎರಡನ್ನೂ ತೂಗಿಸಲಾರದೆ ಒದ್ದಾಡುತ್ತಿದ್ದಳು. ಹೆಣ್ಣು ಮಕ್ಕಳಿದ್ದರೂ ಅವರು ತಮ್ಮ ಕಾಲೇಜು, ಟ್ಯೂಶನ್ ಎಂದು ತಮ್ಮದೇ ಪ್ರಪಂಚದಲ್ಲಿ ಮುಳುಗಿ ಹೋಗಿ ಬಿಡುತ್ತಿದ್ದರು. ಹಾಗಾಗಿ ಮಾಲಿನಿಗೆ ತುಂಬಾ ಕಷ್ಟವಾಗುತ್ತಿತ್ತು.
“ನೀನೇ ಎಲ್ಲಾ ಕೆಲಸ ಮಾಡಿ ಸೊರಗಬೇಡ. ಎಲ್ಲರಿಗೂ ಒಂದೊಂದು ಕೆಲಸ ವಹಿಸಿಬಿಡು. ಅವರವರ ಕೆಲಸ ಅವರವರು ಮಾಡಿಕೊಳ್ಳಲಿ. ಅಡುಗೆ ಮಾಡುವಾಗ ಪತಿಯ ಸಹಾಯ ಪಡೆದುಕೊ” ಎಂದೆಲ್ಲ ತಾನು ಸದಾ ಹೇಳುತ್ತಿದ್ದರೂ ಮಾಲಿನಿ ತಾನೇ ಎಲ್ಲವನ್ನೂ ನಿಭಾಯಿಸುತ್ತ ಸುಸ್ತಾಗಿ ಬಂದು ಆಫೀಸಿನ ಕೆಲಸವನ್ನೂ ಸರಿಯಾಗಿ, ಬೇಗ ಬೇಗ ಮಾಡದೆ ಬಾಸ್ ಕೈಯಲ್ಲಿ ಬೈಸಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಮಾಲಿನಿಯ ಬಗ್ಗೆ ಕನಿಕರಿಸಿ ಎಷ್ಟೋ ಕೆಲಸ ಮಾಡಿಕೊಟ್ಟು ಅವಳ ಕೆಲಸವನ್ನು ಹಗುರ ಮಾಡುತ್ತಿದ್ದಳು. ಆದರೆ ಇದು ಒಂದು ದಿನದ ಸಮಸ್ಯೆ ಅಲ್ಲವಲ್ಲ. ತನುಜಾಳಿಗೂ ಮನೆ, ಆಫೀಸು ಎಂದು ದುಡಿಯಬೇಕಿತ್ತು. ಆದರೆ ತನುಜಾ ಮಾಲಿನಿಯಷ್ಟು ಎಲ್ಲವನ್ನೂ ತನ್ನ ತಲೆಯ ಮೇಲೆ ಹಾಕಿಕೊಂಡಿರಲಿಲ್ಲ.
“ಸ್ಸಾರಿ ತನುಜಾ, ಅಪರೂಪಕ್ಕೆ ಮನೆಗೆ ಬಂದಿದ್ದೀರಿ. ನಿಮ್ಮನ್ನ ವಿಚಾರಿಸಿಕೊಳ್ಳೋಕೂ ಆಗ್ತಾ ಇಲ್ಲ” ಎಂದವಳೇ ಸೋಫಾದ ಮೇಲೆ ಕುಕ್ಕರಿಸಿದಳು ಮಾಲಿನಿ.
“ಪರ್ವಾಗಿಲ್ಲ ಮಾಲಿನಿ, ನೀವು ಎಂಟು ದಿನದಿಂದ ಆಫೀಸಿಗೂ ಬಂದಿಲ್ಲ. ನಂಗೂ ಏನೂ ತಿಳಿಸಿಲ್ಲವಲ್ಲ, ಫೋನ್ ಕೂಡ ಮಾಡಲಿಲ್ಲವಲ್ಲ ಮಾಲಿನಿ. ಅದಕ್ಕೆ ಏನು ಅಂತ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆ.”
