ಕಳವಳವು ಕನಸಿಂದ ಬೆಳಗಾಗಿ ಬಲುಕಾಲ
ಕಳೆದು ಹೋಯ್ತೆನುತಾಗ ತಿಳಿವಿನಾ ರಾಣಿತಾ
ನಿಳಿದು ಮಂಚವ ಬೇಗ ತಿಳಿನೀರ ಮಿಂದೆದ್ದು
ಬಿಳಿ ಮಡಿಯ ಶೆಳೆದುಡುತಲೆ
ತರಣಿಗರ್ಘ್ಯವನಿತ್ತು ಅರಿವಿನಾರಾಣಿ ಜಪ
ಸರವ ಪಿಡಿದಾಗ ಕುಳಿತಿರುತಲರ ಘಳಿಗೆಯುರು
ತರದ ಶಾಂತಿಯ ಸವಿದು ತೆರೆದು ಕಂಗಳ ದೇವಿ
ಸರಸತಿಯು ನಸು ನಗುತಲೆ
ಪದುಮ ಪೀಠವನಿಳಿದು ಇದುಗೊ ಸಿಂಗರವಾಗಿ
ಮುದದಿ ಮನದಿನಿಯನಡಿಗೆರಗಿ ಬರುವೆ
ಹದಿನೆಂಟು ಶತಮಾನ ಪುದಿದ ದುಮ್ಮಾನದಲಿ
ಮುದ ಹಾಸವರಿಯದಲೆ ಕೊರಗಿ ಕುಳಿತೆ
ಗುಜರಾತ ಗಗ್ಗರವು ಪದಪದಕೆ ಧನಿಗೊಡಲು
ಗಜಬಜಿಯ ಮಗುವಂತೆ ಮುದವಿಟ್ಟು ಅನುಸರಿಸಿ
ವಿಜಯ ವಂಗದ ಶಂಖದಂದವಹ ಚೂಡಿಗಳು
ಕಿಂಕಿಣನೆ ಧನಿಗೈಯುತ
ಭಾರತಿಯ ಬಲು ಮಧುರ ಹಾವ ಭಾವಗಳನ್ನು
ತೋರಿ ನಲಿದೊಲಿಯೆ ಮಾರರವದಿಂಪಿನಲಿ
ಪೂರವದ ನೆನಹೆಂಬ ಹಿರಿಶೆರಗಿನಂಬರವ
ನಿರಿ ಹಿಡಿದು ತಾನುಟ್ಟಳು
ಸಂಸ್ಕೃತದ ಕಾಂಚಿಯ! ಹೊಳೆವ ಗೆಜ್ಜೆಗಳಲುಗೆ
ಝೇಂಕರಿಸೆ ಜಯಕೆನುತ ಬಳೆಗಗ್ಗರಗಳೆಲ್ಲ
ಬಿಂಕದಲಿ ಗಂಟಿಕ್ಕಿ ರಸಗಬ್ಬ ಕುಪ್ಪುಸವ
ಬಿಗಿಯು ಹಳದೆನುತ ನಗುತ!
ಅಂದವಿದು ಕುಂಕುಮವು ಹಿಂದಿಯಾ ನವ ರಾಗ
ದಿಂದ ಕೂಡಿಹುದೆನುತ ಒಂದು ಬೆರಳಲಿ ತೇದು
ಎಂದಿನಾ ನೆಪ್ಪಿನಲಿ ಹಣೆಗಿಟ್ಟಳವಸರದಿ
ಬಳಿಕ ತಿದ್ದುವೆನೆನ್ನುತ.
ಮಹರಾಷ್ಟ್ರ ಮುಖುರವದು ಬಿಗಿದ ಮುತ್ತುಗಳಿಂದ
ಗಹಗಹಿಸಿ ಯಲುಗುತ್ತ ದೇವಿ ನಗಲು! ನಗಲು!
ಬಹು ಕೆಂಪಿನಾವೊಲೆ ತೆನುಗನ್ನು ಹೋಲುತಲಿ
ಮಿನುಗಿ ಮೃಗಶಿರನ ಹಳಿಯೆ!
ತಮಿಳು ಕಂಠಿಯ ಕೀಲನಮಿತ ಪ್ರೇಮದಲೊತ್ತಿ
ರಮಣಿ ಯುಳಿದಾಭರಣಗಳ ಧರಿಸೆ
ಉಡಿಗೆ ತೊಡಿಗೆಗಳೆಲ್ಲ ಪಡೆಯುತಿರೆ ತಿಳಿ ಹೊಳಪ
ಸಿರಿ ಮೈಯ ತೇಜದಿಂದ
ಸಿಂಗರವು ಮುಗಿಯಿತಿದು ಮುಂಬೆಳಗಿ ಬೆಳೆಯುತಿದೆ
ಅಂಗಾಂಗಳ ಕಾಂತಿ! ಇಂಬಾಯ್ತು ಉಡಿಗೆ ತೊಡಿಗೆ!
ಸಂಗಡಲೆ ತಿದ್ದುವೆನು ತಿಲಕವನು ಎನ್ನುತಲೆ
ಅರಸಿ! ರನ್ನ ಗನ್ನಡಿಯ!
ಬಲುದಿನದ ರತುನವಿದು ಚಿರಕಾಲವಾಯ್ತಿದನು
ತೆರೆದು ನೋಡಿಲ್ಲೆಂದು ಒಲಿದು ನೋಡುತ ರಮ್ಯೆ!
ಒರೆಸಿದಳು ಶರಗಲ್ಲಿ ಅಬ್ಬಬ ಬಲುಮಂಕು
ಮೊಬ್ಬಾಯ್ತು ಎನುತೆನುತಲೆ!
ಶರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ
ಸಿರಿಗನಡಿ ಏತಕಿದು ಒಲಿಯದಿಹುದು!
ವರಪತಿಯ ಕಾಣಲಿಹೆ
ಸರಿಇಲ್ಲ! ಇದು ತಿಲಕ!
ಸಿರಿಗನಡ ವದನವನು ತೋರದಿಹುದು
ಚಿರದಿನದ ರತುನವಿದು
ಸಿರಿಗನಡ ಕನಡಿಯಿದು!
ಶೆರಗೆಳೆದು ಭಾರತಿಯು
ಒರೆಸುತ್ತ ನೋಡುತ್ತ!
ಸಿರಿಗನಡಿ! ಏತಕಿದು
ಮೊಗಛವಿಯ ತೋರದೆನುತ
ಹಿರಿಹೊಲಸ ನೊರಸುತ್ತ
ಮರುಗುತಿಹಳು!
ಮರು ಮರುಗುತಿಹಳು!
*****