ಶಬರಿ – ೭

ಶಬರಿ – ೭

ಶಾಲೆ ಆರಂಭವಾಗುವ ದಿನ ಆಶ್ಚರ್ಯವೊಂದು ಕಾದಿತ್ತು. ಬೆಟ್ಟದ ಬುಡದಲ್ಲಿ ಹಟ್ಟಿ; ಅಲ್ಲಲ್ಲೇ ಗುಡ್ಡಗಳು, ಮರಗಿಡಗಳು; ಹಟ್ಟಿಗೆ ಸ್ವಲ್ಪ ಹತ್ತಿರದಲ್ಲೆ ಶಾಲೆ. ಸಾಯಂಕಾಲದ ವಾತಾವರಣ. ಸುತ್ತಮುತ್ತ ಬೆಟ್ಟ ಗುಡ್ಡಗಳನ್ನು ಮೀರಿ ಬೀಳುತ್ತಿರುವ ಸೂರ್ಯನ ಕೆಂಪು ಕಿರಣಗಳಲ್ಲಿ ಹೊಳೆಯುತ್ತ ನಿಂತ ಶಾಲೆಯ ಗುಡಿಸಲು ಮಾವಿನಸೊಪ್ಪಿನ ಅಲಂಕಾರ. ಒಳಗೆ ಹಣತೆಗಳ ಸಾಲುಸಾಲು. ಎಲ್ಲರ ಮುಖದಲ್ಲೂ ಗೆಲುವು. ಸಾವಿತ್ರಮ್ಮ ಬೋರ್‍ಡಿನ ಮೇಲೆ ಅಕ್ಷರ ಬರೆದು ಶಾಲೆಗೆ ನಾಂದಿ ಹಾಡಬೇಕು. ಅನಂತರ ಸೂರ್ಯ ಹೇಳುವ ಹಾಡಿಗೆ ಎಲ್ಲರೂ ದನಿಗೂಡಿಸಬೇಕು- ಇದು ಕಾರ್ಯಕ್ರಮದ ಆರಂಭದ ಹಂತ.

ಆದರೆ ಸಾವಿತ್ರಮ್ಮ ಆಶ್ಚರ್ಯಕ್ಕೆ ಕಾರಣವಾದರು; ಅವರು ಹೇಳಿದರು- “ನಾನು ಅಕ್ಸರ ಕಲಿಯೋಕೆ ಮುಂಚೆ ಶಬರಿ ಕಲ್ತು, ಆಮ್ಯಾಕ್ ನನಿಗ್ ಕಲ್ಸವ್ಳೆ. ಈಗ ಶಬರಿ ನನ್ ಗುರು ಇದ್ದಂಗೆ. ಆದ್ರಿಂದ ಶಬರೀನೆ ಮದ್ಲು ಬರೀಬೇಕು. ಆಕೇನೇ ಆರಂಭ ಮಾಡ್ಬೇಕು.”

ಸೂರ್ಯ ಚಪ್ಪಾಳೆ ಹೂಡೆದ ಕೂಡಲೇ ಎಲ್ಲರೂ ಕೈಕೂಡಿಸಿದರು.

ಶಬರಿ ತಬ್ಬಿಬ್ಬಾದಳು. ಕಣ್ಣಲಿ ನೀರು, ಒಂದು ರೀತಿಯ ಭಾವಾವೇಶ. ನಿರೂಪಣೆ ಮಾಡುತ್ತಿದ್ದ ನವಾಬ ಕರೆದರೂ ಆಕೆ ಏಳಲಿಲ್ಲ. ಕಡೆಗೆ ಎಲ್ಲರ ಒತ್ತಾಯಕ್ಕೆ ಎದ್ದು ಬಂದಳು. ಕಣ್ಣೀರು ಒರೆಸಿಕೊಂಡು ಬೋರ್‍ಡಿನ ಮೇಲೆ ‘ಅ, ಆ’ ಎಂದು ಬರೆದಳು.

ಮತ್ತೆ ಚಪ್ಪಾಳೆ; ಹುಚ್ಚೀರನ ಕಣ್ಣು ತುಂಬಿ ಬಂದವು. ತಿಮ್ಮರಾಯಿ ಧನ್ಯನಾದಂತೆ ಕೂತಿದ್ದ. ಪೂಜಾರಪ್ಪ ಬೆಪ್ಪಾದಂತೆ ನೋಡುತ್ತಿದ್ದ.

ಶಾಲೆ ವಿಧ್ಯುಕ್ತವಾಗಿ ಆರಂಭವಾಯಿತು. ಸೂರ್ಯ ಹೇಳಿದ: “ಇದನ್ನ ರಾತ್ರಿ ಶಾಲೆ ಅಂತ ಕರುದ್ರೂ ನಿಜ ಹೇಳಬೇಕೂಂದ್ರೆ ಇದು ಬಿಡುವಿನ ಶಾಲೆ. ನಿಮಗೆ ಬಿಡುವು ಇದ್ದಾಗೆಲ್ಲ ಕಲುಸ್ತೇವೆ. ಮಕ್ಕಳು ಕೂಲಿ ಮಾಡೋದ್ ತಪ್ಪಿಸಿ ಇಲ್ಲಿ ವಿದ್ಯೆ ಹೇಳಿಕೊಡ್ತೇವೆ.”

ಸರಳ ಸಮಾರಂಭ ಮುಗಿಸಿ ಹಟ್ಟಿಗೆ ಮರಳಿ ಬಂದ ಮೇಲೆ, ಸಣ್ಣೀರ, ಹುಚ್ಚೀರ, ತಿಮ್ಮರಾಯಿ ಯಾರೂ ಕಾಣಿಸಲಿಲ್ಲ. ಸೂರ್ಯ ಶಬರಿಯನ್ನು ಕೇಳಿದ- “ಇವ್ರ್ ಎಲ್ ಹೋದ್ರು?”

“ಈಟೋತ್ನಾಗ್ ಇನ್ನೆಲ್ ವೋಗಿರ್‍ತಾರೆ. ಸಂತೋಷ ಜಾಸ್ತಿ ಆತು ಅಂಬ್ತ ಕುಡ್ಯಾಕೋಗಿರ್‍ತಾವೆ” ಎಂದು ನೇರವಾಗಿ ಹೇಳಿದಳು.

ಸೂರ್ಯ ಕ್ಷಣಕಾಲ ಸುಮ್ಮನಾದ. ಆನಂತರ ನವಾಬನನ್ನು ಕರೆದುಕೊಂಡು ಹೊರಗೆ ಹೋದ.

ಇಬ್ಬರೂ ಕತ್ತಲಲ್ಲಿ ಮೌನವಾಗಿ ನಡೆದರು. ಒಂದು ಕಡೆ ನಿಂತರು. ಸ್ವಲ್ಪ ಗಾಳಿ ಬೀಸತೊಡಗಿತು. ನವಾಬ ಕೇಳಿದ. “ಇಲ್ಲಿ ಎಷ್ಟು ದಿನ ಇರ್‍ಬೇಕು ಆಂದ್ಕೊಂಡಿದ್ದೀಯ?”

“ಎಷ್ಟು ದಿನ ಸಾಧ್ಯವೋ ಅಷ್ಟು ದಿನ”- ಸೂರ್ಯ ಉತ್ತರಿಸಿದ.

“ಅರ್‍ಧಕ್ಕೆ ಇವ್ರನ್ನ ಕೈ ಬಿಡ್ತೀಯ?”

