ಪ್ರೇಮ ಹಾಗೆಂದರೇನು? ಗಂಡು ಹೆಣ್ಣು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳೋದು ಹಚ್ಚಿಕೊಳ್ಳೋದು, ಅರ್ಥ ಮಾಡಿಕೊಳ್ಳೋದು, ಒಬ್ಬರು ಮತ್ತೊಬ್ಬರಿಗಾಗಿ ಹಂಬಲಿಸೋದು, ನೋವುಗಳನ್ನು ಶೇರ್ ಮಾಡಿಕೊಳ್ಳೋದು, ಇಬ್ಬರೇ ಸಂಧಿಸಲು ಹಲವು ಸಾಹಸ ಮಾಡೋದು, ಸಂಧಿಸಿದಾಗ ಸುಖಕ್ಕಿಂತ ಭಯವನ್ನೆಲ್ಲ ಅನುಭವಿಸೋದು, ಸೇರಿದಾಗ ಯಾರಿಗೂ ಕಾಣದಂತೆ ಅಗಲಿದರೆ ಸಾಕಪ್ಪ ಎಂಬ ಒಳಗುದಿ. ಅಗಲಿದಾಗ ಸೇರಬೇಕೆಂಬ ಎದೆಗುದಿ! ಪ್ರೇಮಿಗಳು ದೂರವಿದ್ದಾಗಲೇ ಹೆಚ್ಚು ಸುಖಿಗಳು. ಅದರ ನೆನಪುಗಳೇ ಮಧುರ ಮತ್ತೆ ಸೇರಬೇಕೆಂಬ ಕಾತರವೇ ಜೀವನಕ್ಕೊಂದು ಬಗೆಯ ಸ್ಫೂರ್ತಿ, ದಿನಚರಿಗೊಂದು ಫೋರ್ಸ್ ತಂದು ಕೊಡುತ್ತದೆ. ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿರುವಾಗ ಪ್ರೇಮದ ಬಗ್ಗೆ ಯಾಕೆ ಕೊರಿತಿರಾ ಅಂದ್ಕೋತಿರಾ?
ನಿರುದ್ಯೋಗ, ವರದಕ್ಷಿಣೆ, ಮೀಸಲಾತಿ, ಕೃಪಾಂಕಗಳಂತೆ ‘ಪ್ರೇಮ’ ಕೂಡ ಯುವ ಜನಾಂಗದ ಪ್ರಬಲ ಸಮಸ್ಯೆ ಎಂದರೆ ಪ್ರೇಮಿಸಿಯೇ ಗೊತ್ತಿಲ್ಲದವರಿಗೆ ಅರ್ಥವಾಗೋಲ್ಲ ಬಿಡಿ. ನಾನು ಬರಿತಾ ಇರೋದು ಹಾಲಿ, ಮಾಜಿ, ಭಾವಿ ಪ್ರೇಮಿಗಳಿಗಾಗಿ ಅಂತ ಮೊದಲೇ ಹೇಳಿ ಬಿಡುತ್ತೇನೆ. ಕುರುಡರು ಆನೆಯನ್ನು ಮುಟ್ಟಿ ಮುಟ್ಟಿ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಿದಂತೆಯೇ ಪ್ರೇಮ ಕೂಡ ಹಲವರಲ್ಲಿ ಭಿನ್ನ ಅನುಭವವನ್ನು ಅಭಿವಕ್ತಿಗೊಳಿಸುವಂತದ್ದೇ. ಎರಡು ಮನಸ್ಸುಗಳು ಒಂದಾಗೋದೇ ಪ್ರೇಮ. ಎರಡು ದೇಹಗಳ ಆಕರ್ಷಣೆ, ಮಾನಗಳು ಪಿಸು ಮಾತಾಗೋದೇ ಪ್ರೇಮ, ಇತ್ಯಾದಿ. ಪ್ರೇಮಿಗಳು ಮಾತಾಡೋದೇ ಕಣ್ಣಲ್ಲಿ ಗೊತ್ತುಂಟೆ. ಕಣ್ಣಿನ ಭಾಷೆ ಕಲಿಸಿಕೊಡೋ ಮಾಂತ್ರಿಕ ಶಕ್ತಿ ಇರೋದು ಪ್ರೇಮಕ್ಕೆ ಮಾತ್ರ! ಪ್ರೇಮಕ್ಕೆ ಎಂಥ ಧೈರ್ಯ ಇದೆ ಗೊತಾ? ವಿರೋಧಿಗಳ ವಿರೋಧದ ಮಧ್ಯೆಯೇ ಹುಟ್ಟಿ ಬಿಡುತ್ತದೆ. ಪೌರಾಣಿಕ ಕಾಲದಿಂದ ಇಂದಿನ ಟಿ.ವಿ. ಜಾಲದ ಯುಗ ಬಂದರೂ ಪ್ರೇಮ ಮಾತ್ರ ಬೆದರಿಲ್ಲ ಬದಲಾಗಿಲ್ಲ. ಪಾಂಡವರು, ಕೌರವರು ಬದ್ದ ದ್ವೇಷಿಗಳಾದರೇನಂತೆ ಪ್ರೇಮ ಆರಿಸಿಕೊಂಡಿದ್ದು ಅವರ ಮಕ್ಕಳಾದ ಅಭಿಮನ್ಯ, ಶಶಿರೇಖೆಯರಂತಹ ಎಳೆಯರನ್ನೇ. ಎಳೆಯ ಹೃದಯಗಳಲ್ಲೇ ಮೊಳಕೆಯೊಡೆಯುವ ಹೆಬ್ಬಯಕೆ ಅದಕ್ಕೆ. ಪ್ರೇಮ ಮಹಾ ಕಿಲಾಡಿ ಕಣ್ರಿ, ಎಂದೂ ಯಾರೂ ನಂಬದಂತಹ ಜಾಗದಲ್ಲಿಯೇ ನಿನ್ನೆ ಕಾಣದ ಗರಿಕೆ ಇಂದು ಗೋಚರಿಸಿಬಿಡುವಂತೆ ಪ್ರೇಮ ಕೂಡ ವಿಸ್ಮಯ. ಭಗವಂತನಾದ ಶ್ರೀಕೃಷ್ಣ ತನ್ನ ಶತ್ರು ರುಕ್ಮಾಂಗದನ ಮಗಳಾದ ರುಕ್ಮಿಣಿಯನ್ನು ಅಪಹರಿಸಿ ತಂದನೆಂದರೆ ಪ್ರೇಮದ ಆಕರ್ಷಣೆಯ ಮೀಟರ್ ಎಂತದ್ದಿರಬಹುದು. ಇದೀಗ ‘ಅಪಹರಣ’ ಎಂಬ ಗೌರವ ಪದ ಕಾಲಕ್ಕೆ ತಕ್ಕಂತೆ ‘ಓಡಿಸ ಹೋದರು’ ಎಂಬಷ್ಟು ತಲೆ ತಲಾಂತರಕ್ಕೂ ಯುಗ ಯುಗಾಂತರಕ್ಕೂ ಒಂದಿಷ್ಟೂ ಕುಸಿದಿಲ್ಲ, ಕಂದಿಲ್ಲ, ಕರಗಿಲ್ಲ ಕರಗೋಲ್ಲ. ಅದೇ ಪ್ರೇಮದ ಒರಿಜನಲ್ ಪವರ್.
ಅಲ್ಲಾ ನೋಡಿ, ದೇವರು ಮನುಷ್ಯನಿಗೆ ಎರಡು ಕೈಗಳು, ಕಾಲುಗಳು, ಕಣ್ಣು ಕಿವಿ ಮೂಗಾದರೂ ಎರಡು ಹೊಳ್ಳೆಗಳನಾದರೂ ಇಟ್ಟವನು, ಇಷ್ಟು ದೊಡ್ಡ ದೇಹದಲ್ಲಿ ಹೃದಯವನ್ನು ಮಾತ್ರ ಒಂದನ್ನೇ ಇಟ್ಟುಬಿಟ್ಟ!
