ಕವನಗಳ ಕಟ್ಟಿ
ನವ್ಯ ನವೋದಯ ಪ್ರಗತಿಶೀಲದ
ಅಂಗಿ ತೊಟ್ಟವರು
ಸ್ತ್ರೀ ವಾದಿಯೆಂದೋ, ಬಂಡಾಯ ಎಂದೋ
ದಲಿತನೆಂದೋ ಹಣೆಪಟ್ಟಿ ಹಚ್ಚಿಕೊಂಡು
ಮೇಲೊಂದು ಜಾಕೀಟು ತೊಟ್ಟು
ಮೈಕು ಹಿಡಿದು ಮೆರೆಯುತ್ತ
ಅರೇ! ನಾನೇನು ಹೇಳುತ್ತಿದ್ದೇನೆ
ಕವಿತೆ ಕಟ್ಟುವ ಬಗ್ಗೆ ಅಲ್ಲವೇ?
ಬನ್ನಿ.. ಹಳ್ಳಿಗಾಡಿನ ಕೋಳಿಗೂಡಿನ ಮನೆಗೆ
ಅಲ್ಲಿ ಕವಿತೆಯೇ ಕಾಣುತ್ತಾಳೆ ನಿಮಗೆ
ಕೋಳಿಗೂಡಿನ ಕಥೆಯೇನೂ
ಸಾಮಾನ್ಯವಲ್ಲ
ಅಲ್ಲಿ ಹುಂಜ ಎಂಬ ಗಂಡ ಬರಿಯ ಬೀಜದಾತ
ದಿನಬೆಳಗು ಮೊಟ್ಟೆ ಮೇಲೆ ಕೂತು
ಕಾವು ಕೊಟ್ಟು,
ಕೃಶವಾಗಿ ಕುಡಿ ಬರಿಸಲು
ಕಾಯುತ್ತದೆ ಕವಿತೆ
ಹಠತೊಟ್ಟ ಯೋಗಿಯಂತೆ.
ತಲೆಗೆ ಜುಟ್ಟು ಬಂದ ಮಾತ್ರಕ್ಕೆ
ತಲೆಯೊಳಗೆ ಇದ್ದದ್ದೆಲ್ಲಾ ವಾಙ್ಮಯ
ಎಂದುಕೊಂಡ ಹಿರಿಯ ಹುಂಜಗಳು
ಹೊಗಳಿದ್ದು ತೆಗಳಿದ್ದು
ಅದೇ ಆಕಾರದ ಜುಟ್ಟನ್ನು ಮಾತ್ರ
ಹೇಂಟೆಯ ಸಾಗರದ ಹರವುಳ್ಳ ಪಕ್ಕೆಗಳ
ಅಳೆಯುವುದು ಬಿಡಿ, ಅರಿತುಕೊಳ್ಳಲು ಆಗದು
ಜಡಜುಟ್ಟಿಗೆ
ಮಣ್ಣನೆಲವನ್ನು ಮುರುಟಿದ ಉಗುರುಗಳಿಂದ
ಬಗೆದು ಕೊನೆಯ ಅಲಗಿನ
ತುದಿ ಮುರಿಯುವ ತನಕವೂ
ಬಡಿದಾಡುವ ಕವನ ಸಿಕ್ಕ ಸಿಕ್ಕ ಕ್ರೀಮಿ ಕೀಟಗಳ
ಕಂಡಲ್ಲೆ ಕುಟುಕಿ ಬಾಯಿಗಿಡುತ್ತದೆ ಮರಿಗೆ
ತನ್ನೊಡಲ ಹಸಿವ ಇಂಗಿಸಿಕೊಳ್ಳುತ್ತದೆ
ಉಗುಳನುಂಗುತ್ತ.
ಇಷ್ಟಿಷ್ಟೇ ಉಂಡೆಯಾಕಾರದ ಮುದ್ದೆ
ಮರಿಗಳನ್ನು ಕಾಯುವುದು ಹದ್ದಿನ
ವಕ್ರದೃಷ್ಟಿಯಿಂದ ಕಾಪಾಡಿಕೊಳ್ಳುವುದೇನೂ
ಸುಲಭವಲ್ಲ. ಕೊಕ್ಕೋಕ್ಕೋಓಓಓ
ಕರೆದು ಕರೆದು ಪಕ್ಕೆಯಲ್ಲಿ
ಬಚ್ಚಿಟ್ಟುಕೊಂಡಷ್ಟು ಎಳವೆಯ ಮೋಜು
ಹುಡುಗಾಟ ಪುಕ್ಕ ಏರಿಸಿ ಪುಟಪುಟ ಹೊರಬಿದ್ದು
ಜಗವ ನೋಡುವ ಮರಿಗವನಗಳು
ಕಂಟಕಕ್ಕೆ ಎದುರಾದವೋ
ಕಾಲು ಕೆರೆದು ಸೆಟೆದು
ಹದ್ದಿನ ಮೇಲೆರಗುತ್ತದೆ ಕವಿತೆ
ಥೇಟ್, ಮರಿ ಇಟ್ಟ ಹೆಣ್ಣು ನಾಯಿಯಂತೆ.
ಹಿಂದೊಮ್ಮೆ ಬೇಟದ ಅಂಗಣವಾಗಿದ್ದ
ಹಳ್ಳಿಗಾಡಿನ ಕುತ್ತರಿಯ ಕಣ
ಹೇಂಟೆಯ ಬೇಟೆಯ ಕಣವೂ.
ಮರಿಕೋಳಿಗಳ ಟೋಳಿ ಕಟ್ಟಿಕೊಂಡು ಬರುವ
ಹೇಂಟೆ ಜಂಗಮ ಕವಿತೆ
ಈಗ ಅರ್‍ಥೈಸಿಕೊಳ್ಳಿ ನಿಮಗೆ ಬೇಕಾದಂತೆ
ನವ್ಯವೋ ನವೋದಯವೋ
ಪ್ರಗತಿಶೀಲವೋ,
ಸ್ತ್ರೀವಾದ, ದಲಿತ ಬಂಡಾಯವೋ
ಈ ಹೇಂಟೆ ಕವಿತೆ
*****