ಝಗ ಝಗಿಸುವ ಮಾರ್ಕೆಟ್ಟಿನ ಜರತಾರಿ ಜಗತ್ತು
ಬೆಳಕಿನ ಬೋಗುಣಿ ಅಂಗಡಿ, ಮುಸ್ಸಂಜೆಯ ಹೊತ್ತು.
ಅಂಗಡಿಯೆರಡೂ ಬದಿಗೂ ಪತ್ತಲಗಳ ತೂಗು
ಬಣ್ಣದ ಸರಕಿನ ಲೀಲೆ, ಬಯಕೆಯುರಿಯ ಕೂಗು.
ಯಾರಯಾರ ಜೊತೆಗೊ ಮಾತು ಎಲ್ಲೆಲ್ಲೋ ಕೂತು,
ಕುದಿ ತುಂಬಿದ ಏರುಕೂಗು ಯಾರನ್ನೋ ಕುರಿತು.
ಗುಹೆಯ ಆಳದಿಂದ ಮೇಲೆ ಚಿಮ್ಮಿ ಬರುವ ಒಳದನಿ
ಇನ್ನಾವುದೊ ದಿಕ್ಕಿನಿಂದ ಅದಕ್ಕೊಂದು ಮಾರ್ದನಿ.
ಗಡಿಬಿಡಿ ಕಾತರ ಸಡಗರ ಸಂಭ್ರಮದುದ್ಗಾರ,
ಮೇಲೆ ಏರಿ ತೂರಿ ಕವಿದು ಹೋರುವ ಹುನ್ನಾರ;
ಉಕ್ಕಿದ ಜೀವದ ಮೋದವ ಮತ್ತಾವುದೊ ಪಾತ್ರಕೆ
ಸುರಿಯಬೇಕು ಎನ್ನಿಸುವ ಕಿಚ್ಚು ಜೀವ ಜೀವಕೆ.
ಏನೋ ಖಿನ್ನತೆ ಈಗ ಇರುಳು ಇಳಿವ ಹೊತ್ತಿಗೆ
ಜೀವ ಹಸಿದು ಕೂಗುತ್ತಿದೆ ಹೊತ್ತು ತರದ ಬುತ್ತಿಗೆ.
ಆರುತ್ತಿದೆ ಒಂದೊಂದೇ ದೀಪ ಆಗಲೇನೆ
ಮುಚ್ಚಿ ಬಿಡುವುದಂಗಡಿ ಇನ್ನು ಬೇಗಲೇನೆ.
ಬಿಟ್ಟುಕೊಡುವ ಸಮಯಕ್ಕೆ ಏನೋ ಖೇದ ಉಕ್ಕಿದೆ,
ನೆನಪಿನ ಹರೆಯೇರಿ ಮಂಗ ನೆಲದತ್ತಲೆ ಜೀಕಿದೆ.
ನಡೆದು ಬಂದ ದಾರಿಯಲ್ಲಿ ಮರಳಿ ಮನದ ಆಟ,
ಹಾಯದಿದ್ದ ಓಣಿಗಳಲೂ ಕಲ್ಪನೆಗಳ ಆಟ.
ಮುಲುಕುತ್ತಿದೆ ಕಿಟಕಿ ಬದಿಗೆ ಕತ್ತರಿಸಿದ ಬಾಲ,
ಬಾಯಿಬಿಗಿದ ಚೀಲದಲ್ಲಿ ಮಿಡುಕುವ ಮಾರ್‍ಜಾಲ.
*****