ಕಬ್ಬಿಣದ ಬುದ್ಧಿವಾದ

(ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ)

“ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ,
ಪೊಲೆಗೈದುದೇತಕೆನ್ನಯ ಮೈಯನಿಂದು? |
ಕಲಿಯುಗದ ಪೊಲೆಯ ಸತ್ಯುಲದ್ವಿಜನ ಸೋಂಕುವೊಲ್,
ಖಲನೆ! ಮುಟ್ಟಿದುದೇತಕನ್ನೆಡೆಗೆ ಬಂದು? ||೧||

ಈ ತೆರದಿ ಕಂಚನಂ(೧) ಖಾತಿಯಿಂ ಘುಡುಘುಡಿಸಿ,
ಮಾತಿರದ ಬಡ ಕಬ್ಬುನವ ಜರೆದುಜರೆದು, |
ಭೂತಳದಿ ತಾನೆ ವಿಖ್ಯಾತನೆಂದೆನುತ, ಮಹಿ
ಮಾತಿಶಯವನು ಜೃಂಭಿಸಿತು ಮೆರೆದುಮೆರೆದು ||೨||

“ಕರೆವುದು ಸುವರ್ಣಮೆಂದಿರದೆ ಧರಣೀಮುಖಂ,
ಮಿರುಗುವುದು ನಾಮದಂತೆನ್ನ ಮೈವಣ್ಣ್ಂ. |
ತರಣಿರಶ್ಮಿಯ ಕವಿವ ಕುರುಡುಕತ್ತಲಿನಂತೆ,
ಭರದಿ ಒದೆಯಲ್ಕೆ ನಿನಗೊಡೆದುದೇ ಕಣ್ಣುಂ? ||೩||

“ಲೋಹರಾಜನು ನಾನು ಮೋಹಿಸುವೆ ಜನಮನವ,
(೧ಅ)ಆಹವಂ ನಿರ್ವಹಿಸದೆನ್ನಾಜ್ಞೆ ಇರದೆ. |
ಈ ಹಸ್ತಲಾಗಕ್ಕೆ(೨) ದಾಹಗೊಳ್ಳುತ್ತ, ತಮ್ಮ
ದೇಹವಂ ದಂಡಿಪರ್ ಜನರು ತರತರದೆ. ||೪||

“ಕನಕಮಣಿ ನಿಗಳೆಯರ್,? ‘ಕನಕಾಬ್ಜವದನೆ,’ ‘ಕಾಂ
ಚನಲತಾಕೋಮಲಾಂಗಿ,’ ‘ಸುವರ್ಣಕಾಯೆ,’
ವನಿತೆಯರನಿಂತು ಭೂವಿನುತೆ ಕವಿ ಕೀರ್ತಿಪರ್‌.
ಕನಕಭೂಷಣರಹಿತ ಸ್ತ್ರೀ ನೋಡೆ ಸ್ತ್ರೀಯೆ? ||೫||

“ಅಂಗನೆಯ ಕೇಶಾತರಂಗದೊಳ್‌ ಕ್ರೀಡಿಸುವೆ;
ತುಂಗವಕ್ಷದಿ ಬಿಗಿವೆ ಮುತ್ತುಗಳ ನಾನು, |
(೩) ಭೃಂಗ್ಕುಂತಲಕೊಯ್ದ ಮಂಗಲವ ಗೈಯ್ದು, ವನಿ
ತಾಂಗಸೌಂದರ್ಯ ಕೆಡಿಸುವ, ಪಾಪಿ ನೀನು. || ೬ ||

“ದ್ವಿಜಹಸ್ತ ಸೇರಿ, ನೀರಜ ಮುಖಿಯ ಶಿರವೇರಿ,
ರಜನಿಯೊಳ್‌ ಭದ್ರವಾಗಿಹೆ ಪಿಟಕದೊಳಗೆ. (೪) |
ದ್ವಿಜನ ಕೆರ(೫) ಸೇರ್‍ವ ನೀರಜ ಮುಖಿಯ ತಲೆಗಳೆವ
ರಜನಿಸನ್ನಿಭನೆ!(೬) ನಿಲ್ಲದಿರೆನ್ನ ಬಳಿಗೆ! ||೭||

