ಯಾರದು! ಯಾರದು!! ಯಾರದು ಸೇನೆ?
ಯಾರಿಗೆ ಬಂದಿದೆ ಉಳಿಯದ ಬೇನೆ? ||
ಹಿಮಗಿರಿಗಳ ನಡು ಪರ್ವತಸಾನು
ತೆಪ್ಪಗೆ ಕುಳಿತಿಹನಲ್ಲಿಯೆ ಶಿವನು ||
ಬೆಂಕಿಯ ಕಣ್ಣನು ಅಡಗಿಸಿಕೊಂಡು
ಉಲುಹಿನ ಸುಳುಹನು ಮಡಗಿಸಿಕೊಂಡು ||
ಧ್ಯಾನದ ಮೌನದ ಆಳದ ತಳದಲಿ
ಸುಳಿವವರಾರೀ ರುದ್ರನ ಬಳಿಯಲಿ? ||
ಹುಚ್ಚಿನ ಬೆಚ್ಚಿನ ಹುಳುಗಳ ತಂಡೇ
ಇಲ್ಲಿಯು ನಡೆಸುತ್ತಿರುವುದು ಬಂಡೇ? ||
ಅಲ್ಲಿದೆ ಗಿರಿಜೆಯ ತವರಿನ ತೇಜ
ವಿದ್ಯುತ್ ಸಂಚಿತ ತವಸಿನ ಓಜ ||
ದುರ್‍ಗಾ ಮಾತೆಯ ಮಕ್ಕಳ ನಾಡು
ಭಾರತವೊಂದಿದೆ ಕ್ಷಿತಿಯಲ್ಲಿ ನೋಡು ||
ಷಣ್ಮುಖ ದಳಪತಿ ನವಿಲೇರಿದರೆ
ದಂಡಿನ ಹಿಂಡೇ ನೆರೆವುದು ಬೇರೆ ||
ಹಸಿವೆಯ ಹುಚ್ಚಿನ ಹೊಟ್ಟೆಯ ಕಿಚ್ಚಿಗೆ
ಕದನಕು ಕೃಷಿಹಿತವೆನಿಸಿದೆ ಹೆಚ್ಚಿಗೆ ||
ಹಗೆತನದಲಿ ನಾವ್ ಸಾವುದು ಬೇಡ
ಬದುಕುಳಿದರೆ ಗೆಳೆಗೆಳೆಯರು ನೋಡ ||
ಯಾಕೀ ಸಾವಿಗೆ ಬಲಿಯಾಗುವಿರಿ ?
ಚೀಣರೆ ತೋಲಗಿದರೇ ಬದುಕುವಿರಿ ||
*****
ಚೀನಾ ಆಕ್ರಮಣ ಸಂದರ್ಭದಲ್ಲಿ ರಚಿಸಿದ್ದು