ಹೃದಯ ಅದಾದರೂ ಎಷ್ಟಿದೆ? ಮಹಾಪುಟ್ಟದು ಬಡ್ಡಿಮಗಂದು. ಅದಕ್ಕೆ ಇರಬೇಕು ಅದರಲ್ಲಿ ಒಬ್ಬರಿಗೆ ಮಾತ್ರ ಎಂಟ್ರಿ ಉಳಿದವರಿಗೆ ನೊ ಎಂಟ್ರಿ. ಪ್ರೇಮ ಕೂಡ ಎಂದೂ ಒಂಟಿಯಲ್ಲ – ಮೊದಲು ಒಬ್ಬರ ಹೃದಯದಲ್ಲಿ ಹುಟ್ಟುವ ಪ್ರೇಮ ಮತ್ತೊಬ್ಬರ ಹೃದಯದಲ್ಲಿ ಸೆಟ್ಲ್ ಆಗೋ ಚಾತುರ್ಯದ ಹಿಂದೆ ಬಹುದೊಡ್ಡ ತತ್ವವೇ ಇದೆ. ‘ನಾನು ಎಂಬುದು ನಶಿಸಿ ನಾವು’ ಆಗುವ ಕ್ರಿಯೆಯಲ್ಲಿ ಆನಂದ ಕಾಣೋ ಪ್ರೇಮಕ್ಕೆನೊ ಅಂತ್ಯ. ದ್ವೈತ ಅದ್ವೈತವಾಗುವ ಮಹಾ ವಿಧಿಯೇ ಪ್ರೇಮ. ಪ್ರೇಮಕ್ಕಾಗಿ ಸ್ಪರ್ಧೆ, ಹೋರಾಟ ಚಿತ್ರಹಿಂಸೆ ಅನುಭವಿಸೋದು ಕಡೆಗೆ ಸಾವಿನಲ್ಲಿ ಸುಖ ಕಾಣೋದರಲ್ಲೂ ಒಂತರಾ ಸುಖವಿರುತ್ತೆ. ಲೈಲಾ ಮಜ್ನು, ಸಲೀಂ ಅನಾರ್‍ಕಲಿ, ರೋಮಿಯೋ ಜ್ಯೂಲಿಯೆಟ್ ಸೋಹ್ಮಿಮಹಿವಾಲ್ ಪ್ರೇಮಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಮಡಿದರೂ ಇಂದಿಗೂ ಅವರುಗಳು ಅಮರ. ಅವರ ಪ್ರೇಮ ಅಜರಾಮರವಲ್ಲವೆ. ‘ಹೆಲನ್ ಆಫ್ ಟ್ರಾಯ’ ಪ್ರೇಮ ಕಾವ್ಯವಾದರೂ ಜಗತ್ತಿನ ಮಹಾಕಾವ್ಯ ಅನ್ನಿಸಿಕೊಂಡಿದೆ. ಅದಕ್ಕೇ ಏನೋ ‘ಲವ್ ಈಸ್ ಇಮ್ಮಾರ್‍ಟಲ್’ ಅಂತಾರೆ ಅನುಭಾವಿಗಳು. ‘ಪ್ರೇಮವಿಲ್ಲದ ಗಾನ ಕೇಳನೋ ಹರಿತಾಳನೋ’ ಅಂದಿದ್ದಾರೆ ಪುರಂದರದಾಸರು.
