‘ಆಕೆಯನ್ನು ಬೇರೆ ಯಾವೊಬ್ಬ ಮಹಿಳೆಯೊಂದಿಗೂ ಗುರ್ತಿಸಲು ಸಾಧ್ಯವಿಲ್ಲ’. ಹೊಸ ವರ್ಷದ ಸೂರ್ಯೋದಯಾಕ್ಕೆ ಕೆಲ ತಾಸುಗಳ ಮುಂಚೆ (೨೦೦೬ರ ಡಿ.೩೦ರ ರಾತ್ರಿ) ತಮ್ಮ ಬದುಕಿಗೆ ಮತ್ತು ಬದುಕಿನಷ್ಟೇ ಗಾಢವಾಗಿ ಪ್ರೀತಿಸುತ್ತಿದ್ದ ನೃತ್ಯಕ್ಕೆ ಕೊನೆಯ ನಮಸ್ಕಾರ ಹೇಳಿದ ನೃತ್ಯಗಾರ್‍ತಿ ಚಂದ್ರಲೇಖ ಅವರ ಬಗ್ಗೆ ಹಿರಿಯ ಪತ್ರಕರ್ತ ಖುಷ್ವಂತ್‍ಸಿಂಗರ ಉದ್ಗಾರವಿದು.
ಖುಷ್ಟಂತ್ ಮಾತು ಉತ್ಪ್ರೇಕ್ಷೆಯದಲ್ಲ. ಕೇವಲ ನೃತ್ಯಗಾರ್‍ತಿ ಮಾತ್ರವಾಗಿದ್ದರೆ ಖುಷ್ವಂತ್ ಹೇಳಿಕೆಯನ್ನು ಉತ್ಸಾಹದ ಮಾತು ಎಂದು ತಳ್ಳಿಹಾಕಬಹುದಿತ್ತು (ಪುಸ್ತಕವೊಂದರಲ್ಲಿ ‘ಶೀರ್ಷಾಸನ’ ಮಾಡುತ್ತಿದ್ದ ಆಕೆಯ ಚಿತ್ರ ಕಂಡು ಖುಷ್ವಂತ್ ಥ್ರಿಲ್ ಆಗಿದ್ದರು). ಚಂದ್ರಲೇಖ ಲೇಖಕಿಯಾಗಿದ್ದರು; ಮಹಿಳೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿದ್ದರು. ಇದೆಲ್ಲಕ್ಕೂ ಮಿಗಿಲಾಗಿ ಅವರು ಭಾರತದ ಶಾಸ್ತ್ರೀಯ ನೃತ್ಯ ಹಿಂದೆಂದೂ ಕಂಡರಿಯದಂಥ ಬಂಡಾಯ ಮನೋಭಾವದ ಸಂಯೋಜಕರಾಗಿದ್ದರು. ಚಂದ್ರಲೇಖ ಅವರದು ನರ್ತನ ಮಾತ್ರವಾಗಿರಲಿಲ್ಲ. ಅದು ನೃತ್ಯದ ನಶೆಯಾಗಿತ್ತು; ದೇಹದ ಹಬ್ಬವಾಗಿತ್ತು; ಶೃಂಗಾರದ ಕಬ್ಬವಾಗಿತ್ತು. ಆಕೆಯ ಪಾಲಿಗೆ ನೃತ್ಯ ಭಕ್ತಿಯನ್ನು ಅಭಿವ್ಯಕ್ತಗೊಳಿಸುವ ಕಲಾ ಪ್ರಕಾರವಷ್ಟೇ ಅಲ್ಲ- ಅದು ಸಮಕಾಲೀನ ತವಕತಲ್ಲಣಗಳ ಹಾಗೂ ಮನರಂಜನೆಯ ಮಾಧ್ಯಮವಾಗಿತ್ತು. ಆಕೆಯ ಪ್ರತಿಭೆಯ ಮೂಸೆಯಲ್ಲಿ ಅರಳಿದ ನೃತ್ಯ, ಸಂಪ್ರದಾಯದಲ್ಲಿ ಜಡ್ಡುಗಟ್ಟಿದ ಕಲೆಯಾಗಿರದೆ ನಿರಂತರ ಕ್ರಿಯಾಶೀಲತೆ ಹಾಗೂ ಪ್ರಯೋಗಶೀಲತೆಯ ಪ್ರಯತ್ನವಾಗಿತ್ತು; ಸ್ತ್ರೀವಾದದ ಶೋಧನೆಯ ದಾರಿಯಾಗಿತ್ತು; ಶಕ್ತಿ ಹಾಗೂ ಉತ್ಸಾಹದ ಚಿಲುಮೆಯಾದ ದೇಹದ ಸೌಂದರ್ಯ ಸಾಧ್ಯತೆಗಳ ಅನಾವರಣದ ಮಾಧ್ಯಮವಾಗಿತ್ತು. ನೃತ್ಯದಿಂದ ಲೌಕಿಕ ಹಾಗೂ ಅದ್ಯಾತ್ಮಗಳನ್ನು ಬೆಸೆಯುವ ಪ್ರಯತ್ನದಲ್ಲೂ ಅವರು ತೊಡಗಿದ್ದರು. ‘ಸಂಭೋಗದಿಂದ ಸಮಾಧಿ’ ಎನ್ನುವ ಹಠಯೋಗ ಸಿದ್ಧಾಂತವನ್ನು ಚಂದ್ರಲೇಖ ನೃತ್ಯದಲ್ಲಿ ನಾಜೂಕು ರೂಪದಲ್ಲಿ ಅಳವಡಿಸಿದ್ದರು. ಹೀಗೆ ನೃತ್ಯದ ಆಯಮಗಳನ್ನು ವಿಸ್ತರಿಸಿದ ಅಪರೂಪದ ಕಲಾವಿದೆ, ಚಂದ್ರಲೇಖ.
ತಮ್ಮ ನೃತ್ಯ, ನ್ನತ್ಯ ಸಂಯೋಜನೆಯಿಂದ, ಬರಹ ಹಾಗೂ ಹೋರಾಟದಿಂದ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿದ ಚಂದ್ರಲೇಖ (೭೮) ತವರು ಮಹಾರಾಷ್ಟ (ಜನನ: ೧೯೨೮). ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಕಾನೂನು ಕಲಿಯುತ್ತಿದ್ದ ಹೆಣ್ಣುಮಗಳು ಇದ್ದಕ್ಕಿದ್ದಂತೆ ಕಾಲೇಜು ಬಿಟ್ಟು ನೃತ್ಯದ ಗುರುವನ್ನು ಅರಸುತ್ತಾ ತಮಿಳುನಾಡಿನ ಹಾದಿ ಹಿಡಿದರು. ಕಂಚಿಯ ಪ್ರಖ್ಯಾತ ಗುರು ಕಾಂಚೀಪುರಂ ಎಲ್ಲಪ್ಪ ಪಿಳ್ಳೈ ಅವರಲ್ಲಿ ನೃತ್ಯದ ಪಟ್ಟುಗಳನ್ನು ಅರಗಿಸಿಕೊಂಡು, ಆರಂಭದಲ್ಲಿ ಸಾಂಪ್ರದಾಯಿಕ ನೃತ್ಯಗಾರ್‍ತಿಯಾಗಿಯೇ ಅನಾವರಣಗೊಂಡ ಚಂದ್ರಲೇಖ ಪ್ರತಿಭೆ ನಂತರದ ದಿನಗಳಲ್ಲಿ ನೃತ್ಯದ ಚೌಕಟ್ಟುಗಳನ್ನು ಮುರಿಯುವ ಮೂಲಕ ವಿಜೃಂಭಿಸಿತು. ಶಾಸ್ತ್ರೀಯ ನೃತ್ಯದ ಮೇಲೆ ತಮ್ಮ ರುಜು ಮಾಡಿದ ಅವರು ನೃತ್ಯ ಚಳವಳಿಯನ್ನೇ ಆರಂಭಿಸಿದರು. ಭಾರತೀಯ ‘ನಾಟ್ಯಶಾಸ್ತ್ರ’ ಆವರೆಗೆ ನೆಚ್ಚಿಕೊಂಡಿದ್ದ ಮಡಿವಂತಿಕೆಯನ್ನು ಹುಡಿ ಮಾಡಿದರು. ಸಂಪ್ರದಾಯವಾದಿಗಳು ಕಿಡಿಕಿಡಿಯಾದರೂ ಚ೦ದ್ರಲೇಖ ಕಂಗೆಡಲಿಲ್ಲ. ನೃತ್ಯಕ್ಕೆ ಮನರಂಜನೆಯ ಲೇಪ ಹಾಗೂ ಮೌಲ್ಯ ತಂದುಕೊಟ್ಟದ್ದು ಅವರ ಇನ್ನೊಂದು ಅಗ್ಗಳಿಕೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಆಸುಪಾಸಿನ ಸಂದರ್ಭ ಚಂದ್ರಲೇಖ ಅವರ ವಸಂತದ ಕಾಲ. ಬಹುಶಃ ಈ ಸ್ವಾತಂತ್ರ್ಯ ಕಿಚ್ಚು ಅವರ ನೃತ್ಯದ ಮೇಲೂ ಪರಿಣಾಮ ಬೀರಿರಬೇಕು. ಏಕೆಂದರೆ ಆಕೆಯ ಪಾಲಿಗೆ ನೃತ್ಯ ಸ್ವಾತಂತ್ರ್ಯದ ಹಂಬಲವೂ ಆಗಿತ್ತು. ‘ಸಾಂಪ್ರದಾಯಿಕ ಪ್ರಕಾರಗಳಿಂದ ಕಲೆಗೆ ಸ್ವಾತಂತ್ರ್ಯ ತಂದುಕೊಟ್ಟವರು’ ಎಂದು ‘ಹಿಂದೂ’ ಪತ್ರಿಕೆಯ ಎನ್.ರಾಮ್, ಚಂದ್ರಲೇಖರನ್ನು ಗುರ್ತಿಸುತ್ತಾರೆ.
ಇತರ ನೃತ್ಯಗಾರರಂತೆ ಚಂದ್ರಲೇಖ ಎಂದು ಪ್ರದರ್ಶನದ ಆರಂಭಕ್ಕೆ ಮುನ್ನ ಪ್ರಣಾಮ ಮಾಡಿದವರೇ ಅಲ್ಲ. ಭಾರತೀಯ ಶಾಸ್ತ್ರೀಯ ನೃತ್ಯದ ಸ್ಥಾಯಿ ಭಾವ ‘ಭಕ್ತಿ’. ಆದರೆ ಚಂದ್ರಲೇಖ ಅವರ ನೃತ್ಯ ಆಧುನಿಕವಾಗಿತ್ತು. ಪ್ರಯೋಗಶೀಲವಾಗಿತ್ತು. ನೃತ್ಯದ ಸಂಹಿತೆಗಳನ್ನು ಕ್ಲೀಷೆಗಳನ್ನು ನಿಷೇಧಗಳನ್ನು ನಿರಾಕರಿಸಿದ ಅವರು ನೃತ್ಯದಲ್ಲಿ ಪ್ರಯೋಗಶೀಲತೆ, ಸೃಜನಶೀಲ ಕಲ್ಪನಾಶಕ್ತಿ ಹಾಗೂ ದೇಹದ ವಿಜ್ಯಂಭಣೆಗೆ ಧಾರಾಳ ಅವಕಾಶ ಕೊಟ್ಟಿದ್ದರು. ದೇಹದ ಮೇಲೆ ನಿಷೇಧ ಹೇರಿಕೊಂಡಂತೆಲ್ಲ ಕ್ಷುಲ್ಲಕ ನೈತಿಕ ಚೌಕಟ್ಟುಗಳು ಬಾಧಿಸಲಾರಂಭಿಸುತ್ತವೆ ಎನ್ನುವುದು ಆವರ ತಿಳಿವಳಿಕೆಯಾಗಿತ್ತು. ಶಾಸ್ತ್ರಕ್ಕಿಂತಲೂ ದೇಹದ ಮೇಲಿನ ನಂಬಿಕೆಯಿಂದ ಯೋಗ ಹಾಗೂ ಕಳರಿಪಯಟ್‍ಗಳನ್ನು ನೃತ್ಯದೊಂದಿಗೆ ಬೆಸೆಯುವ ಮೂಲಕ ನೃತ್ಯದ ಶಾಸ್ತ್ರೀಯತೆಯ ಚೌಕಟ್ಟುಗಳನ್ನು ಮೀರಿದರು. ಅವರ ನೃತ್ಯದಲ್ಲಿ ಉನ್ಮತ್ತತೆಯಿತ್ತು; ರೋಚಕತೆಯಿತ್ತು; ಕಾಮದ ಉದ್ದೀಪನವಿತ್ತು.