“ಅಯ್ಯೋ, ನಿಮ್ಗೆ ಹೇಳಲೇ ಇಲ್ಲ ಅಲ್ವಾ ನಾನು. ಹೇಳಿದ್ದೀನಿ ಅಂತ ತಿಳ್ಕೊಂಡು ಬಿಟ್ಟಿದ್ದೀನಿ. ನಮ್ಮ ಅತ್ತೇನಾ ಬಿಟ್ಟುಹೋಗ್ತಾರೆ ಅಂತ ಹೇಳಿದೆನಲ್ಲ ತನುಜಾ, ಅದೇ ಚಿಂತೆಯಲ್ಲಿ ನಂಗೆ ಏನೂ ಗೊತ್ತಾಗ್ಲಿಲ್ಲ. ನಮ್ಮ ಭಾವ ಅತ್ತೆನಾ ಬಿಟ್ಟು ಹೋಗಿ ಎಂಟು ದಿನ ಆಯ್ತು. ನಂಗೆ ಎಂಟು ಯುಗವಾಗಿದೆ ಅನ್ನಿಸುತ್ತಾ ಇದೆ ತನುಜಾ. ಸಾಕಾಗಿ ಹೊಗಿದೆ. ವಯಸ್ಸಾದ ಮೇಲೆ ಬದುಕಬಾರದು. ಅದೂ ಹೀಗಾದ ಮೇಲಂತೂ ಬದುಕಲೇಬಾರದು ತನುಜಾ. ಸಣ್ಣ ಮಗೂಗೆ ಮಾಡಿದ ಥರ ಮಾಡಬೇಕು. ಜೀವನದ ಮೇಲೆ ಜುಗುಪ್ಸೆ ಬಂದುಬಿಟ್ಟಿದೆ ನನಗೆ. ತಾಯಿ ತಾಯಿ ಅಂತ ಮಗ ಚೆನ್ನಾಗಿ, ತಿನ್ನಿಸಿಬಿಡ್ತಾರೆ. ಆಮೇಲೆ ನೋಡಿ, ನನ್ನ ಕರ್ಮ, ಎಲ್ಲಾ ಬಳಿದು ತೊಳೆಯಬೇಕು. ಇಡೀ ಮನೆ ವಾಸನೆಯಿಂದ ತುಂಬಿಹೋಗಿದೆ. ಮನೆ ಭರ್ತಿ ಅವರ ಬಟ್ಟೆನೇ ಒಣಗಿ ಹಾಕಿದ್ದೀನಿ. ನಮ್ಮ ಮನೆ ಕೆಲಸದವಳೂ ಇದೆಲ್ಲ ನಾನು ತೊಳೆಯಲ್ಲ ಅಂತ ಕೆಲ್ಸನೇ ಬಿಟ್ಟುಬಿಟ್ಟಳು. ಮನೆಕೆಲಸ ಮಾಡಿಕೊಂಡು, ಆತ್ತೆ ಕೆಲಸನೂ ಮಾಡಿ ನಾನೇ ಸತ್ತುಹೋಗ್ತೀನೇನೋ ಅಂತ ಅನ್ನಿಸುತ್ತಾ ಇದೆ ತನುಜಾ.”
“ಛಿ ಛೀ, ಹಾಗ್ಯಾಕೆ ಮಾತಾಡ್ತೀರಿ?”
“ಮತ್ತೆ! ಇನ್ನೇನು ಮಾಡಲಿ? ಪುಟ್ಟ ಮಕ್ಕಳದ್ದಾದ್ರೆ ಹೇಗೋ ಮಾಡಬಹುದು. ಆದರೆ ಈ ವಯಸ್ಸಾಗಿರೋರನ್ನ ಸುಧಾರಿಸೋಕೆ ತುಂಬಾ ಕಷ್ಟ. ಇಡೀ ದೇಹನಾ ಎತ್ತಿ ಸ್ನಾನ ಮಾಡಿಸಿ, ಬಟ್ಟೆ ಹಾಕಿ ಮತ್ತೆ ಮತ್ತೆ ಕ್ಲೀನ್ ಮಾಡೋದೇನು ಸುಲಭನಾ? ನನ್ನ ಕೈಲಂತೂ ಸಾಧ್ಯವೇ ಇಲ್ಲ. ಇವತ್ತು ಬೆಳಗ್ಗೆ ಕೂಡ ಅವರ ಜತೆ ಗಲಾಟೆ ಆಯ್ತು ಇದೇ ವಿಷಯಕ್ಕೆ, ಅವರೂ ರಜಾ ಹಾಕೋ ಹಾಗಿಲ್ಲ. ನಾನೊಬ್ಳೆ ನೋಡ್ಕೊಬೇಕು ಅಂದ್ರೆ ಹೇಗೆ? ಅವರಮ್ಮ ಅಲ್ಲವೇ? ಅವರೇ ನೋಡಿಕೊಳ್ಳಲ್ಲ. ಮನುಷ್ಯತ್ವ ಅಂದ್ಕೊಂಡು ಇಷ್ಟು ದಿನ ನೋಡ್ಕೊಂಡದ್ದಾಯ್ತು. ಇನ್ನೊಂದು ನಾಲ್ಕು ದಿನ ನಾನು ಹೀಗೆ ಸೇವೆ ಮಾಡ್ತಾ ಇದ್ರೆ ನಾನು ಆಸ್ಪತ್ರೆಗೆ ಅಡ್ಮಿಟ್ ಆಗೋದಂತೂ ನಿಜ. ನನ್ನ ಆಮೇಲೆ ನೋಡೋರು ಯಾರು? ಅದಕ್ಕೆ ತೀರ್ಮಾನ ಮಾಡಿಬಿಟ್ಟಿದ್ದೇನೆ” ಸೋತ ಸ್ವರದಲ್ಲಿ ಮಾಲಿನಿ ಹೇಳುತ್ತಿದ್ದರೆ ತನುಜಾಳಿಗೆ ಅಯ್ಯೋ ಪಾಪ ಎನಿಸಿತು.
