ಬದುಕುವುದು ಭೀಕರವೆಂದರೆ
ನಿಜವೆನ್ನೋಣ; ಆದರೆ
ಸಾವೂ ಭೀಕರವಾಗಬೇಕೆ?
ಕರೆದುಕೊಂಡಂತೆ ಸೀತೆಯನ್ನು
ಭೂಮಿ ಅಮ್ಮನಾಗಬಾರದೇಕೆ?
ಸಾಯಿಸುವುದಕ್ಕೂ ಸಿಟ್ಟಾಗಿ ಆಕೆ
ಕೆಂಡಮಂಡಲವಾಗಬೇಕೆ?
ಸಿಟ್ಟೆಂದರೆ ಎಂಥ ಸಿಟ್ಟು!
ಹಾವಂತೆ ಹರಿದಾಡಿದ ಗುಟ್ಟು
ಸಾವಿನ ಎಡೆ ಕೇಳುತ್ತ ಹೆಡೆಯತ್ತಿ
ಬುಸ್ಸೆಂದು ಬಿರುಕು ಬಿಟ್ಟಾಗ
ಅಂತಃಕರಣದ ಆಪೋಶನ
ವಿಷನರ್ತನ!
ಕುಣಿದ ಕಾಲ್ತುಳಿತಕ್ಕೆ
ನೆಲ ನೆತ್ತರ ಕಾರಿತು
ಕತ್ತಲೆಯಿಂದ ಬೆಳಕಿಗೆ
ಬೆಳಕಿನಿಂದ ಕತ್ತಲೆಗೆ
ಕಟ್ಟಿದ ಸೇತುವೆ
ಗಪ್ಪನೆ ಕುಸಿಯಿತು.
ಕಾಲನ ಜೊತೆ ಕಾಳಗವಾಡುತ್ತ
ಬೆವರಾಗಿ ಹರಿದ
ಕರಿಮೈ ಕಾಲುವೆ
ಬತ್ತಿಹೋಯಿತು.
ನಸುನಗೆಯ ಚಂದಿರ
ಚಿಂದಿಚಿಂದಿಯಾದ.
ಉರಿಗಣ್ಣ ಸೂರ್ಯ
ಸುಟ್ಟು ಕರಕಾದ
ಹಗಲು ರಾತ್ರಿಗಳಿಲ್ಲದ
ನೆಲದಲ್ಲಿ ಬಿಲಕ್ಕಾಗಿ
ಬಾಯ್ದೆರೆದ ಜೀವಗಳು
ಒಡೆದ ಗಡಿಗೆಯಲ್ಲಿ ನೀರು ಹೊತ್ತು
ದಾವರ ಹಿಂಗಿಸ ಹೊರಟ
ತುಂಬಿದ ಭಾವಗಳು.
ಭೂಕಂಪದ ಬದುಕಿನಲ್ಲಿ
ನಡುಗುತ್ತಿದೆ ಭಾರತ
ನೊಂದವರೇ ನಂದಾದೀಪವಾಗಿ
ಮುನ್ನಡೆಯುತ್ತದೆ ಖಂಡಿತ.
*****