ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ.
ಓವರಿಗೆ ಎರಡೆರಡು ಫೋರುಗಳ ಗುಡುಗು
ನಡುವೆ ಸಿಕ್ಸರ್ ಸಿಡಿಲು,
ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ
ಮೈದಾನದಲ್ಲೆ ಕಣ್ಣಿದಿರು!
ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ
ಕುಣಿದು ಧೀಂಕಿಡುವ ಸಹಸ್ರಾರು ಭಕ್ತರ
ಆನಂದ ನೃತ್ಯ!
ಚಿತ್ರ ಕ್ಲಿಕ್ಕಿಸುತ್ತಿರುವ ಥರಾವರಿ ಕ್ಯಾಮೆರಾ,
ಲಾಠಿ ಬೀಸುವ ಖಾಕಿ ಟೊಣಪರನ್ನೂ ತಳ್ಳಿ
ಫೀಲ್ಡಿನೊಳಕ್ಕೆ ನುಗ್ಗಿ ಮುಟ್ಟಿ ಓಡುವ ಪಡ್ಡೆ ಹುಡುಗು ಹೋರಿಗಳು,
ಮೆಚ್ಚಿ ಮನಸ್ಸಿನಲ್ಲೆ ಬಾಚಿ ಮುತ್ತಿಡುವ
ಕಾಲೇಜು ಬೆಡಗಿಯರು;
ಟಿ.ವಿ.ಗೆ ಅಂಟಿಕೂತ ಲಕ್ಷಲಕ್ಷಜನಕ್ಕೆ
ಆನಂದೊದ್ರೇಕ;
ಕಣ್ಣಂಚಿನಲ್ಲಿ ಕೊಂಚ ತುಳುಕು, ಗದ್ಗದ ಕಂಠ.
ಮಾರನೆ ಬೆಳಿಗ್ಗೆ
ವೃತ್ತಪತ್ರಿಕೆಗೆ ಪರದಾಟ, ಸುದ್ದಿಗೆ ಸುಗ್ಗಿ
ಬ್ಯಾಟು ಬೀಸುತ್ತಿರುವ ಅರ್ಜುನ ಪರಾಕ್ರಮದ
ದಿಟ್ಟ ಭಂಗಿಯ ಚೀರುಚಿತ್ರ,
ಆಳುವ ಪ್ರಧಾನಿಗೇ ಅಬ್ಬ ಎನ್ನಿಸುವ ಜಯಕಾರ ಸತ್ಕಾರ;
ರಾಜಕಾರಣಿಗೆ ಸಲ್ಲುವ ನಕಲಿ ಮಾಲಲ್ಲ,
ನೂರಕ್ಕೆ ನೂರು ಎಲ್ಲ ಹೃತ್ಪುರ್ವಕ
ತಟ್ಟತಳ ತನಕ.
ಆ ಎಲ್ಲ ವೈಭವ ಕಳೆದ ಕಾರ್ತಿಕದಲ್ಲಿ.
ಹಿಂದಿದ್ದ ಹದ್ದುಗಣ್ಣಿನ ಹರಿತ ಈಗೆಲ್ಲಿ ?
ಸಿಡಿಗುಂಡಿನಂತೆ ಭರ್ರೆಂದು ನುಗ್ಗುವ ಚೆಂಡು
ಬಳಿ ಬರುವ ತನಕ ಸುಳಿವೇ ಸಿಗುವುದಿಲ್ಲ;
ಬ್ಯಾಟಿನಂಚಿಗೆ ಬಡಿದು ಸ್ಲಿಪ್ಪಲ್ಲೆ ಕ್ಯಾಚು,
ಮುನ್ನುಗ್ಗಿ ಬೀಸಿದರೆ ಕಣ್ಣು ತಪ್ಪಿಸಿ ಚೆಂಡು ಬೆನ್ನಲ್ಲೆ ಸ್ಟಂಪು,
ಕೆಲವೇ ನಿಮಿಷ, ಮತ್ತೆ ಪೆವಿಲಿಯನ್ ಕಡೆ ಪಯಣ!
ತಗ್ಗಿಸಿದ ತಲೆ, ನೀರು ತುಂಬುತ್ತಿರುವ ಕಣ್ಣು,
ಕೆನ್ನೆಗೆ ಛಟೀರೆಂದು ಬಾರಿಸಿದಳೆಂಬಂತೆ
ಇರಿದು ನೋಡುವ ಹೆಣ್ಣು,
ಸುತ್ತ ಗ್ಯಾಲರಿಯಿಂದ ಅಟ್ಟಿ ಹೀಯಾಳಿಸುವ
ಗೇಲಿ, ವ್ಯಂಗ್ಯದ ಕೂಗು,
ಮೂದಲಿಕೆ ಚೂರಿನುಡಿ, ಎಲ್ಲವೂ ಕೇಳಿಸುವಂತೆ,
“ದಿಟ್ಟ ಹೋರಾಟಗಳ ಸಾರಿ ಸಾವಿರ ಬಾರಿ
ಗೆದ್ದು, ಯಾವಾಗಲೋ ಒಮ್ಮೆ ಬಿದ್ದರೆ ಮಲ್ಲ
ಗೌರವದ ಶಿಖರದಿಂದುರುಳಿ ಗೋರಿಗೆ ದಾರಿ
ಹೊಳೆಯಲ್ಲಿ ಹುಣಿಸೆ ತೊಳೆದಂತೆ ಹಿಂದಿನದೆಲ್ಲ”
ಆದರೆ ಇದಂತು ನಿಜ
ಹಿಂದೆ ಕೈ ಹಿಡಿದಿದ್ದ ಮ್ಯಾಜಿಕ್ ಕೈಕೊಟ್ಟಿದೆ
ಕಿತ್ತುಹಾಕುವ ಮೊದಲು ಭರತವಾಕ್ಯದ ಮಾತು
ಆಡಿ ಬಿಡು ನೀನೇ;
ಕ್ಯೂನಲ್ಲಿ ನಿಂತು ನಿನ್ನನ್ನೇ ನೋಡುತ್ತ
ಕಾಯುತ್ತಿರುವ ಹುಡುಗ
ಬರಲಿ ಟೀಮಿನ ಒಳಗೆ.
*****