“ಎಲ್ಲಾದ್ರೂ ಉಂಟಾ? ನಾನು ಒಂದು ವೇಳೆ ಹೋಗ್ಲೇಬೇಕಾದ್ರೆ ನೀನು ಇಲ್ಲಿ ಕೆಲ್ಸ ಮುಂದುವರೇಸ್ಬೇಕು.”

“ಬೇಗ ನಿನ್ ಮೇಲಿರೊ ಕೊಲೆ ಕೇಸ್ ತೀರ್‍ಮಾನ ಆಗಿದ್ರೆ ಚೆನ್ನಾಗಿತ್ತು. ತಪ್ಪಿಸ್ಕೊಂಡು ತಿರ್‍ಗೋದು ಎಷ್ಟು ದಿನ?”

ಹಾದು; ಸೂರ್ಯನ ಮೇಲೆ ಒಂದು ಕೊಲೆ ಕೇಸು ಇತ್ತು. ಈತ ಭೂ ಒಡೆಯರೊಬ್ಬರ ಕೊಲೆಗೆ ಸಂಚು ರೂಪಿಸಿದನೆಂದು ಹಿಡಿಯಲು ಬಲೆ ಬೀಸಿತ್ತು ಸರ್ಕಾರ. ಆ ಭೂ ಒಡೆಯರು ರಾಜಕಾರಣಿಯೂ ಆಗಿದ್ದರು. ಅವರ ಹತ್ಯೆಯೂ ಆಗಿತ್ತು. ಇದು ಆಸ್ತಿ ಅಧಿಕಾರಗಳ ಕಾರಣಕ್ಕೆ ಆದ ಹತ್ಯೆ. ಆದರೆ ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಸೂರ್ಯನ ಮೇಲೆ ಕೂಲೆ ಸಂಚಿನ ಆರೋಪವಿತ್ತು. ವಕೀಲರಿಗೆ ತಿಳಿಸಿ ಈತ ಭೂಗತನಾಗಿದ್ದ. ಜಾಮೀನಿಗಾಗಿ ಯತ್ನ ಸಾಗಿತ್ತು. ಈ ವಿಷಯವನ್ನು ನವಾಬ್ ಪ್ರಸ್ಥಾಪಿಸಿದಾಗ ಸೂರ್ಯ ಬಿಗುಭಾವದಿಂದ ನೋಡಿದ.

“ಹಾದು; ಅದು ಬೇಗ ಇತ್ಯರ್‍ಥ ಆಗ್ಬೇಕು. ಆ ಕೇಸು ಇದ್ದದ್ದರಿಂದ ನಾವ್ಯಾರೂ ಚಂದ್ರನ ಮದ್ವೇಗೆ ಬರಲಿಲ್ಲ. ಮುಂದೇನು ಅಂತ ಗುಟ್ಟಾಗಿ ಚರ್ಚೆ ನಡಸೋದಕ್ ಸಂಗಾತಿಗಳ ಜೊತೆ ಹೋದ್ವಿ. ಈಗ ಇಲ್ಲಗೇ ಬರಬೇಕಾಯ್ತು. ಸರ್ಕಾರದ ಸಂಚಿಗೆ ನಾನು ಬಲಿಪಶು.”

“ವವಸ್ಥೇಗೆ ಸಮಾಜವೇ ಒಂದು ಬಲಿಪಶು ಅಲ್ವಾ? ಅದ್ರಲ್ಲಿ ನಾನು, ನೀನೂ ಎಲ್ಲಾ ಇದ್ದೀವಿ.”

“ಆದರೆ ಹೋರಾಟ ಹತ್ತಿಕ್ಕೋದುಕ್ಕೇಂತ ನನ್ ಮೇಲೆ ಈ ಕೇಸು ಅಲ್ವಾ?”

“ಅದನ್ನ ನನಗೆ ಬಿಡ್ಸಿ ಹೇಳ್ಬೇಕಾ? ನಾನು ಹೇಳ್ತಿರೋದು ನಮ್ಮ ದಾರಿ ಸ್ಪಷ್ಟವಾಗಿರಬೇಕು. ಇಲ್ಲಿ ಹಿಡಿದ ಕೆಲ್ಸಾನ ಅರ್ಧಕ್ಕೇ ಬಿಟ್ ಹೋಗಬಾರದು. ಬೇಗ ನಿನ್ ಕೇಸು ತೀರ್‍ಮಾನ ಆಗ್ಬೇಕು. ಇದು ನನ್ನ ಆಸೆ ಅಂತ ಹೇಳ್ತಿದೀನಿ ಅಷ್ಟೆ.”

“ನಾವು ಗಟ್ಟಿ ಆರಂಭ ಮಾಡಿದ್ರೆ ಇಲ್ಲಿರೊ ಜನಾನೇ ಹೋರಾಟ ಮುಂದುವರಿಸ್ಕೊಂಡ್ ಹೋಗ್ತಾರೆ. ಅದು ಆಗೇ ಆಗುತ್ತೆ. ನನ್ ಕೇಸಿನ ಬಗ್ಗೆ ನಾನು-ನೀನು ಆಗಾಗ್ಗೆ ಹೋಗಿ ವಿಚಾರಿಸ್ಕೊಂಡ್ ಬರೋಣ. ಹೇಗೊ ಎಲ್ಲಾ ಮೇನೇಜ್ ಮಾಡೋಣ. ಆಮೇಲಿದ್ದೇ ಇದೆ.”

“ಆಮೇಲ್ ಈ ಸರ್ಕಾರಕ್ಕೆ ಸರ್‍ಯಾಗ್ ಬುದ್ಧಿ ಕಲುಸ್ಬೇಕು. ಇದು ಹೊಲಸು ವ್ಯವಸ್ಥೆ”- ನವಾಬ ಸಿಟ್ಟಿನಿಂದ ಹೇಳಿದ.

“ಸರ್ಕಾರ ವ್ಯವಸ್ಥೆಯ ಒಂದು ಅಂಗ ಮಾತ್ರ ನವಾಬ್. ಸರ್ಕಾರವೇ ಇಡೀ ವ್ಯವಸ್ಥೆ ಅಲ್ಲ. ಕೆಟ್ಟ ವ್ಯವಸ್ಥೇಲಿ ಸರ್ಕಾರವಷ್ಟೇ ಅಲ್ಲ, ಜಾತಿ, ವರ್‍ಣ, ವರ್‍ಗ, ಧರ್‍ಮ, ಆಸ್ತಿ, ಹಣ- ಎಲ್ಲಾ ಸೇರಿವೆ. ಇವೆಲ್ಲ ಸೇರಿದ್ದೇ ನಮ್ಮ ಸಾಮಾಜಿಕ ಆರ್ಥಿಕ ವ್ಯವಸ್ಥೆ. ಆದ್ರಿಂದ ಸರ್ಕಾರ ಒಂದು ಬದಲಾದ್ರೆ ಇಡೀ ವ್ಯವಸ್ಥನೇ ಬದಲಾಯ್ತು ಅಂತ ಅಲ್ಲ. ನಮ್ಮ ಸಮಾಜದ ಜನವಿರೋಧಿ ತಳಪಾಯ ಮತ್ತು ತಾತ್ವಿಕತೇನೇ ಬದಲಾಗಬೇಕು. ಅದಕ್ಕೆ ಸಮುದಾಯಾನ ಸಿದ್ಧಗೊಳಿಸಬೇಕು. ಈ ದಿಕ್ಕಿನಲ್ಲಿ ನಮ್ಮದೂ ಒಂದು ಹಾದಿ. ಇದು ನನಗೆ- ನಿನಗೆ ಸ್ಪಷ್ಟವಾಗಿರ್‍ಲಿ”

ನವಾಬ ಸೂರ್ಯನ ಮಾತನ್ನು ಕೇಳುತ್ತಿದ್ದ
ಗಾಳಿಯ ಬಿರುಸು ಸ್ವಲ್ಪ ಹಚ್ಚಾಯಿತು.