ಪ್ರೇಮ ಕ್ಷುಲ್ಲಕ ವಿಷಯವಾಗಿದ್ದರೆ ಇಂದಿಗೂ ಉಳಿಯಲು, ಕಥೆ ಕಾವ್ಯ ಕಾದಂಬರಿಗಳಾಗಲೂ ಸಾಧ್ಯವಿತ್ತೆ? ವಯಸ್ಸಿನಲ್ಲಿ ಯಾರಾದರೊಬ್ಬರನ್ನು ಕನಿಷ್ಠ ಮನಸ್ಸಿನಲ್ಲಾದರೂ ಕನಸಿನಲ್ಲಾದರೂ ಪ್ರೇಮಿಸದವರುಂಟೆ ಜಗದೊಳು. ಧೈರ್ಯವಿದ್ದವರ ಪ್ರೇಮ ನನಸಾಗುತ್ತೆ ಪುಕ್ಕಲರು ಚಿಪ್ಪಿನೊಳಗಿನ ಆಮೆಯಂತೆ ಪ್ರೇಮವನ್ನು ಮನದಲ್ಲೇ ಮುಚ್ಚಿಟ್ಟು ಹಪಹಪಿಸುತ್ತಾ ಹಿರಿಯರು ಹೇಳಿದವರಿಗೆ ಕೊರಳೊಡುತ್ತಾರೆ. ಪ್ರೇಮದ ಬೆಸುಗೆ ಇಲ್ಲವಾಗಿದ್ದರೆ ಹೊರಗೆ ಹೋದ ಗಂಡಸರು ಮನೆಗೆ ಹಿಂದಿರುಗುತ್ತಲೇ ಇರಲಿಲ್ಲ, ಪ್ರೇಮವಿಲ್ಲದ ಬದುಕೇ ನಶ್ವರ. ಯಾರ ಪ್ರೀತಿಯನ್ನೂ ಪಡೆಯಲಾಗದವನು ಒಂಟಿ ಪಿಶಾಚಿಯಿದ್ದಂತೆ.
ಈ ಪ್ರೇಮ ಕೂಡ ಎಂತಹ ರಸಿಕನನ್ಮಗಂದು ಅಂತೀರಾ! ಸದಾ ನೂರಾರು ಕಣ್ಣುಗಳನ್ನು ತಪ್ಪಿಸಿ ಕದ್ದು ಮುಚ್ಚಿ ಪ್ರೇಮಿಗಳು ಭೇಟಿಯಾಗೋದರಲ್ಲೇ ಪ್ರೇಮದ ನಿಜವಾದ ಬಿಗಿ ಇರುತ್ತದೆ. ಮನಸ್ಸು ಮನಸ್ಸುಗಳು ಒಂದಾಗೋದೇ ಪ್ರೇಮ ಅದುವೇ ‘ಪ್ಲೆಟಾನಿಕ್ ಲವ್’ ಅಂತಾರೆ. ಹಾಗಂತ ದೇಹದೇಹಗಳು ಒಂದಾದ ಕೂಡಲೆ ಪ್ರೇಮ ಅಪವಿತ್ರವಾಗಿ ಬಿಡುತ್ತದೆಂಬುದು ಕೂಡ ಅತಿರೇಕದ ಮಡಿವಂತಿಕೆಯಾದೀತಲ್ಲವೆ. ಏನೇ ಪಾರಿಭಾಷಿಕ ಶಬ್ದಗಳನ್ನು ಪ್ರಯೋಗಿಸಿದರೂ ಪ್ರೇಮದ ಮುಸುಕಿನಲ್ಲಿ ‘ಕಾಮ’ ಸದಾ ಉಸಿರಾಡುತ್ತಿರುತ್ತದೆಂಬುದು ಕಟು ಸತ್ಯ, ಕಾಮಕ್ಕೆ ಸೋಲುವುದು ಕೂಡ ಪ್ರೇಮದ ಮತ್ತೊಂದು ಗೆಲುವು – ನೀವನಂತಿರೋ? ಪ್ರೇಮಿಸಿ ಗೆದ್ದವರಲ್ಲಿ ಸೋತು ಸಾಯುವ, ಸೋತವರಲ್ಲಿ ಗೆದ್ದು ಬದುಕುವ ಪ್ರೇಮ ಒಂದು ವಿಶಿಷ್ಟ ಅನುಭವ. ಹಲವರು ಪ್ರೇಮಿಸಿ ಮದುವೆಯಾಗಿ ದೂರವಾಗುವುದೂ ಉಂಟು. ಅದಕ್ಕೆ ಅಪಾರ್ಥಗಳು ಅಸಹಾಯಕತೆ ಆರ್ಥಿಕ ಮುಗ್ಗಟ್ಟು ಸಮಾಜದ ಸಣ್ಣತನ ಇತರೆ ಕಾರಣಗಳ ಒತ್ತಡಗಳ ಪ್ರಭಾವವಿರಬಹುದು. ಇಂತಹ ಪ್ರಕರಣಗಳು ಸಂಭವಿಸಿದಾಗಲೇ ಪ್ರೇಮಕ್ಕೊಂದು ಖಚಿತವಾದ ಗುರಿಯಿಲ್ಲ. ಗುರಿ ಸೇರಿದ ಮೇಲೆ ಪ್ರೇಮ ಬದುಕುಳಿಯುವುದಿಲ್ಲ ಎಂಬ ಹತಾಶೆ ಉಂಟಾಗಲೂಬಹುದು. ಹೇಗೆ ಹೇಳಿದರೂ ಅಷ್ಟೆ ಗಂಡ ಹೆಂಡಿರಾಗಲು ಪ್ರೇಮ ಮೆಟ್ಟಿಲಾಗಬಹುದೇ ವಿನಃ ಅವರನ್ನು ಪ್ರೇಮಿಗಳಾಗಿ ಕಡೆ ತನಕ ಉಳಿಸೋ ಜವಾಬ್ದಾರಿ ಪ್ರೇಮದ್ದಲ್ಲ, ಪ್ರೇಮ ದಾಸ್ಯವಾಗದೆ ಇದ್ದು ಸಮರಸವಾಗುವಂತೆ ಎಚ್ಚರವಹಿಸಿದರೆ ಪ್ರೇಮವೆಂದಿಗೂ ಸುಖಾಂತವೆ.
ಪ್ರೇಮ ಕುರುಡು ಅಂತಾರೆ ಇದು ತಪ್ಪು, ಪ್ರೇಮಿಗಳು ಕುರುಡರು. ಪ್ರೇಮ ದೇವರು ಅಂತಾರೆ ಇದು ಕೂಡ ಬಂಡಲ್ ಕಣ್ರಿ, ಭಕ್ತರು ಕೇಳಿದ್ದನ್ನು ಕೊಡದ, ಅವರ ಮೊರೆಯನ್ನು ಆಲಿಸದ ಕೈಹಿಡಿದೆತ್ತಿ ಸಂತೈಸದ, ಕಾಣದ ಜೀಪುಣ ದೇವರೆಲ್ಲಿ? ಕಂಡರೂ ಕಾಣದೆ ನಮ್ಮಲ್ಲೇ ಇರುವ ಉದಾರಿ ಪ್ರೇಮವೆಲ್ಲಿ? ಪ್ರೇಮ ಒಮ್ಮೆ ಹೃದಯದಲ್ಲಿ ಪಲ್ಲವಿಸಿತೋ ತನ್ನ ಪ್ರೇಮಿಯನ್ನು ಸದಾ ಸಂತೋಷದಲ್ಲಿಡಲು ಎಷ್ಟೆಲ್ಲಾ ಕಷ್ಟಗಳಿಗೂ ತನ್ನನ್ನು ತಾನು ಒಡ್ಡಿಕೊಳ್ಳಲು ತಯಾರ್. ತಬ್ಬಿ ಮುದ್ದಿಸಿ ದೇಹದ ಒಂದಿಚನ್ನೂ ಬಿಡದೆ ಸ್ಪರ್ಶಿಸಿ ಸುಖಿಸುತ್ತೆ ಸುಖ ನೀಡುತ್ತೆ. ಅಸ್ಪುರ್‍ಶ್ಯತೆ ಎಂದರೆನೆಂದೇ ತಿಳಿಯದ ಪ್ರೇಮಕ್ಕೆ ಜಾತಿ ಮತಗಳ ಹಂಗಿಲ್ಲ, ಪ್ರೇಮ ಸ್ವಾರ್ಥಿ ಅಂತಾರೆ. ಸ್ನೇಹವನ್ನು ಎಷ್ಟು