ಹೂವಿನ ಗೋಣು ಮುರಿದು
ಹೂದಾನಿಯಲ್ಲಿ ಇರಿಸುತ್ತೇನೆ.
ಗೆದ್ದಲು ಹುಳುಗಳು ಗೋಡೆಯ
ಮೇಲೆ ಶಿಲ್ಪ ಕಡೆದಿದ್ದರೆ
ಭಗ್ನಗೊಳಿಸುತ್ತೇನೆ.
ಸಕ್ಕರೆಯ ಬೆಟ್ಟು ಹೊತ್ತು
ಹರಿವ ಸಾಲು ಇರುವೆಗಳನ್ನು
ಒತ್ತರಿಸಿ ಗುಡಿಸಿಹಾಕುತ್ತೇನೆ.
ಸೂರಿನಡಿ ಗುಬ್ಬಿಗಳು
ಕಾಳು ಕಡ್ಡಿ ಹೆಕ್ಕಿ ಗೂಡು
ಹೆಣೆದಿದ್ದರೆ ಕಿತ್ತು ಬೀದಿಗೆಸೆಯುತ್ತೇನೆ.
ಗುಬ್ಬಿಯ ಸೂರನ್ನು
ಇರುವೆಯ ಅನ್ನವನ್ನೂ
ಹೂವಿನ ಬದುಕನ್ನೂ
ಕಸಿದುಕೊಳ್ಳುವ ಈ
ಕೊಲೆಪಾತಕ ಕೈಗಳಿಗೆ
ಯಾರ ಭಯವೂ ಇಲ್ಲ.
ಜಗತ್ತಿನ ಸಂಕಟಗಳಿಗೆ
ಕಿಟಿಕಿ ಮುಚ್ಚಿ ಕುಳಿತರೆ
ತೆರೆಯಲು ಯಾರೂ ಬರುವುದಿಲ್ಲ.
ನೋವು, ನಿಟ್ಟುಸಿರು
ಅಸಮತೆ, ಅನ್ಯಾಯ
ಈ ಗಾಳಿಯಲ್ಲೇ ಇದೆ.
ನಾನೂ ಅದನ್ನು ನಿರ್‍ಲಜ್ಜೆಯಿಂದ
ಉಸಿರಾಡುತ್ತಿದ್ದೇನೆ.
ಎಲ್ಲರಿಗೆ ಅನಿಸುವಂತೆ
ನನಗೂ ಒಮ್ಮೊಮ್ಮೆ ಅನಿಸುತ್ತದೆ
ನನ್ನೆದೆಯ ಸೂರ್‍ಯ
ಇನ್ನು ಹೆಚ್ಚು ದಿನ ಉರಿಯಲಾರ.
ಹಸಿವು, ದುಃಖ, ಕ್ರೌರ್‍ಯ
ಎಲ್ಲವನ್ನೂ ಇನ್ನಿಲ್ಲದಷ್ಟು
ಸಹಜವಾಗಿ ಚಿತ್ರಿಸಿ
ಜೀವ ತುಂಬಿದ ಕಲಾವಿದ
ಯಾರೋ ಎಂದು
ನನ್ನನ್ನೇ ಕೇಳಿಕೊಳ್ಳುತ್ತೇನೆ.
ಗಂಧವನ್ನೂ ವಿಷವನ್ನೂ
ಒಂದೇ ಎಂದು
ಉಸಿರಾಡುತ್ತಿರುವೆನಾದರೆ
ನನಗಿನ್ನೂ ಆಸೆ ಇದೆ.
ಮುಳ್ಳಿನದೊಂದು ಹೆಜ್ಜೆ
ಮಣ್ಣಿನದೊಂದು ಹೆಜ್ಜೆ
ದಾರಿ ದೂರವಿದೆ.
*****