“ನೋಡು ನವಾಬ್, ಸರ್ಕಾರಿ ಹಿಂಸೇನ ಯಾರೂ ಹಿಂಸೆ ಅನ್ನೊಲ್ಲ. ಪೋಲಿಸರು ಕೊಂದರೆ-ಅದೂ ವಿನಾಕಾರಣ ಅಮಾಯಕರನ್ನು ಕೊಂದರೂ ಸಹ-ಕಾನೂನಿನ ಸಂರಕ್ಷಣ ಅಂತ ಆಗುತ್ತೆ. ಜನರನ್ನ ಹಿಂಡಿ ಹಿಪ್ಪೆ ಮಾಡೋ ನೀಚರನ್ನ ಜನರು ಸಂಘಟಿತರಾಗಿ ಸಾಯಿಸಿದರೆ ಅದು ‘ಹಿಂಸ್’ ‘ಕೊಲೆ’ ಅಂತ ಕರಿಸ್ಕೊಳ್ಳುತ್ತೆ. ಹಾಗೆ ನೋಡಿದ್ರೆ ಅಸಮಾನತೇನೆ ಸಮಾಜದ ಒಂದು ಹಿಂಸೆ.

ಈ ಜಗತ್ತಿನಲ್ಲಿ ಯಾವುದು ಹಿಂಸೆ ಯಾವುದು ಹಿಂಸೆ ಅಲ್ಲ, ಅನ್ನೋದೆ ದೂಡ್ಡ ಚರ್‍ಚೆ ವಿಷಯ. ಯಾರು ಭಯೋತ್ಪಾದಕರು, ಯಾರು ಅಲ್ಲ ಅನ್ನೋದೂ ಅಷ್ಟೆ. ವಿನಾಕಾರಣ ಯುದ್ಧ ಮಾಡ್ಸೋ ‘ಮುತ್ಸದ್ದಿ’ಗಳು ಭಯೋತ್ಪಾದಕರಲ್ವ? ಆದ್ರಿಂದ ನಂಗನ್ಸುತ್ತೆ ಹಿಂಸೆ-ಅಹಿಂಸೆ, ಭಯೋತ್ಪಾದಕತೆ-ಯುದ್ಧೋತ್ಪಾದಕತೆ, ಧರ್ಮ-ಆಧರ್ಮ, ಯುದ್ಧ-ಶಾಂತಿ, ಜಾತಿವಾದ, ಕೋಮುವಾದ-ಎಲ್ಲದರ ಬಗ್ಗೇನೂ ಸೈದ್ಧಾಂತಿಕ ಸ್ಪಷ್ಟತೆ ಇರ್‍ಬೇಕು.”

ನವಾಬ ಸುಮ್ಮನೆ ಕೇಳುತ್ತಿದ್ದ. ಸೂರ್ಯ ಹೇಳುತ್ತಲೇ ಇದ್ದ.

“ನಿನಗೆ ಈ ಮಾತುಗಳು ಗೊತ್ತಿಲ್ಲ ಅಂತ ಅಲ್ಲ ಗೆಳೆಯ. ಈ ಹೋರಾಟಕ್ಕೆ ನೀನು ನನ್ನಷ್ಟು ಹಳಬ ಅಲ್ಲ. ಆದ್ರೆ ನೀನು ಎಲ್ಲ ಸಂಪ್ರದಾಯಗಳ ಸಂಕೋಲೆ ಬಿಟ್ಟು ಸಿದ್ಧಾಂತದ ಕಡೆ ಬಂದಿದ್ದೀಯ. ನನ್ನ ನಂತರ ಇಲ್ಲಿ ನೀನೆ ಕೆಲ್ಸ ಮುಂದುವರಸ್ಬೇಕು. ಅದಕ್ಕಾಗಿ ಹೇಳ್ತಿದ್ದೀನಿ. ನಮಗೆ ಸೈದ್ಧಾಂತಿಕ ಸ್ಪಷ್ಟತೇನೂ ಬೇಕು. ಸೈದ್ಧಾಂತಿಕ ಸೃಜನಶೀಲತೇನೂ ಬೇಕು.”

“ಸೃದ್ಧಾಂತಿಕ ಸೃಜನಶೀಲತೆ ಅಂದ್ರೆ?”

“ಅದು ಹೀಗೆ ಗಳೆಯ; ಒಂದು ಪ್ರಗತಿಪರ ಸಿದ್ಧಾಂತಕ್ಕೆ ಈಗ ನಾವು ಬದ್ಧವಾಗಿದ್ದೀವಿ. ಹಾಗಂತ ಆ ಸಿದ್ಧಾಂತದ ಒಂದೊಂದು ಸಾಲಿಗೂ ನಾವು ಕೊರಳು ಕೊಡ್ಬೇಕು ಅಂತ ಅಲ್ಲ. ಅದರ ಕೇಂದ್ರ ಆಶಯಕ್ಕೆ ಬದ್ಧವಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಸಿದ್ಧಾಂತಾನ ಬೆಳುಸ್ಬೇಕು; ಸಿದ್ಧಾಂತ ಜಡವಾಗ್ದೆ ಸದಾ ಸೃಜನಶೀಲವಾಗಿರೊ ಹಾಗೆ ನಾವು ಕ್ರಿಯಾಶೀಲರಾಗಿರ್‍ಬೇಕು.”

ನವಾಬ ಸೂರ್ಯನ ಮಾತನ್ನು ಕಿವಿಗೊಟ್ಟು ಕೇಳಿದ. ಎದುರಿಗೆ ನಿಂತು ಒಂದು ಪ್ರಶ್ನೆ ಹಾಕಿದ.

“ಸೂರ್ಯ, ನೀನೇ ಹೇಳಿದ ಹಾಗೆ ನಾನು ನಿಮ್ಮ ತಂಡಕ್ಕೆ ಹೊಸಬ. ಆದ್ರೆ ಸಮಾಜ ಬದಲಾವಣೆ ಮತ್ತು ಜನಪರ ಹೋರಾಟಕ್ಕೆ ಸದಾ ಬದ್ಧ. ಒಮ್ಮೊಮ್ಮೆ ನಮ್ಮ ಹೋರಾಟದ ಹಾದೀನೆ ತಪ್ಪಿ ಎಲ್ಲಲ್ಲೊ ಹೋಗುತ್ತೇನೊ ಅಂತ ಆತಂಕ ಆಗುತ್ತೆ. ವ್ಯವಸ್ಥೆ ವಿರುದ್ಧ ಹೋರಾಟ ಮಾಡೋರಲ್ಲೇ ಪರಸ್ಪರ ಹೋರಾಟ ಇದ್ಯಲ್ಲ. ಇದಕ್ಕೇನಂತೀಯ ನೀನು? ಇದು ಹೋರಾಟಗಳ ಬಗ್ಗೇನೇ ಅಪನಂಬಿಕೆ ಮೂಡ್ಸಲ್ವೆ?”

