ಬೆಟ್ಟದ ತಪ್ಪಲಲ್ಲೇ ಹುಟ್ಟಿ ಅಲ್ಲೇ ಬಾಳು ಕಟ್ಟಿದ್ದೇವೆ,
ಕೊಪ್ಪಲು ಬಿಟ್ಟು ಬೆಟ್ಟದ ನೆತ್ತಿ ಹತ್ತಲಾರದೆ ಹೋಗಿದ್ದೇವೆ.
ಇಲ್ಲೇ ಹುಟ್ಟಿದ ನೀನು
ಅಲ್ಲಿಗೆ ಮುಟ್ಟಿದ್ದಕ್ಕೆ
ನಗಾರಿ ಬಡಿದರು ಹೊರಗೆ
ನಡುಗಿದ್ದೇವೆ ಒಳಗೆ
ಅಲ್ಲಿಗೆ ಸೇರಿದ ನೀನು ಮಲ್ಲಿಗೆ ಪರಿಮಳವಾದೆ
ಗಾಳಿಸವಾರಿ ಹೊರಟು ದಿಗಂತದಲ್ಲಿ ಲಂಗರು ನಿಂತೆ
ನಾವೋ-
ಹಿಂಡು ಹಿಂಡಾಗಿ ಮೇವಿಗೆ
ಕಂಡ ಕಂಡಲ್ಲಿ ಅಲೆದಿದ್ದೇವೆ,
ಮುಟ್ಟಲೊಂದು ಗುರಿಯಿಲ್ಲದೆ ಉಟ್ಟಿದ್ದ ಬಿಚ್ಚಿ ಕುಣಿದಿದ್ದೇವೆ.
ಕಳೆದ ಕೆಲವು ದಿನ ಹಲವು ಸಲ ನೆನೆದಿದ್ದೇನೆ ಗಾಂಧಿ
ನನಗೆ ಏನೆಲ್ಲ ನೀನು ಎಂದು,
ಈ ಮಣ್ಣಿನ ಕುಡಿಕೆಯನ್ನ ಬಣ್ಣದ ಹೂಮಾಡಿ
ಆಕಾಶಕ್ಕೆ ಒದ್ದ ಮದ್ದು ಯಾವುದೆಂದು.
ನೀನು ಉರಿಹಗಲ ಗೆದ್ದು ಸಂಜೆ ಮುಗಿಲ ಹೊದ್ದು
ಗಿರಿ ಕಡಲುಗಳ ನುಡಿಸುವಾಗ
ನನಗೆ ಏಳರ ಬೆಳಗು
ಬೆಳೆಯದ ಒಳಗು
ತಲೆತುಂಬ ಕಪಿಗಳ ಲಾಗ.
ಆದರೂ ಆಗ ಕೈಯೆಟುಕಿಗೆ ಕಂಡ ಬಾನು
ಬರಬರುತ್ತ ಕನಸಿನ ಗಡಿಯೊಳಗೆ ಹೊರಳುತ್ತ
ಕಲ್ಪನೆಯನ್ನಷ್ಟೆ ಮುದ್ದಿಸಿದೆ,
ಮರುಳಾಗಿ ತೋಳೆತ್ತಿ ತಬ್ಬಲು ಹೋದರೆ
ಬರಿ ಬಯಲಷ್ಟೆ ಮೈಯನ್ನು ತಬ್ಬಿದೆ.
ತಪ್ಪಿದೆ ಮಹಾತ್ಮ ತಪ್ಪಿದೆ.
ಸಿಕ್ಕ ನೆಲದಲ್ಲೆಲ್ಲ ಸಂಶಯ ಬೆಳೆಯುವ ನಾನು
ಅದರ ಹೆಣವನ್ನು ಸಹ ಶ್ರದ್ಧೆಯಲ್ಲಿ ಸುಡುವ ನೀನು
ಎಲ್ಲಿಗೆ ಎಲ್ಲಿಯ ಮೇಳ?