ಜನಕ್ಕಾದರೂ ಹಂಚಬಹುದು. ಆದರೆ ಪ್ರೇಮ ಒಬ್ಬರಿಗೆ ಮಾತ್ರ ಮೀಸಲೆಂಬುದು ನಿಜ. ಅಂದ ಮಾತ್ರಕ್ಕೆ ಪ್ರೇಮ ಸ್ವಾರ್ಥವಲ್ಲ- ಪವಿತ್ರ, ಪ್ರೇಮಕ್ಕಾಗಿ ಹಿಂದೆಲಾ ಯುದ್ಧಗಳೇ ಘಟಿಸಿವೆ. ಇಂದೂ ಕೊಲೆ ಆತ್ಮಹತ್ಯೆಗೆ ಪಕ್ಕಾಗುವ ಪ್ರೇಮಿಗಳ ದುರಂತಕ್ಕೆ ಸಮಾಜದ ಕಟ್ಟುಪಾಡುಗಳು ಜಾತಿಯೇ ಮುಖ್ಯ ಕಾರಣ. ಎಷ್ಟೇ ದ್ವೇಷ ಮತ್ಸರ ಸೇಡು ಅಸೂಯೆ ಆಕ್ರೋಶಗಳ ನಡುವೆಯೇ ಮಾನವೀಯ ಒರತೆಗಳಿರುವ ಹೃದಯಗಳಲ್ಲಿ ಎಂದಿಗೂ ಪ್ರೇಮ ನಿರ್ಭಯವಾಗಿ ಟಿಸಿಲೊಡೆಯುತ್ತಲೇ ಇರುತ್ತದೆ. ಅದೇ ಪ್ರೇಮದ ಅಸಲಿ ತಾಕತ್ತು, ಅರಿಯದ ಅಪರಿಚಿತ ಹುಡುಗಿಯ ಹೃದಯದಲ್ಲೊಬ್ಬ ಪ್ರೇಮದ ಸಸಿ ನೆಡುತ್ತಾನೆಂದರೆ ಹುಡುಗಾಟದ ಸಂಗತಿಯಲ್ಲ. ಆದರೆ ಇಂತಹ ಹುಡುಗಾಟ ಹುಡುಕಾಟದ ಉಗಮವೇ ಹರೆಯದ ಲಕ್ಷಣವಲ್ಲವೆ. ಪ್ರೇಮಕ್ಕಾಗಿ ತಂದೆ – ತಾಯಿ ಒಡಹುಟ್ಟಿದವರು ಸಿರಿ ಸಂಪತ್ತು, ಅಂತಸ್ತು, ಜಾತಿ, ಕುಲ, ಗೋತ್ರ ಎಲ್ಲವನ್ನೂ ಧಿಕ್ಕರಿಸುವಂತಹ ಅದ್ಭುತ ಶಕ್ತಿಯನ್ನು ಯುವ ಜನಾಂಗದಲ್ಲಿ ಬಿತ್ತುವ ಪ್ರೇಮವನ್ನು ಸಮಾಜ ಕೂಡ ಮಾನವೀಯತೆಯಿಂದ ನೋಡುವ ಪುರಸ್ಕರಿಸುವ ಪ್ರೇಮಿಗಳ ಬಗ್ಗೆ ಹಿರಿಯರು ಅಂತಃಕರಣ ಬೆಳೆಸಿಕೊಳ್ಳುವ ಸಂಕ್ರಮಣ ಕಾಲವಿದು. ಪ್ರೀತಿ ಹುಟ್ಟಿಸಬೇಕಾದ ಜಾತಿ ಇಂದು ಭೀತಿ ಹುಟ್ಟಿ ಹಾಕುತ್ತಿದೆ. ಜಾತಿಯ ನಾಶ ಪ್ರೇಮದಿಂದ ಮಾತ್ರ ಸಾಧ್ಯ ಅಂತರ್ಜಾತಿಯ ವಿವಾಹಗಳಿಂದ ಜಾತಿಯ ಸಮಾಧಿಯ ಮೇಲೆ ಪ್ರೇಮ ಸೌಧ ಕಟ್ಟಬೇಕಿದೆ. ಪ್ರೇಮಕ್ಕೆ ಅಂತಹ ‘ಪವರ್’ ಇದೆ. ಅಂದ ಮೇಲೆ ಪ್ರೇಮ ಅಂದರೆ ತಮಾಷೆನಾ?
*****