“ನಿಜ ಗೆಳೆಯ. ನೀನು ಹೇಳೋದು ನಿಜ. ಮೊದಲು ‘ವ್ಯವಸ್ಥೆ’ ಅಂದ್ರೆ ಏನು ಅನ್ನೋದನ್ನ ಹೋರಾಟಗಾರರು ಸ್ಪಷ್ಟ ಪಡಿಸ್ಕೊಳ್ಬೇಕು. ತಮಗೆ ಇಷ್ಟವಾಗದ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ್ರೆ ಅದೇ ‘ವ್ಯವಸ್ಥೆ’ ಅಂದ್ಕೂಂಡ ಬುದ್ಧಿವಂತ್ರೂ ನಮ್ಮಲ್ಲಿದ್ದಾರೆ. ನಾನ್ ಆಗ್ಲೇ ಹೇಳಿದ ಹಾಗೆ ಜನವಿರೋಧಿ ಸರ್ಕಾರವೂ ವ್ಯವಸ್ಥೆಯ ಒಂದು ಅಂಗ, ಅದೇ ಇಡೀ ವ್ಯವಸ್ಥೆ ಅಲ್ಲ; ಎಲ್ಲ ಜನ ವಿರೋಧಿ ಅಂಗಗಳು ಸೇರಿ ‘ವ್ಯವಸ್ಥೆ’ ಆಗುತ್ತೆ ಅನ್ನೋ ಅರ್‍ಥ ಅನೇಕರಿಗೆ ಗೊತ್ತಿಲ್ಲ-ಗೊತ್ತಿದ್ರೂ ಕೆಲವರಿಗೆ ಬೇಕಾಗಿಲ್ಲ. ಇನ್ನು ಹೋರಾಟಗಳ ನಡುವಿನ ಹೋರಾಟ ಇದ್ಯಲ್ಲ. ಒಂದಕ್ಕಿಂತ ಹಚ್ಚು ಪ್ರಗತಿಪರ ಸಿದ್ಧಾಂತಗಳು ಇರೋಕಡೆ ಹೀಗಾಗುತ್ತೆ. ಹಾಗಂತ ಸಮಾನ ಶತ್ರುವನ್ನ ಮರೆತು ಪ್ರಗತಿಪರ ಸಿದ್ಧಾಂತದವರು ದಾಯಾದಿ ಕಲಹದಲ್ಲಿ ತೊಡಗೋದು ಖಂಡಿತ ಸರಿಯಲ್ಲ. ಈ ದಾಯಾದಿ ಕಲಹ ಶತ್ರುವಿಗೆ ಸಹಕಾರಿ ಅಷ್ಟೇ ಅಲ್ಲ ಸಿದ್ಧಾಂತದ ಸೃಜನಶೀಲತೆ, ಪ್ರಗತಿಪರತೆ ಎರಡನ್ನೂ ಹಾಳ್ ಮಾಡುತ್ತೆ. ಹಾಳು ಮಾಡ್ತ ಬಂದಿದೆ.”

“ಇದಕ್ಕೆ ಕೊನೇನೇ ಇಲ್ವ”

“ಇವತ್ತಲ್ಲ ನಾಳೆ ಇರುತ್ತೆ. ಜನರೇ ಉತ್ತರ ಕೊಡ್ತಾ ಹೋಗ್ತಾರೆ. ಪ್ರಗತಿಪರರಲ್ಲೇ ಕೆಲವರನ್ನು ಕಡೆಗಣುಸ್ತಾರೆ; ಕೆಲವರನ್ನ ಮುನ್ನಡುಸ್ತಾರೆ. ಉದಾಹರಣೆಗೆ ನೋಡು, ಸಂಭಾವಿತರು, ಹೋರಾಟಗಾರರು ಅನ್ನಿಸ್ಕೊಂಡು ಕೋಮುವಾದಿ ಶಕ್ತಿಗಳಿಗೆ ಪೂರಕವಾಗಿ ಕೆಲ್ಸ ಮಾಡೋ ಮುಖವಾಡದೋರ್‍ಗೆ ಜನರು ಸರಿಯಾದ ಜಾಗ ತೋರುಸ್ತಾ ಇದಾರೆ. ನಿಜವಾದ ಬದಲಾವಣೆಗೆ ಕಾಯಬೇಕಾಗುತ್ತೆ”

“ಕಾಯ್ತಾನೇ ಇದ್ರೆ ಕ್ರಾಂತಿ ಆಗುತ್ತಾ?”

“ಯಾವ ಕ್ರಾಂತೀನೂ ದಿಢೀರ್ ಅಂತ ಆಗಿಲ್ಲ ಗೆಳೆಯ. ಕ್ಷಿಪ್ರ ಕ್ರಾಂತಿಗಳೆಲ್ಲ ಅಧಿಕಾರ ಹಿಡ್ಯೋಕೆ ನಡೆದ ಮಿಲಿಟರಿ ಕ್ರಾಂತಿಗಳು. ಇಲ್ಲದಿದ್ರೆ ‘ದಾಯಾದಿ ಕಲಹ’ದ ಕ್ರಾಂತಿಗಳು. ಹಾಗೆ ನೋಡಿದ್ರೆ ಅವು ಕ್ರಾಂತಿಗಳೇ ಅಲ್ಲ. ಇನ್ನೊಂದು ಮಾತು. ನಾನು ಕಾಯ್ಬೇಕು ಅಂದಾಗ ಒಳ್ಳೇ ದಿನ ಬರುತ್ತೆ ಅನ್ನೋ ಆಶಾವಾದವನ್ನು ಹೇಳ್ತಿದ್ದೀನಿ. ಕ್ರಿಯೆ ಇಲ್ದೆ ಕಾಯ್ದೇಕು ಅಂತ ಹೇಳ್ತಿಲ್ಲ.”

ನವಾಬ್ ಇನ್ನೇನೋ ಕೇಳಬೇಕು ಎಂದುಕೊಳ್ಳುವಲ್ಲಿ ದೂರದಲ್ಲಿ ಯಾರೊ ಬರುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿತು. ಅಸ್ಪಷ್ಟವಾದ ಮಾತುಗಳು ಕೇಳಿಸಿದವು.

“ಯಾರೊ ಬರ್‍ತಾ ಇದ್ದಂಗಿದೆ. ಆದ್ರೂ ಒಂದು ಪ್ರಶ್ನೆ ಕೇಳ್ತೀನಿ. ನೀನು ಇವತ್ತು ಎಲ್ಲಾ ಹೇಳೊ ಮೂಡಲ್ಲಿದ್ದೀಯ, ಅದಕ್ಕೇ ಕೇಳ್ ಬಿಡ್ತೀನಿ. ಕ್ರಾಂತಿ ಅಂದ್ರೆ ಕೊಲೆ ಮಾಡ್ಲೇಬೇಕಾ?-” ಎಂದು ನವಾಬ ಅತುರದಲ್ಲೇ ಕೇಳಿದ.