“ಬಿಡದೆನ್ನನಾಶ್ರಯಿಸೆ ಕಡು ಮೂಢ ಪ್ರೌಢನಹ;
ಬಡವ ಬಲ್ಲಿದ, ದುಷ್ಟನರ ಶಿಷ್ಯನಹನು |
ಪಿಡಿದು ನಿನ್ನಂ ಕರದಿ, ಕಡಿದು ನರತರುಮೃಗವ,
ಕೆಡಿಪ ಮಾನವಶ್ರೇಷ್ಠನತಿ ಭ್ರಷ್ಟನಹನು. ||೮||

“ಅಗ್ರಾಸನಕ್ಕೆ ನಾಂ ಸಮಗ್ರ ವಸ್ತುಗಳೊಳಗ
ವ್ಯಗ್ರದಿಂದರ್ಹನೆಂಬುದು ಲೋಕಸಿದ್ದಂ. |
ಉಗ್ರತೆಯಿನೆನ್ನೊಡನೆ ವಿಗ್ರಹವ(೭) ಬಯಸಿ, ಕೋ
ಪಗ್ರಾಸವಾಗಲ್ಕೆ ನೀನಪ್ರಬುದ್ಧಂ.” ||೯||

ಉಬ್ಬಟೆಯೊಳುಬ್ಬಿ, ತನ್ನಬ್ಬರವ ಬೊಬ್ಬಿಡುತ,
ಕಬ್ಬುನವ ದೊಬ್ಬಿಬಿಡೆ ಕಾಲಿಂದ ಚಿನ್ನಂ; |
ತಬ್ಬಿಕೊಳ್ವಬ್ಬೆಯಾ(೮) ಕಿಬ್ಬದಿಗೆ ಮಗನೊದೆಯ
ಲುಬ್ಬೆಗಂಗೊಳ್ವಂದದಿತ್ತು ಕಾರ್ಬೋನ್ನುಂ. || ೧೦||

ಆರೆಗಳಿಗೆ ತಲೆವಾಗಿ, ಸುರಿವ ಕಂಬನಿಯೊರಸಿ,
ಮರುಗುವದನುಳಿದು, ನುಡಿದುದು ದೀನರೋಹಂ, |
“ಅರರೆ!(೯) ಧಾತುಪ್ರಕರದರಸನೆನಿಸುವ ಕನಕ!
ಅರಿಯೆಯಾ ನಿನಗೆಂತು ಬಂದುದೀ ದೇಹಂ? ||೧೧ ||

“ಬಡವನಾ ಬಿನ್ನಹದ ನುಡಿಗುತ್ತರವ ನೀಡು!
ಪೊಡವಿಯಂ ನಡೆಯಿಸುವರಾರೆಂದು ಪೇಳು? |
ಘುಡುಘುಡಿಸಿ ನುಡಿಯದಿರ್! ಹುಡುಗ ನೀನೆಲೆ ಚಿನ್ನ!
ಬಿಡುಬಿಡೀ ಮೂರ್ಖತೆಯ! ಬುದ್ಧಿಯನೆ ತಾಳು!” ||೧೨ ||

ಇಂತು ಕಬ್ಬುನ ನುಡಿದ ಪಂತದಾ ನುಡಿಗೇಳ್ದು,
ಸಂತಪ್ತಮಾಗಿ ನುಡಿದುದು ಕನತ್ಕಕನಕಂ(೧೦) |
“ನಾಂ ತಳೆದು ಗುಪ್ತವೇಷಂ, ತಿರೆಯೊಳಡಗುವೆಂ.
ಎಂತು ನಡೆವುದು ಜಗಂ ನಾನಿಲ್ಲದನಕಂ? ||೧೩||

“ಲೋಕದೊಳ್ ನಾನೋರ್ವನೇಕಾಧಿಪತಿಯಾಗಿ,
ಲೋಕಮಂ ನಡೆಯಿಪೆಂ ಚಿರಕಾಲದಿಂದಂ, |
ಲೋಕದೊಳಗರಿವರಾರ್ || ಕಾಕವರ್ಣನನಿಂದು? ”
ಲೋಕಮಂ ನಡೆಯಿಪೆಯೆ ಎನ್ನಂದದಿಂದಂ?” ||೧೪||

