ಐಸುರ ಮೋರುಮ ಎರಡರ ಮಧ್ಯದಿ
ನಾಶವಾಯಿತು ಲಂಕಾದ್ರಿ ಪುರಾ
ಭಾಸುರ ಕಿರಣವ ನುಂಗಿದ ಹನುಮನು
ಈಸಿ ಅಸುರ ಕುಲ ಸಂಹಾರ ||ಪ||
ಒಂದು ದಿವಸ ಆನಂದಕಾಲದಲಿ
ಸುಂದರಶ್ರೀ ಮುಖ್ಯಪ್ರಾಣಾ
ಚಂದದಿ ರಾಮನ ಕೇಳಿ ನಡದನು
ನೋಡಬೇಕೆನುತಲಿ ಮದೀನಾ
ಬಂದು ಹೊಕ್ಕು ಹಜರತಲಿ ಗರಡಿಯ
ಹೊಂದಿ ಸಾಮದಂಡಯನೆವನಾ
ಬಂಧುರ ಭುಜಕರ ಅಪ್ಪಿ ತಾನು
ಚಪ್ಪರಸಿ ನಿಂದು ಚಲ್ವರಿದು ಘನಾ ||೧||
ಬ್ಯಾಟಿ ಆಡಿ ಮೌಲಾ ಆಲಿ ತನ್ನಯ
ತೋಟದ ಬಳಿ ತಾಲೀಮ ನೋಡಿ
ಕೀಟಕ ಮರ್ಕಟ ರೂಪವ ಕಾಣುತ
ತಾಟಾಡ್ಸಿ ಕುಸ್ತಿಯ ಹೂಡಿ
ನೀಟನಿಂತು ನಿಜಭೂಮಿಗೆ ಕೆಡಹಿ
ಬೋಟಸೀಳಲೆನುತಲ್ಲಾಡಿ
ಗೊತ್ತುಹಿಡಿದು ಜಿಗಿದ್ಹಾಕು ಸಮಯದಿ
ರಾಮ ಎಂಬುವುದು ಕೇಳಿ ನುಡಿ ||೨||
ಭಂಗಪಡಿಸಿ ಆ ಮಂಗನ ಮಾತಿಗೆ
ಕಂಗಾಲಾಗದೆ ಕಾಲ್ಮಲಕಿಕ್ಕಿ
ರಂಗಿನಿಂದ ರಾಜೀವಲೋಚನ
ಜಂಗವರಿದು ಜಗ್ಗುತ ನೂಕಿ
ಸಂಗಬಲಿದು ಸಾರಂಗನ ಖಾಗ್ರದಿ
ಲಂಗಿಸಿ ಹೊಡೆದನು ತಪರಾಕಿ
ತುಂಗ ಶಿಶುನಾಳಧೀಶನ ಕರುಣದಿ
ಸಾರುವೆ ರಾಮಾಯಣದಂಕೀ ||೩||
*****