ಸೂರ್ಯ ಫಕ್ಕನೆ ನಕ್ಕ. ಆಮೇಲೆ ಹೇಳಿದ-

“ಕ್ರಾಂತಿ ಕೂಲೆಪಾತಕವೂ ಅಲ್ಲ; ಭಯೋತ್ಪಾದಕವೂ ಅಲ್ಲ; ಯುದ್ಧೋತ್ಪಾದಕವೂ ಅಲ್ಲ. ಕ್ರಾಂತಿ ಅನ್ನೋದು ಒಂದು ಕನಸು. ಈ ಕನಸನ್ನ ಕರ್‍ಮಠಗೊಳಿಸ್ಬಾರದು; ಜೀವಂತವಾಗಿಡ್ಬೇಕು. ಆಗ ಒಂದಲ ಒಂದು ದಿನ ಕನಸು ನನಸಾಗುತ್ತೆ…”

ಅಷ್ಟರಲ್ಲಿ ನವಾಬ “ಅವ್ರ್ ಯಾರೊ ಹತ್ರ ಬರ್‍ತಿದಾರೆ” ಅಂದ.

ಅಲ್ಲೀವರೆಗೆ ಬೌದ್ಧಿಕಾವೇಶಕ್ಕೆ ಒಳಗಾಗಿ ಮಾತನಾಡುತ್ತಿದ್ದ ಸೂರ್ಯ ದಿಟ್ಟಿಸಿ ನೋಡಿದ. ಹುಚ್ಚೀರ, ಸಣ್ಣೀರ, ತಿಮ್ಮರಾಯಿ ಬರುತ್ತಿರುವುದು ಕಾಣಿಸಿತು.

“ಒಂದು ಮಾತು ಕೂನೇದಾಗಿ ಹೇಳ್ತೀನಿ ಗೆಳೆಯ. ನಾನು ಹೇಳಿದೆಲ್ಲ ಸಿದ್ಧಾಂತದ ಮಾತುಗಳು, ತತ್ವಜ್ಞಾನದ ಮಾತುಗಳು; ನಿಜ. ಸಿದ್ಧಾಂತದ ಮಾತುಗಳು ಆಯಾ ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತೆ; ಸ್ಟುಟವಾಗುತ್ವೆ, ಅನುಭವ ಇನ್ನಷ್ಟು ಕಲ್ಸುತ್ತೆ. ಆದ್ರಿಂದ ನಮ್ಮ ಸಿದ್ಧಾಂತಗಳು ಮಠವೂ ಆಗಬಾರದು; ಕರ್ಮಠವೂ ಆಗಬಾರದು.”

ಸೂರ್ಯ ಇಷ್ಟು ಮಾತನಾಡುವ ವೇಳೆಗೆ ಹುಚ್ಚೀರ, ಸಣ್ಣೀರ, ತಿಮ್ಮರಾಯಿ ಮತ್ತೆ ಮೂರ್‍ನಾಲ್ಕು ಜನರು ಹತ್ತಿರ ಬಂದರು. “ಯಾರಪ್ಪೊ ಕತ್ಲಾಗ್ ನಿಂತ್ ಮಾತಾಡಾರು” ಎಂದ ಸಣ್ಣೀರ. ಸೂರ್ಯ “ನಾನು ಸಣ್ಣೀರ ನಾನು” ಎಂದಾಗ “ಓ ಸೂರ್ಯಪ್ಪ;….. ವೊತ್ತಾರೆ… ವೊತ್ತಾರೆ ಸಿಗ್ತೀವಿ…. ಬತ್ತೀವಿ… ಕತ್ಲಾಗೆ ಕೆಟ್‍ವುಳಾ ಓಡಾಡ್ತವೆ, ಜ್ವಾಪಾನ ಕಣಪ್ಪೊ… ಬತ್ತೀವಿ” ಎಂದು ಹೂರಟೇಬಿಟ್ಟ.

ಆತನ ಜೊತೆ ಇತರರೂ ಹೊರಟರು.

“ನಾವು ಹೋಗೋಣ ನಡಿ” ಎಂದ ಸೂರ್ಯ.

ನಡೆಯುತ್ತಿರುವಾಗ ಮತ್ತೆ ಮೌನ. ಇವತ್ತೇ ತನ್ನ ಕೂನೆಯ ದಿನವೇನೊ ಎಂಬಂತೆ ಮಾತನಾಡಿದೆ ಎನ್ನಿಸತೂಡಗಿತು. ಮಾತೆಲ್ಲ ಮುಗಿದ ಮೇಲೆ ಕಳವಳ ಕಾಡಿಸತೊಡಗಿತು.

“ಜಾಸ್ತಿ ಮಾತಾಡಿದ್ನ ಗೆಳೆಯ”- ನವಾಬನನ್ನು ಕೇಳಿದ.

“ಹಾಗೇನಿಲ್ಲ. ನನಗೂ ಇಷ್ಟು ಮಾತು ಬೇಕಾಗಿತ್ತು. ಇಲ್ದಿದ್ರೆ ಬದಲಾವಣೆ ಮತ್ತು ಭ್ರಮೆ ನಡುವಿನ ವೃತ್ಯಾಸಾನೇ ಗೊತ್ತಾಗಲ್ಲ. ಬಾಯಿಪಾಠ ಮಾಡಿದ್ದನ್ನ ಹೇಳ್ತಾ ಹೇಳ್ತಾ ‘ಮಂತ್ರ’ ವಾದಿಗಳಾಗಬಾರ್‍ದಲ್ಲ ನಾವು” ಎಂದು ನವಾಬ ನಸುನಕ್ಕ.

“ಮಂತ್ರವಾದಿ!”- ಸೂರ್ಯ ಮೆಲುಕು ಹಾಕ್ತಾ “ಮಾತುಗಳನ್ನೆಲ್ಲ ಮಂತ್ರವಾಗ್ಸೊ ವಾದಿ “ಮಂತ್ರವಾದಿ” ಅಂದ್ರೆ ಉರು ಹೊಡೆದ ಮಂತ್ರ ಹೇಳೊ ಪುರೋಹಿತರ ಥರ ಅನ್ನು. ನಿಜ, ನಿಜ, ನಾವು ಎರಡು ರೀತೀನೂ ಮಂತ್ರವಾದಿ ಆಗಬಾರದು; ಮಂತ್ರದಂಡಾನೂ ಹಿಡೀಬಾರ್‍ದು; ಮಾತನ್ನೇ ಮಂತ್ರ ಮಾಡಬಾರ್‍ದು. ಎಷ್ಟು ಚನ್ನಾಗ್ ಹೇಳ್ದೆ ಗೆಳೆಯ” ಎಂದು ಮೆಚ್ಚುಗೆ ಸೂಚಿಸಿದ. ಜೊತಗೆ “ಈ ಎರಡರಲ್ಲಿ ನಾನು ಯಾವುದು ಅಂತ ಈಗ್ಲೇ ಹೇಳಿಬಿಡು” ಎಂದು ನಸುನಗುತ್ತಾ ಕೇಳಿದ. “ಯಾಕೆಂದ್ರೆ ಕಲಿಯೋದು, ತಿದ್ದಿಕೊಳ್ಳೋದು ಯಾವಾಗ್ಲೂ ಇದ್ದೇ ಇರುತ್ತೆ. ಅಲ್ವಾ?”- ಎಂಬ ಸಹಜ ವಿನಯದ ಮಾತನ್ನು ಸೇರಿಸಿದ.

