ದಾರಿ ತಪ್ಪಿದವನೊಬ್ಬ ಬ್ರಾಹ್ಮಣ
ಅಲೆಯುತಿದ್ದ ಕಾಡಿನಲ್ಲಿ
ಮುಸ್ಸಂಜೆಯ ಸಮಯ
ಸಿಕ್ಕಿದ ಯಕ್ಷಿಯ ಬಲೆಯಲ್ಲಿ
ಹೆಣ್ಣು ರೂಪದ ಯಕ್ಷಿ
ತನ್ನ ಮನೆಗೆ ಕರೆಯಿತು
ನಾಳೆ ಹೋದರಾಯಿತೆಂದು
ಅವನ ಮನವ ಒಲಿಸಿತು
ಊಟ ಕೊಟ್ಟು ಚಾಪೆ ಹಾಕಿ
ಮಾತಾಡುತ್ತ ಕುಳಿತಿತು
ಕೈಯಲಿದ್ದ ಭಗವದ್ಗೀತೆ
ಕೆಳಗಿಡೊದನ್ನ ಕಾದಿತು
ಕಣ್ಣಿನಲ್ಲಿ ಕುಡಿನೋಟ
ಕೆಳ ಜಾರಿದ ಸೆರಗು
ಎಷ್ಟಾದರೂ ಬಡ ಬ್ರಾಹ್ಮಣ
ಆಂದುಕೊಂಡ ಕೊನೆಗು
ಗೀತೆಯಾದರೂ ಹೇಳುವುದೇನು:
ಅಡಿಯ ಮುಂದಿಡೆ ಸ್ವರ್ಗ!
ಮುನಿ ಕೂಡ ಮಾಡಿದ್ದೇನು?
ಬೆಸ್ತರವಳ ಸಂಸರ್ಗ!
ಒಗೆದೇ ಬಿಟ್ಟ ಪುಸ್ತಕ
ಅದರ ಮೇಲೆ ಧೋತರ
ಯಕ್ಷಿ ಸುಮ್ಮನೆ ನಕ್ಕಿತು-
ಯಕ್ಷಿಗಳು ನಗುವ ತರ
ಮರುದಿನ ಅಲ್ಲಿ ಕಂಡೆದ್ದೇನು?
ಮನೆಯಿದ್ದಲ್ಲಿ ತಾಳೆ!
ಕೆಳಗೆ ಹಸಿ ಹಸೀ ಮೂಳೆ ಹಾಗೂ
ಭಗವದ್ಗೀತೆಯ ಹಾಳೆ!
*****