ಸೃಷ್ಟಿಯಾ ಕುಶಲತೆಗೆ ದೃಷ್ಟಿಯಾ ಪರಿಣತಿಯೂ
ಬುವಿಭಾನು ಖಗಮಿಗದ ಅಖಂಡ ಕುಟೀರ.
ಹೊಳೆಯೂರ ರಹದಾರಿ ಹರಿಯುವಳು ಕರಿಕಾಳಿ
ಇಕ್ಕೆಲದ ವೃಕ್ಷನೆಲೆ ಮುಂಗಟ್ಟೆ ಪಕ್ಷಿಕಾಶಿ.
ಮಲೆನಾಡ ವಿಪಿನದೊಳು ಒಕ್ಕೊರಲ ಗಟ್ಟಿದನಿ
ಕಪ್ಪು ಬಿಳಿ ಕೆಂಪು ಬೂದು ಬಗೆಬಗೆಯ ವರ್ಣಮುಖಿ
ಸಂಜೆಯಾದರೆ ಸಂತೆ ಮರದ ತುದಿಯಲಿ ಬೊಂತೆ
ಸದ್ದುಗದ್ದಲವೇನು? ಸಂಗಾತಿ ಸತಿ ಜೇನು.
ಏಕಪತ್ನಿವೃತವು, ಹಿತವಾದ ಜೊತೆ ಶೃತಿಯು
ಮರದ ಪೊಟರೆಯ ಒಳಗೆ ಕಾವು ನೀಡುವ ತಾಯಿ
ಕೊಂಬಕೊಕ್ಕಲಿ ಬಾಯ್ಗೆ ಉಣಿಸು ನೀಡುವ ತಂದೆ
ಪಾಠವೈ ಈ ಬದುಕು ನರರ ಬಾಳ್ಗೆ.
ದಾಂಪತ್ಯ ದೀರ್ಘ, ಬದುಕು ಶತಮಾನ ಅರ್ಧ
ಮಾಂಸಾಹಾರವೂ ಸೈ ಸಸ್ಯಾಹಾರಕೂ ಜೈ
ಹಕ್ಕಿಗೀಂ ಎಣೆಯಿಲ್ಲ, ಮುಂಗಟ್ಟೆ ಬಹಳಿಲ್ಲ
ಅವಸಾನದಂಚಿನ ನೆಂಟನಿಹನು.
ನನ್ನಂತೆ ಅದರ ಬಗೆಯುವುದೇ ಕೈಲಾಸ
ಒಂದು ಅಳಿದರೂ ಸಾಕು ಈ ಬದುಕು
ವನವಾಸ.
*****