ರಾಮಾಯಣ ಪಾರಾಯಣ
ಮಾಡಿ ಮುಗಿಸಿದ್ದೆ,
ರಾಮನವಮಿಯ ರಾತ್ರಿ.
ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ,
ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ
ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ,
ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ.
ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ
ತೂರಿ ಬಂದಿತು ಏನೋ ;
ಕೊಳೆತ ಇಲಿವಾಸನೆ ಒಳಗೆ ಹಬ್ಬುತ್ತಿತ್ತು.
ನಿಮಿಷಾರ್ಧದಲ್ಲಿ ನನ್ನೆದುರು ಕುರ್ಚಿಯ ಮೇಲೆ
ನಗುತ್ತ ಕೂತಿತ್ತೊಂದು ನೀಳ ಎಲುಬಿನ ದೆವ್ವ!
“ಮತ್ತೆ ಬಂತಲ್ಲಪ್ಪ, ಕರೆಯದೇ ಕೇಳದೇ
ಹಾಳು ಪ್ರಾರಬ್ಧ!
ಆಡುವಂತಿಲ್ಲ ಅನುಭವಿಸುವಂತಿಲ್ಲ;
ಎಲ್ಲ ತಿಳಿಯುತ್ತದೆ ದರಿದ್ರ ಮುಚ್ಚಿಡುವಂತೇ ಇಲ್ಲ.
ಒದ್ದು ಹೊರ ಹಾಕಿದ್ದರೂ,
ಮರ್ಯಾದೆ ಇದ್ದರೆ ತಾನೆ?
ಮತ್ತೆ ಬಂದಿದೆ, ಶುದ್ಧ ತರಲೆ” ಎನ್ನಿಸಿತು.
“ಯಾಕೆ ನಗುತ್ತೀ” ಎಂದೆ,
ನಾನೂ ನಗುಮುಖ ಮಾಡಿ.
“ನಿನ್ನ ಪೆದ್ದುತನಕ್ಕೆ,
ತೆಗಳಬೇಕಾದವನ ಹಾಡಿ, ಹೊಗಳಿ, ಕುಣಿದು
ಪ್ರಸಾದ ನುಂಗಿದ್ದಕ್ಕೆ,
ತರ್ಕದ ತಕ್ಕಡಿ ಒದ್ದು, ಶ್ರದ್ಧೆಗೆ ಟೋಪಿ ಬಿದ್ದು
ತಿಳಿದರೂ ತಿರುತಿರುಗಿ
ಮೋಸ ಹೋಗುವುದಕ್ಕೆ.
ಮನುಷ್ಯ ಮುಟ್ಠಾಳ ನಿಜ,
ನಿಮ್ಮ ಹೆಸರೆತ್ತಿದರೆ ಸಾಕು ದೆವ್ವಗಳೆಲ್ಲ
ಘೊಳ್ಳೆನ್ನುತ್ತವೆ” ಅಂತ ಖೊಕ್ ಎಂದು ನಕ್ಕಿತು.
“ಮುಚ್ಚು ಬಾಯಿ, ಸಾಕು. ಹೇಗೆ? ಬೊಗಳು” ಅಂತ
ಸಿಟ್ಟಾಗಿ ಕೇಳಿದೆ.
ಅಪ್ಪ ಕೊಟ್ಟಿದ್ದ ಒಂದು ತಪ್ಪು ಮಾತನ್ನೇ ಹಿಡಿದು
ರಾಜ್ಯ ನಡೆಸುವ ಹೊಣೆಯ ಬಿಡುವವನು ಗಂಡ?
ಮೆಚ್ಚಿರುವೆ ಮದುವೆಯಾಗೋ ಎಂದ ಹೆಣ್ಣಿನ
ಮೂಗು ಕಿವಿ ಕೊಯಿಸಿದವ ನಿಜವಾಗಿ ಪುಂಡ!
