ಎಣ್ಣೆಹಚ್ಚಿ ತಿದ್ದಿತೀಡಿ
ಬೆಚ್ಚಗಿನ ಹಂಡೆಯಲಿ
ಹದಕಾಯಿಸಿ ಕಾಲು ನೀಡಿ
ಎರೆದು ಹಾಕಿದ ಕಂದ
ಸಾಂಬ್ರಾಣಿಯ ಸೂಸು ಹೋಗೆ
ಕಣ್ಣು ರೆಪ್ಪೆಯ ಮುಚ್ಚಿ
ತೆಪ್ಪಗೆ ಮಲಗಿರುವ ತೊಟ್ಟಿಲಲಿ
ಹಾಲು ಹೀರಿದ ಎದೆಯಲಿ
ಚಿಲ್ಲನೆ ಮತ್ತೆ ಚಿಮ್ಮುತ್ತಿವೆ
ಎದೆ ಹಾಲ ಹನಿಗಳು.
ನಿದ್ದೆ ಕಣ್ಣಲ್ಲಿ ಮುಗ್ಧ
ನಗುವಿಗೆ ತುಟಿ ಅರಳಿ
ಅರ್ಥ ಸುಳಿದಾಡಿ ರಸದಲಿ
ತೇಲಿ ಹೊರಳಾಡಿವೆ ವಾಸ್ತವ
ಕನಸುಗಳು ಜಗಜಗಿಸಿ
ಹೊಳೆವ ಶಬ್ದಗಳು
ಚಿನ್ನದ ಸರಪಳಿಯ
ಮಣಿ ಮಾಲೆಯಾಗಿ
ಪೋಣಿಸಿಕೊಂಡ ಪದ್ಯ
ದಂಗಾಗಿ ನಿಂತ ಕ್ಷಣಗಳು.
ಇಳಿಇಳಿದು ಹರಡಿದ ಪ್ರೇಮ
ದಾಂಪತ್ಯ ತೊನೆತೊನೆ ತೂಗಿ
ಚೈತ್ರ ಚಿಗುರಿ ಗಿಳಿಕೋಗಿಲೆಗಳು
ಉಲಿದವು ಜೇಕುವ ತೊಟ್ಟಿಲಲಿ
ಗಾಲುಗಂದನ ಗೆಜ್ಜೆ ಸಪ್ಪಳದಲಿ
ಎದೆ ಹಾಲು ಪರಿಮಳ ಸೂಸಿ
ಹರಿವೆ ಬೆಳ್ಳಕ್ಕಿ ಸಾಲು ಸಾಲು
ಎಳೆ ಬೆರಳುಗಳ ಸೋಕಿ
ಎದೆ ತುಂಬ ಬಿರಿಯುವ ಕವಿತೆಗಳ ಕಂಪನಗಳು.
*****