ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ
ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ
ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ
ನುಣುಪಾಗಿ ಗಡ್ಡ ಹರೆಯುವ ಇವರ
ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು
ಹಿಂದಿನದರಲ್ಲಿ ಬಾಚಣಿಗೆ
ಇಲ್ಲದವರು ಮೌನವಾಗಿದ್ದಾರೆ. ಬೀದಿ ಬದಿಯ
ಅಂಗಡಿಗಳ ಮುಂದೆ ನಿಲ್ಲುತ್ತಾರೆ. ಉದ್ದೇಶವಿಲ್ಲದೆ
ನೋಡುತ್ತಾರೆ. ಯಥೇಷ್ಟ ಕೂದಲು ಬೆಳೆಸಿದ ಇವರು
ಭಯೋತ್ಪಾದಕರಂತೆ ಕಾಣಿಸುತ್ತಾರೆ
ಎಲ್ಲರೂ ಹೆದರುತ್ತಾರೆ.
ಜನದಟ್ಟಣೆಯ ಸುಲ್ತಾನ್ ಬಜಾರಿನಲ್ಲಿ ಸಂಜೆ
ನಡೆಯದವರು ಯಾರು? ಒಬ್ಬರನ್ನೊಬ್ಬರು ತಳ್ಳುತ್ತ
ಹಿಂದೆ ಹಾಕುತ್ತ ಹಿಂಬಾಲಿಸುತ್ತ,
ಬೆಳಕಿಗೆ ಮುಖವೊಡ್ಡುತ್ತ
ಆದರೂ ಜನರನ್ನು ಜನರಿಂದ ಪ್ರತ್ಯೇಕಿಸುವ
ಆ ಸೀಸನ್ ಟಿಕೇಟು ಮತ್ತು ಬಾಚಣಿಗೆ-
ಯಿದೆ ನೋಡಿ! ಅದು ಕಠಿಣ!
*****