ಈ ಪ್ರಕಾರದೊಳು ಧಾತುಪ್ರಕರದರಸ ತ
ನ್ನ ಪ್ರತಾಪವ ಕೊಚ್ಚಿ, ಭೂಲೋಕದಿಂದ |
ಕ್ಷಿಪ್ರದಿ೦ ಮೈಮರೆದುದು(೧೨) ಪ್ರಲಾಪಿಸಿತು ಜನ
ಮಪ್ರತಿಮ ಕನಕನಾಶದ ಶೋಕದಿಂದ. ||೧೫||

ಹೇಮರಹಿತಮದಾಯ್ತು ಶ್ರೀಮಂತಮಂದಿರಂ;
ಭೂಮೀಶ ಕರದಂಡ ಗುರುದಂಡಮಾಯ್ತು; |
ಕಾಮಿನೀಜನರ ಕೈ ಮಾಮರದ ಕೈಯಾಯ್ತು,
(೧೩) ಚಾಮೀಕರವನೆಲ್ಲರರಸಿದರ್ ಸೋತು. ||೧೬||

ಟಂಕಸಾಲೆಯೊಳು ಕನಕಂ ಕಾಣದಿರಲು, ಮು
ದ್ರಾಂಕಿತದ ಪತ್ರ ಚಲಿಸಿತು ನಾಣ್ಯಮಾಗಿ |
ಅಂಕೆಯಿಲ್ಲದ ರತ್ನಸಂಕುಲವ ತೊಟ್ಟು, ದಿವ
ಸಂ ಕಳೆದರಾ ಧನಾಢ್ಯರ್‌ ದುಃಖ ನೀಗಿ. ||೧೭||

ತಾಳಿ ಕಿವಿಯೋಲೆ ಹಿತ್ತಾಳಿಯಿಂ ವಿರಚಿಸುತ
ತಾಳಿದರ್ ವನಿತೆಯರ್, ಕನಕದಾ ಮಾತು |
ಕೇಳಿಸದು, ಪರಿಣಯದ ಕೇಳಿಗಳ್ ನಡೆದು, ಸುಖ
(೧೪)ಕೇಳಿಗೆ ಜನಕ್ಕೆ ಮುದಮೆಂದಿನಂತಾಯ್ತು. ||೧೮||

ತಾನಿಲ್ಲದಿರ್ದೊಡಂ ಮಾನವರ್‌ ಚಿರಕಾಲ
ಹಾನಿಗೊಳ್ಳದೆ, ಸುಖಿಪ ಬಗೆನೋಡಿನೋಡಿ, |
ಮಾನಗಳೆದುಂ ಕನಕ ಮೀನೆಲ್ಕೆ ಮಗುಳೆ ಬಂ
ದಾನಮ್ರ ಭಾವ ತಳೆದುದು ಚಿಂತೆಗೂಡಿ. ||೧೯||

ಮೈಗರೆದು ಕಬ್ಬುನಂ ಕೈಗಾಣದಂತಾದು
ದೈಗಳಿಗೆಯೊಳ್‌ ಜಗಂ ದುಃಖಸಾಗರದಿ |
ಮೈಗೊಟ್ಟು ಮುಳುಗಿದುದು-ತ್ರೈಗುಣಾತ್ಮಕನೆ! ಸಲ
ಹೈ! ಗತಿಯ ದೋರೆಂದು ಬಹು ದೀನಸ್ವರದಿ. ||೨೦||

ತೆರಳದೈ ಹಡಗಕಟ! ಪೊರಳದೈ ಶಿಖಿಶಕಟ(೧೫)
ಉರುಳದೈ ಯಂತ್ರದೊಳ್‌ ಚಕ್ರಗಳ್‌ ಭರದಿ! |
ಪರಿದು ವಿದ್ಯುತ್‌ತಂತ್ರಿ, ಮುರಿದು ಕಂಬದ ಹಂತಿ,
ಕೂರಲು ಕಟ್ಟಿದೊಲಾಯ್ತು ವ್ಯಾಪಾರ ಪುರದಿ. ||೨೧||

ಹೊರಬರವು ವಸ್ತ್ರಗಳ್‌! ತರಿಯವಾ ಶಸ್ತ್ರಗಳ್‌!
ಪರಿಯವಾ ಪತ್ರಗಳ್‌ ಮುದ್ರಣಾಲಯದಿ! ||
ಗೊರಸೆ ಸಮೆದುಂ ಕುದುರೆ ಪೂರೆಯೆತ್ತು ನೆಲಕುದುರೆ,
ಧರೆಯ ಕೈ ಬಿಗಿದುದೈ ಕಬ್ಬುನದ ಲಯದಿ! ||೨೨||