“ಏನ್ ತೀರ್ಮಾನ ಮಾಡಿದ್ದೀರಾ ಮಾಲಿನಿ? ನಿಮ್ಮ ಭಾವನೂ ಇಲ್ಲಿ ಇಲ್ಲವಲ್ಲ.”
“ಯಾವುದಾದರೂ ವೃದ್ದಾಶ್ರಮಕ್ಕೆ ಸೇರಿಸಿಬಿಡೋದು ಅಂತ. ದುಡ್ಡು ಖರ್ಚಾದರೂ ಪರ್ವಾಗಿಲ್ಲ. ಈ ನರಕದಿಂದ ಪಾರಾದ್ರೆ ಸಾಕು.”
“ಅಷ್ಟೊಂದು ಹತಾಶರಾಗಬೇಡಿ ಮಾಲಿನಿ, ಹೆತ್ತ ಮಕ್ಕಳಿದ್ದು, ನೀವು ಆಶ್ರಮಕ್ಕೆ ಸೇರಿಸುತ್ತೇನೆ ಎಂದರೆ ಆ ವಯಸ್ಸಾದ ಜೀವ ಅದೆಷ್ಟು ನೋವು ಅನುಭವಿಸಬಹುದು ಹೇಳಿ? ಏನಾದರೂ ಪರ್ಯಾಯವಾಗಿ ಆಲೋಚನೆ ಮಾಡಿ ಮಾಲಿನಿ.”
“ಇನ್ಯಾವ ಪರ್ಯಾಯ ಆಲೋಚನೆಗೂ ಅವಕಾಶವಿಲ್ಲ ತನುಜಾ, ಕೆಲಸದವರು ಸಿಕ್ಕುವುದಿಲ್ಲ, ಸಿಕ್ಕಿದರೂ ಅವರ ಮೇಲೆ ಮನೆ ಬಿಟ್ಟು ಹೋಗೋಕೆ ಸಾಧ್ಯ ಇಲ್ಲ. ನೀವೇ ಹೇಳಿ, ಇನ್ನೇನು ಮಾಡಬಹುದು?”
