ಮಸಾಲೆ ಕಡಲೆ ಜಗಿಯುತ್ತ
ಸೌತೆ ಚೂರು ಮೆಲ್ಲುತ್ತ
ಕಾಲೆಳೆಯುತ್ತ ಉಸುಕಿನಲ್ಲಿ
ಮೂರು ಸಂಜೆಯ ಬೆಳಕಿನಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
ಉಪ್ಪಿನ ಹವೆಗೆ ಒಪ್ಪಿಸಿಕೊಂಡು
ಭಿಕ್ಷುಕರಿಂದ ತಪ್ಪಿಸಿಕೊಂಡು
ಕಡಲಿನ ರಾಗವ ಹಿಡಿಯುತ್ತ
ಬಡವರಿಗಾಗಿ ಮರುಗುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
ತೆರೆಗಳು ಎಂದೂ ನಿಲ್ಲವು ಎಂದು
ಲೋಕದ ದಂಧೆ ನೀಗದು ಎಂದು
ಸುಸ್ತಾದಾಗ ಒರಗುತ್ತ
ನಕ್ಷತ್ರಗಳ ಎಣಿಸುತ್ತ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
ಕಳಚಿದ ಚಪ್ಪಲಿ ಸಿಕ್ಕಿಸಿಕೊಂಡು
ಹತ್ತಿದ ಮಳಲನು ಜಾಡಿಸಿಕೊಂಡು
ಯಾವ ಯಾವದೋ ಕನಸಿನಲ್ಲಿ
ಅದೆಷ್ಟೋ ಮಂದಿಯ ಹೆಜ್ಜೆಯಲ್ಲಿ
ಕವಿಯಿದ್ದಾನೆ ಎಲ್ಲರ ಹಾಗೆ
ಕವಿಗಳಿರೋದೇ ಹಾಗೆ
*****