“ನೀನು ಎರಡು ಥರಾ ಮಂತ್ರವಾದೀನೂ ಅಲ್ಲ. ನಿನ್ನ ಮುಖಸ್ತುತೀಗ್ ನಾನ್ ಹೇಳ್ತಿಲ್ಲ. ನಾವು ವಿಮರ್ಶೆ – ಸ್ವವಿಮರ್ಶೆಗೆ ಬದ್ಧವಾಗಿರ್‍ಬೇಕು ಅನ್ನೋ ತಿಳುವಳಿಕೇಗೆ ಬದ್ಧವಾದೋರಲ್ವ?ನಿನ್ನನ್ನ ಏನಾದ್ರೂ ಕರೀಲೇಬೇಕು ಅಂದ್ರೆ ವಾಸ್ತವವಾದಿ ಅಂತೀನಿ; ಅದೂ ಹೋರಾಟಗಳ ನಡುವೆ ಇರೊ ವಾಸ್ತವವಾದಿ.” -ನವಾಬ್ ನಿಖರವಾಗಿ ಹೇಳಿದ.

“ಒಟ್ನಲ್ಲಿ ನನ್ ಮಾತು ಮನುಷ್ಯನ್ ಮಾತಾಗಿತ್ತು ತಾನೆ?”

“ಅಪ್ಪಟ ಮನುಷ್ಯನ್ ಮಾತು. ಯಾಕ್ ಅನ್ಮಾನ ಗೆಳೆಯ?”

“ಒಂದೇ ಸಮ ಮಾತಾಡ್ದೆ. ಅದಕ್ಕೆ ಒಂದ್ಸಾರಿ ನನ್ನನ್ನ, ನಾನು ನೋಡ್ಕೊ ಬೇಕಲ್ವ?”

“ನನ್ ಮುಖ ನೋಡು ಸೂರ್ಯ; ನನ್ ಮುಖದಲ್ಲಿ ನೀನ್ ಕಾಣುಸ್ತೀಯ. ಅಷ್ಟು, ಸಾಕು ಅಲ್ವ?”

ಗೆಳೆಯ ನವಾಬನ ಮಾತಿನಿಂದ ಸೂರ್ಯನಿಗೆ ಸಮಾಧಾನವಾಯಿತು.

ಇಬ್ಬರೂ ಮೌನದಲ್ಲೇ ನಡೆದರು. ಹಟ್ಟಿ ಹತ್ತಿರಕ್ಕೆ ಬಂದಾಗ ನವಾಬ್ ಹೇಳಿದ- “ಜಾಸ್ತಿ ಮಾತಾಡ್ತೀಯ ಅಂದ್ಕೊಂಡು ಸುಮ್ನೆ ಇರಬೇಡ ಸೂರ್ಯ. ಆಗಾಗ್ಗೆ ನಿನ್ನ ವಿಚಾರ ನನಗೆ ಹೇಳ್ತಾ ಇರ್‍ಬೇಕು. ನಾನೂ ಬೆಳೀತೀನಿ”

“ಇಬ್ಬರೂ ಬೆಳೀತೀವಿ”

ಸೂರ್ಯ ಸೌಜನ್ಯದ ಮಾತಷ್ಟೇ ಅಲ್ಲ, ಸತ್ಯವನ್ನೇ ಹೇಳಿದ್ದ.

ಹಟ್ಟಿಯಲ್ಲಿ ಶಬರಿ ಕಾಯುತ್ತಾ ನಿಂತಿದ್ದಳು. ಅವಳಲ್ಲಿ ಆತಂಕವಿತ್ತು.

“ಈಟೊತ್ ಎಲ್ಲೋಗಿದ್ರಿ? ಮದ್ಲೇ ಕತ್ಲು. ವುಳ ವುಪ್ಪಟೆ ಓಡಾಡ್ತ ಇರ್‍ತಾವೆ. ನಂಗಂತೂ ಕುಂತ್ಕಡೆ ಕುಂತ್ಕಮಾಕಾಗ್ಲಿಲ್ಲ. ಅಪ್ಪಯ್ಯ ಬಂದ್ ಯೇಳ್ದಿದ್ರೆ ನಾನೇ ವುಡಿಕ್ಕಂಡ್ ಬರ್‍ತಾ ಇದ್ದೆ”- ಶಬರಿ ಗಾಬರಿಯಿಂದ ಮಾತಾಡಿದಳು.

ಸೂರ್ಯ ಏನೂ ಮಾತಾಡಲಿಲ್ಲ. ಆದ್ದರಿಂದ ನವಾಬನೂ ಸುಮನಿದ್ದ.

ಶಬರಿ ಒಳಹೋದಳು. ಇಬ್ಬರೂ ಹಿಂಬಾಲಿಸಿದರು. ತಿಮ್ಮರಾಯಿ ಆಗಲೇ ಉಣ್ಣುತ್ತಾ ಕೂತಿದ್ದ. ಇವರನ್ನು ನೋಡಿ ನಕ್ಕು ತಲೆ ತಗ್ಗಿಸಿ ಮುದ್ದೆ ಉಣ್ಣತೊಡಗಿದ.

“ನಿಮ್ಗೂ ಉಂಬಾಕಿಕ್ತೀನಿ. ಕುಂತ್ಕಳ್ಳಿ” ಎಂದಳು ಶಬರಿ.

ಇಬ್ಬರೂ ಮೌನವಾಗಿ ಊಟ ಮಾಡಿದರು. ಆನಂತರ ನವಾಬನನ್ನು ಹುಚ್ಚೀರನ ಮನೆಗೆ ಬಿಡಬೇಕಾಗಿತ್ತು. ಆದರೆ ಸೂರ್ಯ “ಇವತ್ತಿಲ್ಲೇ ಮಲಗು. ನಾಳೆ ಅಲ್ಲಿಗೆ ಹೋದ್ರಾಯ್ತು” ಎಂದ. ಶಬರಿಯೂ ಅದನ್ನೇ ಹೇಳಿದಳು. ನವಾಬ “ಪರ್‍ವಾಗಿಲ್ಲ; ಹುಚ್ಚೀರನ ಗುಡಿಸ್ಲೀಗೆ ಹೋಗ್ತೀನಿ” ಎಂದು ಹೂರಟ.

ಸೂರ್ಯನ ಮನಸ್ಸು ಭಾರವಾಗಿತ್ತು.

ಹೋರಾಟಗಳು; ಆರೋಪಗಳು; ನಿರೀಕ್ಷಗಳು; ನಿರಾಶಗಳು- ಎಲ್ಲಾ ಒಟ್ಟಿಗೆ ಸೇರಿದ ನೆನಪುಗಳು. ಒಳಗೆ ಜಗ್ಗಿಸುವ ಭಾವಗಳು.

ಗೆಳೆಯನ ಜೊತೆ ಇಷ್ಟು ಹೂತ್ತು ಆಡಿದ ಗಂಭೀರ ಮಾತುಗಳು ಮೌನವನ್ನು ಬಯಸುವಂತೆ ಮಾಡಿದ್ದವು.

ಮಾತಿನ ನಂತರದ ಮಾನದಲ್ಲ.
ಮೌನದೊಳಗೆ ಬಂದು ಸೇರುವ ಮಾತು.
ಆಡಿದ ಮಾತು ಮೌನದಲ್ಲಿ ಮಲಗಬೇಕು.
ಮತ್ತೆ ಎಚ್ಚರಗೊಂಡು ಬೆಳಕಾಗಬೇಕು.

