ಬರಕೋ ಪದಾ ಬರಕೋ
ಇದರನ್ವಯ ತಿಳಿಕೋ ||ಪ||
ಸದಮಲಜ್ಞಾನದ ಕುದಿಉಕ್ಕಿ ಬರುವಾಗ
ನದರಿಟ್ಟು ನಿನ್ನೊಳು ಸದಮಲ ತತ್ವದಿ ||ಅ.ಪ.||
ಅಡಿಗಣ ಪ್ರಾಸಕೆ ನಿಲುಕದ ಪದವು
ನುಡಿಶಬ್ದಕೆ ನಿಲುಕದ ಪದವು
ಎಡತೆರವಿಲ್ಲದೆ ನಡುವಿನಕ್ಷರದಿ
ಕಡುಶೂನ್ಯದ ಗುರುತದ ಗುರು ಪದವು ||೧||
ಸರಿಗಮ ಸ್ವರ ಬಳೆದ ಅಸಮ ಸುಪದವು
ಹಸನಾಗಿ ನಿನ್ನೊಳು ಎಸೆಯುವ ಪದವು
ಕುಶಲದ ಐದಕ್ಷರವಿಹ ಪದವು
ರಸಿಕ ಸಾಧುಜನ ಹಾಡುವ ಪದವು ||೨||
ಗುರುಗೋವಿಂದನ ಧ್ಯಾನದ ಪದವು
ವರ ಓಂಕಾರ ಪ್ರಣಮದ ಪದವು
ಧರೆಯೊಳು ಶಿಶುನಾಳಧೀಶನ ಪದವು
ದುರಿತ ದುರ್ಗುಣ ದೂಡುವ ಪದವು ||೩||
****