ಮೊಗ್ಗಿನ ಹಾಗೆ ಬಾಲ್ಯದ ಬೆರಳು
ಮದಗಜದಂತೆ ಮಧ್ಯದ ಬೆರಳು
ಮಾಗಿತು ಬಾಗಿತು ಮುಪ್ಪಿನ ಬೆರಳು
ಯಾವುದು ಹಿರಿದು? ಯಾವುದು ಕಿರಿದು?
ಹುಟ್ಟಿನ ಬೆರಳು? ಸಾವಿನ ಬೆರಳು?
ಕಣ್ಣನು ಉರಿಸಿತು ಬೆಂಕಿಯ ಬೆರಳು
ಮೂಗನು ಇರಿಸಿತು ಗಾಳಿಯ ಬೆರಳು
ತುಟಿಯನು ತಿದ್ದಿತು ನೀರಿನ ಬೆರಳು
ಕಿವಿ ನಾಲಗೆಯನು ನಭದಾ ಬೆರಳು
ಮೈಯ ಮೂಡಿಸಿತು ಭೂಮಿಯ ಬೆರಳು
ಮೋಹ ಮದ ಮತ್ಸರಗಳನೂ
ಪ್ರೀತಿ ಕರುಣೆ ಕಾಮನೆಗಳನೂ
ಸಂಚು ವಂಚನೆ ಛಲ ಬಲಗಳನೂ
ಹಿಡಿಹಿಡಿ ಅಂದಿತು ಮಾಯೆಯ ಬೆರಳು
ಚಿಮ್ಮಿತು ಚಾಚಿತು ಚಲಿಸಿತು
ಬೀಜದ ಬೆರಳು
ತತ್ತಿಯನಪ್ಪಿತು ತುತ್ತನು ಉಣಿಸಿತು
ತಟ್ಟಿ ಮಲಗಿಸಿತು ತಾಯಿಯ ಬೆರಳು
ಚಂದ್ರನ ಕರೆಯಿತು ಚಪ್ಪಾಳೆ ತಟ್ಟಿತು
ತುತ್ತೂರಿ ಹಿಡಿಯಿತು ಪುಟವದು ತೆರೆಯಿತು
ಚಿತ್ರವ ಬರೆಯಿತು ಮಗುವಿನ ಬೆರಳು
ಮಲ್ಲನ ಮಣಿಸಿತು ಮಲ್ಲಿಗೆ ಮುಡಿಸಿತು
ಕೆನ್ನೆಯ ಸವರಿತು ಕಣ್ಣೀರ ಒರೆಸಿತು
ಕನಸನು ಹೆಣೆಯಿತು ಕವಿತೆಯ ಬರೆಯಿತು
ಬಿನ್ನಾಣ ಮಾಡಿತು ಪ್ರೇಮಿಯ ಬೆರಳು
ಕೋವಿಯ ಹಿಡಿಯಿತು ಮದ್ದನು ಸಿಡಿಸಿತು
ತಕ್ಕಡಿ ಹಿಡಿಯಿತು ತಿಜೋರಿ ತುಂಬಿತು
ಮಕುಟವ ಕಸಿಯಿತು ಮರಳನು ಅಳೆಯಿತು
ಯೌವನದರಳನು ಹುರಿಯಿತು ಬೆರಳು
ಮಣಿಯನು ಎಣಿಸಿತು ಕಪ್ಪರ ಹಿಡಿಯಿತು
ತಾಳವ ಹಾಕಿತು ತಂತಿಯ ಮೀಟಿತು
ಗೀತೆಯ ನುಡಿಸಿತು ಧೂಪವ ಹಚ್ಚಿತು
ನಡುಗಿತು ನರಳಿತು ಮಾಗಿಯ ಬೆರಳು
ಹುಟ್ಟದು ಸವೆಯಿತು ಹಾಯಿಯು ಹರಿಯಿತು
ಹತ್ತೂ ದಿಕ್ಕಿಗೆ ಬೊಂಬಿನ ನೆರಳು
ಕಾಣದ ಬೆರಳೊಂದು ಕೊಳಲನು ನುಡಿಸಿತು
ಹಂಸೆಯ ಹಿಡಿದೆತ್ತಿ ಗಗನಕೆ ಚಿಮ್ಮಿತು
ಝಗ್ಗೆಂದು ಹೊಳೆಯಿತು ಮಿಂಚಿನ ಬೆರಳು.
*****