ನಿಂತರೆ ಎದುರೆದುರು ನಾವು
ನಿಂತಂತೆ ಮುಖಮಾಡಿ ನೆಲಕ್ಕೆ ಬಾನು
೨
ಗಾಂಧಿ, ನೀನು
ಹತ್ತು ಹುತ್ತಗಳಲ್ಲಿ ಕ್ಬೆಯಿಟ್ಟು ಹುಲಿಬಾಯ
ಮುತ್ತಿಟ್ಟು ಸಾಗಿದವನು,
ನಾವೆಲ್ಲ ಗೇಟಾಚೆ ಎಸೆದ ನಯನೀತಿಗಳ
ಮೈಯಲ್ಲಿ ನೆಟ್ಟು ಮರ ಬೆಳೆದು ಫಲಭಾರಕ್ಕೆ
ತಲೆಬಾಗಿದವನು;
ಸತ್ಯಶುಭಗಳ ಕಲ್ಪನೆಯ ಹಂಸತಲ್ಪದಲಿ
ಹೊರಳಿಯೂ ಮಣ್ಣನ್ನು ಮರೆಯದವನು;
ಗೊಬ್ಬರವಾಗಿ ಬಿದ್ದು
ಮಲ್ಲಿಗೆಯಾಗಿ ಎದ್ದು
ಹೆತ್ತ ಬಳ್ಳಿಗೆ ರತ್ನಕಿರೀಟವಾದವನು.
ನಿನ್ನ ಪ್ರಯೋಗಗಳೆಲ್ಲ ಪ್ರಾಣವಿಯೋಗದ ಜಾಡಲ್ಲೆ
ನಡೆದವಲ್ಲ!
ಸತ್ಯದ ಕಾಲರು ಹಿಡಿದು
ಕೆನ್ನೆಗೆ ಹೊಡೆದು
ಅದರ ಬಾಯಗಲಿಸಿ ಹಲ್ಲೆಣಿಸಲು ಹೋಗಿ ದಣಿದು
ಕಂಡ ಹದಿನಾಲ್ಕು ಲೋಕಕ್ಕೆ ತಲ್ಲಣಿಸಿ ಮಣಿದು
ಕಾಲಿಗೆ ಬಿದ್ದವನು,
ಬಿದ್ದ ವಿನಯಕ್ಕೆ ಗೌರೀಶಂಕರದಲ್ಲಿ ಎದ್ದವನು.
ಎಂದೂ ಬೇಕಾಗಲಿಲ್ಲ ನಿನಗೆ ಯಾರದೂ ದಯ
ಬೆತ್ತಲೆ ಇರುವವರಿಗೆ ಎತ್ತಲ ಭಯ? ಬದಲಿಗೆ
ನೀನು ನಿಂತರೆ ದೇಶ ನಿಂತಿತು – ನಿನಗೆ
ನೆಗಡಿಯಾದರೆ ಲೋಕ ಕೆಮ್ಮಿತು.
ಗೊತ್ತ ಗಾಂಧಿ ಏನಾಗಿದೆ ಈಗ?
ಒಡೆದು ಬಿದ್ದಿದೆ ಈ ಮಹಲ ಮರ್ಯಾದೆಯ ಬೀಗ,
ಹಾರು ಹೊಡೆದಿದೆ ಹೆಬ್ಬಾಗಿಲು
ಹಾಡಿದೆ ಕತ್ತಲು ರಾಗ :
ಎಲ್ಲ ರಾಣಿಯರೇ ಆಗಿ
ಬೆರಣಿ ತಟ್ಟುವರೇ ಇಲ್ಲವಾಗಿ
ಕಾಡಿದೆ ನಮ್ದನ್ನು ಪ್ರತಿಷ್ಠೆಯ ರೋಗ.
ಕಳ್ಳ ಮುತ್ತಿಟ್ಟರೆ ಹಲ್ಲೆಣಿಸಿಕೊಳ್ಳುವ ಕಾಲ,
ನೀ ಹಚ್ಚಿದ್ದ ಭಾವದಾದೇಗದುರಿಯಲ್ಲಿ
ಹಾಲುಕ್ಕಿ ಬಂದ ಶೀಲದ ಚೆಲುವು ಬತ್ತಿದೆ
ಉಳಿದಿದೆ ತಳ ಕರಿಗಟ್ಟಿದ ಖಾಲಿ ಪಾತ್ರೆ;
ಹರಿದ ಜೇಬಿಂದ ಎತ್ತಿದ ಹಣ
ಕಟ್ಟಿದ ಮಣಿ ಮಂಟಪದಲ್ಲಿ
ನಡೆದಿದೆ ಹೊಸಾ ಹೊಸ ದನಗಳ ಜಾತ್ರೆ.
*****