ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ |
ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! |
ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, |
ಹುಲುಮಾತಿಂ ಪೊಗಳಿರ್ಪ ಮೂಢ ಕವಿಯುಂ ಪಕ್ಕಾಗನೇ ನಿಂದೆಗಂ? || ೧ ||
ಮುಗಿಲು ಮುಟ್ಟಿದ ಶೃ೦ಗಮಂ ಗಗನದೊಳ್ ಪ್ರಚ್ಛನ್ನ ಗೈದುಂ ವಲಂ, |
ಜಗಕಂ ಕನ್ನಡಿಯಂತೆ ತೋರಿ ಬೆಳೆದುಂ, ಪ್ರೌನ್ನತ್ಯದಿಂ ನಿಂದು, ನು |
ಣ್ಬೊಗರಿಂ ಶೋಭಿಪ ಸತ್ಯವೀಂದ್ರ ಗಿರಿ! ನಿನ್ನಂ ನೋಡಲೇನೆಂದಿಪೆಂ? |
ಮಿಗೆಯುತ್ಸಾಹದಿ ನೀರವಂ ನಿರಧಿಕಂ ನಿಷ್ಪಂದಮಾನಂದಿಪೆಂ ||೨||
ಅಳಿವರ್ ಕಬ್ಬಿಗರೆಂದು ಪೇಳ್ವ ನುಡಿಯುಂ ಚೆನ್ನಪ್ಪುದೇ ಲೋಕದೊಳ್ |
ಅಳಿವಿಲ್ಲಂ ಕೃತಿಗಳ್ಗೆ, ನಿನ್ನಜಸಮುಂ ಕರ್ಣಾಟದೊಳ್ ಶಾಶ್ವತಂ |
ತಿಳಿಯಲ್ ನಿನ್ನಯ ಷಟ್ಪದಂಗಳೊಲವಿಂ ಸಾಹಿತ್ಯ ವಿದ್ವಾಂಸಮಂ |
ಡಳಕಾಸರದೊಳೀಗಳುಂ ಮೊರೆವುವೈ-ನಿನ್ನಿಚ್ಛೆಯಂ ಪಾಲಿಸಲ್ ||೩||
ಬೆಳದೆಂ ಬಾಲಕನಾಗಿ ನಿನ್ನವಿಲಸತ್ಷಟ್ಪಾದ ಝೇಂಕಾರದೊಳ್, |
ಕಳೆದೆಂ ಜವ್ವನಮಂ ವಿಲಾಸ ಕವಿತಾ ಸಂಭೂತ ಶೃಂಗಾರದೊಳ್, |
ತಳೆದುಂ ಮಾನಸತೃಪ್ತಿಯಂ ಕೃತಿಯ ಸದ್ಧರ್ಮೋಪದೇಶಂಗಳಿಂ, |
ಕಳೆವೆಂ ಸಂಸ್ಕೃತಿ ದುಃಖದಿಂ ನುರಿದ ಮುಪ್ಪಂ ನಿನ್ನ ವಾರ್ಧಕ್ಯದೊಳ್ || ೪ ||
(ಸುವಾಸಿನಿ ೧೯೦೩)
*****