ಎದುರಾದ ವಿರೋಧದಿಂದಲೋ ಅಥವಾ ಅವರ ಆಸಕ್ತಿಗಳೇ ಬದಲಾದವೋ, ೧೯೮೦ರ ಸುಮಾರಿನಲ್ಲಿ ಚಂದ್ರಲೇಖ ನೃತ್ಯಕ್ಕೆ ಬೆನ್ನು ಮಾಡಿದರು. ನಂತರದ ದಿನಗಳಲ್ಲಿ ಬರಹಗಾರ್ತಿಯಾಗಿ ಗುರ್ತಿಸಿಕೊಂಡರು. ಭಾರತದಲ್ಲಿ ಮಹಿಳೆ ಹಾಗೂ ಮಾನವ ಹಕ್ಕುಗಳ ಸೊಲ್ಲೇ ಇಲ್ಲದ ಕಾಲದಲ್ಲಿ ಚಂದ್ರಲೇಖ ತಮ್ಮೆಲ್ಲ ಶಕ್ತಿಯನ್ನು ಮಹಿಳೆ ಹಾಗೂ ಮಾನವ ಹಕ್ಕುಗಳ ಹೋರಾಟಕ್ಕಾಗಿ ಧಾರೆಯರೆದರು.
ಯಾವ ಕ್ಷೇತ್ರದಲ್ಲಿ ಎಷ್ಟೆಲ್ಲ ಸಾಧನೆ ಮಾಡಿದರೂ ನೃತ್ಯದ ಸೆಳೆತದಿಂದ ಪಾರಾಗುವುದು ಚಂದ್ರಲೇಖ ಅವರಿಗೆ ಸಾಧ್ಯವಿರಲಿಲ್ಲ. ೧೯೮೪ರಲ್ಲಿ ಸಂಯೋಜಕಿಯಾಗಿ ನೃತ್ಯಕ್ಷೇತ್ರಕ್ಕೆ ಮರಳಿದ ಅವರಿಗೆ, ಮುಂಬಯಿಯಲ್ಲಿ ಪ್ರಸ್ತುತ ಪಡಿಸಿದ ಮೂರು ಸಂಯೋಜನೆಗಳು ಅಪಾರ ಕೀರ್ತಿ ತಂದುಕೊಟ್ಟವು. ಭಾರತ ಮಾತ್ರವಲ್ಲದೆ ರಷ್ಯ, ಇಂಗ್ಲೆಂಡ್, ಇಟಲಿ, ಜರ್ಮನಿ, ಪ್ರಾನ್ಸ್ ಅಮೆರಿಕ ಹೀಗೆ ವಿಶ್ವದ ಅನೇಕ ದೇಶಗಳಲ್ಲಿ ಚಂದ್ರಲೇಖ ತಂಡ ಪ್ರರ್ದಶನ ನೀಡಿತು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ ಸಮ್ಮನ್ ಪ್ರಶಸ್ತಿ, ಲಂಡನ್‍ನ ‘ಟೈಂ ಔಟ್ ಡಾನ್ಸ್ ಅಂಬ್ರೆಲಾ’ ಪ್ರಶಸ್ತಿ (೧೯೯೨), ಇಟಲಿಯ ಗಿಯಾ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರೀಯ-ಅಂತರರಾಷ್ಟ್ರೀಯ ಗೌರವಗಳು ಅವರ ನೃತ್ಯ ಪ್ರತಿಭೆಗೆ ಸಂದವು.