ಅಣ್ಣನ್ನ ಬಿಟ್ಟು ಒಂದ ಸುಳ್ಳು ತಮ್ಮನ್ನ
ತಬ್ಬಿ ಬಾ ಎನ್ನುವವ ಯಾವನಿಗೆ ಅಣ್ಣ?
ಕಿಚ್ಚಲ್ಲಿ ಒಮ್ಮೆ ಬಿದ್ದೆದ್ದರೂ ಶಂಕಿಸಿ
ಕಾಡಿಗಟ್ಟಿದನಲ್ಲ ಬಸಿರಿ ಹೆಣ್ಣನ್ನ ?
ಯಾರ ರಾಜ್ಯದ ಮಾತೊ ಯಾಕಪ್ಪ ಅವನಿಗೆ ?
ಬೆಂಕಿಗೆ ತುಪ್ಪ ಸುರಿವ ದಡ್ಡ ಬೈರಾಗಿಗಳ
ಪರ ಹಿಡಿದು ಯಾರನ್ನೋ ತದುಕುವುದು ಯಾಕೆ ?
ಸೀಕರಣೆ ಪಾನಕ ಸಿದ್ದೋಟಿ ಹೋಳುಗಳ
ಚಪಲ ನಿಮಗೆ.
ತಿನ್ನಬಾರದೆ ಅದನ್ನು ಹಾಗೆಯೇ? ಅಷ್ಟಕ್ಕೆ
ಆ ರಾಮ ಯಾತಕ್ಕೆ ?
ಚಿನ್ನದಂಥ ಮನುಷ್ಯ ರಾವಣ, ಅವನನ್ನ
ತೆಗಳುವುಮ ಬೇಕಿತ್ತೆ ?”
ಎಲಾ ಎನಿಸಿತು. ಪೂರಾ ತಬ್ಬಿಬ್ಬಾಗಿ ಹೋದೆ !
ಏನು ವಾದ! ಅದೆಷ್ಟು ತರ್ಕಶುದ್ಧ, ಪ್ರಬುದ್ಧ
ಎಂಥ ಶೀರ್ಷಾಸನ !
“ಅರೇ, ಆ ರಾವಣ ಯೋಗ್ಯಮನುಷ್ಯ ಹೇಗೆ ?
ಯಾರ ಹೆಣ್ಣನ್ನೊ ಮರೆಯಲಿ ಕದ್ದೊಯ್ದದ್ದು
ಸರಿಯೇನು?” ಎಂದೆ.
“ಮರೆಯಿಂದ ವಾಲಿಯನ್ನು ಬಡಿದದ್ದು ಗೊತ್ತ ?
ದ್ವೇಷವೇ ಇಲ್ಲದೆ ಕೊಲ್ಲಬಹುದೆಂದರೆ
ಆಸೆಯಾದವಳನ್ನು ಕದ್ದರೇನಂತೆ ?
ಒಪ್ಪಿಗೆ ಇರದೆ ಪಾಪ, ಮುಟ್ಟಲಿಲ್ಲ ಕೂಡ !”
ಎಂದದ್ದೆ ಭೂತ ಬೇರೆ ಏನೋ ನೆನಪಿಸಿಕೊಂಡು
ಹಠಾತ್ತನೆ ಎದ್ದಿತು.
“ಕೆಲಸವಿದೆ ನನಗೂ, ರಾವಣನ ಜಯಂತಿ ಇವತ್ತು
ನಿಮಗೆ ಸೀಕರಣೆ ಪಾನಕ; ನಮಗೆ ಹಸಿಹೆಣದ
ರಸಗವಳ; ಕಾಯುತ್ತ ಇರುತ್ತಾರೆ” ಎನ್ನುತ್ತ
ಹಾರಿಹೋಯಿತು ಭೂತ ಕಣ್ಣು ಹೊಡೆದು ನಗುತ್ತ
“ಟಾ ಟಾ” ಎನ್ನುತ್ತ!
*****