ಅರಿವೆ ನೇಯಂ ಜೇಡ| ಕರಿಯ ಕೊಲ್ಲನು ಬೇಡ!
ಮರವ ಸಿಗಿಯಂ ಬಡಗಿಯುಳನೊಕ್ಕಲಿಗನು! |
ಧುರವ ಸೇರಂ ವೀರ! ನರಳುವಂ ಕಮ್ಮಾರ |
ಬರಿಯ ನೂಲ್‌ ಪಿಡಿದು ಚಿಂತಿಪನು ಚಿಪ್ಪಿಗನೂ! ||೨೩||

ಸುರಿಗೆಯದು ತರಿಯದಿರೆ, ತುರಿಪ ಮಣೆ ತುರಿಯದಿರೆ,
ವರಶಾಕಪಾಕಗಳುಮಿಲ್ಲ ಭೋಜನಕೆ!
ಧರಣಿಯೊಳ್‌ ಕಬ್ಬುನಂ ಮೆರೆವಾಗೆ, ದಿನದಿನಂ
ಮರಣ ಜೀವಿತಮಾಯ್ತು ಸಕಲ ಭೂಜನಕೆ. ||೨೪||

“ದೇವದೇವನೆ! ಸತ್ಕೃಪಾವಲೋಕನದಿಂದ
ಕಾವುದೆಮ್ಮಯ ಪಾಪಗಳನೆಲ್ಲ ಹರಿಸಿ,
ಈ ವೇಳೆಯೊಳ್‌ ಲೋಹದಾ ವರವನಿತ್ತು ನ
ಮ್ಮೀ ವಿಪತ್ತಂ ಬೇಗ ನೀನೆ ಪರಿಹರಿಸಿ” ||೨೫||

ಶೋಕದಿಂದಿಂತುಲಿವ ಲೋಕಮಂ ಕಂಡು, ತಾ
ನೀ ಕಬ್ಬುನಂ ದಯದಿ ಮೈದೋರಿ ಬಂದು,
ವ್ಯಾಕುಲಿತ ಹೃದಯಕೆ ವಿವೇಕದಿಂದುಪಚರಿಸು
ತಾಕನಕದೊಡನೆ ನುಡಿಗುಡು ನುಡಿಯನೊಂದು. ||೨೬||

“ಎಲೆ! ಅಣ್ಣ! ಬೇಸರದಿ ತಲೆವಾಗಿಸಲು ಬೇಡ!
ಒಲಿದೆನ್ನ ನುಡಿಗೆ ಕಿವಿಗುಡು ಮನವನಿಟ್ಟು!
ತಲೆದೋರಿಪಂತೆ ನೀಂ, ಬಲಿದ ಭೂಗರ್ಭದಿಂ
ಸೆಳೆದು ನಾಂ ತಂದೆ ನಿನಗೆನ್ನ ಕೈಗೊಟ್ಟು. ||೨೭||

“ಬಳಿಕ ದುಸ್ಸಂಗದಿಂ ಬಳೆವ ಮಲಿನತೆಯ ನಾಂ
ಕಳೆಯಲ್ಕೆ ನಿನ್ನ ಪುಡಿಗೈದೊಡಂ, ಬಿಡದೆ |
ತಳೆದಿರಲದಂ ನೀನು, ಮುಳಿದು ನಿನ್ನಂ ಕಿಚ್ಚಿ
ನೊಳು ಕೆಡವಿದೆನು ನಿನ್ನಸುವಿನಾಸೆಯಿಡದೆ. ||೨೮||

“ಇಕ್ಕುಳದಿ ಪಿಡಿದು ನಾಂ, ಚೊಕ್ಕಟಮದಾಗೆ ನೀಂ
ತಕ್ಕನಿತು ಬಡಿದು ನಿನ್ನಯ ಮೈಯನೆಲ್ಲಂ, |
(೧೬)ಅಕ್ಕರವ ಕಲಸಲ್ಕೆ ತಿಕ್ಕಿದೆಂ ಮಳಲೊಳಗೆ.
ಮಕ್ಕಳಂ ಕಲಿಸದಿಹ ಪಿತನು ಪಿತನಲ್ಲಂ. ||೨೯||