“ನಾನೊಂದು ಲೇಖನ ಓದಿದ್ದೆ ಮಾಲಿನಿ. ಇಂಥ ವೃದ್ದರಿಗಾಗಿಯೇ ಕೆಲಸ ಮಾಡೋ ಸಂಸ್ಥೆ ಇದೆಯಂತೆ. ಆ ಸಂಸ್ಥೆಯಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡೋ ನರ್‍ಸ್‍ಗಳು ಇದ್ದಾರೆ. ದುಡ್ಡು ಕೊಟ್ರೂ ನಿಸ್ವಾರ್‍ಥದಿಂದ, ಪ್ರೀತಿಯಿಂದ ಕೆಲಸ ಮಾಡೋರು ಖಂಡಿತ ಇಲ್ಲಾರೂ ಸಿಕ್ಕೊಲ್ಲ. ಆದರೆ ಆ ನರ್ಸ್‌ಗಳು ಸೇವಾ ಮನೋಭಾವನೆಯಿಂದ, ಪ್ರೀತಿಯಿಂದ, ಅಂತಃಕರಣದಿಂದ, ಕರುಣೆಯಿಂದ ಇಂಥ ಕೈಲಾಗದ ಅಸಹಾಯಕ ವೃದ್ದರ ಸೇವೆ ಮಾಡುತ್ತಾರೆ. ಅಂಥ ಒಬ್ಬಳು ನರ್ಸನ್ನ ನಿಮ್ಮ ಮನೆಗೆ ಕರೆಸಿಕೊಂಡರೆ ಹೇಗೆ? ಸಂಬಳ ಕೊಟ್ಟರೆ ಆಯ್ತು. ತುಂಬಾ ನಂಬಿಕಸ್ತರೇ ಇಂಥ ಕಡೆ ಬರೋದು. ಅವರಿಗೆ ಒಂದು ರೂಮ್ ಬಿಟ್ಟುಕೊಟ್ಟು, ಊಟ-ತಿಂಡಿ ಕೊಟ್ಟು, ತಿಂಗಳಿಗೆ ಸಂಬಳ ಕೊಟ್ರೆ ತುಂಬಾ ಚೆನ್ನಾಗಿ ನಿಮ್ಮ ಅತ್ತೆನಾ ನೋಡಿಕೊಳ್ಳುತ್ತಾರೆ. ನಿಮಗೆ ಬೇಕು ಅಂದ್ರೆ ಆ ಸಂಸ್ಥೆಯ ಅಡ್ರೆಸ್ ಕೊಡ್ತೀನಿ. ನಿಮ್ಮ ಮನೆಯವರ ಹತ್ರನೂ ಮಾತನಾಡಿ.”
“ಅದೆಲ್ಲ ಆಗದ-ಹೋಗದ ಮಾತು. ಆ ನರ್‍ಸನ್ನ ತಂದಿಟ್ಕೊಂಡು, ಅವಳಿಗೆ, ಊಟ-ತಿಂಡಿ, ಸಂಬಳ ಅಂತ ಎಲ್ಲಿ ಕೊಡೋಕೆ ಸಾಧ್ಯ ತನುಜಾ?” ಒಂದೇ ಸಲಕ್ಕೆ ತಿರಸ್ಕರಿಸಿಬಿಟ್ಟಳು.
“ನೀವೊಬ್ಬರೇ ಆ ಖರ್‍ಚನ್ನೆಲ್ಲ ಭರಿಸಬೇಡಿ. ಇರೋ ವಿಷಯ ತಿಳಿಸಿ, ನಿಮ್ಮ ಭಾವನಿಗೂ ಖರ್ಚನ್ನ ವಹಿಸಿಕೊಳ್ಳೇಕೆ ಹೇಳಿ.”
“ಅಯ್ಯೋ ತನುಜಾ, ಅವರೆಲ್ಲಿ ಕೊಡ್ತಾರೆ. ಇಷ್ಟು ದಿನ ನಾವು ನೋಡ್ಕೊಂಡಿದ್ದೇವೆ. ಇನ್ನು ಮೇಲೆ ಎಲ್ಲಾ ನಿಮ್ಮದೇ ಎಂದುಬಿಟ್ಟಿದ್ದಾರೆ. ಅದೂ ಅಲ್ಲದೆ ಯಾವುದೋ ಹೆಂಗಸನ್ನ ಮನೆಯಲ್ಲಿಟ್ಟುಕೊಂಡು ಆಕೆಗೆಲ್ಲಿ ಹೊತ್ತು ಹೊತ್ತಿಗೆ ಬೇಯ್ಸಿ ಹಾಕುತ್ತಾರೆ? ಅದರ ಜತೆಗೆ ಸಂಬಳ ಬೇರೆ, ಅದು ಆಗದಹೋಗದ ಮಾತು. ನಮ್ಮ ಮನೆಯವರು ಬೇರೆ ಹೆಂಗಸರನ್ನು ಕಂಡರೆ ಹೇಗೇಗೋ ಆಡ್ತಾರೆ. ಅಂಥದ್ದರಲ್ಲಿ ಹೆಂಗಸರನ್ನ ಮನೆಯಲ್ಲಿ ಇಟ್ಟುಕೊಳ್ಳೋಕೆ ಆಗುತ್ತಾ? ನಮ್ಮ ಮನೆ ಚಿನ್ನನೇ ಸರಿ ಇಲ್ಲ. ನಾವೇ ಎಚ್ಚರಿಕೆಯಿಂದ ಇರಬೇಕು ಅಲ್ಲವಾ? ಆದಾದ ಉಸಾಬರಿನೇ ಬೇಡ. ಇವತ್ತು ನಮ್ಮೆಜಮಾನರು ಎಲ್ಲಾ ವಿಚಾರಿಸಿಕೊಂಡು ಬರ್ತಾರೆ. ಅಲ್ಲಿಗೆ ಸಾಗಹಾಕ್ತೀವಿ. ಸಾಯೋವರೆಗೂ ದುಡ್ಡು ಕಟ್ಟಿ ಋಣ ತೀರಿಸಿಕೊಳ್ತೀವಿ” ಕಡ್ಡಿ ಮುರಿದಂತೆ ಖಡಾಖಂಡಿತವಾಗಿ ಹೇಳಿಬಿಟ್ಟಾಗ, ತಾನು ಈಗ ಏನು ಹೇಳಿದರೂ ಪ್ರಯೋಜನಕ್ಕೆ ಬಾರದು ಎಂದುಕೊಂಡು ವಿಷಯವನ್ನು ಅಲ್ಲಿಗೆ ಬಿಟ್ಟುಬಿಟ್ಟಳು ತನುಜಾ.