ಎಷ್ಟು ಹೊತ್ತಾದರೂ ನಿದ್ದೆ ಬಾರದೆ ಎದ್ದು ಕೂತ. ಸಣ್ಣ ಸೂಟ್ಕೇಸಿನ ಜಿಪ್ ತೆಗೆದು ಏನೋ ಹುಡುಕಿದ. ಆನಂತರ ಬಗಲು ಚೇಲ ತೆಗೆದುಕೂಂಡ. ಕೈ ಹಾಕಿದ; ತಡಕಿದ.

ಅಷ್ಟರಲ್ಲಿ ಶಬರಿ ಬಂದಳು. ಗಡಿಬಿಡಿಯಿಂದ ಚೀಲವನ್ನು ಪಕ್ಕಕ್ಕೆ ಇಟ್ಟು “ಬಾ ಬಾ ಇದೇನು ಇಷ್ಟು ಹೂತ್ನಲ್ಲಿ?” ಎಂದು ಕೇಳಿದ.

“ನಿಂದೂಳ್ಳೆ ಮಾತಾತಲ್ಲ; ಗುಬ್ಬಚ್ಚಿ ಅದ್ರ್ ಗೂಡ್ನಾಗ್ ಅಡ್ಡಾಡಾಕೆ ವೊತ್ತು ಗೊತ್ತು ಇರ್‍ತೈತಾ? ಇದು ನನ್ ಮನೆ” ಎಂದು ಗಡುಸಾಗಿ ಹೇಳಿದಳು.

“ಅದು ಗೊತ್ತು ಮಾರಾಯ್ತಿ. ಇದು ನಿನ್ ಮನೆ. ನಾನ್ ನಿನ್ ಮನೇಲಿರೊ ಒಬ್ಬ ದಾರಿಹೋಕ. ಇರು ಅಂದ್ರೆ ಇರ್‍ಬೇಕು. ಹೋಗು ಅಂದ್ರೆ ಹೋಗ್ಬೇಕು. ಸರೀನಾ?”- ಸೂರ್ಯ ತಮಾಷೆಯ ದಾಟಿಯಲ್ಲಿ ಮಾತನಾಡಿದ.

ಆದರೆ ಶಬರಿ ಈ ಮಾತುಗಳನ್ನು ತಮಾಷೆಯಾಗಿ ಸ್ವೀಕರಿಸಲಿಲ್ಲ. ಸೂರ್ಯನಿಗೆ “ಇದು ನನ್ನ ಮನೆ” ಎಂದು ಹೇಳಿದ್ದರಿಂದ ನೋವಾಗಿದ್ದು ಅದಕ್ಕಾಗಿ ಆತ ಹೀಗೆ ಹೇಳುತ್ತಿದ್ದಾನೆಂದು ಗ್ರಹಿಸಿದ್ದಳು.

“ತೆಪ್ ತಿಳ್ಕಬ್ಯಾಡ. ನೀನು ನನ್ನೊಬ್ಬಳನ್ನೇ ಬಿಟ್ಟು ಆಟೋತ್ತೆಲ್ಲೊ ವೋಗ್ ಬಿಟ್ಟಿದ್ದೆ ನೋಡು ಆ ನವಾಬಣ್ಣನ್ ಜತ್ಯಾಗೆ. ಅದ್ಕೆ ಬ್ಯಾಸ್ರ ಬಂದಿತ್ತು. ಗಡಸಾಗಂದೆ. ತೆಪ್ಪಾತು” ಎಂದು ನೋವಿನಿಂದ ನುಡಿದಳು.

“ನಾನ್ಯಾಕ್ ತಪ್ ತಿಳ್ಳೊಳ್ಳಾನ? ನವಾಬನ ಜೊತೆ ಏನೋ ಮಾತಾದೋದಿತ್ತು ಅದಕ್ಕೇಂತ ಕರ್‍ಕಂಡೋಗಿದ್ದೆ”-

“ಇಲ್ಲೇ ಮಾತಾಡಕಾಯ್ತಿರ್‍ಲಿಲ್ವ? ನಾನೇನ್ ಬ್ಯಾರೇಳ?”

“ಹಾಗಲ್ಲ ಶಬರಿ. ನಾವೇನೊ ಮಾತಾಡ್ತ ಕುಂತು ನಿನ್ ಕೆಲ್ಸ ಕೆಡ್ಸೋದ್ ಯಾಕೇಂತ್ತ….”

“ಅದೇನೋ ಯೇಳ್ತಾರಲ್ಲ, ಕಳ್ಳಂಗೊಂದ್ ಪುಳ್ಳೆ ನೆವ ಅಂಬ್ತ, ಅಂಗಾತು ನೋಡು ಮತ್ತೆ.”

“ಈಗಾಗಿದ್ದಾಗೋತು; ಬೇಸರ ಮಾಡ್ಕೋಬೇಡ ಕೂತ್ಕೊ.”

ಶಬರಿ ಕೂತಳು. ಬಗಲು ಚೀಲದ ಕಡೆಗೇ ನೋಡುತ್ತಾ ಕೇಳಿದಳು.

“ಆ ಚೀಲ್ದಾಗೇನೈತೆ?”

“ಅದ್ರಾಗೆ… ಅದ್ರಾಗೆ…. ಯಾಕಂಗ್ ಕೇಳ್ತಿದ್ದೀಯ?”- ಸೂರ್ಯ-ಈಕೆಗೆ ಬೇಡದ ಕುತೂಹಲ ಯಾಕೆ ಎಂಬಂತೆ ಕೇಳಿದ.

“ಯಾಕ ಅಂದ್ರೆ ಸುಮ್ನೆ ಕೇಳಿದ್ನಪ್ಪ. ಅದ್ರಾಗೇನೊ ತಾತನ ಆಸ್ತಿ ಐತೆ ಅನ್ನಾ ತರಾ ಯಾವಾಗ್ಲೂ ನೇತಾಡಿಸ್ಕಂಡೇ ವೋಗ್ತೀಯಲ್ಲ ಅದಕ್ಕೇ ಕೇಳ್ದೆ. ಯೇಳಂಗಿದ್ರೆ ಯೇಳು ಬಿಡಂಗಿದ್ರೆ ಬಿಡು, ನಂದೇನ್ ವೋಗ್ತೈತೆ ಗಂಟು!”

“ಅರೆ! ಸಣ್ಣ ಸಣ್ಣದಕ್ಕೆಲ ಸಿಡುಕಿದ್ರೆ ಹೇಗೆ?…. ಅದಿರ್‍ಲಿ. ಶಾಲೆ ಚನ್ನಾಗ್ ಶುರುವಾಯ್ತು ಅಲ್ವ?”- ಮಾತು ಬದಲಿಸಿದ ಸೂರ್ಯ.

“ಹ್ಞೂ ಮತ್ತೆ, ಒಡತಿ-ಅದೇ ಸಾವಿತ್ರಕ್ಕ, ನನ್ನೇ ಕರ್‍ದು ಅಕ್ಸರ ಬರಿಸ್ದಾಗ ಯೇಟಂದ್ ಆನಂದ ಆತು ಗೊತ್ತಾ?”- ಶಬರಿ ಸಂಭ್ರಮಿಸಿದಳು.

“ನನಗೂ ಅಷ್ಟೆ. ಬೇಗ ಎಲ್ರೂ ಓದು ಬರಹ ಕಲೀಬೇಕು. ಓದು ಬರಹ ಕಲೀತಾನೆ ಮಾಡೋ ಕೆಲ್ಸ ಬೇಕಾದಷ್ಟಿದೆ.”

