ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ
ಎಷ್ಟೋ ನಾಗರಿಕತೆಗಳ ಕತೆಗಳ
ಎಷ್ಟೋ ರಾಜ್ಯದ ರಾಜರ ಚಿತೆಗಳ
ಕಂಡಿತು ಇತಿಹಾಸದ ಕಣ್ಣು
ಕೊಂಡಿತು ನಾವೀ ನಡೆಯುವ ಮಣ್ಣು
ಮನುಷ್ಯ ಮನುಷ್ಯರ ನಡುವಿನ ಯುದ್ದ
ಏನ ಗೆಲ್ಲಲು ಯಾರ ವಿರುದ್ದ ?
ಗೆದ್ಡವರಾರೂ ಗೆಲ್ಲಲೆ ಇಲ್ಲ
ಇದ್ಡವರೆಂದೂ ಇರುವುದು ಇಲ್ಲ
ಎಲ್ಲಿ ನಿನ್ನೆಯ ವೀರಾಧಿವೀರರು?
ಎಲ್ಲಿ ಅನಾದಿಯ ದೈವ ದೇವರು?
ಎಲ್ಲ ಮಾಯೆಗಳನು ಮೀರಿ ನಿಂತು
ಸಲ್ಲಬೇಕು ಜೀವದ ತಂತು
ಜೀವವೊಂದೇ ಜೀವಕೆ ಬದ್ಧ
ಸೇವೆಯಿಂದಲೆ ಜೀವನ ಶುದ್ಧ
ಎಂದ ಮಹಾತ್ಮನ ಮಾತಿದು ಸತ್ಯ
ಅಂದಿಗು ಇಂದಿಗು ಎಂದಿಗು ನಿತ್ಯ
ಕರುಣೆಯೆ ಬೆಳಕು ಎಂದನು ಬುದ್ಧ
ಕರುಣೆಯಿಲ್ಲದ ಜಗದಂತ್ಯವು ಸಿದ್ಧ
*****