“ಹೋಗ್ಲಿ ಬಿಡಿ, ನಿಮಗೆ ಹೇಗೆ ಅನುಕೂಲವೋ ಹಾಗೆ ಮಾಡಿ. ಪಾಪ, ನೀವು ತಾನೇ ಏನು ಮಾಡೋಕೆ ಸಾಧ್ಯ?”
ಹಾಗೆಂದ ಕೂಡಲೇ ಮಾಲಿನಿ ಗೆಲುವಾಗಿಬಿಟ್ಟಳು.
“ನೀವೇನೇ ಹೇಳಿ ತನುಜಾ, ವಯಸ್ಸಾದ ಮೇಲೆ ಬದುಕಬಾರದು ಕಣ್ರಿ, ಹಾಗೆ ಇನ್ನೊಬ್ಬರ ಮೇಲೆ ಡಿಪೆಂಡ್ ಆಗ್ತೀವಿ ಅಂತ ಗೊತ್ತಾದ ಕೂಡಲೇ ನಾವೇ ಏನಾದ್ರೂ ಮಾಡಿಕೊಂಡು ಸ್ವರ್ಗ ಸೇರಿಬಿಡಬೇಕು. ನಾನಂತೂ ನನ್ನ ಮಕ್ಕಳಿಗೆ ತೊಂದರೆ ಕೊಡಲ್ಲ. ಹೇಗೂ ಪೆನ್ಶನ್ ಬರ್ತಾ ಇರುತ್ತೆ. ಮಕ್ಕಳು-ಮೊಮ್ಮಕ್ಕಳು ಅನ್ನೊ ಯಾವ ವ್ಯಾಮೋಹನೂ ಇಟ್ಟುಕೊಳ್ಳದೆ ವೃದ್ದಾಶ್ರಮ ಸೇರಿಬಿಡ್ತೀನಿ. ತಾಯಿ ಅನ್ನೋ ಕರುಣೆ ಇದ್ರೆ ಅಲ್ಲಿಗೆ ಬಂದು ನೋಡಿಕೊಂಡು ಹೋಗಲಿ. ಸತ್ತಾಗ ಸಂಸ್ಕಾರ ಮಾಡಲಿ. ಈ ರೀತಿ ಎಲ್ಲ ಅವರ ಮೇಲೆ ಡಿಪೆಂಡ್ ಆಗಲ್ಲಪ್ಪ.”
“ನೀವು ಹೇಳೋದು ಸರಿನೇ” ಅಂದಳು ತನುಜಾ. ನಾವೇ ನಮ್ಮ ಹಿರಿಯರಿಗೆ ಮಾಡದೆ ಹೋದರೆ ಯಾವ ಮುಖ ಹೊತ್ಕೊಂಡು ನಮ್ಮ ಮಕ್ಕಳು ನಮಗೆ ಮಾಡಿ ಅನ್ನೋಕೆ ಸಾಧ್ಯ, ಆತ್ಮಸಾಕ್ಷಿ ಅಂತ ಒಂದಿರುತ್ತಲ್ಲ. ಅದು ಹಾಗೆ ನಿರೀಕ್ಷಿಸೋಕೆ ಎಲ್ಲಿ ಬಿಡುತ್ತೆ? ಮನಸ್ಸಿನಲ್ಲಿಯೇ ಅಂದುಕೊಂಡಳು.
*****