“ಅಂಗಂಬ್ತೀಯ? ಅಂಗಾರೆ ನಮ್ ಕೆಲ್ಸ ಇಲ್ಲೇ ನಿಲ್ಲಾಕಿಲ್ಲ?”

“ಇದು ಆರಂಭ. ಇದು ನಿಲ್ಲೊ ಕೆಲ್ಸ ಅಲ್ಲ; ನಡ್ಯೋ ಕೆಲ್ಸ”

“ನಾನು ಅ ಆ ಅಂಬ್ತ ಬೋಲ್ಡ್ ಮ್ಯಾಲ್ ಬರುದ್ ಮ್ಯಾಲೆ ಎಲ್ಲಾ ವೊಸಾ ತರಾ ಕಾಣಸ್ತಾ ಐತೆ. ಒಳ್ಳೇ ಕೆಲ್ಸ ಏನ್ ಬೇಕಾರೂ ಮಾಡಾನ.”

“ಅದಪ ಮಾತು ಅಂದ್ರೆ”- ಸೂರ್ಯ ಶಭಾಷ್‍ಗಿರಿ ನೀಡಿದ.

“ಅದೆಲ್ಲ ನಂಗೇನು ಉಬ್ಬುಸ್ ಬ್ಯಾಡ; ಮದ್ಲು ನಿನ್ ಅಂಗೈ ಎಂಗೈತೆ ತೋರ್‍ಸು” ಎಂದಳು ಶಬರಿ.

“ನೋಡು ಎರಡೇ ದಿನಕ್ ವಾಸಿ ಆಗಿದೆ” ಎಂದು ಸೂರ್ಯ ಅಂಗೈ ತೋರಿಸಿದ.

ಶಬರಿ ನೋಡಿದಳು. ಸವರಿದಳು. ಸೂರ್ಯನಿಗೆ ಆಕೆಯ ಮುಗ್ಧಪ್ರೀತಿ ಕೈಮುಖಾಂತರ ನರದೊಳಗೆ ಸೇರಿ ಸರಸರ ಹರಿದಂತಾಯಿತು.

ಮಾತಿಗೆ ತಡಕಾಡಿದರೂ ಸಿಗದ ಪದಗಳು.
ಹನಿಬಿದ್ದ ಕೊಳದಲ್ಲಿ ಉಂಗುರುಂಗುರ ಅಲೆಗಳು.
ಆಕಾರ ಪಡೆಯುತ್ತಲೇ ಅಳಿಯುವ ಭಾವಗಳು.
ಭಾವಕ್ಕೆ ಸಿಗದ ಭಾಷೆ.

ಕಡಗೆ ಶಬರಿಯೇ ಮಾತಾಡಿದಳು.
“ನಿನ್ನೇನೊ ಒಂದು ಕೇಳಾನ ಅಂಬ್ತ ಇವ್ನಿ.”
ಸೂರ್ಯ ಅಪರೂಪಕ್ಕೆ ಉದ್ವಿಗ್ನಗೊಂಡ.
“ಏನು? ಏನದು?” ಎಂದ.

“ಏನಿಲ್ಲ; ನಿನ್ತಾವ ಚಂದ್ರ-ನೀನೂ ಇಬ್ರೂ ಇರಾ ಪಟ ಐತಲ್ಲ. ಒಸಿ ಕೊಡ್ತೀಯ ನಂಗೆ.”

“ಅಷ್ಟೇನಾ” ನಿರೀಕ್ಷಿಸಿದ್ದು ಕೇಳದೆ ನಿರಾಳವಾದಂತೆ ಪ್ರತಿಕ್ರಿಯಿಸಿದ ಸೂರ್ಯ “ಕೊಟ್ಟೆ ಇರು” ಎಂದು ಬಗಲುಚೀಲಕ್ಕೆ ಕೈಹಾಕಿ ನೋಡಿ ಹೂರ ತಗೆದ ಫೋಟೊವನ್ನು ಶಬರಿಯ ಕೈಗೆ ಕೂಟ್ಟ.

ಫೋಟೋ ನೋಡುತ್ತ ಕೂತ ಶಬರಿಯ ಮುಖದಲ್ಲಿ ಅಲೆಗಳು.
ಅರೆಬರೆ ಹರಡಿದ ದೀಪದ ಬೆಳಕು.
ಕಪ್ಪು ದೀಪಕ್ಕೆ ಬೆಳಕಿನ ಬಾಣ.
ಎಲ್ಲಿಂದ ಹೂರಟಿತೊ ಎಲ್ಲಿ ಸೇರಿವುದೊ!
ಇದ್ದಲ್ಲೆ ಇರುವುದೊ ಸುತ್ತೆಲ್ಲ ಸುಡುವುದೊ!

ಶಬರಿಯ ಮುಖದಲ್ಲಿ ಕತ್ತಲೆ ಬೆಳಕಿನಾಟ.
ಗಾಳಿಗೆ ತುಯ್ದಾಡುವ ಬಿರುಸಿನ ಬಾಣ.

ಕಡೆಗ ಸೂರ್ಯನೇ ಕೇಳಿದ- “ಯಾಕ್ ಸುಮ್ನೆ ನೋಡ್ತಾ ಕೂತೆ? ಅದು ನಿನಿಗ್ ಬೇಕಾ?”

ಶಬರಿ ಸೂರ್ಯನ ಮುಖ ನೋಡಿದಳು. ಒತ್ತಿ ಬರುವ ಭಾವನೆಗಳನ್ನು ಒಳಗೆ ಹತ್ತಿಕ್ಕುವಂತೆ ಉಗುಳು ನುಂಗಿಕೊಂಡಳು. ಗಂಟಲು ಅಲುಗಿತು. ಸೂರ್ಯ ಚಂದ್ರರಿದ್ದ ಭಾವಚಿತ್ರವನ್ನು ಎರಡಾಗಿ ಹರಿದಳು.

ಸೂರ್ಯ ಬೇರೆ; ಚಂದ್ರೆ ಬೇರೆ!

ಸೂರ್ಯ “ಅರೆ! ಏನ್ ಮಾಡ್ದೆ. ಅದಿರೋದ್ ಒಂದೇ ಫೋಟೊ” ಎಂದ ಗಾಬರಿಯಿಂದ.

“ಈಗ ಎಲ್ಡಾಯ್ತಲ್ಲ ತಗಾ”, ಎಂದಳು. ಸೂರ್ಯನಿದ್ದ ಫೋಟೊ ಭಾಗವನ್ನು ನೆಲದ ಮೇಲಿಟ್ಟು “ಅದು ನಿಂಗೆ” ಎಂದು ಹೇಳಿ ಚಂದ್ರನಿದ್ದ ಫೋಟೊ ಭಾಗವನ್ನು ತನ್ನಲ್ಲಿಟ್ಟುಕೊಂಡು “ಇದು ನಂಗೆ” ಎಂದು ಹೂರಟೇಹೋದಳು.

ಸೂರ್ಯ ಬೆಪ್ಪಾದ. ಆಕೆ ಹರಿದದ್ದು ಯಾಕ? ಅರ್ಥವಾಗಲಿಲ್ಲ.
ತನ್ನ ಭಾವಚಿತ್ರವನ್ನು ತಾನೇ ನೋಡುತ್ತ ಕೂತ!
ಹರಿದಾಡಿದ ಭಾವನೆಗಳನ್ನು ಹರಿಯಲಾಯಿತೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐ‌ಎಸ್ ಐಎಸ್
Next post ಸ್ಥಿತಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…