“ಪೆಟ್ಟಿಗೆಯೊಳಿರುಳು ನಾನಿಟ್ಟು ನಿನ್ನಂ, ಕಾಪು
ಕೊಟ್ಟು ಕೈದುಗಳಿಂದ ಸಲಹುವೆಂ ಬಿಡದೆ, |
ಸಿಟ್ಟುಗೊಳಬೇಡ ಮೈಮುಟ್ಟಿದೆಂ ನಾನೆಂದು!
ನಿಟ್ಟುರವ ನುಡಿಯದಿರ್ ಕೋಪಕೆಡೆಗೊಡದೆ! ||೩೦||

“ನಗರದರಸಾದೊಡಂ ಮಗನಲವೆ ತಾಯ್ಗೆ? ನಿ
ನ್ನುಗುವ ಕಾಂತಿಯ ದೇಹಮೆನಗೆ ಪಿರಿದೇನು?
ಜಗದೊಳ್‌ ಕೃತಘ್ನತೆಯನುಗಿವೌಷಧಂ ಕಣ್ಣು
ಬಿಗಿವ ಮದರೋಗಾಂಜನಂ ಕಾಣೆ ನಾನು. ||೩೧||

ಈ ಜಗದಿ ನಮಗಾ ನಿಯೋಜಿಸಿದ ಕಾರ್ಯಂಗ
ಳೋಜೆ ತಪ್ಪದೆ ನಿರ್ವಹಿಪುದೇ ಮಹತ್ವಂ. |
ರಾಜ ನಾಡನು ಜನಂ ರಾಜನಂ ಸೇವಿಸುತ,
ನೈಜದಿಂ ಸುಖಿಸುವುದೆ ನರ ಲೋಕತತ್ವಂ” ||೩೨||

ಉದ್ಧತೆಯ ತರಿದಪ್ರಬುದ್ಧತೆಯ ಪೋಗೊಳಿಸಿ,
ರುದ್ಧ ಕಂಠದಿ ಬರ್ಪ ಶೋಕಾರ್ತಸ್ವರಮಂ |
ವೃದ್ಧ ಲೋಹಂ ನಿಲಿಸಿ, ಬುದ್ಧಿವಾದವ ಕಲಿಸಿ,
ಶುದ್ಧವರ್ತನಕೆ ತಂದುದು(೧೭) ಕಾರ್ತಸ್ವರಮಂ ||೩೩| |

೧ ಚಿನ್ನ.
೧ಅ ಪದದಲ್ಲಿ ಪೂರ್ವ ಸ್ವರವಿದೆ. ಛಂದೋದೋಷವಾಗದಂತೆ ‘ನಾಹವಂ’ ಎಂದು ತಿದ್ದಲುಬಹುದು
೨ ಹಸ್ತಸ್ಪರ್ಶ
೩ ತುಂಬಿಯಂತೆ ಕಪ್ಪಾದ ಕೂದಲು
೪ ಪೆಟ್ಟಿಗೆ
೫ ಮೆಟ್ಟು
೬ ರಾತ್ರಿಯಂತೆ ಕಾಪ್ಪಾದವನೆ
೭ ಯುದ್ಧ
೮ ತಾಯಿ
೯ ಖನಿಜ
೧೦ ಬೆಳಗುವ ಚಿನ್ನ
೧೧ ಕಾಗೆಯಂತೆ ಕಪ್ಪಾದವ
೧೨ ಮಾಯವಾಯಿತು
೧೩ ಚಿನ್ನ
೧೪ ಸುಖದ ವೃದ್ಧಿ
೧೫ ಹೊಗೆಯ ಬಂಡಿ
೧೬ ಪೂರ್ವದಲ್ಲಿ ಮಕ್ಕಳಿಗೆ ಪ್ರಥಮದಲ್ಲಿ ಮಳಲಿನ ಮೇಲೆ ಅಕ್ಷರಾಭ್ಯಾಸವನ್ನು ಮಾಡಿಸುತ್ತಿದ್ದರು.
೧೭ ಚಿನ್ನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪರೂಪದವನು
Next post ಬೀದಿಗಳು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…