ಯೋಗ ಮತ್ತು ನೃತ್ಯವನ್ನು ಬೆಸೆಯುವ ‘ಪ್ರಾಣ’, ಸ್ತ್ರೀತ್ವದ ಪರಿಕಲ್ಪನೆಯೊಂದಿಗೆ ಹೆಣ್ಣಿನ ಅಧಿಕಾರ ಹಾಗೂ ಗುಲಾಮಗಿರಿತನದ ವೈರುಧ್ಯಗಳ ಬಿಂಬಿಸುವ ‘ಶ್ರೀ’, ದೇಹದ ಆಂತರಿಕ ಚೈತನ್ಯ ಕೇಂದ್ರಗಳನ್ನು ಚಾಗೃತಗೊಳಿಸುವ ‘ಯಂತ್ರ’, ದೇಹದ ರೋಚಕತೆ ಹಾಗೂ ಪುರುಷ ಶರೀರದಲ್ಲಿ ಹೆಣ್ತನದ ಹುಡುಕಾಟ ನಡೆಸುವ ‘ರಾಗ’, ಅಗಣಿತ ಕಾಲದ ಬೆನ್ನೇರಿದ ‘ಮಹಾಕಾಲ್’- ಹೀಗೆ, ಚಂದ್ರಲೇಖ ನೃತ್ಯ ಪ್ರತಿಭೆ ಹಲವು ಹುಡುಕಾಟದಲ್ಲಿ ತೊಡಗಿಕೊಂಡಿತ್ತು. ದೇಹದ ಆರಂಭ ಹಾಗೂ ಅಂತ್ಯ ಯಾವುದು ಎನ್ನುವ ಜಿಜ್ಞಾಸೆ ಅವರನ್ನು ಕಾಡುತ್ತಿತ್ತು. ೧೦ನೇ ಶತಮಾನದ ಗಣಿತಜ್ಞ ಭಾಸ್ಕರಾಚಾರ್ಯರ ‘ಲೀಲಾವತಿ’ ಕೃತಿಯನ್ನು ಚಂದ್ರಲೇಖಾ ನೃತ್ಯಕ್ಕೆ ಅಳವಡಿಸಿದ್ದರು. ಶಂಕರಾಚಾರ್ಯರ ‘ಸೌಂದರ್ಯ ಲಹರಿ’ಯಿಂದ ಸ್ಪೂರ್ತಿ ಹೊಂದಿ ‘ಯಂತ್ರ’ ನೃತ್ಯ ಸಂಯೋಜನೆ ಮಾಡಿದ್ದರು. ಹರಪ್ಪ ಕಾಲದಿಂದ ಇಂದಿನವರೆಗೂ ವ್ಯಾಪ್ತಿ ಹೊಂದಿದ್ದ ‘ಶ್ರೀ’, ಹೆಣ್ತನದ ವಿವಿಧ ಆಯಾಮಗಳ ಸೂಕ್ಷ್ಮ ಶೋಧ.
ಅಪ್ರತಿಮ ನೃತ್ಯಗಾರ್ತಿಯ ಬದುಕೇ ಒಂದು ಹೋರಾಟದ ಕಣವಾಗಿತ್ತು. ಕಲೆಗಾಗಿ ಹೋರಾಟ; ಮಹಿಳೆ-ಮಾನವ ಹಕ್ಕುಗಳಿಗಾಗಿ ಹೋರಾಟ- ಕೊನೆಗೆ ಬದುಕಲಿಕ್ಕಾಗಿಯೂ ಚಂದ್ರಲೇಖ ಹೋರಾಟ ನಡೆಸಬೇಕಾಯಿತು. ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರ ಉಳಿವಿನ ಹೋರಾಟ ಫಲಪ್ರದವಾಗಲಿಲ್ಲ. ೭೮ರ ಇಳಿ ವಯಸ್ಸು ಛಲಗಾತಿಯ ವಿರುದ್ದವಾಗಿತ್ತು. ಸಾವಿಗೆ ಮುನ್ನ ಎರಡು ದಿನಗಳ ಮೊದಲಷ್ಟೇ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದರು.
