ಆ ಊರಿನ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ಚತುರಮತಿ ಮೇಡಂಗೆ ದಿನದ ಪ್ರತಿಯೊಂದು ಕ್ಷಣಗಳು ಭಯಾನಕವಾಗಿ ಪರಿಣಮಿಸಿದ್ದವು. ಅದೇ ಹೊಸದಾಗಿ ಸೇವೆಗೆ ಸೇರಿಕೊಂಡವರಿಂದ ಹಿಡಿದು ನಿವೃತ್ತಿ ಅಂಚಿಗೆ ತಲುಪಿರುವ ನಲವತ್ತು ಶಿಕ್ಷಕರು, ಆಫೀಸ್ ಸಿಬ್ಬಂದಿ, ಸಾವಿರಾರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹರಸಾಹಸವೆನಿಸಿ ಮೇಡಂನ ಮೂಡು ತರಾವರಿಗೊಳ್ಳುತ್ತಿತ್ತು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜನ್ನು ವ್ಯವಸ್ಥಿತವಾಗಿ ಮಾದರಿಯಾಗಿಸುವ ಧಾವಂತ ತೀವ್ರವಾಗಿದ್ದರೂ ಆಡಳಿತದ ಗಂಧಗಾಳಿಯ ಕೊರತೆಯಿಂದಾಗಿ ಮೇಡಂನ ಉದ್ದೇಶಗಳು ಬೇರುಗಳಿಲ್ಲದೆ ತತ್ತರಿಸತೊಡಗಿದ್ದವು. ಇದರಿಂದಾಗಿ ತಲೆ ತುಂಬ ನೋವು, ರಕ್ತದೊತ್ತಡ ಏರಿಳಿಯುತ್ತ ಜೀವನದ ಸೊಗಸನ್ನೇ ನುಂಗಿಹಾಕಿತ್ತು.
ಅಧ್ಯಾಪಕರಿಗೊ ಕಲಿಸುವ ಆಸಕ್ತಿಗಿಂತ ಸ್ವಹಿತ ಸಾಧಿಸಿಕೊಳ್ಳುವ ತವಕ. ಅದಕ್ಕಾಗಿ ಮೇಡಂನ ವಿಶ್ವಾಸಗಳಿಸಿಕೊಳ್ಳುವ ಹುನ್ನಾರು. ಮೇಡಂ ಒಬ್ಬರೇ ಕುಳಿತಿರುವುದನ್ನು ನೋಡಿಕೊಂಡು ಅವರ ಚೇಂಬರಿಗೆ ಲಗ್ಗೆ ಇಡುತ್ತಿದ್ದ ಪ್ರತಿಯೊಬ್ಬರೂ ಅತೀ ವಿನಯ ಪ್ರದರ್ಶಿಸಿ ಒಬ್ಬರ ಮೇಲೆ ಇನ್ನೊಬ್ಬರು ಚಾಡಿ ಹೇಳುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಯಸಾದಕತನದಿಂದ ಮೇಡಂ ದಿಕ್ಕೆಟ್ಟು ಹೋಗುತ್ತಿದ್ದರು.
ಚಾಡಿಕೋರರ ಕೈಗೊಂಬೆಯಾದವರಂಥೆ ಮೇಡಂ ಇನ್ನುಳಿದವರ ಮೇಲೆ ಹಾರಾಡುತ್ತಿದ್ದರು. ಅವರೂ ಪ್ರತ್ಯುತ್ತರ ನೀಡಿ ಮೇಡಂನ ರಕ್ತ ಕುದಿಸುತ್ತಿದ್ದರು.
ಒಂದಿನ ಕೆ.ಸಿ.ಎಸ್.ಆರ್. ರೂಲ್ಸ್ ಜಡಿದು ಮೆಮೊ ಕೊಟ್ಟಿದ್ದೇ ತಡ, ಪರಸ್ಪರ ದ್ವೇಷಿಸುವ ಎಲ್ಲ ಶಿಕ್ಷಕರು, ಶಿಕ್ಷಕಿಯರು ಒಟ್ಟಾಗಿ ಸೇರಿ ಮೀಟಿಂಗ್‌ನಲ್ಲಿ ಚತುರಮತಿ ಮೇಡಂನನ್ನು ತರಾಟೆಗೆ ತೆಗೆದುಕೊಂಡುಬಿಟ್ಟರು. ನನಗೆ ಖಾಸಾ ಆದ್ಮಿಗಳೆಂದು ನಂಬಿದವರು ಕೂಡ ಈ ಸಮಯದಲ್ಲಿ ತಮ್ಮ ವಿರುದ್ಧ ನಿಂತಿದ್ದು ಕಂಡು ಮೇಡಂ “ಈ ನರಕದ ಜಂಜಾಟವೇ ಬೇಡ. ನಾನು ರಾಜೀನಾಮೆ ಕೊಡುತ್ತೇನೆ” ಎಂದು ಹತ್ತು ದಿನಗಳ ಕಮ್ಯುಟೆಡ್ ಲೀವ್ ಹಾಕಿ ಊರಿಗೆ ಹೊರಟು ಹೋಗಿದ್ದರು.
ತಿರುಗಿ ಬಂದಾಗ ಮೇಡಂನ ಮುಖದಲ್ಲಿ ಹೊಸ ಕಳೆ. ಕೆಲಸದಲ್ಲಿ ಅತ್ಯುತ್ಸಾಹ. ಆಫೀಸಿಗೆ ಕೆಲಸವೊ, ಮಕ್ಕಳ ತರಗತಿಯೋ, ಬೋಧನೆಯ ಸಮಸ್ಯೆಯೋ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುಸೂತ್ರ ಆಡಳಿತ ನಡೆಸಿದರು. ಈಗವರಿಗೆ ರಕ್ತದ ಒತ್ತಡವೂ ಇರಲಿಲ್ಲ, ಮೆದುಳಿಗೆ ನೋವೂ ಬಾಧಿಸಲಿಲ್ಲ. ಆದರೆ ಅವರ ಹತ್ತಿರ ಸುಳಿದಾಡುವ ಅಧ್ಯಾಪಕರ ಒಡಲಾಳದಲ್ಲಿ ಮತ್ಸರದ ಕಡೆಗೋಲು ಆಡುತ್ತಲೇ ಇತ್ತು. ಚತುರಮತಿ ಮೇಡಂನ ಬ್ರಿಟಿಷ್ ಪಾಲಸಿ ಆ ಕಡೆಗೋಲನ್ನು ನಿಯಂತ್ರಿಸಿಕೊಂಡಿತ್ತು ನಿರಂತರ.
*****