ಬೆಳ್ಳಿಕೂದಲಿನ, ಗಾಲಿ ರೂಪಾಯಿ ಅಗಲ ಕುಂಕುಮದ, ಸಮ್ಮೋಹಕ ಕಣ್ಣುಗಳ, ಚಂಚಲ ಆದರೆ ಸ್ಥಿರ ಕೈಕಾಲುಗಳ, ಸ್ವಸ್ಥ ಮನಸ್ಸಿನ, ದೇಹವೇ ದೇಗುಲ ಎಂದು ನಂಬಿದ್ದ ನೃತ್ಯ ಕಲಾವಿದೆ ಡಿಸೆಂಬರ್ ೩೦ರ ಇರುಳು ಚಿರನಿದ್ರೆಗೆ ಜಾರಿದ್ದರು. ಅಲ್ಲಿಗೆ ಮಹಾನ್ ನೃತ್ಯ ಹಬ್ಬವೊಂದಕ್ಕೆ ಪರದೆ ಬಿದ್ದಿತ್ತು.
ಮೆಚ್ಚುಗೆ ಹಾಗೂ ಟೀಕೆ ಎರಡನ್ನೂ ಎದುರಿಸಿಯೇ ಬೆಳೆದವರು ಚಂದ್ರಲೇಖ. ಅವರ ನೃತ್ಯವನ್ನು ಅದ್ಭುತ ಎಂದವರಿದ್ದರು; ಅಶ್ಲೀಲ ಎಂದು ಜರೆದವರ ಸಂಖ್ಯೆಯೂ ದೊಡ್ಡದು. ಟೀಕೆ-ಟಿಪ್ಪಣಿಗಳನ್ನು ಬದಿಗಿಟ್ಟು ನೋಡಿದರೆ ಅವರೊಬ್ಬ ಲೆಜೆಂಡ್. ಖುಷ್ವಂತ್ ಅಭಿಪ್ರಾಯದಂತೆ ಅವರನ್ನು ಇತರ ಮಹಿಳೆಯರೊಂದಿಗೆ ಹೋಲಿಸಲಾಗದು. ಪುರುಷರೊಂದಿಗೆ ಹೋಲಿಸುವುದಾದರೆ- ಶಾಸ್ತ್ರೀಯ ಸಂಗೀತವನ್ನು ಜನ ಸಾಮಾನ್ಯರ ಬಳಿಗೊಯ್ದ ಒಬ್ಬ ಭೀಮಸೇನ ಜೋಷಿ, ಒಬ್ಬ ಬಾಲಮುರಳಿಕೃಷ್ಣ, ಒಬ್ಬ ಬಿಸ್ಮಿಲ್ಲಾಖಾನ್‍ರಂತೆ ಚಂದ್ರಲೇಖ ಕೂಡ ಲೆಜೆಂಡ್. ಆದರೆ ಉಳಿದ ಲೆಜೆಂಡ್‍ಗಳಿಗೆ ಹಾಗೂ ಚಂದ್ರಲೇಖಾ ಅವರ ನಡುವೆ ವ್ಯತ್ಯಾಸವೊಂದಿದೆ. ಇತರರ ಆಸಕ್ತಿ ಮತ್ತು ಸಾಧನೆ ಅವರ ಕ್ಷೇತ್ರಕ್ಕಷ್ಟೇ ಸೀಮಿತವಾಗಿತ್ತು. ಚಂದ್ರಲೇಖ ಅವರ ಸಾಧನೆ ಕೇವಲ ಸಂಸ್ಕೃತಿ ಮುಖಿಯಾಗಿರಲಿಲ್ಲ ಸಮಾಜಮುಖಿಯೂ ಆಗಿತ್ತು. ಆ ಕಾರಣದಿಂದಲೇ ಅವರು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.
*****
೧೮ ಜನವರಿ ೨೦೦೭